IND vs ENG: ಅಭ್ಯಾಸ ಪಂದ್ಯಕ್ಕೆ ಭಾರತ ತಂಡ ಪ್ರಕಟ: ಎದುರಾಳಿ ತಂಡ ಸೇರಿದ ಬುಮ್ರಾ, ಪಂತ್, ಪೂಜಾರ
Leicestershire vs India: ಭಾರತ ಅನುಭವಿ ತಂಡ ಜುಲೈ 1 ರಿಂದ ಇಂಗ್ಲೆಂಡ್ (India vs England) ವಿರುದ್ಧ ಬಾಕಿ ಇರುವ ಒಂದು ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಟೆಸ್ಟ್ ಆರಂಭಕ್ಕೂ ಮುನ್ನ ರೋಹಿತ್ ಶರ್ಮಾ ಪಡೆ ಅಭ್ಯಾಸ ಪಂದ್ಯವನ್ನು ಆಡಲಿದ್ದು, ಇಂದಿನಿಂದ ಆರಂಭವಾಗಲಿದೆ.
ಭಾರತ ಕ್ರಿಕೆಟ್ ತಂಡ ಸದ್ಯ ಎರಡೆರಡು ಪ್ರವಾಸಕ್ಕೆ ಸಜ್ಜಾಗುತ್ತಿದೆ. ಜೂನ್ 26 ರಿಂದ ಯಂಗ್ ಇಂಡಿಯಾ ಐರ್ಲೆಂಡ್ (IND vs IRE) ವಿರುದ್ಧ ಎರಡು ಪಂದ್ಯಗಳ ಟಿ20 ಸರಣಿಯನ್ನ ಆಡಲಿದೆ. ಇದಾದ ಬಳಿಕ ಭಾರತ ಅನುಭವಿ ತಂಡ ಜುಲೈ 1 ರಿಂದ ಇಂಗ್ಲೆಂಡ್ (India vs England) ವಿರುದ್ಧ ಬಾಕಿ ಇರುವ ಒಂದು ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಟೆಸ್ಟ್ ಆರಂಭಕ್ಕೂ ಮುನ್ನ ರೋಹಿತ್ ಶರ್ಮಾ ಪಡೆ ಅಭ್ಯಾಸ ಪಂದ್ಯವನ್ನು ಆಡಲಿದ್ದು, ಇಂದಿನಿಂದ ಆರಂಭವಾಗಲಿದೆ. ಲೀಸೆಸ್ಟರ್ಷೈರ್ ಫಾಕ್ಸ್ (Leicestershire Foxes) ವಿರುದ್ಧ ಜೂನ್ 23 ರಿಂದ ನಾಲ್ಕು ದಿನಗಳ ಅಭ್ಯಾಸ ಪಂದ್ಯ ನಡೆಯಲಿದ್ದು, ಇದಕ್ಕಾಗಿ ಟೀಮ್ ಇಂಡಿಯಾ ಪ್ರಕಟವಾಗಿದೆ. ವಿಶೇಷ ಎಂದರೆ ತಂಡದ ಕೆಲ ಸ್ಟಾರ್ ಆಟಗಾರರು ಎದುರಾಳಿ ತಂಡದ ಪರ ಕಣಕ್ಕಿಳಿಯಲಿದ್ದಾರೆ. ಹಾಗಾದ್ರೆ ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್ ಹೇಗಿದೆ?, ಇಲ್ಲಿದೆ ನೋಡಿ.
ಭಾರತ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸುತ್ತಿದ್ದರೆ ಶುಭ್ಮನ್ ಗಿಲ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ. ಹನುಮ ವಿಹಾರಿ ಒಂದುಕಡೆಯಿದ್ದರೆ ವಿಕೆಟ್ ಕೀಪರ್ ಜವಾಬ್ದಾರಿಯನ್ನು ಕೆಎಸ್ ಭರತ್ ವಹಿಸಲಿದ್ದಾರೆ. ರವೀಂದ್ರ ಜಡೇಜಾ ಮತ್ತು ಶಾರ್ದೂಲ್ ಥಾಕೂರ್ ಆಲ್ರೌಂಡರ್ಗಳಾಗಿದ್ದಾರೆ. ವೇಗಿಗಳಾಗಿ ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಮತ್ತು ಉಮೇಶ್ ಯಾದವ್ ಸ್ಥಾನ ಪಡೆದುಕೊಂಡಿದ್ದಾರೆ.
ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಪಾಕ್ ಯುವ ಬೌಲರ್ ಶೋಯೆಬ್; ಸ್ಥಿತಿ ಚಿಂತಾಜನಕ
ಎದುರಳಿ ಲೀಸೆಸ್ಟರ್ಷೈರ್ ತಂಡದಲ್ಲಿ ಭಾರತದ ಚೇತೇಶ್ವರ್ ಪೂಜಾರ, ಜಸ್ಪ್ರೀತ್ ಬುಮ್ರಾ, ರಿಷಭ್ ಪಂತ್ ಮತ್ತು ಪ್ರಸಿದ್ಧ್ ಕೃಷ್ಣ ಆಡಲಿದ್ದಾರೆ. ಇಲ್ಲಿ ರೋಹಿತ್, ಕೊಹ್ಲಿ ಮತ್ತು ಬುಮ್ರಾ ನಡುವಣ ಕಾಳಗ ಸಾಕಷ್ಟು ರೋಚಕತೆ ಸೃಷ್ಟಿಸುವುದು ಖಚಿತ. ಉಳಿದಂತೆ ಲೀಸೆಸ್ಟರ್ಷೈರ್ ತಂಡವನ್ನು ಸ್ಯಾಮ್ ಎವಾನ್ಸ್ ಮುನ್ನಡೆಸಲಿದ್ದಾರೆ. ರೆಹಾನ್ ಅಹ್ಮದ್, ಸ್ಯಾಮ್ ಬೇಟ್ಸ್, ನಾಟ್ ಬೌಲೇ, ವಿಲ್ ಡೇವಿಸ್, ಜೋ ಎವಿಶನ್, ಲೂಯಿಸ್ ಕಿಂಬ್ಲರ್, ಅಬಿ ಸಖಂಡೆ, ರೋಮ್ ವಾಲ್ಕರ್ ಸ್ಥಾನ ಪಡೆದುಕೊಂಡಿದ್ದಾರೆ.
