ಸ್ಟಿಂಗ್ ಆಪರೇಷನ್ ಕೇಸ್: ಕೃಪಾ ಆಳ್ವಾಗೆ ಶಾಕ್ ಕೊಟ್ಟ ಬೆಂಗಳೂರಿನ 66ನೇ ಸಿಸಿಹೆಚ್ ಕೋರ್ಟ್
ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಉಚ್ಛಾಟಿತ ನಾಯಕಿ ಕೃಪಾ ಆಳ್ವಾ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ 66ನೇ ಸಿಸಿಹೆಚ್ ಕೋರ್ಟ್ ವಜಾಗೊಳಿಸಿ ಶಾಕ್ ನೀಡಿದೆ. ಈ ಸ್ಟಿಂಗ್ ಆಪರೇಷನ್ ಷಡ್ಯಂತ್ರದ ಹಿಂದೆ ಇವರ ಕೈವಾಡವೂ ಇರುವ ಬಗ್ಗೆ ಆರೋಪ ಕೇಳಿಬಂದಿತ್ತು. ಈ ಸಂಬಂಧ ಅವರು ಮೂರು ಬಾರಿ ಸಿಸಿಬಿ ವಿಚಾರಣೆಗೂ ಹಾಜರಾಗಿದ್ದರು.

ಬೆಂಗಳೂರು, ನವೆಂಬರ್ 20: ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಕೇಸ್ ಸಂಬಂಧ ಕಾಂಗ್ರೆಸ್ ಮಾಜಿ ನಾಯಕಿ ಕೃಪಾ ಆಳ್ವಾಗೆ ಕೋರ್ಟ್ ಶಾಕ್ ಕೊಟ್ಟಿದೆ. ಬೆಂಗಳೂರಿನ 66 ನೇ ಸಿಸಿಹೆಚ್ ಕೋರ್ಟ್ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಿ ಆದೇಶಿಸಿದೆ. ಈ ಹಿಂದೆ ನವೆಂಬರ್ 2ರಂದು ಪ್ರಕರಣ ಸಂಬಂಧ ಕೃಪಾ ಆಳ್ವಾ ಸೇರಿದಂತೆ ವಿನೋದ್ ಕುಮಾರ್, ಪ್ರಶಾಂತ್ ಕುಮಾರ್ಗೆ ಇದೇ ನ್ಯಾಯಾಲಯ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿತ್ತು. ಪೊಲೀಸರ ತನಿಖೆಗೆ ಆರೋಪಿಗಳು ಸಹಕರಿಸಬೇಕು ಮತ್ತು ಸಾಕ್ಷಿಗಳಿಗೆ ಬೆದರಿಕೆ ಹಾಕದಂತೆ ಸೂಚಿಸಿತ್ತು.
ಸ್ಟಿಂಗ್ ಕೇಸ್ನಲ್ಲಿ ಕೃಪಾ ಆಳ್ವಾ ಪಾತ್ರವೇನು?
2023ರ ಫೆಬ್ರವರಿಯಲ್ಲಿ ಚಿತ್ರೀಕರಿಸಲಾಗಿದೆ ಎನ್ನಲಾದ ಮತ್ತು 2026ರ ಸೆಪ್ಟೆಂಬರ್‌ನಲ್ಲಿ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಆದ ವಿಡಿಯೋದಲ್ಲಿ ಕೃಪಾ ಆಳ್ವಾ ಹಾಗೂ ಖಾಸಗಿ ವಾಹಿನಿಯ ವ್ಯವಸ್ಥಾಪಕ ನಿರ್ದೇಶಕ ಕಾಣಿಸಿಕೊಂಡಿದ್ದರು. ಹೀಗಾಗಿ ಈ ಸ್ಟಿಂಗ್ ಆಪರೇಷನ್ ಷಡ್ಯಂತ್ರದ ಹಿಂದೆ ಇವರಿಬ್ಬರ ಕೈವಾಡವಿದೆ ಎಂಬ ಆರೋಪ ಕೇಳಿಬಂದಿತ್ತು. ಬಳಿಕ ಪಕ್ಷವಿರೋಧಿ ಚಟುವಟಿಕೆ ಮತ್ತು ಈ ವಿವಾದದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ಕೃಪಾ ಆಳ್ವಾರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟಿಸಿತ್ತು. ಆದರೆ ವಿಚಾರಣೆ ವೇಳೆ ತಾವು ನಿರಪರಾಧಿ ಎಂದು ಹೇಳಿಕೊಂಡಿರುವ ಕೃಪಾ ಆಳ್ವಾ, ಸ್ಟಿಂಗ್ ವಿಡಿಯೋ ವಿಚಾರವಾಗಿ ರಾಕೇಶ್ ಶೆಟ್ಟಿ ತಮ್ಮನ್ನು ಸಂಪರ್ಕಿಸಿದ್ದರು ಎಂದಿದ್ದರು. ಅಲ್ಲದೆ, ಅವರು ವಿಡಿಯೋ ಚಿತ್ರೀಕರಣ ಮಾಡಿದ್ದಾರೆ ಎಂಬ ವಿಷಯ ತಮಗೆ ತಿಳಿದಿರಲಿಲ್ಲ ಮತ್ತು ವಿಡಿಯೋ ಅಪ್‌ಲೋಡ್ ಮಾಡುವುದರಲ್ಲಿ ತಮ್ಮ ಪಾತ್ರವಿಲ್ಲ ಎಂದು ತಿಳಿಸಿದ್ದರು.
ಇದನ್ನೂ ಓದಿ: ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಕೇಸ್: ಕೃಪಾ ಆಳ್ವಾ ಸೇರಿ ಮೂವರಿಗೆ ಬಿಗ್ ರಿಲೀಫ್
ಪ್ರಕರಣ ಸಂಬಂಧ ಕೃಪಾ ಆಳ್ವಾ ಅದಾಗಲೇ ಮೂರು ಬಾರಿ ವಿಚಾರಣೆಗೆ ಹಾಜರಾಗಿ ಹೇಳಿಕೆ ದಾಖಲಿಸಿದ್ದಾರೆ. ಹಳೇ ಮೊಬೈಲ್ ಸಮೇತ ವಿಚಾರಣೆಗೆ ಹಾಜರಾಗಲು ಕೃಪಾಗೆ ಪೊಲೀಸರು ಸೂಚಿಸಿದ್ದರು. ತಮ್ಮ ಬಳಿ ಪ್ರಸ್ತುತ ಆ ಮೊಬೈಲ್ ಬಳಕೆಯಲ್ಲಿಲ್ಲ ಎಂದು ಕೃಪಾ ಆಳ್ವಾ ತಿಳಿಸಿದ್ದರಾದರೂ ಅಂತಿಮವಾಗಿ ಮೊಬೈಲ್ ನೀಡೋದಾಗಿ ಹೇಳಿದ್ದರು. ಆದರೆ ಈವರೆಗೂ ಅವರು ಪೊಲೀಸರಿಗೆ ತಮ್ಮ ಹಳೆಯ ಮೊಬೈಲ್ ಹಸ್ತಾಂತರಿಸಿಲ್ಲ ಎನ್ನಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:18 pm, Fri, 20 November 26




