
ಭಾರತ ಮತ್ತು ಶ್ರೀಲಂಕಾ ನಡುವಣ 2ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಇನಿಂಗ್ಸ್ ಜಯ ಸಾಧಿಸಲಿದೆ ಎಂದು ಮಾಜಿ ಆಟಗಾರ ಚೇತೇಶ್ವರ ಪೂಜಾರ ಭವಿಷ್ಯ ನುಡಿದಿದ್ದಾರೆ. ಈ ಭವಿಷ್ಯ ನಿಜವಾಗಬೇಕಿದ್ದರೆ ಟೀಮ್ ಇಂಡಿಯಾ ಬೌಲರ್‌ಗಳು 3ನೇ ದಿನದಾಟದಲ್ಲಿ ಕರಾರುವಾಕ್ ದಾಳಿ ಸಂಘಟಿಸಬೇಕಾದ ಅಗತ್ಯವಿದೆ ಎಂದಿದ್ದಾರೆ.
ನಮ್ಮ ಬ್ಯಾಟರ್‌ಗಳು ಸ್ಕೋರ್ ಬೋರ್ಡ್‌ನಲ್ಲಿ ಈಗಾಗಲೇ ಭಾರಿ ಮೊತ್ತವನ್ನು ಕಲೆಹಾಕಿದ್ದಾರೆ. 3ನೇ ದಿನದಂದು ಭಾರತೀಯ ಬೌಲರ್‌ಗಳು ಉತ್ತಮವಾಗಿ ಬೌಲಿಂಗ್ ಪ್ರದರ್ಶಿಸಿದರೆ, ಈ ಪಂದ್ಯವನ್ನು ಭಾರತ ಇನ್ನಿಂಗ್ಸ್ ಅಂತರದಿಂದಲೇ ಗೆಲ್ಲಲಿದೆ ಎಂದು ಟೀಮ್ ಇಂಡಿಯಾದ ಮಾಜಿ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕ್ರಿಕ್‌ಇನ್ಫೋ ಕಾರ್ಯಕ್ರಮವೊಂದರಲ್ಲಿ ‘ಭಾರತ ಈ ಪಂದ್ಯವನ್ನು ಇನ್ನಿಂಗ್ಸ್ ಅಂತರದಿಂದ ಗೆಲ್ಲಲು ಸಾಧ್ಯವೇ?’ ಎಂದು ಕೇಳಲಾದ ಪ್ರಶ್ನೆಗೆ ಪೂಜಾರ ಈ ರೀತಿ ಉತ್ತರಿಸಿದ್ದಾರೆ. ಕೊಲಂಬೋದ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್ (SSC) ಮೈದಾನದಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ಸದ್ಯ ಸಂಪೂರ್ಣ ಹಿಡಿತ ಸಾಧಿಸಿದೆ.
ಹೀಗಾಗಿ ಟೀಮ್ ಇಂಡಿಯಾ ಇನಿಂಗ್ಸ್ ಜಯ ಸಾಧಿಸುವುದು ಬಹುತೇಕ ಖಚಿತ. ಆದರೆ ಈ ಇನಿಂಗ್ಸ್ ಜಯ ನಿರ್ಧಾರವಾಗುವುದು 3ನೇ ದಿನದಾಟದಲ್ಲಿ. ಮೂರನೇ ದಿನದಿಂದ ಪಿಚ್ ವೇಗದ ಬೌಲರ್‌ಗಳಿಗೆ ಹೆಚ್ಚಿನ ನೆರವು ನೀಡಲಿದ್ದು, ಭಾರತೀಯ ವೇಗಿಗಳು ಇದರ ಸಂಪೂರ್ಣ ಲಾಭ ಪಡೆಯಬೇಕು. ಈ ಮೂಲಕ ಶ್ರೀಲಂಕಾವನ್ನು ಆಲೌಟ್ ಮಾಡಿದರೆ, ಇನಿಂಗ್ಸ್ ಜಯ ಸಾಧಿಸುವುದು ಖಚಿತ ಎಂದು ಚೇತೇಶ್ವರ ಪೂಜಾರ ಹೇಳಿದ್ದಾರೆ.
ಮೊದಲ ಎರಡು ದಿನಗಳ ಆಟದಲ್ಲಿ ಭಾರತ ತಂಡವು ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ದೇವದತ್ ಪಡಿಕ್ಕಲ್ (117 ರನ್) ಮತ್ತು ಧ್ರುವ್ ಜುರೆಲ್ (115 ರನ್) ಅವರ ಭರ್ಜರಿ ಶತಕಗಳ ನೆರವಿನಿಂದ ಭಾರತ 9 ವಿಕೆಟ್ ನಷ್ಟಕ್ಕೆ 503 ರನ್‌ಗಳ ಬೃಹತ್ ಮೊತ್ತ ಪೇರಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.
ಇದಕ್ಕೆ ಉತ್ತರವಾಗಿ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ಶ್ರೀಲಂಕಾ ತಂಡಕ್ಕೆ ಎರಡನೇ ದಿನದ ಅಂತ್ಯದ ವೇಳೆಗೆ ಭಾರತೀಯ ಬೌಲರ್‌ಗಳು ಆರಂಭಿಕ ಆಘಾತ ನೀಡಿದ್ದಾರೆ. ಕೇವಲ 3 ಓವರ್‌ಗಳಲ್ಲಿ 8 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಶ್ರೀಲಂಕಾ ಆರಂಭಿಕ ಆಘಾತಕ್ಕೆ ಒಳಗಾಗಿದೆ.
ಇದನ್ನೂ ಓದಿ: ಡಿಕ್ಲೇರ್… ಶುಭ್ಮನ್ ಗಿಲ್ ‘ಆಕ್ರಮಣಕಾರಿ’ ನಾಯಕ!
ಅತ್ತ ಭಾರತದ ಬೃಹತ್ ರನ್ ಮೊತ್ತ ಹಾಗೂ ಶ್ರೀಲಂಕಾ ತಂಡದ ಆರಂಭಿಕ ವಿಕೆಟ್ ಪತನವನ್ನು ಗಮನಿಸಿರುವ ಪೂಜಾರ, ಮೂರನೇ ದಿನದಂದು ಭಾರತೀಯ ಬೌಲರ್‌ಗಳು ಶಿಸ್ತುಬದ್ಧ ದಾಳಿ ಸಂಘಟಿಸಿದರೆ ಸುಲಭವಾಗಿ ಇನ್ನಿಂಗ್ಸ್ ಜಯ ದಾಖಲಿಸಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.