IPL 2026: ಐಪಿಎಲ್‌ಗೆ ತಯಾರಿ ಶುರು ಮಾಡಿದ ಧೋನಿ; ವಿಡಿಯೋ ಬಿಡುಗಡೆ
MS Dhoni Begins IPL 2026 Preparations in Ranchi: 2026ರ ಐಪಿಎಲ್‌ಗೆ ಎಂಎಸ್ ಧೋನಿ ರಾಂಚಿಯಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ಇದು ಅವರ ಕೊನೆಯ ಐಪಿಎಲ್ ಸೀಸನ್ ಆಗಬಹುದೆಂಬ ಊಹಾಪೋಹಗಳ ನಡುವೆಯೂ ಧೋನಿ ಸಿಎಸ್‌ಕೆ ಹಳದಿ ಪ್ಯಾಡ್‌ಗಳೊಂದಿಗೆ ಸಹ ಆಟಗಾರರೊಂದಿಗೆ ಬೆವರು ಹರಿಸುತ್ತಿದ್ದಾರೆ. ಯುವ ಪಡೆಯೊಂದಿಗೆ ಕಣಕ್ಕಿಳಿಯಲು ಸಜ್ಜಾಗಿರುವ ಸಿಎಸ್‌ಕೆ ಪರವಾಗಿ ಧೋನಿ ಆಡುತ್ತಾರೆ ಎಂದು ಫ್ರಾಂಚೈಸಿ ಸ್ಪಷ್ಟಪಡಿಸಿದೆ. ಅಭಿಮಾನಿಗಳು ಧೋನಿಯ ಮರಳುವಿಕೆಗಾಗಿ ಕಾತರದಿಂದ ಕಾಯುತ್ತಿದ್ದಾರೆ.

2026 ರ ಐಪಿಎಲ್‌ಗೆ (IPL 2026) ಅಭಿಮಾನಿಗಳು ಕೌಂಟ್‌ಡೌನ್ ಪ್ರಾರಂಭಿಸಿದ್ದಾರೆ. ಮಾರ್ಚ್ ತಿಂಗಳಲ್ಲಿ ಈ ಮಿಲಿಯನ್ ಡಾಲರ್ ಟೂರ್ನಿಗೆ ಚಾಲನೆ ಸಿಗಲಿದೆ. ಹೀಗಾಗಿ ಎಲ್ಲಾ ಫ್ರಾಂಚೈಸಿಗಳು ಕೂಡ ತಮ್ಮ ತಯಾರಿಯನ್ನು ಆರಂಭಿಸಲು ಸಜ್ಜಾಗಿವೆ. ಕಳೆದ ಕೆಲವು ಆವೃತ್ತಿಗಳಿಂದ ಉತ್ತಮ ಪ್ರದರ್ಶನ ನೀಡುವಲ್ಲಿ ಎಡವಿರುವ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಈ ಬಾರಿ ಯುವ ಪಡೆಯೊಂದಿಗೆ ಕಣಕ್ಕಿಳಿಯಲು ಸಜ್ಜಾಗಿದೆ. ಇದರೊಂದಿಗೆ ಕೊನೆಯ ಐಪಿಎಲ್ ಆಡುತ್ತಿರುವ ಎಂಎಸ್ ಧೋನಿ (MS Dhoni) ಕೂಡ ವರ್ಷದ ಬಳಿಕ ಮೈದಾನಕ್ಕೆ ಮರಳಲು ಸಜ್ಜಾಗಿದ್ದು, ತಯಾರಿಯನ್ನು ಶುರು ಮಾಡಿದ್ದಾರೆ. ವಾಸ್ತವವಾಗಿ ಧೋನಿ ತಮ್ಮ ತವರು ರಾಂಚಿಯಲ್ಲಿ 2026 ರ ಐಪಿಎಲ್ ಆವೃತ್ತಿಗೆ ಸಿದ್ಧತೆಗಳನ್ನು ಪ್ರಾರಂಭಿಸಿದ್ದಾರೆ.
ಕಳೆದ ಕೆಲವು ಆವೃತ್ತಿಗಳಿಂದ, ಧೋನಿ ಐಪಿಎಲ್‌ಗೆ ಮರಳುವ ಬಗ್ಗೆ ನಿರಂತರ ಊಹಾಪೋಹಗಳು ಮತ್ತು ವದಂತಿಗಳು ಹಬ್ಬಿದ್ದವು. ಕಳೆದ ವರ್ಷ ಧೋನಿ ತಂಡದ ನಾಯಕತ್ವ ವಹಿಸಿಕೊಂಡು ಆವೃತ್ತಿಯನ್ನು ಮುಗಿಸಿದಾಗಲೂ ಇದೇ ಪರಿಸ್ಥಿತಿ ಮುಂದುವರಿದಿತ್ತು. ಆದಾಗ್ಯೂ, ಚೆನ್ನೈ ಸೂಪರ್ ಕಿಂಗ್ಸ್ ಅಧಿಕಾರಿಗಳು ಮುಂದಿನ ಆವೃತ್ತಿಯಲ್ಲಿ ಧೋನಿ ಆಡುತ್ತಾರೆ ಎಂದು ಭರವಸೆ ನೀಡಿದ್ದರು. ಅದಕ್ಕೆ ಪೂರಕವಾಗಿ ಇದೀಗ, ಧೋನಿ ಕೂಡ ನೆಟ್ಸ್‌ನಲ್ಲಿ ಬೆವರು ಹರಿಸಲು ಆರಂಭಿಸಿದ್ದಾರೆ.
