
ಐಪಿಎಲ್ 2026ರ ಸೀಸನ್‌ನ ರೋಚಕ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (PBKS) ವಿರುದ್ಧ ಗುಜರಾತ್ ಟೈಟಾನ್ಸ್ (GT) ಮೂರು ವಿಕೆಟ್‌ಗಳ ಸೋಲನ್ನು ಅನುಭವಿಸಿತು. ಆದರೆ, ಈ ಸೋಲಿಗಿಂತ ಹೆಚ್ಚಾಗಿ ಚರ್ಚೆಯಾಗುತ್ತಿರುವುದು ನಾಯಕ ಶುಭ್ಮನ್ ಗಿಲ್ ಅವರ ಒಂದು ವಿಚಿತ್ರ ನಿರ್ಧಾರ. ಅದುವೇ ತಂಡದ ಪ್ರಮುಖ ವೇಗಿ ಮೊಹಮ್ಮದ್ ಸಿರಾಜ್ ಅವರಿಗೆ ಪೂರ್ಣ ಓವರ್‌ಗಳನ್ನು ನೀಡದೇ ಇರುವುದು!
ಮುಲ್ಲನ್ಪುರ್ನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ 162 ರನ್‌ಗಳ ಸಾಧಾರಣ ಮೊತ್ತವನ್ನು ಕಲೆಹಾಕಿತು. ಈ ಮೊತ್ತವನ್ನು ರಕ್ಷಿಸುವ ಜವಾಬ್ದಾರಿ ಬೌಲರ್‌ಗಳ ಮೇಲಿತ್ತು. ಪವರ್‌ಪ್ಲೇನಲ್ಲಿ ಮೊಹಮ್ಮದ್ ಸಿರಾಜ್ ಅತ್ಯುತ್ತಮ ಲಯದಲ್ಲಿದ್ದಂತೆ ಕಂಡು ಬಂದರು. ಅಲ್ಲದೆ ಈ ವೇಳೆ ಎಸೆದ 2 ಓವರ್‌ಗಳಲ್ಲಿ ಸಿರಾಜ್ ನೀಡಿದ್ದು ಕೇವಲ 15 ರನ್ಗಳು ಮಾತ್ರ.
ಅಂದರೆ ಪವರ್ಪ್ಲೇನಲ್ಲೇ ಮೊಹಮ್ಮದ್ ಸಿರಾಜ್ ಪಂಜಾಬ್ ಕಿಂಗ್ಸ್ ಬ್ಯಾಟರ್ಗಳ ರನ್ ವೇಗಕ್ಕೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಅಚ್ಚರಿಯ ವಿಷಯವೆಂದರೆ ಆ 2 ಓವರ್‌ಗಳ ನಂತರ ಶುಭ್ಮನ್ ಗಿಲ್, ಸಿರಾಜ್‌ಗೆ ಮತ್ತೆ ಚೆಂಡನ್ನೇ ನೀಡಲಿಲ್ಲ!
ಇತ್ತ 13ನೇ ಓವರ್ ವೇಳೆ ದಾಳಿಗಿಳಿದ ಪ್ರಸಿದ್ಧ್ ಕೃಷ್ಣ ಬ್ಯಾಕ್ ಟು ಬ್ಯಾಕ್ ವಿಕೆಟ್ ಕಬಳಿಸುವ ಮೂಲಕ ಪಂಜಾಬ್ ಕಿಂಗ್ಸ್ ತಂಡಕ್ಕೆ ಆಘಾತ ನೀಡಿದ್ದರು. 2 ಓವರ್‌ಗಳಲ್ಲಿ 3 ವಿಕೆಟ್ ಉರುಳಿಸಿದ ಪ್ರಸಿದ್ಧ್ ಗುಜರಾತ್ ಟೈಟಾನ್ಸ್ ತಂಡಕ್ಕೆ ಗೆಲುವಿನ ಆಸೆ ಚಿಗುರಿಸಿದ್ದರು. ಆದರೆ ಈ ಹಂತದಲ್ಲೂ ಶುಭ್ಮನ್ ಗಿಲ್ ಮೊಹಮ್ಮದ್ ಸಿರಾಜ್ ಅವರನ್ನು ದಾಳಿಗೆ ಇಳಿಸಿರಲಿಲ್ಲ ಎಂಬುದೇ ಅಚ್ಚರಿ.
