8 ವರ್ಷಗಳ ಬಳಿಕ ಅರ್ಧಶತಕ ಬಾರಿಸಿದ ಬಾಬರ್: ಸೋತು ಸುಣ್ಣವಾದ ಪಾಕಿಸ್ತಾನ್
New Zealand vs Pakistan: ನ್ಯೂಝಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಮ್ಯಾಚ್ನಲ್ಲಿ ಪಾಕಿಸ್ತಾನ್ ತಂಡ ಸೋಲನುಭವಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ 344 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ್ ತಂಡ ಕೇವಲ 271 ರನ್ಗಳಿಸಿ ಆಲೌಟ್ ಆಗಿದೆ.

ನ್ಯೂಝಿಲೆಂಡ್ ಅಂಗಳದಲ್ಲಿ ಬಾಬರ್ ಆಝಂ (Babar Azam) ಬ್ಯಾಟ್ನಿಂದ ಅರ್ಧಶತಕ ಮೂಡಿಬಂದಿದೆ. ಅದು ಕೂಡ ಬರೋಬ್ಬರಿ 8 ವರ್ಷಗಳ ಬಳಿಕ ಎಂಬುದೇ ಅಚ್ಚರಿ. ನೇಪಿಯರ್ನ ಮೆಕ್ಲೀನ್ ಪಾರ್ಕ್ ಮೈದಾನದಲ್ಲಿ ನಡೆದ ನ್ಯೂಝಿಲೆಂಡ್ (New Zealand) ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ್ (Pakistan) ತಂಡ ಬೌಲಿಂಗ್ ಆಯ್ದುಕೊಂಡಿತು.
ಅದರಂತೆ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕರಾದ ವಿಲ್ ಯಂಗ್ (1) ಹಾಗೂ ನಿಕ್ ಕೆಲ್ಲಿ (15) ಬೇಗನೆ ಔಟಾದರು. ಇದರ ಬೆನ್ನಲ್ಲೇ ಹೆನ್ರಿ ಕೋಲ್ಸ್ (11) ಕೂಡ ವಿಕೆಟ್ ಒಪ್ಪಿಸಿದರು.
ಈ ಹಂತದಲ್ಲಿ ಕಣಕ್ಕಿಳಿದ ಯುವ ಎಡಗೈ ದಾಂಡಿಗ ಮಾರ್ಕ್ ಚಾಪ್ಮನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಡೇರಿಲ್ ಮಿಚೆಲ್ ಜೊತೆಗೂಡಿ ಇನಿಂಗ್ಸ್ ಕಟ್ಟಿದ ಚಾಪ್ಮನ್ 111 ಎಸೆತಗಳಲ್ಲಿ 6 ಸಿಕ್ಸ್ ಹಾಗೂ 13 ಫೋರ್ಗಳೊಂದಿಗೆ 132 ರನ್ ಬಾರಿಸಿದರು.
ಇನ್ನು ಡೇರಿಲ್ ಮಿಚೆಲ್ 76 ರನ್ ಸಿಡಿಸಿದರೆ, ಮುಹಮ್ಮದ್ ಅಬ್ಬಾಸ್ 26 ಎಸೆತಗಳಲ್ಲಿ 52 ರನ್ ಚಚ್ಚಿದರು. ಈ ಮೂಲಕ ನ್ಯೂಝಿಲೆಂಡ್ ತಂಡ 50 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 344 ರನ್ ಕಲೆಹಾಕಿತು.
ಪಾಕಿಸ್ತಾನ್ ತಂಡಕ್ಕೆ 345 ರನ್ಗಳ ಗುರಿ:
345 ರನ್ಗಳ ಗುರಿ ಪಡೆದ ಪಾಕಿಸ್ತಾನ್ ತಂಡವು ಉತ್ತಮ ಆರಂಭ ಪಡೆದಿತ್ತು. ಮೊದಲ ವಿಕೆಟ್ಗೆ 89 ರನ್ಗಳ ಜೊತೆಯಾಟವಾಡಿದ ಬಳಿಕ ಉಸ್ಮಾನ್ ಖಾನ್ (39) ಔಟಾದರು. ಇದರ ಬೆನ್ನಲ್ಲೇ ಅಬ್ದುಲ್ಲಾ ಶಫೀಕ್ (36) ಕೂಡ ವಿಕೆಟ್ ಒಪ್ಪಿಸಿದರು.
ಈ ಹಂತದಲ್ಲಿ ಕಣಕ್ಕಿಳಿದ ಬಾಬರ್ ಆಝಂ ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿದರು. ಕಿವೀಸ್ ಬೌಲರ್ಗಳನ್ನು ಆತ್ಮ ವಿಶ್ವಾಸದಿಂದಲೇ ಎದುರಿಸಿದ ಬಾಬರ್ 65 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.