ಇಂದಿನಿಂದ ಆರಂಭವಾಗಲಿರುವ ನಾಲ್ಕು ದಿನಗಳ ಅಭ್ಯಾಸ ಪಂದ್ಯ ಲೆಸ್ಟರ್‌ಷೈರ್ ಕೌಂಟಿ ಮೈದಾನದಲ್ಲಿ ಆಯೋಜಿಸಲಾಗಿದೆ. ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 3 ಗಂಟೆಗೆ ಆರಂಭವಾಗಲಿದೆ. ಅಭ್ಯಾಸ ಪಂದ್ಯ ನೇರ ಪ್ರಸಾರವಾಗುವುದಿಲ್ಲ ಬದಲಾಗಿ ಲೈವ್ ಸ್ಟ್ರೀಮಿಂಗ್ ಅನ್ನು ನೀವು Foxes TV YouTube ಚಾನಲ್‌ನಲ್ಲಿ ವೀಕ್ಷಿಸಬಹುದಾಗಿದೆ.
ಇದು ಕಳೆದ ವರ್ಷ ಆಂಗ್ಲರ ನೆಲದಲ್ಲಿ ನಡೆದ ಐದು ಪಂದ್ಯಗಳ ಟೆಸ್ಟ್ ಸರಣಿಯ ಮುಂದುವರಿದ ಭಾಗವಾಗಿ ನಡೆಯಲಿರುವ ಏಕೈಕ ಟೆಸ್ಟ್ ಆಗಿದೆ. ನಾಲ್ಕು ಪಂದ್ಯಗಳ ಅಂತ್ಯಕ್ಕೆ ಟೀಮ್ ಇಂಡಿಯಾ 2-1 ಮುನ್ನಡೆಯಲ್ಲಿದೆ. ಕೋವಿಡ್-19 ಕಾರಣದಿಂದಾಗಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಸರಣಿ ಮುಗಿಸಲು ಸಾಧ್ಯವಾಗಿರಲಿಲ್ಲ. ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನ ಅಂಕದೊಂದಿಗೆ ಪ್ರತಿಷ್ಠೆ ಕೂಡ ಪಣವಾಗಿದೆ. ಆತಿಥೇಯ ಇಂಗ್ಲೆಂಡ್ ತಂಡ ಸರಣಿಯನ್ನು ಸಮಬಲ ಸಾಧಿಸುವ ಏಕಮೇವ ಗುರಿಯಲ್ಲಿದ್ದರೆ, ಭಾರತ ತಂಡ ಗೆಲುವು ಅಥವಾ ಕನಿಷ್ಠ ಡ್ರಾ ಸಾಧಿಸುವ ಗುರಿಯಲ್ಲಿದೆ.
ಅಶ್ವಿನ್ ಗುಣಮುಖ:
ಕೋವಿಡ್ ಸೋಂಕಿಗೆ ತುತ್ತಾಗಿದ್ದ ಟೀಮ್ ಇಂಡಿಯಾ ಸ್ಪಿನ್ನರ್ ಆರ್. ಅಶ್ವಿನ್ ಗುಣಮುಖರಾಗಿದ್ದು ಜೂನ್ 24 ರಂದು ಇಂಗ್ಲೆಂಡ್ಗೆ ತೆರಳಲಿದ್ದಾರೆ. ಹೀಗಾಗಿ ಮೊದಲ ಅಭ್ಯಾಸ ಪಂದ್ಯವನ್ನ ಅಶ್ವಿನ್ ಮಿಸ್ ಮಾಡಿಕೊಳ್ಳಲಿದ್ದಾರೆ. ಅಶ್ವಿನ್ ಸ್ಥಾನಕ್ಕೆ ಸ್ಟಾಂಡ್ ಬೈ ಆಟಗಾರನಾಗಿ ಜಯಂತ್ ಯಾದವ್ಗೆ ಮಣೆ ಹಾಕಲಾಗಿದೆ. ಸದ್ಯ ಜಯಂತ್ ಯಾದವ್ ಬೆಂಗಳೂರಿನ ಎನ್ಸಿಎನಲ್ಲಿ ಪ್ರಾಕ್ಟೀಸ್ ಆರಂಭಿಸಿದ್ದಾರೆ. ಸದ್ಯ 7 ದಿನಗಳ ಕಾಲ ಕ್ವಾರಂಟೀನ್ ಅವಧಿ ಮುಗಿದ ನಂತರ ಅಶ್ವಿನ್ ಇಂಗ್ಲೆಂಡ್ ಫ್ಲೈಟ್ ಏರಲಿದ್ದಾರೆ.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:52 am, Thu, 23 June 22