ನಟಿ ಸುಶ್ಮಿತಾ ಸೇನ್ ಜೊತೆ ಡೇಟಿಂಗ್ನಲ್ಲಿರುವ ಲಲಿತ್ ಮೋದಿ ಯಾರು? ಎಷ್ಟು ಸಾವಿರ ಕೋಟಿ ಒಡೆಯ ಗೊತ್ತಾ?
ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ 2010ರಲ್ಲಿ ದೇಶ ಬಿಟ್ಟು ಪರಾರಿಯಾಗಿದ್ದರು. ಸದ್ಯ ಅವರು ಲಂಡನ್‌ನಲ್ಲಿ ನೆಲೆಸಿದ್ದು, ಭಾರತ ಸರ್ಕಾರ ಅವರನ್ನು ಪರಾರಿ ಎಂದು ಘೋಷಿಸಿದೆ. ಒಂದು ಅಂದಾಜಿನ ಪ್ರಕಾರ, ಲಲಿತ್ ಮೋದಿ ಅವರ ಆಸ್ತಿ ಸುಮಾರು 4,555 ಕೋಟಿ ರೂ.
ನಿನ್ನೆ ಸಂಜೆ ಟ್ವಿಟರ್ನಲ್ಲಿ ಪೋಸ್ಟ್ ಆಗಿದ್ದ ಒಂದು ಸುದ್ದಿ ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ಅದೆನೆಂದರೆ, ಐಪಿಎಲ್ ಪಿತಾಮಹ ಲಲಿತ್ ಮೋದಿ (Lalit Modi), ಬಾಲಿವುಡ್ ನಟಿ ಸುಶ್ಮಿತಾ ಸೇನ್ (Sushmita Sen) ಜೊತೆ ಡೇಟಿಂಗ್ನಲ್ಲಿರುವ ವಿಚಾರ. ಈ ಇಬ್ಬರ ಬಗ್ಗೆ ಹೇಳಬೇಕೆಂದರೆ ಸುಶ್ಮಿತಾ ಸೇನ್ ಯಶಸ್ವಿ ನಟಿ, ಲಲಿತ್ ಮೋದಿ ಐಪಿಎಲ್ (Indian Premier League) ಪಿತಾಮಹ. ಇಂಡಿಯನ್ ಪ್ರೀಮಿಯರ್ ಲೀಗ್ ಅಂದರೆ ಐಪಿಎಲ್ ಕಲ್ಪನೆ ಹುಟ್ಟಿದ್ದು ಲಲಿತ್ ಮೋದಿಯವರ ತಲೆಯಿಂದ. ಇಂದು ಭಾರೀ ಹಣ ಗಳಿಸುತ್ತಿರುವ ಬಿಸಿಸಿಐ ಆರಂಭಿಸಿದ್ದು ಈ ಲಲಿತ್ ಮೋದಿ. ನಿನ್ನೆ, ಲಲಿತ್ ಮೋದಿ, ನಾನು ಮತ್ತು ಸುಶ್ಮಿತಾ ಸೇನ್ ಪರಸ್ಪರ ಡೇಟಿಂಗ್ ಮಾಡುತ್ತಿರುವ ಬಗ್ಗೆ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದರು. ಜೊತೆಗೆ ಹಲವು ಫೋಟೋಗಳನ್ನು ಸಹ ಹಂಚಿಕೊಂಡಿದ್ದರು. ಆರಂಭದಲ್ಲಿ ಮೋದಿ ಮಾಡಿದ ಮೊದಲ ಟ್ವೀಟ್ ಈ ಇಬ್ಬರು ಮದುವೆಯಾಗಿದ್ದಾರೆ ಎಂಬುದನ್ನು ಬಿಂಬಿಸುತ್ತಿತ್ತು. ಆದರೆ ಈ ಸುದ್ದಿ ಎಲ್ಲೆಡೆ ಹಬ್ಬಿದ ಬಳಿಕ ಸ್ವತಃ ಲಲಿತ್ ಮೋದಿಯೇ ಮತ್ತೊಂದು ಟ್ವೀಟ್ ಮಾಡಿ ಇಬ್ಬರು ಡೇಟಿಂಗ್ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದರು. ಮೂಲತಃ ಲಲಿತ್ ಮೋದಿ ಒಬ್ಬ ಉದ್ಯಮಿಯಾಗಿದ್ದು, ಸಾವಿರಾರು ಕೋಟಿಯ ಒಡೆಯರಾಗಿದ್ದಾರೆ. ಐಪಿಎಲ್ ಮೂಲಕ ಭಾರತ ಕ್ರಿಕೆಟ್ನಲ್ಲಿ ಸಂಚಲನ ಮೂಡಿಸಿದ ಮೋದಿಯ ವೈಯಕ್ತಿಕ ಬದುಕು ಹಾಗೂ ಐಷರಾಮಿ ಬದುಕಿನ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
