42 ರನ್‌ಗೆ 3 ವಿಕೆಟ್ ಪತನ, ಆಪತ್ಬಾಂಧವನಾದ ಕುಶಾಗ್ರ: ನೇಪಾಳ ವಿರುದ್ಧ ಭರ್ಜರಿ ಶತಕ
ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ 2026ರಲ್ಲಿ ಕುಮಾರ್ ಕುಶಾಗ್ರ ಇಂಡಿಯಾ A ತಂಡಕ್ಕೆ ಆಸರೆಯಾದರು. ನೇಪಾಳ ವಿರುದ್ಧ 42/3 ಸಂಕಷ್ಟದಲ್ಲಿದ್ದಾಗ, ಕುಶಾಗ್ರ ಭರ್ಜರಿ 117 ರನ್ (102 ಎಸೆತ) ಸಿಡಿಸಿ ಶತಕ ಪೂರೈಸಿದರು. ನಾಯಕ ತಿಲಕ್ ವರ್ಮಾ ಜೊತೆ 206 ರನ್ ಜೊತೆಯಾಟದಿಂದ ತಂಡವನ್ನು ಪಾರು ಮಾಡಿದರು. ಇದು ಕುಶಾಗ್ರ ಅವರ ಮೊದಲ ಶತಕವಾಗಿದ್ದು, ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿತು.

ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ 2026ರ ತನ್ನ ಮೊದಲ ಲೀಗ್ ಪಂದ್ಯದಲ್ಲಿ ಇಂಡಿಯಾ ಎ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ಕುಮಾರ್ ಕುಶಾಗ್ರ ಭರ್ಜರಿ ಶತಕ ಸಿಡಿಸುವ ಮೂಲಕ ತಂಡಕ್ಕೆ ಆಸರೆಯಾಗಿದ್ದಾರೆ. ನೇಪಾಳ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ ಕೇವಲ 42 ರನ್‌ಗಳಿಗೆ ಪ್ರಮುಖ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ಕುಶಾಗ್ರ, ನಾಯಕ ತಿಲಕ್ ವರ್ಮಾ ಜೊತೆಗೂಡಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ಈ ಟೂರ್ನಿಯಲ್ಲಿ ಕುಶಾಗ್ರ ಸಿಡಿಸಿದ ಮೊದಲ ಶತಕ ಇದಾಗಿದೆ.
ಸಿಕ್ಸರ್ ಸಿಡಿಸಿ ಶತಕ ಪೂರೈಸಿದ ಕುಶಾಗ್ರ
ನೇಪಾಳ ವಿರುದ್ಧದ ಪಂದ್ಯದಲ್ಲಿ 93 ರನ್ ಗಳಿಸಿದ್ದ ಕುಮಾರ್ ಕುಶಾಗ್ರ, ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ ತಮ್ಮ ಶತಕವನ್ನು ಪೂರ್ಣಗೊಳಿಸಿದರು. ಕೇವಲ 93 ಎಸೆತಗಳಲ್ಲಿ ಈ ಮೈಲಿಗಲ್ಲು ತಲುಪಿದ ಅವರು, ತಮ್ಮ ಶತಕದ ಇನ್ನಿಂಗ್ಸ್‌ನಲ್ಲಿ ಬೌಂಡರಿ ಹಾಗೂ ಸಿಕ್ಸರ್‌ಗಳ ಮೂಲಕ ರನ್ ಮಳೆ ಸುರಿಸಿದರು.