ಪಂಜಾಬ್ ಕಿಂಗ್ಸ್ ತಂಡವು ಸತತ ವಿಕೆಟ್ ಕಳೆದುಕೊಂಡ ಒತ್ತಡಕ್ಕೊಳಗಾಗಿದ್ದರೂ ಶುಭ್ಮನ್ ಗಿಲ್ ಅನಾನುಭವಿ ಅಶೋಕ್ ಶರ್ಮಾ ಮತ್ತು ವಾಷಿಂಗ್ಟನ್ ಸುಂದರ್ ಅವರಂತಹ ಬೌಲರ್‌ಗಳನ್ನು ದೀರ್ಘಕಾಲ ಬಳಸಿಕೊಂಡರು.
ಒಂದು ಹಂತದಲ್ಲಿ 118 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡಿದ್ದ ಪಂಜಾಬ್ ಕಿಂಗ್ಸ್ ಸೋಲಿನ ಸುಳಿಗೆ ಸಿಲುಕಿತ್ತು. ಒಂದು ವೇಳೆ ಈ ಹಂತದಲ್ಲಿ ಮೊಹಮ್ಮದ್ ಸಿರಾಜ್ ಅವರನ್ನು ಬಳಸಿಕೊಂಡಿದ್ದರೆ, ಅಥವಾ 7 ವಿಕೆಟ್ ಕಳೆದುಕೊಂಡ ಬಳಿಕ ಸಿರಾಜ್ ಕೈಗೆ ಚೆಂಡು ನೀಡಿದ್ದರೆ ವಿಕೆಟ್ ಪಡೆಯುವ ಅಥವಾ ರನ್ ನಿಯಂತ್ರಿಸುವ ಸಾಧ್ಯತೆ ಹೆಚ್ಚಿತ್ತು.
ಏಕೆಂದರೆ ಪವರ್‌ಪ್ಲೇನಲ್ಲಿ ಪ್ರಭ್ಸಿಮ್ರಾನ್ ಸಿಂಗ್ ಹಾಗೂ ಕೂಪರ್ ಕೊನೊಲಿ ಅಬ್ಬರಿಸಿದರೂ ಮೊಹಮ್ಮದ್ ಸಿರಾಜ್ 12 ಎಸೆತಗಳಲ್ಲಿ ನೀಡಿದ್ದು ಕೇವಲ 15 ರನ್ಗಳು ಮಾತ್ರವಾಗಿತ್ತು. ಹೀಗಾಗಿ ನಿರ್ಣಾಯಕ ಹಂತದಲ್ಲಿ ಸಿರಾಜ್ ಅವರ ಅನುಭವವನ್ನು ಬಳಸಿಕೊಂಡು ಪಂಜಾಬ್ ಕಿಂಗ್ಸ್ ಮೇಲೆ ಒತ್ತಡ ಹೇರುವ ಅವಕಾಶ ಶುಭ್ಮನ್ ಗಿಲ್ ಮುಂದಿತ್ತು.
ಇದಾಗ್ಯೂ ಶುಭ್ಮನ್ ಗಿಲ್ ಅವರ ರಕ್ಷಣಾತ್ಮಕ ನಾಯಕತ್ವದಿಂದಾಗಿ ಪಂಜಾಬ್‌ನ ಯುವ ಆಟಗಾರ ಕೂಪರ್ ಕೊನೊಲಿ (72)* ಅಬ್ಬರಿಸಲು ಅವಕಾಶ ಸಿಕ್ಕಿತು. ಅಂತಿಮವಾಗಿ ಪಂಜಾಬ್ 19.1 ಓವರ್‌ಗಳಲ್ಲಿ ಗುರಿ ತಲುಪುವ ಮೂಲಕ 3 ವಿಕೆಟ್‌ಗಳ ರೋಚಕ ಜಯ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ಮುಗಿಯದ ಓವರ್… ಅತ್ಯಂತ ಹೀನಾಯ ದಾಖಲೆ ಬರೆದ ಅರ್ಷದೀಪ್ ಸಿಂಗ್
ಈ ಸೋಲಿನ ಬೆನ್ನಲ್ಲೇ ಶುಭ್ಮನ್ ಗಿಲ್ ಅವರ ನಾಯಕತ್ವದ ಬಗ್ಗೆ ಪ್ರಶ್ನೆಗಳೆದ್ದಿವೆ. ಅದರಲ್ಲೂ ಗಿಲ್ ನಾಯಕನಾಗಿ ಒತ್ತಡದ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ ಎಂಬ ಟೀಕೆ ಕೇಳಿಬರುತ್ತಿದೆ. ಈ ಟೀಕೆಗಳ ನಡುವೆ ಮುಂದಿನ ಪಂದ್ಯಗಳಲ್ಲಿ ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣ ಅವರಂತಹ ಹಿರಿಯ ಬೌಲರ್‌ಗಳನ್ನು ಗಿಲ್ ಹೇಗೆ ಬಳಸಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.