ಸಹ ಆಟಗಾರರೊಂದಿಗೆ ಧೋನಿ ಅಭ್ಯಾಸ
ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಇತ್ತೀಚೆಗೆ ತನ್ನ ಎಕ್ಸ್ ಖಾತೆಯಲ್ಲಿ ರಾಂಚಿ ಕ್ರೀಡಾಂಗಣದ ನೆಟ್ಸ್‌ನಲ್ಲಿ ತೆಗೆದ ವೀಡಿಯೊವನ್ನು ಪೋಸ್ಟ್ ಮಾಡಿದೆ. ವೀಡಿಯೊದಲ್ಲಿ, ಧೋನಿ ಅಭ್ಯಾಸಕ್ಕೆ ಸಿದ್ಧರಾಗುತ್ತಿರುವುದನ್ನು ಕಾಣಬಹುದು. ಧೋನಿ ತಮ್ಮ ಫ್ರಾಂಚೈಸಿ ಸಿಎಸ್‌ಕೆಯ ಹಳದಿ ಪ್ಯಾಡ್‌ಗಳನ್ನು ಧರಿಸಿರುವುದನ್ನು ಕಾಣಬಹುದು. ಧೋನಿ ಜೊತೆ ಜಾರ್ಖಂಡ್ ಕ್ರಿಕೆಟ್‌ನ ತಮ್ಮ ಜೂನಿಯರ್ ಮತ್ತು ಭಾರತದ ಮಾಜಿ ತಂಡದ ಸಹ ಆಟಗಾರ ಸೌರಭ್ ತಿವಾರಿ ಕೂಡ ಅಭ್ಯಾಸಕ್ಕೆ ಸಿದ್ಧರಾಗುತ್ತಿರುವುದನ್ನು ಕಾಣಬಹುದು. ಸೌರಭ್ ತಿವಾರಿ ಈಗ ಜೆಎಸ್‌ಸಿಎಯಲ್ಲಿ ಅಧಿಕಾರಿಯಾಗಿರುವುದು ಗಮನಿಸಬೇಕಾದ ಸಂಗತಿ.
Yellow Pads.. 👀 Thala nation, it’s that time of the year!!!!! 🥳🔥 #WhistlePodu 🎥 : Jharkhand cricket association pic.twitter.com/DEbOpEFQ4m
— Chennai Super Kings (@ChennaiIPL) January 24, 2026
ಧೋನಿಯ ಕೊನೆಯ ಸೀಸನ್?
ಧೋನಿಯ ಆಟವನ್ನು ಮೈದಾನದಲ್ಲಿ ಕಣ್ತುಂಬಿಕೊಳ್ಳಲು ಕೋಟ್ಯಾಂತರ ಅಭಿಮಾನಿಗಳು ಕಾಯುತ್ತಿದ್ದಾರೆ. ಮೇಲೆ ಹೇಳಿದಂತೆ ಕಳೆದ ಕೆಲವು ಆವೃತ್ತಿಗಳಿಂದ ಪ್ರತಿ ಆವೃತ್ತಿಯ ಆರಂಭಕ್ಕೂ ಮುನ್ನ ಇದು ಧೋನಿಯ ಕೊನೆಯ ಸೀಸನ್ ಎಂಬ ಸುದ್ದಿಗಳು ಹುಟ್ಟಿಕೊಳ್ಳುತ್ತವೆ. ಆದರೆ ಧೋನಿ ಮಾತ್ರ ನನ್ನಲ್ಲಿ ಇನ್ನು ಆಟ ಉಳಿದಿದೆ ಎಂಬುದನ್ನು ಸಾಭೀತುಪಡಿಸುತ್ತಾ ಬಂದಿದ್ದಾರೆ. ಐಪಿಎಲ್‌ನ 19 ನೇ ಸೀಸನ್ ಮಾರ್ಚ್ 26 ರಂದು ಪ್ರಾರಂಭವಾಗಿ ಮೇ 31 ರವರೆಗೆ ನಡೆಯಲಿದೆ. ಆದಾಗ್ಯೂ, ಹೊಸ ಸೀಸನ್‌ನ ವೇಳಾಪಟ್ಟಿ ಇನ್ನೂ ಬಿಡುಗಡೆಯಾಗಿಲ್ಲ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:18 pm, Sat, 24 January 26
