ನ್ಯೂಝಿಲೆಂಡ್ (New Zealand) ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಪಾಕಿಸ್ತಾನ್ (Pakistan) ತಂಡ ಹೀನಾಯ ಸೋಲನುಭವಿಸಿದೆ. ಅದು ಸಹ 3-0 ಅಂತರದಿಂದ ಸರಣಿಯನ್ನು ಸೋಲುವ ಮೂಲಕ. ಮೌಂಟ್ ಮೌಂಗನುಯಿಯ ಬೇ ಓವಲ್ ಮೈದಾನದಲ್ಲಿ ನಡೆದ ಈ ಸರಣಿಯ ಮೂರನೇ ಪಂದ್ಯದಲ್ಲಿ ಟಾಸ್ ಗೆದ್ದ ಪಾಕ್ ತಂಡದ ನಾಯಕ ಮೊಹಮ್ಮದ್ ರಿಝ್ವಾನ್ ಬೌಲಿಂಗ್ ಆಯ್ದುಕೊಂಡಿದ್ದರು.
ಮಳೆಯ ಕಾರಣ 42 ಓವರ್ಗಳಿಗೆ ಸೀಮಿತವಾಗಿದ್ದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ರೈಸ್ ಮಾರಿಯು (58) ಉತ್ತಮ ಆರಂಭ ಒದಗಿಸಿದ್ದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಹೆನ್ರಿ ನಿಕೋಲ್ಸ್ 31 ರನ್ ಬಾರಿಸಿದರೆ, ಆ ಬಳಿಕ ಬಂದ ಡೇರಿಮ್ ಮಿಚೆಲ್ 43 ರನ್ ಸಿಡಿಸಿದರು.
ಇನ್ನು ನಾಯಕ ಮೈಕೆಲ್ ಬ್ರೇಸ್‌ವೆಲ್ 40 ಎಸೆತಗಳಲ್ಲಿ 59 ರನ್ ಬಾರಿಸಿದರು. ಈ ಅರ್ಧಶತಕದ ನೆರವಿನೊಂದಿಗೆ ನ್ಯೂಝಿಲೆಂಡ್ ತಂಡವು ನಿಗದಿತ 42 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 264 ರನ್ ಕಲೆಹಾಕಿತು.
265 ರನ್ಗಳ ಗುರಿ ಬೆನ್ನತ್ತಿದ ಪಾಕಿಸ್ತಾನ್ ತಂಡಕ್ಕೆ ಅಬ್ದುಲ್ಲಾ ಶಫೀಕ್ (33) ಉತ್ತಮ ಆರಂಭ ಒದಗಿಸಿದ್ದರು. ಆ ಬಳಿಕ ಬಂದ ಬಾಬರ್ ಆಝಂ 58 ಎಸೆತಗಳಲ್ಲಿ 50 ರನ್ ಬಾರಿಸಿ ಮಿಂಚಿದರು.
ಈ ಇಬ್ಬರು ಬ್ಯಾಟರ್ಗಳ ನಿರ್ಗಮನದ ಬೆನ್ನಲ್ಲೇ ದಿಢೀರ್ ಕುಸಿತಕ್ಕೊಳಗಾದ ಪಾಕಿಸ್ತಾನ್ ತಂಡವು 40 ಓವರ್ಗಳಲ್ಲಿ 221 ರನ್ಗಳಿಸಿ ಆಲೌಟ್ ಆಯಿತು. ಈ ಮೂಲಕ ನ್ಯೂಝಿಲೆಂಡ್ ತಂಡವು ಪಾಕಿಸ್ತಾನ್ ತಂಡವನ್ನು ವೈಟ್ವಾಶ್ ಮಾಡಿ ಸರಣಿಯನ್ನು 3-0 ಅಂತರದಿಂದ ಗೆದ್ದುಕೊಂಡಿದೆ.
ಇದಕ್ಕೂ ಮುನ್ನ ನಡೆದ ಪಾಕಿಸ್ತಾನ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯನ್ನು ನ್ಯೂಝಿಲೆಂಡ್ ತಂಡ 4-1 ಅಂತರದಿಂದ ಗೆದ್ದುಕೊಂಡಿತ್ತು. ವಿಶೇಷ ಎಂದರೆ ಈ ಸರಣಿಗಳಿಗೆ ನ್ಯೂಝಿಲೆಂಡ್ ತಂಡದ ಪ್ರಮುಖ ಆಟಗಾರರು ಅಲಭ್ಯರಾಗಿದ್ದರು. ಇದಾಗ್ಯೂ ಪಾಕ್ ತಂಡಕ್ಕೆ ಸರಣಿ ಗೆಲ್ಲಲು ಸಾಧ್ಯವಾಗಿಲ್ಲ ಎಂಬುದೇ ಅಚ್ಚರಿ.
ಪಾಕಿಸ್ತಾನ್ ಪ್ಲೇಯಿಂಗ್ 11: ಅಬ್ದುಲ್ಲಾ ಶಫೀಕ್ , ಇಮಾಮ್-ಉಲ್-ಹಕ್ , ಬಾಬರ್ ಆಝಂ , ಮೊಹಮ್ಮದ್ ರಿಝ್ವಾನ್ (ನಾಯಕ) , ಸಲ್ಮಾನ್ ಅಘಾ , ತಯ್ಯಬ್ ತಾಹಿರ್ , ಫಹೀಮ್ ಅಶ್ರಫ್ , ಮೊಹಮ್ಮದ್ ವಾಸಿಮ್ ಜೂನಿಯರ್ , ನಸೀಮ್ ಶಾ , ಸುಫಿಯಾನ್ ಮುಖೀಮ್ , ಅಕಿಫ್ ಜಾವೇದ್.
ಇದನ್ನೂ ಓದಿ: IPL 2025: ಸೋಲಿನ ಬೆನ್ನಲ್ಲೇ ಕಣ್ಣೀರಿಟ್ಟ ಹಾರ್ದಿಕ್ ಪಾಂಡ್ಯ
ನ್ಯೂಝಿಲೆಂಡ್ ಪ್ಲೇಯಿಂಗ್ 11: ರೈಸ್ ಮಾರಿಯು , ನಿಕ್ ಕೆಲ್ಲಿ , ಹೆನ್ರಿ ನಿಕೋಲ್ಸ್ , ಡೇರಿಲ್ ಮಿಚೆಲ್ , ಟಿಮ್ ಸೀಫರ್ಟ್ , ಮೈಕೆಲ್ ಬ್ರೇಸ್‌ವೆಲ್ (ನಾಯಕ) , ಮುಹಮ್ಮದ್ ಅಬ್ಬಾಸ್ , ಮಿಚೆಲ್ ಹೇ (ವಿಕೆಟ್ ಕೀಪರ್) , ಜಾಕೋಬ್ ಡಫಿ , ಬೆನ್ ಸಿಯರ್ಸ್ , ವಿಲಿಯಂ ಓರೋಕ್.