‘ಸಿರಾಜ್ ಅಳುತ್ತಿದ್ದಾರಾ?’ ಲೈವ್ ಚರ್ಚೆಯಲ್ಲಿ ಕಾರ್ತಿಕ್ ಪ್ರಶ್ನೆ; ರಹಾನೆ ಕೊಟ್ಟ ಉತ್ತರವೇನು?

ನ್ಯೂಜಿಲೆಂಡ್ ವಿರುದ್ಧ ಸಿರಾಜ್‌ಗೆ ಅವಕಾಶ ನೀಡದಿರುವುದಕ್ಕೆ ಮುರಳಿ ಕಾರ್ತಿಕ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಂಡದ ಆಯ್ಕೆ ನಿರ್ಧಾರವನ್ನು ಪ್ರಶ್ನಿಸಿ, ಸಿರಾಜ್‌ಗೆ ನಿರಂತರವಾಗಿ ಅವಕಾಶ ಸಿಗದಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಪಂದ್ಯದ ವೇಳೆ ಭಾವನಾತ್ಮಕವಾಗಿ ಕಂಡ ಸಿರಾಜ್ ಕಣ್ಣೀರು ಹಾಕುತ್ತಿದ್ದಾರೆಯೇ ಎಂದು ಕಾರ್ತಿಕ್ ಮತ್ತು ರಹಾನೆ ಅನುಮಾನ ವ್ಯಕ್ತಪಡಿಸಿದರು. ಸಿರಾಜ್ ಅವರನ್ನು ತಂಡದಲ್ಲಿ ಉಳಿಸಿಕೊಂಡು ಆಡಿಸದಿರುವ ನಿರ್ಧಾರ ಸರಿಯಲ್ಲ ಎಂದು ಕಾರ್ತಿಕ್ ಕಿಡಿಕಾರಿದ್ದಾರೆ.

ಸಿರಾಜ್ ಅಳುತ್ತಿದ್ದಾರಾ? ಲೈವ್ ಚರ್ಚೆಯಲ್ಲಿ ಕಾರ್ತಿಕ್ ಪ್ರಶ್ನೆ; ರಹಾನೆ ಕೊಟ್ಟ ಉತ್ತರವೇನು?
Mohammed Siraj

Updated on: Nov 27, 2026 | 2:15 PM

ನ್ಯೂಜಿಲೆಂಡ್ ವಿರುದ್ಧ ಕ್ರೈಸ್ಟ್‌ಚರ್ಚ್‌ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ವೇಗಿ ಮೊಹಮ್ಮದ್ ಸಿರಾಜ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ನೀಡದಿರುವುದಕ್ಕೆ ಭಾರತದ ಮಾಜಿ ಸ್ಪಿನ್ನರ್ ಮುರಳಿ ಕಾರ್ತಿಕ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಟೀಂ ಮ್ಯಾನೇಜ್‌ಮೆಂಟ್ ನಿರ್ಧಾರವನ್ನು ಪ್ರಶ್ನಿಸಿರುವ ಅವರು, ಸಿರಾಜ್‌ಗೆ ವಿವಿಧ ಮಾದರಿಯ ಕ್ರಿಕೆಟ್‌ನಲ್ಲಿ ನಿರಂತರವಾಗಿ ಅವಕಾಶ ಸಿಗದಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನಡೆದ ಚರ್ಚೆಯ ವೇಳೆ ಸಿರಾಜ್ ಅವರ ಮುಖಭಾವ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಸನ್‌ಗ್ಲಾಸ್ ಧರಿಸಿ ತಮ್ಮ ಭಾವನೆಗಳನ್ನು ಮರೆಮಾಚಲು ಪ್ರಯತ್ನಿಸುತ್ತಿದ್ದಂತೆ ಕಂಡುಬಂದ ಸಿರಾಜ್ ಅವರನ್ನು ಗಮನಿಸಿದ ಮುರಳಿ ಕಾರ್ತಿಕ್ ಹಾಗೂ ಭಾರತದ ಮಾಜಿ ಬ್ಯಾಟರ್ ಅಜಿಂಕ್ಯ ರಹಾನೆ, ಅವರು ಕಣ್ಣೀರು ಹಾಕುತ್ತಿದ್ದಾರೆಯೇ ಎಂಬ ಅನುಮಾನ ವ್ಯಕ್ತಪಡಿಸಿದರು.

ಸಿರಾಜ್ ಕಣ್ಣೀರು ಹಾಕುತ್ತಿದ್ದಾರಾ?

