ಇಂಡಿಯನ್ ಐಡಲ್‌ನಿಂದ ರಿಜೆಕ್ಟ್; ಟ್ರೆಂಡಿಂಗ್ ಗಾಯಕನ ಹಿಂದಿನ ನೋವಿನ ಕಥೆ
ಇಂಡಿಯನ್ ಐಡಲ್‌ನಿಂದ ಹೊರಬಿದ್ದಿದ್ದ ಗಾಯಕ ರಿತೋ ರಿಬಾ ಈಗ ಸಂಗೀತ ಲೋಕದಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ. ಅವರ ದಿಲ್‌ರುಬಾ ದಿಲ್‌ನಶೀನ್ ಹಾಡು ಶಝಾಮ್ ಮತ್ತು ಸ್ಪಾಟಿಫೈ ಚಾರ್ಟ್‌ಗಳಲ್ಲಿ ಮಿಂಚುತ್ತಿದೆ. ಕಷ್ಟದ ಹಾದಿಯನ್ನು ದಾಟಿ ಬಂದ ರಿತೋ ರಿಬಾ ಅವರ ಯಶಸ್ಸಿನ ಕಥೆ ಈಗ ಎಲ್ಲರಿಗೂ ಸ್ಫೂರ್ತಿಯಾಗಿದೆ.

ಅರುಣಾಚಲ ಪ್ರದೇಶದ ಗಾಯಕ ರಿತೋ ರಿಬಾ ತಮ್ಮ ಸಂಗೀತ ಪ್ರತಿಭೆಯಿಂದ ಈಗ ದೇಶಾದ್ಯಂತ ಗಮನ ಸೆಳೆದಿದ್ದಾರೆ. 2022ರಲ್ಲಿ ಇಂಡಿಯನ್ ಐಡಲ್ ವೇದಿಕೆಯಿಂದ ಹೊರಬಿದ್ದಿದ್ದ ಇವರು ಇಂದು ಭರ್ಜರಿ ಯಶಸ್ಸು ಕಂಡಿದ್ದಾರೆ. ಇವರ ‘ದಿಲ್‌ರುಬಾ ದಿಲ್‌ನಶೀನ್’ ಹಾಡು ಶಝಾಮ್ ಇಂಡಿಯಾ ಚಾರ್ಟ್‌ನಲ್ಲಿ ಅಗ್ರಸ್ಥಾನ ಪಡೆದಿದೆ. ಸ್ಪಾಟಿಫೈ ಇಂಡಿಯಾ ಡೈಲಿ ಚಾರ್ಟ್‌ನಲ್ಲಿ ನಾಲ್ಕನೇ ಸ್ಥಾನಕ್ಕೇರಿ ಸದ್ದು ಮಾಡುತ್ತಿದೆ.
ರಿತೋ ರಿಬಾ ಅವರ ಈ ಗೆಲುವಿನ ಹಿಂದೆ ದೊಡ್ಡ ಶ್ರಮವಿದೆ. ಅವರು ಪಾಸಿಘಾಟ್‌ನ ಬೆಟ್ಟಗುಡ್ಡಗಳ ನಡುವೆ ಜನಿಸಿದರು. ತಾಯಿ ಹಾಡುತ್ತಿದ್ದ ಜಾನಪದ ಗೀತೆಗಳನ್ನು ಕೇಳುತ್ತಾ ಬೆಳೆದರು. ಜಾನಪದ ಮತ್ತು ಆಧುನಿಕ ಶೈಲಿಯನ್ನು ಬೆರೆಸಿ ವಿಶಿಷ್ಟ ಹಾಡುಗಾರಿಕೆ ರೂಪಿಸಿಕೊಂಡರು. ಸಂಗೀತದಲ್ಲಿ ಪದವಿ ಪಡೆಯಲು ದೆಹಲಿಗೆ ತೆರಳಿದರು.
ಬದುಕು ಸಾಗಿಸಲು ಹಲವು ಕೆಲಸಗಳನ್ನು ಮಾಡುತ್ತಾ ಕಷ್ಟದ ದಿನಗಳನ್ನು ಎದುರಿಸಿದರು. ಕಷ್ಟಗಳ ನಡುವೆಯೂ ಸಂಗೀತದ ಮೇಲಿನ ಆಸೆಯನ್ನು ಬಿಡಲಿಲ್ಲ. ಪ್ರತಿದಿನ ರಿಯಾಜ್ ಮಾಡುತ್ತಾ ತಮ್ಮ ಯೂಟ್ಯೂಬ್ ಚಾನೆಲ್‌ಗಾಗಿ ಹಾಡುಗಳನ್ನು ರೆಕಾರ್ಡ್ ಮಾಡಿದರು. ನಿರಂತರ ಪ್ರಯತ್ನದಿಂದ ಪ್ರೇಕ್ಷಕರ ಬಳಗವನ್ನು ಬೆಳೆಸಿಕೊಂಡರು.
View this post on Instagram
ಇಂಡಿಯನ್ ಐಡಲ್‌ನಲ್ಲಿ ಅಂತಿಮ ಸುತ್ತಿಗೆ ಆಯ್ಕೆಯಾಗದಿದ್ದರೂ ಅವರು ಧೃತಿಗೆಡಲಿಲ್ಲ. ಹಲವು ವೇದಿಕೆಗಳಲ್ಲಿ ಹಾಡುವ ಮೂಲಕ ತಮ್ಮ ಕಲೆಯನ್ನು ಮತ್ತಷ್ಟು ಸಾಣೆ ಹಿಡಿದರು. ಮೂರು ವರ್ಷಗಳ ಬಳಿಕ ಅದೇ ಇಂಡಿಯನ್ ಐಡಲ್ ವೇದಿಕೆಗೆ ಮತ್ತೆ ಮರಳಿದರು. ಶ್ರೇಯಾ ಘೋಷಾಲ್ ಜೊತೆ ಸ್ವಂತ ಹಾಡನ್ನು ಹಾಡಿ ತೀರ್ಪುಗಾರರಿಂದಲೇ ಮೆಚ್ಚುಗೆ ಪಡೆದರು.
ಇದನ್ನೂ ಓದಿ: ಅರಿಜಿತ್ ಸಿಂಗ್ ನಿವೃತ್ತಿ ಬೆನ್ನಲ್ಲೇ ಶಾಕಿಂಗ್ ಹೇಳಿಕೆ ನೀಡಿದ ಶ್ರೇಯಾ ಘೋಷಾಲ್
ಯೂಟ್ಯೂಬ್‌ನಲ್ಲಿ ‘ದಿಲ್‌ರುಬಾ ದಿಲ್‌ನಶೀನ್’ ಹಾಡು 24 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆ ಕಂಡಿದೆ. ರೀಲ್ಸ್ನಲ್ಲಿ ಈ ಹಾಡು ಟ್ರೆಂಡ್ನಲ್ಲಿದೆ. ಒಂದು ಸೋಲು ಅಥವಾ ತಿರಸ್ಕಾರ ನಮ್ಮ ಮೌಲ್ಯವನ್ನು ನಿರ್ಧರಿಸುವುದಿಲ್ಲ ಎಂಬುದನ್ನು ರಿತೋ ತೋರಿಸಿದ್ದಾರೆ. ದೊಡ್ಡ ಹಿನ್ನಡೆಯ ನಂತರವೇ ದೊಡ್ಡ ಯಶಸ್ಸು ಸಿಗುತ್ತದೆ ಎಂಬುದು ಅವರ ಕಥೆಯ ಸಾರವಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




