MS Dhoni: ತೀರಾ ಕೆಳ ಮಟ್ಟಕ್ಕಿಳಿದ ಧೋನಿ ಫ್ಯಾನ್ಸ್: ರಚಿನ್ ರವೀಂದ್ರಾಗೆ ಮನಬಂದಂತೆ ಬೈದ MSD ಅಭಿಮಾನಿಗಳು

|

Updated on: Mar 24, 2025 | 9:52 AM

Rachina Ravindra CSK vs MI IPL 2025: ಚೆನ್ನೈ ಸೂಪರ್ ಕಿಂಗ್ಸ್ ತಂಡ ಮುಂಬೈ ಇಂಡಿಯನ್ಸ್ ತಂಡವನ್ನು 4 ವಿಕೆಟ್‌ಗಳಿಂದ ಸೋಲಿಸಿ ಐಪಿಎಲ್ 2025 ರಲ್ಲಿ ಗೆಲುವಿನ ಶುಭಾರಂಭ ಮಾಡಿದೆ. ರಚಿನ್ ರವೀಂದ್ರ ಸಿಕ್ಸರ್ ಬಾರಿಸಿ ಸಿಎಸ್‌ಕೆ ತಂಡಕ್ಕೆ ಟೂರ್ನಿಯಲ್ಲಿ ಮೊದಲ ಗೆಲುವು ತಂದುಕೊಟ್ಟರು. ಆದರೆ, ರಚಿನ್ ಬಾರಿಸಿದ ಈ ಸಿಕ್ಸ್ ಕಂಡು ಎಂಎಸ್ ಧೋನಿ ಅಭಿಮಾನಿಗಳು ಕೋಪಗೊಂಡಿದ್ದಾರೆ.

MS Dhoni: ತೀರಾ ಕೆಳ ಮಟ್ಟಕ್ಕಿಳಿದ ಧೋನಿ ಫ್ಯಾನ್ಸ್: ರಚಿನ್ ರವೀಂದ್ರಾಗೆ ಮನಬಂದಂತೆ ಬೈದ MSD ಅಭಿಮಾನಿಗಳು
Rachin Ravindra And Ms Dhoni
Follow us on

ಬೆಂಗಳೂರು (ಮಾ, 24): ಭಾನುವಾರ ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2025 ರ ಮೂರನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮುಂಬೈ ಇಂಡಿಯನ್ಸ್ (CSK vs MI) ತಂಡವನ್ನು 4 ವಿಕೆಟ್‌ಗಳಿಂದ ಸೋಲಿಸಿತು. ಮುಂಬೈ ಇಂಡಿಯನ್ಸ್ ನೀಡಿದ್ದ 156 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಚೆನ್ನೈ ತಂಡವು ಇನ್ನೂ ಐದು ಎಸೆತಗಳು ಬಾಕಿ ಇರುವಂತೆಯೇ ಗುರಿ ತಲುಪಿತು. 20ನೇ ಓವರ್‌ನ ಮೊದಲ ಎಸೆತದಲ್ಲಿ ರಚಿನ್ ರವೀಂದ್ರ ಸಿಕ್ಸರ್ ಬಾರಿಸಿ ಸಿಎಸ್‌ಕೆ ತಂಡಕ್ಕೆ ಟೂರ್ನಿಯಲ್ಲಿ ಮೊದಲ ಗೆಲುವು ತಂದುಕೊಟ್ಟರು. ಆದರೆ, ರಚಿನ್​ ಬಾರಿಸಿದ ಈ ಸಿಕ್ಸ್ ಕಂಡು ಎಂಎಸ್ ಧೋನಿ ಅಭಿಮಾನಿಗಳು ಕೋಪಗೊಂಡಿದ್ದಾರೆ.

ರಚಿನ್ 45 ಎಸೆತಗಳಲ್ಲಿ 65 ರನ್ ಗಳಿಸಿ ಅದ್ಭುತ ಇನ್ನಿಂಗ್ಸ್ ಆಡಿದರು. ಇವರ ಬ್ಯಾಟ್​ನಿಂದ 2 ಬೌಂಡರಿ ಮತ್ತು 4 ಸಿಕ್ಸರ್‌ಗಳು ಬಂದವು. ಇನ್ನಿಂಗ್ಸ್‌ನಲ್ಲಿ ಅವರ ಸ್ಟ್ರೈಕ್ ರೇಟ್ 144.44 ಆಗಿತ್ತು. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ ಮತ್ತು ದಂತಕಥೆ ಮಹೇಂದ್ರ ಸಿಂಗ್ ಧೋನಿ ಕೂಡ ಬ್ಯಾಟಿಂಗ್ ಮಾಡಲು ಬಂದರು. ಅವರು ಕ್ರೀಸ್‌ಗೆ ಬಂದಾಗ, ಸಿಎಸ್‌ಕೆ ಗೆಲುವಿಗೆ ಕೇವಲ 3 ರನ್‌ಗಳು ಬೇಕಾಗಿದ್ದವು. 19ನೇ ಓವರ್ ಮುಗಿಯಲು 2 ಎಸೆತಗಳು ಬಾಕಿ ಇದ್ದವು. ಮಹಿ ಬಯಸಿದ್ದರೆ, ಚೆನ್ನೈ ಪರ ಗೆಲುವಿನ ರನ್ ಗಳಿಸಬಹುದಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ಎರಡೂ ಎಸೆತಗಳಲ್ಲಿ ಧೋನಿ ಯಾವುದೇ ರನ್ ಗಳಿಸಲಿಲ್ಲ.

