NZ vs PAK: ವಾಶ್ ಪಾಕಿಸ್ತಾನ್ ವೈಟ್ವಾಶ್..!
New Zealand vs Pakistan: ಪಾಕಿಸ್ತಾನ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡ 73 ರನ್ಗಳ ಜಯ ಸಾಧಿಸಿತ್ತು. ಇನ್ನು ದ್ವಿತೀಯ ಏಕದಿನ ಪಂದ್ಯದಲ್ಲಿ ಪಾಕ್ ಪಡೆ 84 ರನ್ಗಳಿಂದ ಪರಾಜಯಗೊಂಡಿತ್ತು. ಇದೀಗ ಮೂರನೇ ಏಕದಿನ ಪಂದ್ಯದಲ್ಲಿ 43 ರನ್ಗಳ ಜಯ ಸಾಧಿಸಿ ನ್ಯೂಝಿಲೆಂಡ್ ಸರಣಿಯನ್ನು ವೈಟ್ವಾಶ್ ಮಾಡಿಕೊಂಡಿದೆ.

ನ್ಯೂಝಿಲೆಂಡ್ (New Zealand) ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಪಾಕಿಸ್ತಾನ್ (Pakistan) ತಂಡ ಹೀನಾಯ ಸೋಲನುಭವಿಸಿದೆ. ಅದು ಸಹ 3-0 ಅಂತರದಿಂದ ಸರಣಿಯನ್ನು ಸೋಲುವ ಮೂಲಕ. ಮೌಂಟ್ ಮೌಂಗನುಯಿಯ ಬೇ ಓವಲ್ ಮೈದಾನದಲ್ಲಿ ನಡೆದ ಈ ಸರಣಿಯ ಮೂರನೇ ಪಂದ್ಯದಲ್ಲಿ ಟಾಸ್ ಗೆದ್ದ ಪಾಕ್ ತಂಡದ ನಾಯಕ ಮೊಹಮ್ಮದ್ ರಿಝ್ವಾನ್ ಬೌಲಿಂಗ್ ಆಯ್ದುಕೊಂಡಿದ್ದರು.
ಮಳೆಯ ಕಾರಣ 42 ಓವರ್ಗಳಿಗೆ ಸೀಮಿತವಾಗಿದ್ದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ರೈಸ್ ಮಾರಿಯು (58) ಉತ್ತಮ ಆರಂಭ ಒದಗಿಸಿದ್ದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಹೆನ್ರಿ ನಿಕೋಲ್ಸ್ 31 ರನ್ ಬಾರಿಸಿದರೆ, ಆ ಬಳಿಕ ಬಂದ ಡೇರಿಮ್ ಮಿಚೆಲ್ 43 ರನ್ ಸಿಡಿಸಿದರು.
ಇನ್ನು ನಾಯಕ ಮೈಕೆಲ್ ಬ್ರೇಸ್‌ವೆಲ್ 40 ಎಸೆತಗಳಲ್ಲಿ 59 ರನ್ ಬಾರಿಸಿದರು. ಈ ಅರ್ಧಶತಕದ ನೆರವಿನೊಂದಿಗೆ ನ್ಯೂಝಿಲೆಂಡ್ ತಂಡವು ನಿಗದಿತ 42 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 264 ರನ್ ಕಲೆಹಾಕಿತು.
265 ರನ್ಗಳ ಗುರಿ ಬೆನ್ನತ್ತಿದ ಪಾಕಿಸ್ತಾನ್ ತಂಡಕ್ಕೆ ಅಬ್ದುಲ್ಲಾ ಶಫೀಕ್ (33) ಉತ್ತಮ ಆರಂಭ ಒದಗಿಸಿದ್ದರು. ಆ ಬಳಿಕ ಬಂದ ಬಾಬರ್ ಆಝಂ 58 ಎಸೆತಗಳಲ್ಲಿ 50 ರನ್ ಬಾರಿಸಿ ಮಿಂಚಿದರು.
ಈ ಇಬ್ಬರು ಬ್ಯಾಟರ್ಗಳ ನಿರ್ಗಮನದ ಬೆನ್ನಲ್ಲೇ ದಿಢೀರ್ ಕುಸಿತಕ್ಕೊಳಗಾದ ಪಾಕಿಸ್ತಾನ್ ತಂಡವು 40 ಓವರ್ಗಳಲ್ಲಿ 221 ರನ್ಗಳಿಸಿ ಆಲೌಟ್ ಆಯಿತು. ಈ ಮೂಲಕ ನ್ಯೂಝಿಲೆಂಡ್ ತಂಡವು ಪಾಕಿಸ್ತಾನ್ ತಂಡವನ್ನು ವೈಟ್ವಾಶ್ ಮಾಡಿ ಸರಣಿಯನ್ನು 3-0 ಅಂತರದಿಂದ ಗೆದ್ದುಕೊಂಡಿದೆ.
