ರೋಚಕ ಫೈನಲ್‌ನಲ್ಲಿ ಕರ್ನಾಟಕದ ತಾಕತ್ತು ಪ್ರದರ್ಶನ; ಒಲಿದ ಚೊಚ್ಚಲ ಟಿ20 ಪ್ರಶಸ್ತಿ

ಅಹಮದಾಬಾದ್‌ನಲ್ಲಿ ನಡೆದ ಸೀನಿಯರ್ ಮಹಿಳಾ ಟಿ20 ಟ್ರೋಫಿ ಫೈನಲ್‌ನಲ್ಲಿ ರೈಲ್ವೇಸ್ ತಂಡವನ್ನು 3 ರನ್‌ಗಳಿಂದ ಮಣಿಸಿ ಕರ್ನಾಟಕ ಮಹಿಳಾ ತಂಡ ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿ ಇತಿಹಾಸ ನಿರ್ಮಿಸಿದೆ. ಶುಭಾ ಸತೀಶ್ ಅವರ 48 ರನ್ ಹಾಗೂ ತೇಜಸ್ವಿನಿ ಅವರ 3 ವಿಕೆಟ್ ನೆರವಿನಿಂದ ಕರ್ನಾಟಕ ರೋಚಕ ಗೆಲುವು ಸಾಧಿಸಿತು. ಈ ಪ್ರಶಸ್ತಿ ಕರ್ನಾಟಕ ಮಹಿಳಾ ಕ್ರಿಕೆಟ್‌ಗೆ ಹೊಸ ಮೈಲುಗಲ್ಲು.

ರೋಚಕ ಫೈನಲ್‌ನಲ್ಲಿ ಕರ್ನಾಟಕದ ತಾಕತ್ತು ಪ್ರದರ್ಶನ; ಒಲಿದ ಚೊಚ್ಚಲ ಟಿ20 ಪ್ರಶಸ್ತಿ
Karnataka Team

Updated on: Nov 20, 2026 | 9:17 PM

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನ ಬಿ ಮೈದಾನದಲ್ಲಿ ಶುಕ್ರವಾರ ನಡೆದ ಹಿರಿಯ ಮಹಿಳಾ ಟಿ20 ಟ್ರೋಫಿ ಎಲೈಟ್ ವಿಭಾಗದ ಫೈನಲ್ ಪಂದ್ಯದಲ್ಲಿ ರೈಲ್ವೇಸ್ ತಂಡವನ್ನು 3 ರನ್‌ಗಳಿಂದ ಮಣಿಸಿದ ಕರ್ನಾಟಕ ತಂಡ ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಮೂಲಕ ಕರ್ನಾಟಕ ಮಹಿಳಾ ಕ್ರಿಕೆಟ್ ತಂಡ ಹೊಸ ಇತಿಹಾಸ ಬರೆದಿದೆ. ರೈಲ್ವೇಸ್ ತಂಡ ಈ ಟೂರ್ನಿಯಲ್ಲಿ ದಾಖಲೆಯ 11 ಬಾರಿ ಪ್ರಶಸ್ತಿ ಗೆದ್ದಿದ್ದರೆ, ಮುಂಬೈ ಎರಡು ಬಾರಿ ಚಾಂಪಿಯನ್ ಆಗಿದೆ. ಕರ್ನಾಟಕ ಈ ಹಿಂದೆ 2018-19ರ ಆವೃತ್ತಿಯಲ್ಲಿ ಮಾತ್ರ ಫೈನಲ್ ಪ್ರವೇಶಿಸಿತ್ತು. ಆದರೆ ಆ ಪಂದ್ಯದಲ್ಲಿ ಪಂಜಾಬ್ ವಿರುದ್ಧ 4 ರನ್‌ಗಳಿಂದ ಸೋಲು ಕಂಡಿತ್ತು. ಇದೀಗ ಎರಡನೇ ಬಾರಿಗೆ ಫೈನಲ್ ಪ್ರವೇಶಿಸಿದ ಕರ್ನಾಟಕ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಕರ್ನಾಟಕ ತಂಡದ ನಾಯಕಿ ಶುಭಾ ಸತೀಶ್ ಫೈನಲ್ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. 39 ಎಸೆತಗಳಲ್ಲಿ 48 ರನ್ ಸಿಡಿಸುವ ಮೂಲಕ ತಂಡದ ಮೊತ್ತ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ನಿಕಿ ಪ್ರಸಾದ್ 26 ಎಸೆತಗಳಲ್ಲಿ 28 ರನ್ ಗಳಿಸಿ ಉತ್ತಮ ಸಾಥ್ ನೀಡಿದರು. ಇವರಿಬ್ಬರ ಆಟದ ನೆರವಿನಿಂದ ಕರ್ನಾಟಕ ತಂಡ 20 ಓವರ್‌ಗಳಲ್ಲಿ 149 ರನ್ ಕಲೆಹಾಕಿತು. ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡಿದ್ದ ರೈಲ್ವೇಸ್ ಪರ ಸ್ಪಿನ್ನರ್‌ಗಳಾದ ಪೂನಂ ಯಾದವ್ 18 ರನ್ ನೀಡಿ 3 ವಿಕೆಟ್ ಪಡೆದರೆ, ಸ್ನೇಹ್ ರಾಣಾ 20 ರನ್ ನೀಡಿ 2 ವಿಕೆಟ್ ಕಬಳಿಸಿದರು.

Loading...

