ವೆಸ್ಟ್ ಇಂಡೀಸ್ನಲ್ಲಿ ನಡೆದ ಮ್ಯಾಕ್ಸ್60 ಟಿ10 ಟೂರ್ನಿಯಲ್ಲಿ ಕೆರಿಬಿಯನ್ ಟೈಗರ್ಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಗೆಲುವಿನ ರೂವಾರಿ ಆಸ್ಟ್ರೇಲಿಯಾದ ಕ್ರಿಕೆಟಿಗ ಜೋಶ್ ಬ್ರೌನ್. ನ್ಯೂಯಾರ್ಕ್ ಸ್ಟ್ರೈಕರ್ಸ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಕೆರಿಬಿಯನ್ ಟೈಗರ್ಸ್ ತಂಡವು ಬ್ಯಾಟಿಂಗ್ ಆಯ್ದುಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಕೆರಿಬಿಯನ್ ಟೈಗರ್ಸ್ ಜೋಶ್ ಬ್ರೌನ್ ಸಿಡಿಲಬ್ಬರದ ಆರಂಭ ಒದಗಿಸಿದರು. ಮೊದಲ ಓವರ್ನಿಂದಲೇ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದ ಬ್ರೌನ್ ಸಿಕ್ಸ್-ಫೋರ್ಗಳ ಸುರಿಮಳೆಗೈದರು.
ಮತ್ತೊಂದೆಡೆ ಜೋಶ್ ಬ್ರೌನ್ಗೆ ಉತ್ತಮ ಸಾಥ್ ನೀಡಿದ ಕ್ರಿಸ್ ಲಿನ್ ಕೂಡ 2 ಸಿಕ್ಸ್ ಹಾಗೂ 4 ಫೋರ್ಗಳೊಂದಿಗೆ 16 ಎಸೆತಗಳಲ್ಲಿ 35 ರನ್ ಚಚ್ಚಿದರು. ಆದರೆ ಉಳಿದ ಬ್ಯಾಟರ್ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಇದಾಗ್ಯೂ ಏಕಾಂಗಿಯಾಗಿ ಅಬ್ಬರ ಮುಂದುವರೆಸಿದ ಜೋಶ್ ಬ್ರೌನ್ ಇಸುರು ಉಡಾನ ಅವರ ಒಂದೇ ಓವರ್ನಲ್ಲಿ 26 ರನ್ ಚಚ್ಚಿದರು. ಈ ಮೂಲಕ ಕೇವಲ 18 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 4 ಫೋರ್ಗಳೊಂದಿಗೆ 60 ರನ್ ಸಿಡಿಸಿದರು. ಈ ಸ್ಪೋಟಕ ಅರ್ಧಶತಕದ ನೆರವಿನಿಂದ ಕೆರಿಬಿಯನ್ ಟೈಗರ್ಸ್ ತಂಡವು 10 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 125 ರನ್ ಕಲೆಹಾಕಿತು.
60 ಎಸೆತಗಳಲ್ಲಿ 126 ರನ್ಗಳ ಗುರಿ ಪಡೆದ ನ್ಯೂಯಾರ್ಕ್ ಸ್ಟ್ರೈಕರ್ಸ್ ತಂಡವು ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಕೇವಲ 29 ರನ್ಗಳಿಸುವಷ್ಟರಲ್ಲಿ ಪ್ರಮುಖ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಹಂತದಲ್ಲಿ ತಿಸಾರ ಪೆರೇರಾ 11 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 2 ಫೋರ್ಗಳೊಂದಿಗೆ 25 ರನ್ ಬಾರಿಸಿದರು.
ಇದಾಗ್ಯೂ ನ್ಯೂಯಾರ್ಕ್ ಸ್ಟ್ರೈಕರ್ಸ್ ತಂಡವನ್ನು 8.1 ಓವರ್ಗಳಲ್ಲಿ 69 ರನ್ಗಳಿಗೆ ಆಲೌಟ್ ಮಾಡುವಲ್ಲಿ ಕೆರಿಬಿಯನ್ ಟೈಗರ್ಸ್ ತಂಡ ಯಶಸ್ವಿಯಾಗಿದೆ. ಈ ಮೂಲಕ ಕೆರಿಬಿಯನ್ ಟೈಗರ್ಸ್ 56 ರನ್ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಚೊಚ್ಚಲ ಮ್ಯಾಕ್ಸ್60 ಟಿ10 ಟೂರ್ನಿಯಲ್ಲಿ ಕೆರಿಬಿಯನ್ ಟೈಗರ್ಸ್ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಮ್ಯಾಕ್ಸ್60 ಟೂರ್ನಿಯಲ್ಲಿ ಒಟ್ಟು 5 ತಂಡಗಳು ಕಣಕ್ಕಿಳಿದಿದ್ದವು. ಗ್ರ್ಯಾಂಡ್ ಕೇಮನ್ ಜಾಗ್ವಾರ್ಸ್, ಬೊಕಾ ರಾಟನ್ ಟ್ರೈಲ್ಬ್ಲೇಜರ್ಸ್, ನ್ಯೂಯಾರ್ಕ್ ಸ್ಟ್ರೈಕರ್ಸ್, ಮಿಯಾಮಿ ಲಯನ್ಸ್ ನಡುವಣ ಕದನದಲ್ಲಿ ಅಂತಿಮವಾಗಿ ಕೆರಿಬಿಯನ್ ಟೈಗರ್ಸ್ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿದೆ.