IPL 2025: ಕೆಕೆಆರ್ ಪಂದ್ಯ ತೂಗುಯ್ಯಾಲೆಯಲ್ಲಿ; ಬಿಸಿಸಿಐ ಉಪಾಧ್ಯಕ್ಷರು ಹೇಳಿದ್ದೇನು?
KKR vs RCB IPL 2025: ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಎರಡು ಐಪಿಎಲ್ 2025 ಪಂದ್ಯಗಳ ಮೇಲೆ ಬಿಕ್ಕಟ್ಟಿನ ಮೋಡಗಳು ಆವರಿಸಿವೆ. ಮೊದಲ ಪಂದ್ಯಕ್ಕೆ ಮಳೆಯ ಅಪಾಯವಿದ್ದರೆ, ಎರಡನೇ ಪಂದ್ಯ ಗುವಾಹಟಿಗೆ ಸ್ಥಳಾಂತರವಾಗುವ ಸಾಧ್ಯತೆಯಿದೆ. ರಾಮನವಮಿಯಿಂದ ಭದ್ರತಾ ಕಾರಣಗಳಿಗಾಗಿ ಈ ಬದಲಾವಣೆ ಚರ್ಚೆಯಲ್ಲಿದೆ. ಆದರೆ ಬಿಸಿಸಿಐ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ತಿಳಿಸಿದ್ದಾರೆ.

2025 ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಪ್ರಾರಂಭವಾಗುವ ಮೊದಲು, ಕೋಲ್ಕತ್ತಾ ನೈಟ್ ರೈಡರ್ಸ್‌ನ ಎರಡು ಪಂದ್ಯಗಳ ಮೇಲೆ ಬಿಕ್ಕಟ್ಟಿನ ಮೋಡಗಳು ಆವರಿಸಿವೆ. ಮಾರ್ಚ್ 22 ರಂದು ಆರ್‌ಸಿಬಿ (RCB) ವಿರುದ್ಧ ನಡೆಯಲಿರುವ ಮೊದಲ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆಯಿದೆ. ಮತ್ತೊಂದೆಡೆ, ಏಪ್ರಿಲ್ 6 ರಂದು ಲಕ್ನೋ ಸೂಪರ್‌ಜೈಂಟ್ಸ್ ವಿರುದ್ಧದ ಪಂದ್ಯವೂ ಬೇರೆಡೆಗೆ ಸ್ಥಳಾಂತರವಾಗಬಹುದು ಎಂದು ವರದಿಯಾಗಿದೆ. ವಾಸ್ತವವಾಗಿ ಏಪ್ರಿಲ್ 6 ರಂದು ನಡೆಯಬೇಕಿದ್ದ ಲಕ್ನೋ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯವನ್ನು ರಾಮನವಮಿ ಇರುವ ಕಾರಣ ಭದ್ರತಾ ದೃಷ್ಟಿಯಿಂದ ಕೋಲ್ಕತ್ತಾದಿಂದ ಗುವಾಹಟಿಗೆ ಸ್ಥಳಾಂತರಿಸಬಹುದು ಎಂಬ ಸುದ್ದಿ ಹರಿದಾಡುತ್ತಿತ್ತು. ಆದರೆ ಈಗ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಪಂದ್ಯವನ್ನು ಗುವಾಹಟಿಗೆ ಸ್ಥಳಾಂತರಿಸುವ ಬಗ್ಗೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದಿದ್ದಾರೆ.
ಕೋಲ್ಕತ್ತಾ ಪಂದ್ಯದ ಬಗ್ಗೆ ರಾಜೀವ್ ಶುಕ್ಲಾ ಹೇಳಿದ್ದೇನು?
ಮೇಲೆ ಹೇಳಿದಂತೆ ಕೆಕೆಆರ್ ಹಾಗೂ ಲಕ್ನೋ ನಡುವಿನ ಪಂದ್ಯ ನಡೆಯುವ ದಿನ ರಾಮನವಮಿ ಇರುವ ಕಾರಣ ಈ ಪಂದ್ಯಕ್ಕೆ ಭದ್ರತೆ ಒದಗಿಸಲು ಸಾಧ್ಯವಿಲ್ಲ ಎಂದು ಕೋಲ್ಕತ್ತಾ ಪೊಲೀಸರು ತಿಳಿಸಿದ್ದು, ಈ ಕಾರಣದಿಂದಾಗಿ ಕೋಲ್ಕತ್ತಾದಲ್ಲಿ ನಡೆಯಬೇಕಿದ್ದ ಪಂದ್ಯವನ್ನು ಗುವಾಹಟಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ವರದಿಯಾಗಿತ್ತು. ಆದರೆ ಪಂದ್ಯವನ್ನು ಮರು ನಿಗದಿಪಡಿಸುವ ಬಗ್ಗೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಟಿವಿ9 ಜೊತೆಗಿನ ಸಂವಾದದಲ್ಲಿ ರಾಜೀವ್ ಶುಕ್ಲಾ ಹೇಳಿದ್ದಾರೆ. ನಾವು ಕೋಲ್ಕತ್ತಾದಲ್ಲೇ ಪಂದ್ಯವನ್ನು ನಡೆಸಲು ನೋಡುತ್ತಿದ್ದೇವೆ. ಇದಲ್ಲದೆ ನಮಗೆ ಇನ್ನೂ ಎರಡು-ಮೂರು ಆಯ್ಕೆಗಳಿವೆ ಎಂದಿದ್ದಾರೆ.