ಇಬ್ಬರೂ ಒಟ್ಟಿಗೆ ಇರುವ ಚಿತ್ರಗಳನ್ನೂ ಪೋಸ್ಟ್ ಮಾಡಿದ್ದಾರೆ
ಲಲಿತ್ ಮೋದಿ ಸದ್ಯ ಭಾರತದಿಂದ ಹೊರಗಿದ್ದು ಲಂಡನ್‌ನಲ್ಲಿ ನೆಲೆಸಿದ್ದಾರೆ. ಜೊತೆಗೆ ವಿದೇಶದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಮೋದಿ, ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ ಇದ್ದು, ನಿರಂತರವಾಗಿ ತಮ್ಮ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. ಲಲಿತ್ ಮೋದಿ ಅವರು ಇತ್ತೀಚೆಗೆ ರಜಾ ಕಳೆಯಲು ಮಾಲ್ಡೀವ್ಸ್‌ಗೆ ತೆರಳಿದ್ದರು. ಈಗ ಮಾಲ್ಡೀವ್ಸ್‌ನಿಂದ ಲಂಡನ್‌ಗೆ ಮರಳಿದ ನಂತರ ಲಲಿತ್ ಮೋದಿ ಅವರು ಸುಶ್ಮಿತಾ ಸೇನ್ ಅವರೊಂದಿಗೆ ಡೇಟಿಂಗ್ ಮಾಡುತ್ತಿರುವುದಾಗಿ ಹೇಳಿಕೊಂಡಿರುವುದಲ್ಲದೆ ಇಬ್ಬರೂ ಒಟ್ಟಿಗೆ ಇರುವ ಚಿತ್ರಗಳನ್ನೂ ಪೋಸ್ಟ್ ಮಾಡಿದ್ದಾರೆ.
ಕೇರಳದಲ್ಲಿ ಆನ್‌ಲೈನ್ ಲಾಟರಿ ವ್ಯಾಪಾರ
ಲಲಿತ್ ಮೋದಿ ಮೂಲತಃ ಉದ್ಯಮಿಯಾಗಿದ್ದು, ಸಾವೀರಾರು ಕೋಟಿಯ ಒಡೆಯರಾಗಿದ್ದಾರೆ. ಲಲಿತ್ ಮೋದಿ ಮತ್ತು ಅವರ ಕುಟುಂಬ ವ್ಯಾಪಾರ ಜಗತ್ತಿನಲ್ಲಿ ದೊಡ್ಡ ಹೆಸರು ಮಾಡಿದೆ. ಜೊತೆಗೆ ಲಲಿತ್ ಮೋದಿ 2002 ರಂದು ಕೇರಳದಲ್ಲಿ ತಮ್ಮ ಆನ್‌ಲೈನ್ ಲಾಟರಿ ವ್ಯವಹಾರವನ್ನು ಸಹ ಪ್ರಾರಂಭಿಸಿದರು. ಇದರಿಂದ ಕೋಟಿ ಕೋಟಿ ಆದಾಯವನ್ನು ಸಹ ಗಳಿಸುತ್ತಿದ್ದಾರೆ.
ಲಲಿತ್ ಮೋದಿಯವರ ನಿವ್ವಳ ಮೌಲ್ಯ
ಐಪಿಎಲ್ 2008 ರಲ್ಲಿ ಪ್ರಾರಂಭವಾಯಿತು. ಇಂದು ಇದು ವಿಶ್ವದ ಅತ್ಯಂತ ಜನಪ್ರಿಯ ಕ್ರೀಡಾ ಲೀಗ್‌ಗಳಲ್ಲಿ ಒಂದಾಗಿದೆ. ಬಹುಮಟ್ಟಿಗೆ ಅದನ್ನು ಯಶಸ್ವಿಗೊಳಿಸಿದ ಕೀರ್ತಿ ಲಲಿತ್ ಮೋದಿಯವರಿಗೆ ಸಲ್ಲುತ್ತದೆ. ಆದರೆ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ 2010ರಲ್ಲಿ ದೇಶ ಬಿಟ್ಟು ಪರಾರಿಯಾಗಿದ್ದರು. ಸದ್ಯ ಅವರು ಲಂಡನ್‌ನಲ್ಲಿ ನೆಲೆಸಿದ್ದು, ಭಾರತ ಸರ್ಕಾರ ಅವರನ್ನು ಪರಾರಿ ಎಂದು ಘೋಷಿಸಿದೆ. ಒಂದು ಅಂದಾಜಿನ ಪ್ರಕಾರ, ಲಲಿತ್ ಮೋದಿ ಅವರ ಆಸ್ತಿ ಸುಮಾರು 4,555 ಕೋಟಿ ರೂ. ಜೊತೆಗೆ ಮೋದಿ ಲಂಡನ್‌ನ ಐಕಾನಿಕ್ 117, ಸ್ಲೋನ್ ಸ್ಟ್ರೀಟ್‌ನಲ್ಲಿ ಐದು ಅಂತಸ್ತಿನ ಮಹಲು ಹೊಂದಿದ್ದಾರೆ, ಇದು 7000 ಚದರ ಅಡಿಗಳಷ್ಟು ವಿಸ್ತೀರ್ಣದಲ್ಲಿದೆ.
