PSL 2026: ಡೇವಿಡ್ ವಾರ್ನರ್​ ಬಂಧನ

David Warner: ಆಸ್ಟ್ರೇಲಿಯಾದ ಮಾಜಿ ಆಟಗಾರ ಡೇವಿಡ್ ವಾರ್ನರ್ ಪ್ರಸ್ತುತ ನಡೆಯುತ್ತಿರುವ ಪಾಕಿಸ್ತಾನ್ ಸೂಪರ್ ಲೀಗ್​ನಲ್ಲಿ ಕರಾಚಿ ಕಿಂಗ್ಸ್ ಪರ ಕಣಕ್ಕಿಳಿಯುತ್ತಿದ್ದಾರೆ. ಈ ಪಂದ್ಯಾವಳಿಯ ನಡುವೆ ಡೇವಿಡ್ ವಾರ್ನರ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದು ಸಹ ಆಸ್ಟ್ರೇಲಿಯಾದಲ್ಲಿ ಮದ್ಯಪಾನ ಮಾಡಿ ಕಾರು ಓಡಿಸುವ ಮೂಲಕ ಎಂಬುದು ವಿಶೇಷ.

PSL 2026: ಡೇವಿಡ್ ವಾರ್ನರ್​ ಬಂಧನ
David Warner

Updated on: Apr 07, 2026 | 4:18 PM

ಕರಾಚಿ ಕಿಂಗ್ಸ್ ತಂಡದ ನಾಯಕ ಡೇವಿಡ್ ವಾರ್ನರ್ (David Warner) ಅವರು ಸಿಡ್ನಿಯಲ್ಲಿ ಮದ್ಯಪಾನ ಮಾಡಿ ವಾಹನ ಚಲಾಯಿಸಿದ ಆರೋಪದ ಮೇಲೆ ಆಸ್ಟ್ರೇಲಿಯನ್ ಪೊಲೀಸರು ಬಂಧಿಸಿದ್ದಾರೆ. ಪ್ರಸ್ತುತ ಪಾಕಿಸ್ತಾನ ಸೂಪರ್ ಲೀಗ್ (PSL 2026) ನಡೆಯುತ್ತಿದ್ದು, ಅದರ ನಡುವೆಯೇ ಈ ಘಟನೆ ಸಂಭವಿಸಿದೆ.

ಪಾಕಿಸ್ತಾನ್ ಸೂಪರ್ ಲೀಗ್​ ನಡುವೆ ತವರಿಗೆ ತೆರಳಿದ್ದ ಡೇವಿಡ್ ವಾರ್ನರ್ ಏಪ್ರಿಲ್ 7, 2026 ರಂದು ಸಿಡ್ನಿಯ ಮರೂಬ್ರಾದಲ್ಲಿ ವೇಗದಲ್ಲಿ ವಾಹನ ಚಲಾಯಿಸಿದ್ದರು. ಇದನ್ನು ಗಮನಿಸಿದ ಪೋಲೀಸರು ಇವರನ್ನು ತಪಾಸಣೆಗಾಗಿ ತಡೆದಿದ್ದಾರೆ.

ಈ ವೇಳೆ ಡೇವಿಡ್ ವಾರ್ನರ್  ಕುಡಿದು ಗಾಡಿ ಓಡಿಸುತ್ತಿರುವುದು ಗೊತ್ತಾಗಿದೆ. ತಕ್ಷಣವೇ ವಾರ್ನರ್​ ಅವರನ್ನು ವಶಕ್ಕೆ ಪಡೆದ ಪೊಲೀಸರು ಅವರನ್ನು ಪರೀಕ್ಷೆಗೆ ಒಳಪಡಿಸಿದ್ದಾರೆ. ಈ ವೇಳೆ ಅವರ ರಕ್ತದಲ್ಲಿನ ಮದ್ಯದ ಪ್ರಮಾಣ 0.104 ಇರುವುದು ಕಂಡುಬಂದಿದೆ. ಇದು ಆಸ್ಟ್ರೇಲಿಯಾದ ಕಾನೂನುಬದ್ಧ ಮಿತಿಗಿಂತ (0.05) ಎರಡು ಪಟ್ಟು ಹೆಚ್ಚು.

ಇತ್ತ ಮದ್ಯಪಾನ ಮಾಡಿ ಬಂಧನಕ್ಕೆ ಒಳಗಾದ ಡೇವಿಡ್ ವಾರ್ನರ್ ಇದೀಗ ವಕೀಲರ ನೆರವಿನೊಂದಿಗೆ ಬಿಡುಗಡೆಯಾಗಿದ್ದಾರೆ. ಇದಾಗ್ಯೂ ಅವರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ತಿಂಗಳು ಆಸ್ಟ್ರೇಲಿಯಾದ ನ್ಯಾಯಾಲಯಕ್ಕೆ ಹಾಜರಾಗಬೇಕಿದೆ.

PSL 2026​ ಆಡ್ತಾರಾ?

ವರದಿಯ ಪ್ರಕಾರ, ಡೇವಿಡ್ ವಾರ್ನರ್ ಅವರು ಶೀಘ್ರದಲ್ಲೇ ಪಾಕಿಸ್ತಾನಕ್ಕೆ ಮರಳಲಿದ್ದಾರೆ ಮತ್ತು ಕರಾಚಿ ಕಿಂಗ್ಸ್ ತಂಡದ ಪರವಾಗಿ ಪಂದ್ಯಗಳನ್ನು ಮುಂದುವರಿಸಲಿದ್ದಾರೆ.

ಕರಾಚಿ ಕಿಂಗ್ಸ್ ತಂಡವು ಏಪ್ರಿಲ್ 9 ರಂದು ಗುರುವಾರ ಕರಾಚಿಯ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪೆಶಾವರ್ ಝಲ್ಮಿ ತಂಡವನ್ನು ಎದುರಿಸಲಿದೆ. ಈ ಪಂದ್ಯಕ್ಕೆ ಅವರು ಲಭ್ಯರಿರಲಿದ್ದಾರೆ ಎಂದು ವರದಿಯಾಗಿದೆ.

ಅಂದಹಾಗೆ ಡೇವಿಡ್ ವಾರ್ನರ್, ಇತ್ತೀಚೆಗಷ್ಟೇ ತಂಡದ ಸದಸ್ಯ ಮೊಯಿನ್ ಅಲಿ ಅವರೊಂದಿಗೆ ಗಲಾಟೆ ಮಾಡಿಕೊಂಡಿದ್ದಾರೆ ಎಂಬ ವಿಡಿಯೋ ವೈರಲ್ ಆಗಿತ್ತು, ಆದರೆ ಅದು ಕೇವಲ “ತಮಾಷೆ” ಎಂದು ವಾರ್ನರ್ ಸ್ಪಷ್ಟಪಡಿಸಿದ್ದರು. ಇದೀಗ ಮದ್ಯಪಾನ ಮಾಡಿ ಗಾಡಿ ಓಡಿಸಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

 

Published On - 4:16 pm, Tue, 7 April 26

Follow Us