ಮೊದಲ ಪಂದ್ಯಕ್ಕೆ ಮಳೆಯ ಆತಂಕ
ಇದಲ್ಲದೆ ಐಪಿಎಲ್ನ ಮೊದಲ ಪಂದ್ಯಕ್ಕೂ ಮಳೆಯ ಆತಂಕ ಎದುರಾಗಿದೆ. ಶನಿವಾರದ ಪಂದ್ಯದ ವೇಳೆ ಮಳೆ ಬರುವ ಸಾಧ್ಯತೆ ಇದೆ. ಪಂದ್ಯಕ್ಕೂ ಒಂದು ದಿನ ಮೊದಲು, ಶುಕ್ರವಾರ ಸಂಜೆ ಮಳೆ ಸುರಿದ ಕಾರಣ ಕೆಕೆಆರ್ ಮತ್ತು ಆರ್‌ಸಿಬಿ ಎರಡೂ ತಂಡಗಳ ಅಭ್ಯಾಸ, ಅವಧಿಗೆ ಮುನ್ನವೇ ಕೊನೆಗೊಂಡಿತು. ವರದಿಗಳ ಪ್ರಕಾರ, ಅಭ್ಯಾಸ ಸಂಜೆ 5 ಗಂಟೆಗೆ ಪ್ರಾರಂಭವಾಯಿತು ಆದರೆ ಸಂಜೆ 6 ಗಂಟೆ ಸುಮಾರಿಗೆ ಮಳೆ ಬರಲು ಪ್ರಾರಂಭಿಸಿದ್ದರಿಂದ ಆಟಗಾರರು ಮೈದಾನ ತೊರೆಯಬೇಕಾಯಿತು.
ಹವಾಮಾನ ಇಲಾಖೆ ಎಚ್ಚರಿಕೆ
ಇದಲ್ಲದೆ ಭಾರತೀಯ ಹವಾಮಾನ ಇಲಾಖೆಯ ಶುಕ್ರವಾರ ಮತ್ತು ಶನಿವಾರ ಆರೆಂಜ್ ಅರ್ಲಟ್ ಘೋಷಿಸಿದೆ. ಕೋಲ್ಕತ್ತಾ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ಬಿರುಗಾಳಿ ಜೊತೆಗೆ, ಮಿಂಚು, ಆಲಿಕಲ್ಲು ಮಳೆ ಮತ್ತು ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ತಿಳಿಸಿದೆ. ಶುಕ್ರವಾರ, ಜಾರ್ಗ್ರಾಮ್, ಪೂರ್ವ ಮತ್ತು ಪಶ್ಚಿಮ ಮಿಡ್ನಾಪುರ, ಬಂಕುರಾ, ಪುರುಲಿಯಾ, ಪೂರ್ವ ಬುರ್ದ್ವಾನ್, ಹೂಗ್ಲಿ ಮತ್ತು ಹೌರಾದಲ್ಲಿ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ತಿಳಿಸಿದೆ. ಶನಿವಾರದ ಹವಾಮಾನ ಮುನ್ಸೂಚನೆಯ ಪ್ರಕಾರ ನಾಡಿಯಾ, ಬಿರ್ಭುಮ್, ಮುರ್ಷಿದಾಬಾದ್, ಪೂರ್ವ ಬುರ್ದ್ವಾನ್ ಮತ್ತು ಉತ್ತರ ಮತ್ತು ದಕ್ಷಿಣ 24 ಪರಗಣಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.
IPL 2025: ಮೊದಲ ಪಂದ್ಯಕ್ಕೆ ಆರ್‌ಸಿಬಿ- ಕೆಕೆಆರ್ ಸಂಭಾವ್ಯ ಪ್ಲೇಯಿಂಗ್ 11 ಹೇಗಿರಲಿದೆ?
ಉದ್ಘಾಟನಾ ಸಮಾರಂಭ
ಶನಿವಾರ ಸಂಜೆ 7:30 ಕ್ಕೆ ಪಂದ್ಯ ಆರಂಭವಾಗಲಿದ್ದು, ಟಾಸ್ ಸಂಜೆ 7 ಗಂಟೆಗೆ ನಡೆಯಲಿದೆ. ಇದಕ್ಕೂ ಮುನ್ನ, ಸಂಜೆ 6 ಗಂಟೆಗೆ, ಶ್ರೇಯಾ ಘೋಶಾಲ್ ಮತ್ತು ದಿಶಾ ಪಟಾನಿಯಂತಹ ಸೆಲೆಬ್ರಿಟಿಗಳು ಉದ್ಘಾಟನಾ ಸಮಾರಂಭದಲ್ಲಿ ಪ್ರದರ್ಶನ ನೀಡಲಿದ್ದಾರೆ. ಆದಾಗ್ಯೂ, ಹವಾಮಾನ ಪರಿಸ್ಥಿತಿಯನ್ನು ಗಮನಿಸಿದರೆ, ಸಮಾರಂಭವು ಯಾವುದೇ ಅಡೆತಡೆಯಿಲ್ಲದೆ ನಡೆಯುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