ರಚಿನ್ ರವೀಂದ್ರ ವಿನ್ನಿಂಗ್ ಶಾಟ್:

 

ಭಾರತೀಯ ಮೂಲದ ನ್ಯೂಝಿಲೆಂಡ್ ಆಟಗಾರ ರಚಿನ್ ರವೀಂದ್ರ ಆರಂಭಿಕನಾಗಿ ಬಂದು ಕೊನೆಯ ಹಂತದವರೆಗೂ ಕ್ರೀಸ್​ನಲ್ಲಿದ್ದರು. ಅಂತಹ ಪರಿಸ್ಥಿತಿಯಲ್ಲಿ, ಧೋನಿ ಎರಡು ಎಸೆತಗಳಲ್ಲಿ ಯಾವುದೇ ರನ್ ಗಳಿಸದೆ, ನಾನ್-ಸ್ಟ್ರೈಕರ್ ತುದಿಯಲ್ಲಿ ನಿಂತಿದ್ದ ರಚಿನ್ ರವೀಂದ್ರ ಅವರಿಗೆ ಗೆಲುವಿನ ರನ್ ಗಳಿಸುವ ಅವಕಾಶವನ್ನು ನೀಡಿದರು, ಅವರು ಅದಕ್ಕೆ ಅರ್ಹರೂ ಆಗಿದ್ದರು. ಅದರಂತೆ 20ನೇ ಓವರ್‌ನ ಮೊದಲ ಎಸೆತದಲ್ಲಿ ರಚಿನ್ ರವೀಂದ್ರ ಸಿಕ್ಸರ್ ಮೂಲಕ ವಿನ್ನಿಂಗ್ ಶಾಟ್ ಬಾರಿಸಿದರು.

CSK vs MI, IPL 2025: ನಾಯಕ ಬದಲಾದರೂ ಬದಲಾಗದ ಮುಂಬೈ ಹಾದಿ: ಸತತ 13ನೇ ಬಾರಿ ಮೊದಲ ಪಂದ್ಯದಲ್ಲಿ ಸೋಲು

ಆದರೆ, ಈ ಗೆಲುವಿನ ರನ್ ಗಳಿಸಿದ ನಂತರ ರಚಿನ್ ರವೀಂದ್ರ ಅವರನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಎಂಎಸ್ ಧೋನಿ ಅಭಿಮಾನಿಗಳು ತೀರಾ ಕೆಳ ಮಟ್ಟದ ಕ್ರೀಡಾ ಮನೋಭಾವವನ್ನು ತೋರಿಸಿದ್ದಾರೆ. ಅಂತಿಮ ಓವರ್‌ನಲ್ಲಿ ಎಂಎಸ್ ಧೋನಿಗೆ ಸ್ಟ್ರೈಕ್ ನೀಡದಿದ್ದಕ್ಕಾಗಿ ರಚಿನ್ ಅವರನ್ನು ಅನೇಕ ಇನ್‌ಸ್ಟಾಗ್ರಾಮ್ ಬಳಕೆದಾರರು ಟೀಕಿಸಿದ್ದಾರೆ. ಧೋನಿ ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ವಿನ್ನಿಂಗ್ ಶಾಟ್ ಹೊಡೆಯಲು ರಚಿನ್ ಅವಕಾಶ ಮಾಡಿಕೊಡಲಿಲ್ಲ ಎಂದು ಧೋನಿ ಫ್ಯಾನ್ಸ್ ಬರೆದುಕೊಂಡಿದ್ದಾರೆ.

ಎಂಎಸ್ ಧೋನಿ ಅಭಿಮಾನಿಗಳು ರಚಿನ್ ರವೀಂದ್ರ ಅವರನ್ನು ನಿಂದಿಸಿದ ಪೋಸ್ಟ್:

 

ಸದ್ಯ ಈ ಗೆಲುವಿನೊಂದಿಗೆ, ಚೆನ್ನೈ ಸೂಪರ್ ಕಿಂಗ್ಸ್ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಜಿಗಿದಿದೆ. ಮಾರ್ಚ್ 28 ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ತಮ್ಮ ಮುಂಬರುವ ಪಂದ್ಯದಲ್ಲಿ ಚೆನ್ನೈ, ಆರ್​ಸಿಬಿ ತಂಡವನ್ನು ಎದುರಿಸಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಉದ್ಘಾಟನಾ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಜಯ ಸಾಧಿಸಿ ಪಾಯಿಂಟ್ಸ್ ಟೇಬಲ್​ನಲ್ಲಿ ಎರಡನೇ ಸ್ಥಾನದಲ್ಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