‘ಸಿರಾಜ್ ಅಳುತ್ತಿದ್ದಾರಾ?’ ಎಂದು ಮುರಳಿ ಕಾರ್ತಿಕ್ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಜಿಂಕ್ಯ ರಹಾನೆ, ‘ನನಗೆ ಖಚಿತವಾಗಿ ಹೇಳಲು ಸಾಧ್ಯವಿಲ್ಲ’ ಎಂಬಂತೆ ಸನ್ನೆ ಮಾಡಿದರು.

Loading...

ಬಳಿಕ ಮಾತನಾಡಿದ ಕಾರ್ತಿಕ್, ಸಿರಾಜ್ ಭಾವುಕ ವ್ಯಕ್ತಿಯಾಗಿರುವುದರಿಂದ ತಂಡದಿಂದ ಕೈಬಿಟ್ಟಿರುವ ನಿರ್ಧಾರ ಅವರಿಗೆ ನೋವುಂಟು ಮಾಡಿರಬಹುದು ಎಂದು ಅಭಿಪ್ರಾಯಪಟ್ಟರು. ‘ಅವರ ಮುಖ ನೋಡಿದರೆ ತುಂಬಾ ಭಾವುಕರಾಗಿರುವಂತೆ ಕಾಣುತ್ತಿದ್ದಾರೆ. ಸಿರಾಜ್ ಸ್ವಭಾವತಃ ಭಾವನಾತ್ಮಕ ವ್ಯಕ್ತಿ’ ಎಂದು ಕಾರ್ತಿಕ್ ಹೇಳಿದರು.

ನೋವಾಗುವುದು ಸಹಜ

ಭಾರತ ತಂಡದ ಡ್ರೆಸ್ಸಿಂಗ್ ರೂಮ್‌ನಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡ ಕಾರ್ತಿಕ್, ಆಟಗಾರರು ತಂಡದಿಂದ ಕೈಬಿಟ್ಟಾಗ ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ ಎಂದು ಹೇಳಿದರು. ‘ತಂಡದಿಂದ ಕೈಬಿಟ್ಟಾಗ ನೋವಾಗುವುದು ಸಹಜ. ನಾವು ಹಲವು ರೀತಿಯ ಆಟಗಾರರೊಂದಿಗೆ ಆಡಿದ್ದೇವೆ. ಕೆಲವರಿಗೆ ತಂಡದಿಂದ ಕೈಬಿಟ್ಟರೂ ಯಾವುದೇ ತೊಂದರೆಯಾಗುವುದಿಲ್ಲ. ಆದರೆ ಇನ್ನು ಕೆಲವರಿಗೆ ಮೈಕೈ ನೋವಿದ್ದರೂ, ತಲೆನೋವಿದ್ದರೂ ಅಥವಾ ದೇಹ ನಡುಗುತ್ತಿದ್ದರೂ ಮೈದಾನಕ್ಕಿಳಿದು ಆಡಬೇಕು ಎಂಬ ಹಂಬಲ ಇರುತ್ತದೆ. ತಮ್ಮಿಂದ ಸಾಧ್ಯವಾದ ಎಲ್ಲವನ್ನೂ ತಂಡಕ್ಕಾಗಿ ನೀಡುತ್ತಾರೆ. ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಆಡುತ್ತಾರೆ. ಸಿರಾಜ್ ಕೂಡ ಇದೇ ರೀತಿಯ ಬೌಲರ್ ಎನಿಸುತ್ತಾರೆ’ ಎಂದು ಕಾರ್ತಿಕ್ ಅಭಿಪ್ರಾಯಪಟ್ಟರು.

