
ಆಕ್ಲೆಂಡ್ನ ಈಡನ್ ಪಾರ್ಕ್ ಮೈದಾನದಲ್ಲಿ ನಡೆಯುತ್ತಿರುವ ಭಾರತದ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡ ಅಲ್ಪ ಮೊತ್ತಕ್ಕೆ ಆಲೌಟ್ ಆಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಶುಭ್ಮನ್ ಗಿಲ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ತಂಡ ಉತ್ತಮ ಆರಂಭ ಪಡೆದಿರಲಿಲ್ಲ.
ಆರಂಭಿಕ ದಾಂಡಿಗ ವಿಲ್ ಯಂಗ್ ಕೇವಲ 9 ರನ್ಗಳಿಸಿ ಔಟಾದರೆ, ಆ ಬಳಿಕ ಬಂದ ಹೆನ್ರಿ ನಿಕೋಲ್ಸ್ ಕೂಡ 9 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಇದರ ನಡುವೆ ಟಿಮ್ ಸೈಫರ್ಟ್ 43 ಎಸೆತಗಳಲ್ಲಿ 38 ರನ್ ಬಾರಿಸಿದರೂ ಗುರ್ನೂರ್ ಬ್ರಾರ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಕ್ಯಾಚಿ ನೀಡಿದರು.
ಮತ್ತೊಂದೆಡೆ ಕ್ರೀಸ್ ಕಚ್ಚಿ ನಿಂತಿದ್ದ ಡ್ಯಾರಿಲ್ ಮಿಚೆಲ್ (28) ಅನವಶ್ಯಕ ರನ್ ಕದಿಯಲು ಯತ್ನಿಸಿ ರನೌಟ್ ಆಗಿ ಹೊರ ನಡೆದರು. ಇನ್ನು ವಿಕೆಟ್ ಕೀಪರ್ ಬ್ಯಾಟರ್ ಟಾಮ್ ಲ್ಯಾಥಮ್ ಇನಿಂಗ್ಸ್ ಕೇವಲ 11 ರನ್ಗಳಿಗೆ ಸೀಮಿವಾಯಿತು.
ನಾಯಕ ಮಿಚೆಲ್ ಸ್ಯಾಂಟ್ನರ್ 4 ರನ್ಗಳಿಸಿ ವಿಕೆಟ್ ಒಪ್ಪಿಸಿದರೆ, ನಾಥನ್ ಸ್ಮಿತ್ (1) ಬಂದ ವೇಗದಲ್ಲೇ ಹಿಂತಿರುಗಿದರು. ಪರಿಣಾಮ ನ್ಯೂಝಿಲೆಂಡ್ ತಂಡವು 20 ಓವರ್ಗಳಲ್ಲಿ 111 ರನ್ಗಳಿಸುವಷ್ಟರಲ್ಲಿ 7 ವಿಕೆಟ್ ಕಳೆದುಕೊಂಡಿತು.
ಈ ಹಂತದಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ಗ್ಲೆನ್ ಫಿಲಿಪ್ಸ್ 30 ರನ್ಗಳ ಕೊಡುಗೆ ನೀಡಿದರು. ಈ ಮೂಲಕ ನ್ಯೂಝಿಲೆಂಡ್ ತಂಡ ಮೊತ್ತವನ್ನು 150 ರನ್ಗಳ ಗುರಿ ದಾಟುವಂತೆ ಮಾಡಿದರು. ಇನ್ನು ಕೊನೆಯ ಬ್ಯಾಟರ್ ಆಗಿ ಕಣಕ್ಕಿಳಿದ ಬ್ಲೇರ್ ಟಿಕ್ನರ್ 4 ಭರ್ಜರಿ ಸಿಕ್ಸರ್ಗಳೊಂದಿಗೆ 34 ರನ್ ಚಚ್ಚಿದರು. ಈ ಮೂಲಕ ನ್ಯೂಝಿಲೆಂಡ್ ತಂಡ 40.2 ಓವರ್ಗಳಲ್ಲಿ 185 ರನ್ಗಳಿಸಿ ಆಲೌಟ್ ಆಯಿತು.
ಟೀಮ್ ಇಂಡಿಯಾ ಪರ ಕರಾರುವಾಕ್ ದಾಳಿ ಸಂಘಟಿಸಿದ ಅನ್ಶುಲ್ ಕಂಬೋಜ್ 10 ಓವರ್ಗಳಲ್ಲಿ ಕೇವಲ 22 ರನ್ ನೀಡಿ 2 ವಿಕೆಟ್ ಕಬಳಿಸಿ ಮಿಂಚಿದರು. ಅಂದರೆ ಕಂಬೋಜ್ ತಮ್ಮ 10 ಓವರ್ಗಳಲ್ಲಿ ಬರೋಬ್ಬರಿ 46 ಡಾಟ್ ಬಾಲ್ಗಳನ್ನು ಎಸೆದಿದ್ದರು. ಕಂಬೋಜ್ಗೆ ಉತ್ತಮ ಸಾಥ್ ನೀಡಿದ ಅರ್ಷದೀಪ್ ಸಿಂಗ್ 4 ವಿಕೆಟ್ ಪಡೆದರೆ, ಗುರ್ನೂರ್ ಬ್ರಾರ್ 3 ವಿಕೆಟ್ ಕಬಳಿಸಿದರು.
ಭಾರತ (ಪ್ಲೇಯಿಂಗ್ XI): ಶುಭ್ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ನಮನ್ ಧೀರ್, ಅನ್ಶುಲ್ ಕಂಬೋಜ್, ಆಖಿಬ್ ನಬಿ, ಗುರ್ನೂರ್ ಬ್ರಾರ್, ಅರ್ಷದೀಪ್ ಸಿಂಗ್.
ಇದನ್ನೂ ಓದಿ: IPL ಟ್ರೇಡಿಂಗ್ ಅಂದರೆ ಏನು? ಇದರ ನಿಯಮಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ
ನ್ಯೂಝಿಲೆಂಡ್ (ಪ್ಲೇಯಿಂಗ್ XI): ಟಿಮ್ ಸೈಫರ್ಟ್, ವಿಲ್ ಯಂಗ್, ಹೆನ್ರಿ ನಿಕೋಲ್ಸ್, ಡ್ಯಾರಿಲ್ ಮಿಚೆಲ್, ಟಾಮ್ ಲ್ಯಾಥಮ್ (ವಿಕೆಟ್ ಕೀಪರ್), ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್ (ನಾಯಕ), ನಾಥನ್ ಸ್ಮಿತ್, ಕೈಲ್ ಜೇಮಿಸನ್, ಜೇಕಬ್ ಡಫಿ, ಬ್ಲೇರ್ ಟಿಕ್ನರ್.
Published On - 11:05 am, Wed, 4 November 26