ಇದಕ್ಕೂ ಮುನ್ನ ನಡೆದ ಪಾಕಿಸ್ತಾನ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯನ್ನು ನ್ಯೂಝಿಲೆಂಡ್ ತಂಡ 4-1 ಅಂತರದಿಂದ ಗೆದ್ದುಕೊಂಡಿತ್ತು. ವಿಶೇಷ ಎಂದರೆ ಈ ಸರಣಿಗಳಿಗೆ ನ್ಯೂಝಿಲೆಂಡ್ ತಂಡದ ಪ್ರಮುಖ ಆಟಗಾರರು ಅಲಭ್ಯರಾಗಿದ್ದರು. ಇದಾಗ್ಯೂ ಪಾಕ್ ತಂಡಕ್ಕೆ ಸರಣಿ ಗೆಲ್ಲಲು ಸಾಧ್ಯವಾಗಿಲ್ಲ ಎಂಬುದೇ ಅಚ್ಚರಿ.
ಪಾಕಿಸ್ತಾನ್ ಪ್ಲೇಯಿಂಗ್ 11: ಅಬ್ದುಲ್ಲಾ ಶಫೀಕ್ , ಇಮಾಮ್-ಉಲ್-ಹಕ್ , ಬಾಬರ್ ಆಝಂ , ಮೊಹಮ್ಮದ್ ರಿಝ್ವಾನ್ (ನಾಯಕ) , ಸಲ್ಮಾನ್ ಅಘಾ , ತಯ್ಯಬ್ ತಾಹಿರ್ , ಫಹೀಮ್ ಅಶ್ರಫ್ , ಮೊಹಮ್ಮದ್ ವಾಸಿಮ್ ಜೂನಿಯರ್ , ನಸೀಮ್ ಶಾ , ಸುಫಿಯಾನ್ ಮುಖೀಮ್ , ಅಕಿಫ್ ಜಾವೇದ್.
ಇದನ್ನೂ ಓದಿ: IPL 2025: ಸೋಲಿನ ಬೆನ್ನಲ್ಲೇ ಕಣ್ಣೀರಿಟ್ಟ ಹಾರ್ದಿಕ್ ಪಾಂಡ್ಯ
ನ್ಯೂಝಿಲೆಂಡ್ ಪ್ಲೇಯಿಂಗ್ 11: ರೈಸ್ ಮಾರಿಯು , ನಿಕ್ ಕೆಲ್ಲಿ , ಹೆನ್ರಿ ನಿಕೋಲ್ಸ್ , ಡೇರಿಲ್ ಮಿಚೆಲ್ , ಟಿಮ್ ಸೀಫರ್ಟ್ , ಮೈಕೆಲ್ ಬ್ರೇಸ್‌ವೆಲ್ (ನಾಯಕ) , ಮುಹಮ್ಮದ್ ಅಬ್ಬಾಸ್ , ಮಿಚೆಲ್ ಹೇ (ವಿಕೆಟ್ ಕೀಪರ್) , ಜಾಕೋಬ್ ಡಫಿ , ಬೆನ್ ಸಿಯರ್ಸ್ , ವಿಲಿಯಂ ಓರೋಕ್.
ಪಾಕ್ ವಿರುದ್ಧದ ಸರಣಿಗೆ ಅಲಭ್ಯರಾಗಿದ್ದ ನ್ಯೂಝಿಲೆಂಡ್ ಆಟಗಾರರು:
- ಕೇನ್ ವಿಲಿಯಮ್ಸನ್
- ಮಿಚೆಲ್ ಸ್ಯಾಂಟ್ನರ್
- ರಚಿನ್ ರವೀಂದ್ರ
- ಡೆವೊನ್ ಕಾನ್ವೆ
- ಕೈಲ್ ಜೇಮಿಸನ್
- ಟಾಮ್ ಲ್ಯಾಥಮ್
- ವಿಲ್ ಯಂಗ್
- ಇಶ್ ಸೋಧಿ
- ಲಾಕಿ ಫರ್ಗುಸನ್
- ಗ್ಲೆನ್ ಫಿಲಿಪ್ಸ್
- ಮ್ಯಾಟ್ ಹೆನ್ರಿ