RCB ಕಪ್ ಗೆಲ್ಲಬಾರದು: ಅಂಬಾಟಿ ರಾಯುಡು ಉವಾಚ
IPL 2025 RCB: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಮೂರು ಬಾರಿ ಫೈನಲ್ಗೆ ಪ್ರವೇಶಿಸಿದೆ. 2009, 2011 ಮತ್ತು 2016 ರಲ್ಲಿ ಫೈನಲ್ ಆಡಿದ್ದ ಆರ್‌ಸಿಬಿ ತಂಡವು ಮೂರು ಬಾರಿ ಕೂಡ ಟ್ರೋಫಿ ಎತ್ತಿ ಹಿಡಿಯುವಲ್ಲಿ ವಿಫಲವಾಗಿತ್ತು. ಇದೀಗ 18ನೇ ಸೀಸನ್ನಲ್ಲಿ ಚೊಚ್ಚಲ ಟ್ರೋಫಿ ಮುಡಿಗೇರಿಸಿಕೊಳ್ಳುವ ವಿಶ್ವಾಸದಲ್ಲಿದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ.

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಶುರುವಾಗಿ 17 ವರ್ಷಗಳು ಕಳೆದಿವೆ. ಈ ಹದಿನೇಳು ವರ್ಷಗಳಲ್ಲಿ ಟ್ರೋಫಿ ಎತ್ತಿ ಹಿಡಿಯದ ತಂಡಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಕೂಡ ಒಂದು. ಇದೀಗ ಹೊಸ ಸೀಸನ್ನಲ್ಲಿ ಹೊಸ ಹುರುಪಿನೊಂದಿಗೆ ಕಣಕ್ಕಿಳಿದಿರುವ ಆರ್‌ಸಿಬಿ ಚೊಚ್ಚಲ ಟ್ರೋಫಿ ಮುಡಿಗೇರಿಸಿಕೊಳ್ಳುವ ಹುಮ್ಮಸ್ಸಿನಲ್ಲಿದೆ. ಆದರೆ ಈ ಬಾರಿ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಪ್ ಗೆಲ್ಲಬಾರದು ಎಂದು ಆಶಿಸಿದ್ದಾರೆ ಸಿಎಸ್ಕೆ ತಂಡದ ಮಾಜಿ ಆಟಗಾರ ಅಂಬಾಟಿ ರಾಯುಡು.
ಎಸ್ ಬ್ರದಿನಾಥ್ ನಡೆಸಿದ ಚಿಟ್ ಚಾಟ್ನಲ್ಲಿ ಕಾಣಿಸಿಕೊಂಡ ಅಂಬಾಟಿ ರಾಯುಡುಗೆ ಈ ಬಾರಿಯಾದರೂ ಆರ್‌ಸಿಬಿ ತಂಡದ ಕಾಯುವಿಕೆ ಕೊನೆಗೊಳ್ಳಲಿದೆಯಾ ಎಂದು ಪ್ರಶ್ನಿಸಲಾಗಿತ್ತು. ಇದಕ್ಕೆ ನಗುತ್ತಾ ಉತ್ತರಿಸಿದ ರಾಯುಡು, ಈ ಸಲ ನನಗೆ ಆರ್‌ಸಿಬಿ ತಂಡ ಕಪ್ ಗೆಲ್ಲೋದು ಇಷ್ಟವಿಲ್ಲ ಎಂದು ಬಹಿರಂಗವಾಗಿಯೇ ಎಂದಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರುನಂತಹ ತಂಡ ಇರಬೇಕು. ಏಕೆಂದರೆ ನಿರೀಕ್ಷೆಗಳನ್ನು ಹೆಚ್ಚಿಸಿ ಅದನ್ನು ಪೂರೈಸಲು ವಿಫಲವಾಗುವ ತಂಡ ಇದ್ದರೇನೇ ಮನರಂಜನೆ ಸಿಗೋದು. ಹೀಗಾಗಿ ಆರ್ಸಿಬಿಯಂತಹ ತಂಡ ಐಪಿಎಲ್ನಲ್ಲಿ ಇರಬೇಕೆಂದು ನಾನು ಬಯಸುತ್ತೇನೆ.
ಅಲ್ಲದೆ ಆರ್‌ಸಿಬಿ ತಂಡವು ಗೆಲ್ಲಲು ಹೆಣಗಾಡುವುದನ್ನು ನೋಡಿ ನಾನು ಸದಾ ಆನಂದಿಸುತ್ತೇನೆ. ಇದಾಗ್ಯೂ ಅವರು ಟ್ರೋಫಿ ಗೆಲ್ಲಲಿ ಎಂದು ಬಯಸುತ್ತೇನೆ. ಆದರೆ ಈ ಬಾರಿ ಅವರು ಕಪ್ ಗೆಲ್ಲಬಾರದು. ಮುಂದೊಂದು ದಿನ ಯಾವತ್ತಾದರು ಗೆಲ್ಲಲಿ. ಈ ಸಲ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಟ್ರೋಫಿ ಎತ್ತಿ ಹಿಡಿಯಬೇಕು ಎಂದು ಅಂಬಾಟಿ ರಾಯುಡು ಹೇಳಿದ್ದಾರೆ.
ಇದೀಗ ಅಂಬಾಟಿ ರಾಯುಡು ಅವರ ಈ ಹೇಳಿಕೆಯು ವೈರಲ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಪರ-ವಿರೋಧ ಚರ್ಚೆಗಳು ಶುರುವಾಗಿದೆ. ಅದರಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲ್ಲುತ್ತಿದ್ದಂತೆ ಆರ್‌ಸಿಬಿ ಅಭಿಮಾನಿಗಳು ರಾಯುಡು ಅವರನ್ನು ಟ್ರೋಲ್ ಮಾಡಲಾರಂಭಿಸಿದ್ದಾರೆ.
ಅಂದಹಾಗೆ ಅಂಬಾಟಿ ರಾಯುಡು ಇಂತಹ ಹೇಳಿಕೆ ನೀಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಪೋಡ್ ಕಾಸ್ಟ್ವೊಂದರಲ್ಲಿ ಮಾತನಾಡಿದ್ದ ರಾಯುಡು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಒಂದು ದಿನ ಕಪ್ ಗೆಲ್ಲಬಹುದು ಎಂದು ನಾನು ಭಾವಿಸುತ್ತೇನೆ. ಆದರೆ ಈ ವರ್ಷ ಅವರು ಕಪ್ ಗೆಲ್ಲದಿರಲಿ ಎಂದು ನಾನು ಆಶಿಸುತ್ತೇನೆ ಹಾಗೂ ಪ್ರಾರ್ಥಿಸುತ್ತೇನೆ ಎಂದು ಬಹಿರಂಗವಾಗಿಯೇ ಹೇಳಿದ್ದರು.
ಇದನ್ನೂ ಓದಿ: 2 ವರ್ಷ ಬ್ಯಾನ್… CSKಯನ್ನು ಗೇಲಿ ಮಾಡಿದ್ರಾ ವಿರಾಟ್ ಕೊಹ್ಲಿ?
ಇದೀಗ ಮತ್ತೊಮ್ಮೆ ಅಂಬಾಟಿ ರಾಯುಡು ಆರ್ಸಿಬಿಯನ್ನು ಹೀಯಾಳಿಸಿ ಮಾತನಾಡಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ರಾಯಲ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.