ಮೊದಲ ಪತ್ನಿ ಲಲಿತ್ ಮೋದಿಗಿಂತ 9 ವರ್ಷ ದೊಡ್ಡವರು
ಲಲಿತ್ ಮೋದಿ 2008 ರಿಂದ 2010 ರವರೆಗೆ ಐಪಿಎಲ್ ಅಧ್ಯಕ್ಷರಾಗಿದ್ದರು. ಜೊತೆಗೆ 2005 ಮತ್ತು 2008 ರ ನಡುವೆ ಬಿಸಿಸಿಐನಲ್ಲಿ ಸಕ್ರಿಯರಾಗಿದ್ದರು. ಈ ಸಮಯದಲ್ಲಿ ಮೋದಿ ತಮ್ಮ ಚಾಣಾಕ್ಷ ಯೋಜನೆಗಳಿಂದ ಬಿಸಿಸಿಐ ಆದಾಯದಲ್ಲಿ ಭಾರಿ ಹೆಚ್ಚಳ ಮಾಡಿದ್ದರು. ಇದರ ಜೊತೆಗೆ ಮೋದಿ ಅವರ ಮೊದಲ ವೈವಾಹಿಕ ಬದುಕಿನ ಬಗ್ಗೆ ಮಾತನಾಡುವುದಾದರೆ, ಮಿನಲ್ ಮೋದಿ, ಲಲಿತ್ ಮೋದಿಯವರ ಮೊದಲ ಹೆಂಡತಿ. ಅವರು ಲಲಿತ್ ಮೋದಿಯವರಿಗಿಂತ 9 ವರ್ಷ ದೊಡ್ಡವರಾಗಿದ್ದು, ಈ ಇಬ್ಬರು ದಂಪತಿಗಳಿಗೆ ಒಬ್ಬ ಮಗ ಮತ್ತು ಮಗಳು ಕೂಡ ಇದ್ದಾರೆ. ಆದರೆ ಮಿನಲ್ ಮೋದಿ ಅವರು 2018 ರಲ್ಲಿ ಕ್ಯಾನ್ಸರ್ನಿಂದ ಸಾವನ್ನಪ್ಪಿದರು.
ಸುಶ್ಮಿತಾ ಸೇನ್ ಬಗ್ಗೆ ಒಂದಿಷ್ಟು
ಸುಶ್ಮಿತಾ ಸೇನ್ 1994 ರಲ್ಲಿ ವಿಶ್ವ ಸುಂದರಿ ಕಿರೀಟವನ್ನು ತೊಟ್ಟಿದ್ದರು. ನಂತರ ಅವರು 1996 ರ ಚಲನಚಿತ್ರ ದಸ್ತಕ್ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಬಳಿಕ ಸೇನ್, ಬಿವಿ ನಂ 1, ಡು ನಾಟ್ ಡಿಸ್ಟರ್ಬ್, ಮೈ ಹೂ ನಾ, ಮೈನೆ ಪ್ಯಾರ್ ಕ್ಯೂನ್ ಕಿಯಾ ಮತ್ತು ತುಮ್ಕೋ ನಾ ಭೂಲ್ ಪಾಯೆಂಗೆ ಮತ್ತು ನೋ ಪ್ರಾಬ್ಲಂ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಸುಶ್ಮಿತಾ ಸೇನ್ಗೆ ಈಗ ಅಲಿಸಾ ಮತ್ತು ರೆನೀ ಎಂಬ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಶ್ರೀಮತಿ ಸೇನ್ 2000 ರಲ್ಲಿ ರೆನೀಯನ್ನು ದತ್ತು ಪಡೆದರು, ಆದರೆ ಅಲಿಸಾ 2010 ರಲ್ಲಿ ಕುಟುಂಬವನ್ನು ಸೇರಿಕೊಂಡರು. ರೆನೀ ಅವರು ಕಿರುಚಿತ್ರದ ಮೂಲಕ ತಮ್ಮ ನಟನೆಯನ್ನು ಪ್ರಾರಂಭಿಸಿದ್ದಾರೆ.
ಸುಶ್ಮಿತಾ ಸೇನ್ ಕೊನೆಯ ಬಾರಿಗೆ ಆರ್ಯ ಎಂಬ ವೆಬ್ ಸರಣಿಯಲ್ಲಿ ಕಾಣಿಸಿಕೊಂಡಿದ್ದರು, ಇದು ಕಳೆದ ವರ್ಷ ಇಂಟರ್ನ್ಯಾಷನಲ್ ಎಮ್ಮಿಸ್‌ನಲ್ಲಿ ಅತ್ಯುತ್ತಮ ನಾಟಕ ಸರಣಿಯ ವಿಭಾಗದಲ್ಲಿ ನಾಮನಿರ್ದೇಶನಗೊಂಡಿತು.