8 ವರ್ಷಗಳ ಬಳಿಕ ಹಾಫ್ ಸೆಂಚುರಿ:
ಇದು ಏಕದಿನ ಕ್ರಿಕೆಟ್ನಲ್ಲಿ ಬಾಬರ್ ಆಝಂ ಅವರ 36ನೇ ಅರ್ಧಶತಕ. ಅಲ್ಲದೆ ನ್ಯೂಝಿಲೆಂಡ್ ವಿರುದ್ಧದ 10ನೇ ಹಾಫ್ ಸೆಂಚುರಿ. ಆದರೆ 2016 ರಿಂದ ಬಾಬರ್ ಆಝಂ ನ್ಯೂಝಿಲೆಂಡ್ನಲ್ಲಿ ಒಂದೇ ಒಂದು ಅರ್ಧಶತಕ ಬಾರಿಸಿರಲಿಲ್ಲ ಎಂಬುದೇ ಅಚ್ಚರಿ.
ಇದೀಗ ಬರೋಬ್ಬರಿ 8 ವರ್ಷಗಳ ಬಳಿಕ ಕಿವೀಸ್ ಅಂಗಳದಲ್ಲಿ ಅರ್ಧಶತಕ ಬಾರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ ಈ ಪಂದ್ಯದಲ್ಲಿ 83 ಎಸೆತಗಳನ್ನು ಎದುರಿಸಿದ ಬಾಬರ್ 3 ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ 78 ರನ್ ಬಾರಿಸಿದರು.
ಬಾಬರ್ ಆಝಂ ಔಟ್ ವಿಡಿಯೋ:
A crucial catch! The big wicket of Babar Azam (78) falls as Daryl Mitchell catches him on the boundary in the deep. Follow LIVE and free in NZ on TVNZ + & DUKE 📺 and @SportNationNZ 📻 Live scoring | https://t.co/CvmR1mQN5I #NZvPAK #CricketNation pic.twitter.com/hXmJwSQyQS
— BLACKCAPS (@BLACKCAPS) March 29, 2025
ಈ ಅರ್ಧಶತಕದ ಹೊರತಾಗಿಯೂ ಈ ಪಂದ್ಯದಲ್ಲಿ ಪಾಕಿಸ್ತಾನ್ ತಂಡ ಸೋಲನುಭವಿಸಿದೆ. 40 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 253 ರನ್ ಕಲೆಹಾಕಿದ್ದ ಪಾಕ್ ಪಡೆ ದಿಢೀರ್ ಕುಸಿತಕ್ಕೊಳಗಾಗಿ 44.1 ಓವರ್ಗಳಲ್ಲಿ 271 ರನ್ಗಳಿಸಿ ಆಲೌಟ್ ಆಗಿದೆ. ಈ ಮೂಲಕ ನ್ಯೂಝಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 73 ರನ್ಗಳ ಹೀನಾಯ ಸೋಲನುಭವಿಸಿದೆ.
ನ್ಯೂಝಿಲೆಂಡ್ ಪ್ಲೇಯಿಂಗ್ 11: ನಿಕ್ ಕೆಲ್ಲಿ , ವಿಲ್ ಯಂಗ್ , ಹೆನ್ರಿ ನಿಕೋಲ್ಸ್ , ಮಾರ್ಕ್ ಚಾಪ್ಮನ್ , ಡೇರಿಲ್ ಮಿಚೆಲ್ , ಮೈಕೆಲ್ ಬ್ರೇಸ್‌ವೆಲ್ (ನಾಯಕ) , ಮುಹಮ್ಮದ್ ಅಬ್ಬಾಸ್ , ಮಿಚೆಲ್ ಹೇ (ವಿಕೆಟ್ ಕೀಪರ್) , ನಾಥನ್ ಸ್ಮಿತ್ , ಜಾಕೋಬ್ ಡಫಿ , ವಿಲಿಯಂ ಒರೂಕ್.
ಇದನ್ನೂ ಓದಿ: 2 ವರ್ಷ ಬ್ಯಾನ್… CSKಯನ್ನು ಗೇಲಿ ಮಾಡಿದ್ರಾ ವಿರಾಟ್ ಕೊಹ್ಲಿ?
ಪಾಕಿಸ್ತಾನ್ ಪ್ಲೇಯಿಂಗ್ 11: ಅಬ್ದುಲ್ಲಾ ಶಫೀಕ್ , ಉಸ್ಮಾನ್ ಖಾನ್ , ಬಾಬರ್ ಅಝಂ , ಮೊಹಮ್ಮದ್ ರಿಝ್ವಾನ್ (ನಾಯಕ) , ಸಲ್ಮಾನ್ ಅಘಾ , ತಯ್ಯಬ್ ತಾಹಿರ್ , ಇರ್ಫಾನ್ ಖಾನ್ , ನಸೀಮ್ ಶಾ , ಹ್ಯಾರಿಸ್ ರೌಫ್ , ಮೊಹಮ್ಮದ್ ಅಲಿ , ಅಕಿಫ್ ಜಾವೇದ್.