ಮೊರ್ಕೆಲ್ ಹೊಗಳಿದ್ರು, ಗಿಲ್ ಕೈಬಿಟ್ರು; ಸಿರಾಜ್ ವಿಚಾರದಲ್ಲಿ ಶುರುವಾಯ್ತು ಚರ್ಚೆ

ಮ್ಯಾನೇಜ್‌ಮೆಂಟ್ ವಿರುದ್ಧ ಕಾರ್ತಿಕ್ ಕಿಡಿ

ಇದೇ ವೇಳೆ ಸಿರಾಜ್ ಅವರನ್ನು ತಂಡದಲ್ಲಿ ಉಳಿಸಿಕೊಂಡು ಆಡುವ ಅವಕಾಶ ನೀಡದಿರುವ ಭಾರತ ತಂಡದ ಆಯ್ಕೆ ನಿರ್ಧಾರವನ್ನೂ ಕಾರ್ತಿಕ್ ಪ್ರಶ್ನಿಸಿದರು. ‘ಈವರೆಗಿನ ಅಂಕಿಅಂಶಗಳನ್ನು ಗಮನಿಸಿದರೆ ನನಗೆ ಅಚ್ಚರಿಯಾಗುತ್ತಿದೆ. ಸಿರಾಜ್ ಅವರನ್ನು ತಂಡದಲ್ಲಿ ಇಟ್ಟುಕೊಂಡಿರುವುದಕ್ಕೆ ಕಾರಣವೇನು? ಒಂದು ವೇಳೆ ಅವರ ಫಾರ್ಮ್ ಚೆನ್ನಾಗಿಲ್ಲ, ನೆಟ್ಸ್‌ನಲ್ಲಿ ಉತ್ತಮವಾಗಿ ಬೌಲಿಂಗ್ ಮಾಡುತ್ತಿಲ್ಲ ಅಥವಾ ಬೇರೆ ಯಾವುದಾದರೂ ಕಾರಣವಿದ್ದರೆ ಅವರನ್ನು ಪ್ರವಾಸಕ್ಕೆ ಆಯ್ಕೆ ಮಾಡಬಾರದಿತ್ತು. ತಂಡಕ್ಕೆ ಆಯ್ಕೆ ಮಾಡಿಯೂ ಆಡಿಸುವ ಉದ್ದೇಶವಿಲ್ಲದಿದ್ದರೆ ಅವರನ್ನು ಕರೆದುಕೊಂಡು ಹೋಗುವುದರಿಂದ ಏನು ಪ್ರಯೋಜನ?’ ಎಂದು ಮುರಳಿ ಕಾರ್ತಿಕ್ ಟೀಮ್ ಮ್ಯಾನೇಜ್‌ಮೆಂಟ್ ವಿರುದ್ಧ ಅಸಮಾಧಾನ ಹೊರಹಾಕಿದರು. ಸಿರಾಜ್ ಅವರಂತಹ ಹೋರಾಟದ ಮನೋಭಾವದ ಬೌಲರ್‌ಗೆ ನಿರಂತರವಾಗಿ ಅವಕಾಶ ನೀಡದಿರುವುದು ಸರಿಯಲ್ಲ ಎಂಬುದು ಕಾರ್ತಿಕ್ ಅವರ ಅಭಿಪ್ರಾಯವಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪೃಥ್ವಿಶಂಕರ

ಕಳೆದ ಒಂದು ದಶಕದಿಂದ ಕನ್ನಡದ ನಂ.1 ಸುದ್ದಿ ವಾಹಿನಿ ಟಿವಿ9 ಕನ್ನಡದೊಂದಿಗೆ ಪತ್ರಿಕೋದ್ಯಮದ ಪಯಣ ಮುಂದುವರಿಸಿದ್ದೇನೆ. ಕ್ರೀಡಾ ಜಗತ್ತಿನ ಆಗುಹೋಗುಗಳು, ಆಟಗಾರರ ಸಾಧನೆಗಳು, ಮೈದಾನದ ರೋಚಕ ಕ್ಷಣಗಳು ಹಾಗೂ ಕ್ರೀಡೆಯ ಹಿಂದಿನ ಆಸಕ್ತಿದಾಯಕ ಕಥನಗಳನ್ನು ಅಕ್ಷರಗಳ ಮೂಲಕ ಓದುಗರಿಗೆ ತಲುಪಿಸುವುದು ನನ್ನ ವೃತ್ತಿ ಮತ್ತು ಪ್ರವೃತ್ತಿ. ಕ್ರೀಡೆಯನ್ನು ಕೇವಲ ಆಟವಾಗಿ ನೋಡದೆ, ಅದರೊಳಗಿನ ಪರಿಶ್ರಮ, ಹೋರಾಟ, ಸಾಧನೆ ಮತ್ತು ಭಾವನೆಗಳನ್ನು ಗುರುತಿಸಿ ಬರವಣಿಗೆಯಲ್ಲಿ ಕಟ್ಟಿಕೊಡುವುದು ನನ್ನ ಪ್ರಯತ್ನ. ಮೂಲತಃ ಹಾಸನ ಜಿಲ್ಲೆಯವನು. ಹಾಸನದ ನೆಲದ ಸೊಗಡು ಮತ್ತು ಕನ್ನಡದ ಮೇಲಿನ ಅಭಿಮಾನ ನನ್ನ ಹೆಮ್ಮೆ. ವೃತ್ತಿಪರತೆಯೊಂದಿಗೆ ಹೊಸ ವಿಷಯಗಳನ್ನು ಕಲಿಯುತ್ತಾ, ಕ್ರೀಡಾ ಪತ್ರಿಕೋದ್ಯಮದಲ್ಲಿ ಹೊಸ ಮೈಲಿಗಲ್ಲುಗಳನ್ನು ಸಾಧಿಸುವ ಹಂಬಲ ನನ್ನದು.

Read More
Loading...
Unable to load recommendations.
Follow Us