ಕೊನೆಯ ಓವರ್‌ನಲ್ಲಿ ರೋಚಕ ಗೆಲುವು

150 ರನ್‌ಗಳ ಗುರಿ ಬೆನ್ನಟ್ಟಿದ ರೈಲ್ವೇಸ್ ತಂಡಕ್ಕೆ ಆರಂಭದಲ್ಲೇ ಕರ್ನಾಟಕ ಬೌಲರ್‌ಗಳು ಆಘಾತ ನೀಡಿದರು. ಭಾರತದ ಆರಂಭಿಕ ಆಟಗಾರ್ತಿ ಪ್ರತಿಕಾ ರಾವಲ್ 16 ಎಸೆತಗಳಲ್ಲಿ 18 ರನ್ ಗಳಿಸಿ ಔಟಾದರು. ಪರಿಣಾಮ 8.2 ಓವರ್‌ಗಳಲ್ಲಿ 49 ರನ್‌ಗಳಿಗೆ ರೈಲ್ವೇಸ್ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಹಂತದಲ್ಲಿ ಮಿನ್ನು ಮಣಿ ಹಾಗೂ ಅರುಷಿ ಗೋಯಲ್ ತಂಡಕ್ಕೆ ಆಸರೆಯಾದರು. ನಾಲ್ಕನೇ ವಿಕೆಟ್‌ಗೆ ಈ ಜೋಡಿ 58 ರನ್‌ಗಳ ಅಮೂಲ್ಯ ಜೊತೆಯಾಟವಾಡಿ ರೈಲ್ವೇಸ್ ತಂಡಕ್ಕೆ 12ನೇ ಪ್ರಶಸ್ತಿ ಗೆಲ್ಲುವ ಆಸೆ ಮೂಡಿಸಿತು. ಮಿನ್ನು ಮಣಿ 23 ಎಸೆತಗಳಲ್ಲಿ 30 ರನ್ ಗಳಿಸಿದರೆ, ಅರುಷಿ ಗೋಯಲ್ 28 ಎಸೆತಗಳಲ್ಲಿ 41 ರನ್ ಸಿಡಿಸಿ ತಂಡದ ಗೆಲುವಿಗಾಗಿ ಹೋರಾಡಿದರು.

ಗೆಲುವಿಗೆ 18 ರನ್‌ಗಳ ಅಗತ್ಯ

ಆದರೆ 16ನೇ ಓವರ್‌ನಲ್ಲಿ ಈ ಜೊತೆಯಾಟವನ್ನು ಮುರಿದ ಬಿಜಿ ತೇಜಸ್ವಿನಿ ಕರ್ನಾಟಕಕ್ಕೆ ಮೇಲುಗೈ ತಂದುಕೊಟ್ಟರು. ತಮ್ಮ 4 ಓವರ್‌ಗಳಲ್ಲಿ 20 ರನ್ ನೀಡಿ 3 ವಿಕೆಟ್ ಕಬಳಿಸಿದ ತೇಜಸ್ವಿನಿ ರೈಲ್ವೇಸ್ ತಂಡದ ಗೆಲುವಿನ ಓಟಕ್ಕೆ ಕಡಿವಾಣ ಹಾಕಿದರು. ಶ್ರೇಯಾಂಕಾ ಪಾಟೀಲ್ ಕೂಡ 2 ವಿಕೆಟ್ ಪಡೆದು ತಂಡದ ಗೆಲುವಿಗೆ ಕೊಡುಗೆ ನೀಡಿದರು. ಕೊನೆಯ ಓವರ್‌ನಲ್ಲಿ ರೈಲ್ವೇಸ್ ಗೆಲುವಿಗೆ 18 ರನ್‌ಗಳ ಅಗತ್ಯವಿತ್ತು. ಅನುಭವಿ ಬೌಲರ್ ರಾಜೇಶ್ವರಿ ಗಾಯಕ್ವಾಡ್ ಅವರಿಗೆ ನಾಯಕಿ ಚೆಂಡು ನೀಡಿದರು. ಹಿಂದಿನ ಮೂರು ಓವರ್‌ಗಳಲ್ಲಿ ದುಬಾರಿಯಾಗಿದ್ದ ರಾಜೇಶ್ವರಿ ಈ ಓವರ್‌ನಲ್ಲೂ 14 ರನ್ ಬಿಟ್ಟುಕೊಟ್ಟರು. ಆದರೆ ಕೊನೆಯ ಎಸೆತದಲ್ಲಿ ಎದುರಾಳಿ ತಂಡಕ್ಕೆ ರನ್ ಗಳಿಸಲು ಅವಕಾಶ ನೀಡದೆ ಕರ್ನಾಟಕದ ಗೆಲುವನ್ನು ಖಚಿತಪಡಿಸಿದರು.

ಕೊನೆಯ ಎಸೆತದ ಬಳಿಕ ಕರ್ನಾಟಕ ತಂಡದ ಆಟಗಾರ್ತಿಯರು ಮೈದಾನದಲ್ಲೇ ಸಂಭ್ರಮದಲ್ಲಿ ಮಿಂದೆದ್ದರು. ಈ ಮೂಲಕ ಮಹಿಳಾ ಟಿ20 ಕ್ರಿಕೆಟ್‌ನಲ್ಲಿ ಕರ್ನಾಟಕ ತಂಡ ತನ್ನ ಚೊಚ್ಚಲ ಹಿರಿಯರ ಎಲೈಟ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us