MS Dhoni: ಇಲ್ಲ, ನಾನು ನಿವೃತ್ತಿ ನೀಡುತ್ತಿಲ್ಲ, ನನ್ನ ಮುಂದೆ 10 ತಿಂಗಳಿದೆ: ಧೋನಿ
MS Dhoni Retirement: ಮಹೇಂದ್ರ ಸಿಂಗ್ ಧೋನಿ ಐಪಿಎಲ್ನಲ್ಲಿ ಈವರೆಗೆ 268 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಸಿಎಸ್ಕೆ ತಂಡವು 5 ಬಾರಿ ಚಾಂಪಿಯನ್ ಪಟ್ಟವನ್ನು ಸಹ ಅಲಂಕರಿಸಿದೆ. ಇದೀಗ 43 ವರ್ಷದ ಧೋನಿ ನಿವೃತ್ತಿಯಂಚಿನಲ್ಲಿದ್ದಾರೆ. ಇದಾಗ್ಯೂ ಸದ್ಯಕ್ಕೆ ನಿವೃತ್ತಿ ನೀಡುತ್ತಿಲ್ಲ ಎನ್ನುವ ಮೂಲಕ ಎಂಎಸ್ಡಿ ಕುತೂಹಲ ಮೂಡಿಸಿದ್ದಾರೆ.

ಮಹೇಂದ್ರ ಸಿಂಗ್ ಧೋನಿ (MS Dhoni) ನಿವೃತ್ತಿ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ಅದು ಸಹ ಐಪಿಎಲ್ (IPL 2025) ಸೀಸನ್-18 ಚಾಲ್ತಿಯಲ್ಲಿರುವಾಗ. ಹೀಗೆ ದಿಢೀರಣೆ ನಿವೃತ್ತಿ ವಿಷಯ ಚರ್ಚೆಗೆ ಗ್ರಾಸವಾಗಲು ಮುಖ್ಯ ಕಾರಣ, ಚೆನ್ನೈನಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಪಂದ್ಯದ ವೇಳೆ ಮಹೇಂದ್ರ ಸಿಂಗ್ ಧೋನಿ ಅವರ ಪೋಷಕರು ಕಾಣಿಸಿಕೊಂಡಿರುವುದು.
ಶನಿವಾರ (ಏ.5) ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದ ವೇಳೆ ಧೋನಿಯ ಪೋಷಕರು ಸ್ಟೇಡಿಯಂನಲ್ಲಿ ಹಾಜರಿದ್ದರು. ಇದರ ಬೆನ್ನಲ್ಲೇ ಧೋನಿ ತನ್ನ ಐಪಿಎಲ್ ವೃತ್ತಿಜೀವನವನ್ನು ಕೊನೆಗೊಳಿಸುತ್ತಿದ್ದಾರೆ ಎಂಬ ವದಂತಿಗಳು ಹರಡಿದ್ದವು. ಆದರೀಗ ಈ ಎಲ್ಲಾ ಸುದ್ದಿಗಳಿಗೆ ಖುದ್ದು ಧೋನಿಯೇ ತೆರೆ ಎಳೆದಿದ್ದಾರೆ.
ಪಾಡ್ಕಾಸ್ಟ್ವೊಂದರಲ್ಲಿ ಮಾತನಾಡಿದ ಮಹೇಂದ್ರ ಸಿಂಗ್ ಧೋನಿ, ಸದ್ಯಕ್ಕಂತ ನಿವೃತ್ತಿ ನೀಡುವ ಯೋಚನೆಯಲ್ಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಾನು ಇನ್ನೂ ಸಹ ಐಪಿಎಲ್ ಆಡುತ್ತಿದ್ದೇನೆ. ಹೀಗಾಗಿ ನಿವೃತ್ತಿ ವಿಚಾರವನ್ನು ತುಂಬಾ ಸರಳವಾಗಿ ಇಟ್ಟುಕೊಂಡಿದ್ದೇನೆ.
ಈಗ ನನಗೆ 43 ವರ್ಷ. ಐಪಿಎಲ್ 2025 ಮುಗಿಯುವ ಹೊತ್ತಿಗೆ ನನಗೆ 44 ವರ್ಷ ವಯಸ್ಸಾಗಿರುತ್ತದೆ. ಆನಂತರ, ನಾನು ಆಡಬೇಕೇ ಅಥವಾ ಬೇಡವೇ ಎಂದು ನಿರ್ಧರಿಸಲು ನನಗೆ 10 ತಿಂಗಳುಗಳಿವೆ. ಹೀಗಾಗಿ ಸದ್ಯ ನಿವೃತ್ತಿ ಬಗ್ಗೆ ಯೋಚಿಸುತ್ತಿಲ್ಲ ಎಂದು ಮಹೇಂದ್ರ ಸಿಂಗ್ ಧೋನಿ ಹೇಳಿದ್ದಾರೆ.