ಇನ್ನು ಈ ಪಂದ್ಯದಲ್ಲಿ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ತಂಡದ ಸ್ಫೋಟಕ ಆರಂಭಿಕ ಅಭಿಷೇಕ್ ಶರ್ಮಾ ಕೇವಲ 9 ರನ್‌ಗಳಿಗೆ ವಿಕೆಟ್ ಒಪ್ಪಿಸಿದರೆ, ಯುವ ಆಟಗಾರ ವೈಭವ್ ಸೂರ್ಯವಂಶಿ 26 ರನ್ ಗಳಿಸಿ ಔಟಾದರು. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಆಯುಷ್ ಬದೋನಿ ಕೂಡ ಕೇವಲ 2 ರನ್ ಗಳಿಸಿ ಪೆವಿಲಿಯನ್ ಸೇರಿದರು. ಈ ಹಂತದಲ್ಲಿ ಜೊತೆಯಾದ ಕುಮಾರ್ ಕುಶಾಗ್ರ ಮತ್ತು ನಾಯಕ ತಿಲಕ್ ವರ್ಮಾ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದರು. ಇಬ್ಬರೂ ನಾಲ್ಕನೇ ವಿಕೆಟ್‌ಗೆ ಬೃಹತ್ ಜೊತೆಯಾಟವಾಡುವ ಮೂಲಕ ಭಾರತದ ಇನಿಂಗ್ಸ್‌ಗೆ ಹೊಸ ಚೈತನ್ಯ ತುಂಬಿದರು.
💯 up with a 6️⃣
A sensational HUNDRED from Kumar Kushagra 🫡
His 3️⃣rd in List A cricket
Updates ▶️ https://t.co/r7KnQLPzIm
#TeamIndia | #INDAvNEP | #RisingStarsAsiaCup https://t.co/1nY2IgybSj
— BCCI (@BCCI) November 20, 2026
117 ರನ್ ಸಿಡಿಸಿ ಮಿಂಚಿದ ಕುಶಾಗ್ರ
ಕುಮಾರ್ ಕುಶಾಗ್ರ ಒಟ್ಟು 102 ಎಸೆತಗಳನ್ನು ಎದುರಿಸಿ 5 ಸಿಕ್ಸರ್ ಹಾಗೂ 10 ಬೌಂಡರಿಗಳ ನೆರವಿನಿಂದ 117 ರನ್ ಗಳಿಸಿದರು. 114.71ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಅವರು ನೇಪಾಳಿ ಬೌಲರ್‌ಗಳನ್ನು ಕಾಡಿದರು. ಇನ್ನು ನಾಯಕ ತಿಲಕ್ ವರ್ಮಾ ಜೊತೆಗೂಡಿ ನಾಲ್ಕನೇ ವಿಕೆಟ್‌ಗೆ ಕೇವಲ 191 ಎಸೆತಗಳಲ್ಲಿ ಬರೋಬ್ಬರಿ 206 ರನ್‌ಗಳ ಅಮೋಘ ಜೊತೆಯಾಟ ನಡೆಸಿದರು. ಕುಶಾಗ್ರ ವಿಕೆಟ್ ಕಳೆದುಕೊಂಡಾಗ ಭಾರತದ ಸ್ಕೋರ್ 4 ವಿಕೆಟ್‌ಗಳಿಗೆ 248 ರನ್ ಆಗಿತ್ತು.
ನೇಪಾಳದ ಬೌಲರ್ ಲಲಿತ್ ರಾಜ್‌ಬನ್ಶಿ ಅವರು ಕುಶಾಗ್ರ ಅವರನ್ನು ಕ್ಲೀನ್‌ಬೌಲ್ಡ್ ಮಾಡುವ ಮೂಲಕ ಅವರ ಅಮೋಘ ಇನ್ನಿಂಗ್ಸ್‌ಗೆ ತೆರೆ ಎಳೆದರು. ಆರಂಭಿಕ ಆಘಾತದ ನಡುವೆಯೂ ಕುಶಾಗ್ರ ತೋರಿದ ಜವಾಬ್ದಾರಿಯುತ ಬ್ಯಾಟಿಂಗ್ ಇಂಡಿಯಾ ಎ ತಂಡಕ್ಕೆ ದೊಡ್ಡ ಬಲ ತುಂಬಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:57 pm, Fri, 20 November 26




