VIDEO: ಮುಂಬೈ ಇಂಡಿಯನ್ಸ್ ಆಟಗಾರನಿಗೆ ಬ್ಯಾಟ್ನಲ್ಲಿ ಹೊಡೆದ ಧೋನಿ
IPL 2025 MI vs CSK: ಐಪಿಎಲ್ನ ಮೂರನೇ ಪಂದ್ಯದಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್ ತಂಡಕ್ಕೆ ಸೋಲುಣಿಸಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಶುಭಾರಂಭ ಮಾಡಿದೆ. ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವು 155 ರನ್ ಕಲೆಹಾಕಿದರೆ, ಸಿಎಸ್ಕೆ 19.1 ಓವರ್ಗಳಲ್ಲಿ ಈ ಗುರಿಯನ್ನು ಬೆನ್ನಟ್ಟಿ ಗೆದ್ದಿದೆ.

IPL 2025: ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ 3ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (MI) ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ (CSK) ರೋಚಕ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಸಿಎಸ್ಕೆ ತಂಡವು ಮುಂಬೈ ಪಡೆಯನ್ನು ಬ್ಯಾಟಿಂಗ್ಗೆ ಆಹ್ವಾನಿಸಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವು ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ.
ಆರಂಭಿಕ ಆಟಗಾರ ರೋಹಿತ್ ಶರ್ಮಾ ಮೊದಲ ಓವರ್ನಲ್ಲೇ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ರಿಯಾನ್ ರಿಕೆಲ್ಟನ್ (13) ಕೂಡ ಔಟಾದರು. ಆ ಬಳಿಕ ಬಂದ ವಿಲ್ ಜಾಕ್ಸ್ (11), ಸೂರ್ಯಕುಮಾರ್ ಯಾದವ್ (29), ತಿಲಕ್ ವರ್ಮಾ (31) ಎರಡಂಕಿ ಮೊತ್ತಗಳಿಸಿ ವಿಕೆಟ್ ಒಪ್ಪಿಸಿದರು.
ಇನ್ನು ರಾಬಿನ್ ಮಿಂಝ್ (3), ನಮನ್ ಧೀರ್ (17), ಮಿಚೆಲ್ ಸ್ಯಾಂಟ್ನರ್ 11 ರನ್ಗಳಿಸಿದರು. ಈ ಮೂಲಕ ಮುಂಬೈ ಇಂಡಿಯನ್ಸ್ ತಂಡವು 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 155 ರನ್ ಕಲೆಹಾಕಿತು.
156 ರನ್ಗಳ ಗುರಿ ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ನಿರೀಕ್ಷಿತ ಆರಂಭ ಪಡೆದಿರಲಿಲ್ಲ. ಆರಂಭಿಕನಾದ ರಾಹುಲ್ ತ್ರಿಪಾಠಿ 2 ರನ್ಗಳಿಸಿ ನಿರ್ಗಮಿಸಿದರು. ಈ ಹಂತದಲ್ಲಿ ಕಣಕ್ಕಿಳಿದ ನಾಯಕ ರುತುರಾಜ್ ಗಾಯಕ್ವಾಡ್ ಸ್ಪೋಟಕ ಇನಿಂಗ್ಸ್ ಆಡಿದರು.
26 ಎಸೆತಗಳನ್ನು ಎದುರಿಸಿದ ರುತುರಾಜ್ 3 ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ 53 ರನ್ ಚಚ್ಚಿದರು. ಮತ್ತೊಂದೆಡೆ ರಚಿನ್ ರವೀಂದ್ರ ಉತ್ತಮ ಸಾಥ್ ನೀಡಿದರು.
ಆದರೆ ರುತುರಾಜ್ ಔಟಾಗುತ್ತಿದ್ದಂತೆ ದಿಢೀರ್ ಕುಸಿತಕ್ಕೊಳಗಾದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಬ್ಯಾಕ್ ಟು ಬ್ಯಾಕ್ ವಿಕೆಟ್ ಕಳೆದುಕೊಂಡಿತು. ಪರಿಣಾಮ 19ನೇ ಓವರ್ನಲ್ಲಿ ಮಹೇಂದ್ರ ಸಿಂಗ್ ಧೋನಿ ಕಣಕ್ಕಿಳಿಯಬೇಕಾಯಿತು.
ಮಹೇಂದ್ರ ಸಿಂಗ್ ಧೋನಿ ಬ್ಯಾಟಿಂಗ್ಗೆ ಆಗಮಿಸುತ್ತಿದ್ದಂತೆ ಇತ್ತ ಮುಂಬೈ ಇಂಡಿಯನ್ಸ್ ಆಟಗಾರ ದೀಪಕ್ ಚಹರ್ ಫ್ರಂಟ್ ಫೀಲ್ಡಿಂಗ್ ನಿಲ್ಲುವ ಮೂಲಕ ಎಂಎಸ್ಡಿಯ ಕಾಲೆಳೆದಿದ್ದರು. ಇದಾಗ್ಯೂ ಧೋನಿ ರಿಯಾಕ್ಟ್ ಮಾಡದೇ ಸುಮ್ಮನಿದ್ದರು.
ಬ್ಯಾಟ್ ಬಿಸಿ ತೋರಿಸಿದ ಧೋನಿ:
ಕೊನೆಯ ಓವರ್ನಲ್ಲಿ 4 ರನ್ ಬೇಕಿದ್ದ ವೇಳೆ ರಚಿನ್ ರವೀಂದ್ರ ಭರ್ಜರಿ ಸಿಕ್ಸ್ ಬಾರಿಸಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 4 ವಿಕೆಟ್ಗಳ ಜಯ ತಂದುಕೊಟ್ಟರು. ಆ ಬಳಿಕ ಆಟಗಾರರು ಪರಸ್ಪರ ಕೈಕುಲುಕುವ ಸಮಯದಲ್ಲಿ ಧೋನಿ ಮತ್ತು ಚಹರ್ ಮತ್ತೆ ಎದುರಾದರು. ತಕ್ಷಣ ಬ್ಯಾಟ್ ಎತ್ತಿಕೊಂಡು ಧೋನಿ ತಮಾಷೆಗೆ ಹೊಡೆದಿದ್ದಾರೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಧೋನಿ-ಚಹರ್ ನಡುವಣ ಫ್ರೆಂಡ್ಶಿಪ್ಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಧೋನಿ-ಚಹರ್ ವಿಡಿಯೋ:
ಅಂದಹಾಗೆ ದೀಪಕ್ ಚಹರ್ ಮಹೇಂದ್ರ ಸಿಂಗ್ ಧೋನಿಯ ಶಿಷ್ಯ ಎಂದೇ ಗುರುತಿಸಿಕೊಂಡಿದ್ದ ಆಟಗಾರ. ಕಳೆದ ಸೀಸನ್ವರೆಗೂ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭಾಗವಾಗಿದ್ದರು. ಆದರೆ ಈ ಬಾರಿ ಸಿಎಸ್ಕೆ ಫ್ರಾಂಚೈಸಿ ಅವರನ್ನು ಉಳಿಸಿಕೊಂಡಿರಲಿಲ್ಲ. ಇತ್ತ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡಿದ್ದ ದೀಪಕ್ ಚಹರ್ ಅವರನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ 9.25 ಕೋಟಿ ರೂ. ನೀಡಿ ಖರೀದಿಸಿದೆ.
Published On - 8:34 am, Mon, 24 March 25