44 ನೇ ವಯಸ್ಸಿನಲ್ಲಿಯೂ ಆಡಲು ಸಾಧ್ಯವಾಗುತ್ತದೆಯೇ ಎಂಬುದನ್ನು ಎದುರು ನೋಡುತ್ತೇನೆ. ಐಪಿಎಲ್ ಮುಗಿದ ಬಳಿಕ ಎಂಟು ತಿಂಗಳು ಕಾಲಾವಕಾಶವಿದೆ. ಅದರ ನಡುವೆ ನನ್ನ ದೇಹ ಹೇಗಿರುತ್ತದೆ ಎಂಬುದರ ಆಧಾರದ ಮೇಲೆ ನಾನು ನನ್ನ ಭವಿಷ್ಯವನ್ನು ನಿರ್ಧರಿಸುತ್ತೇನೆ.
ಅಂದರೆ ನನ್ನ ನಿವೃತ್ತಿ ನಿರ್ಧರಿಸುವುದು ನನ್ನ ದೇಹ. ಆದ್ದರಿಂದ, ಒಂದೊಂದೇ ವರ್ಷ ಕಳೆಯಲಿ, ಆ ಬಳಿಕ ಅದರ ಬಗ್ಗೆ ಯೋಚಿಸೋಣ ಎಂದು ಮಹೇಂದ್ರ ಸಿಂಗ್ ಧೋನಿ ಹೇಳಿದ್ದಾರೆ. ಹೀಗಾಗಿ ಐಪಿಎಲ್ 2026 ರಲ್ಲೂ ಧೋನಿ ಕಣಕ್ಕಿಳಿದರೂ ಅಚ್ಚರಿಪಡಬೇಕಿಲ್ಲ.
ಧೋನಿ ಕಳಪೆ ಪ್ರದರ್ಶನ:
ಐಪಿಎಲ್ ಸೀಸನ್-18 ರಲ್ಲಿ 43 ವರ್ಷದ ಧೋನಿಯಿಂದ ನಿರೀಕ್ಷಿತ ಪ್ರದರ್ಶನ ಮೂಡಿಬರುತ್ತಿಲ್ಲ. ವಿಕೆಟ್ ಕೀಪಿಂಗ್ನಲ್ಲಿ ಚಾಕಚಕ್ಯತೆ ಮರೆದರೂ ಬ್ಯಾಟಿಂಗ್ನಲ್ಲಿ ಸ್ಪೋಟಕ ಇನಿಂಗ್ಸ್ ಕಂಡು ಬಂದಿಲ್ಲ.
ಇದನ್ನೂ ಓದಿ: ಒಂದು ಬೌಂಡರಿಗೆ 19 ಎಸೆತಗಳು: ಐಪಿಎಲ್ನಲ್ಲಿ ಅತ್ಯಂತ ಕೆಟ್ಟ ದಾಖಲೆ ಬರೆದ ಧೋನಿ
ಈ ಬಾರಿ ಸಿಎಸ್ಕೆ ಆಡಿದ 4 ಪಂದ್ಯಗಳಲ್ಲಿ 3 ಇನಿಂಗ್ಸ್ ಆಡಿರುವ ಧೋನಿ ಒಟ್ಟು 55 ಎಸೆತಗಳನ್ನು ಎದುರಿಸಿದ್ದು ಈ ವೇಳೆ 76 ರನ್ಗಳಿಸಲಷ್ಟೇ ಶಕ್ತರಾಗಿದ್ದಾರೆ. ಅದರಲ್ಲೂ ನಿರ್ಣಾಯಕ ಹಂತದಲ್ಲಿ ಎಂಎಸ್ಡಿ ನಿಧಾನಗತಿಯಲ್ಲಿ ಬ್ಯಾಟ್ ಮಾಡುತ್ತಿರುವುದು ಚೆನ್ನೈ ಸೂಪರ್ ಕಿಂಗ್ಸ್ ಪಾಲಿಗೆ ಮುಳುವಾಗುತ್ತಿರುವುದು ಸುಳ್ಳಲ್ಲ.
Published On - 9:09 am, Mon, 7 April 25