Rajat Patidar: ಗೇಲ್ ರೆಕಾರ್ಡ್ ಉಡೀಸ್: ಶತಕ ಸಿಡಿಸಿ 9 ದಾಖಲೆ ಬರೆದ ಪಾಟಿದಾರ್
Rajat Patidar Records: ಕೇವಲ 49 ಎಸೆತಗಳಲ್ಲಿ ರಜತ್ ಪಾಟಿದಾರ್ ತಮ್ಮ ಚೊಚ್ಚಲ ಐಪಿಎಲ್ ಶತಕ ಪೂರೈಸಿದರು. ಈ ಶತಕದೊಂದಿಗೆ ಆರ್ಸಿಬಿ ತಂಡದ ಯುವ ಆಟಗಾರ ಹಲವು ದಾಖಲೆಗಳನ್ನೂ ಕೂಡ ತಮ್ಮದಾಗಿಸಿಕೊಂಡರು.
ಚೊಚ್ಚಲ ಶತಕ…ಹಲವು ದಾಖಲೆಗಳು…ಹೌದು, ನಿರ್ಣಾಯಕ ಪಂದ್ಯದಲ್ಲಿ ಅಬ್ಬರಿಸುವ ಮೂಲಕ ರಜತ್ ಪಾಟಿದಾರ್ (Rajat Patidar) ಒಂದೇ ಪಂದ್ಯದಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಲಕ್ನೋ ಸೂಪರ್ ಜೈಂಟ್ಸ್(LSG vs RCB) ವಿರುದ್ದದ ಈ ಪಂದ್ಯದಲ್ಲಿ ಟಾಸ್ ಸೋತ ಆರ್ಸಿಬಿ (RCB) ಮೊದಲು ಬ್ಯಾಟಿಂಗ್ ಮಾಡಿತು. ಆದರೆ ಆರ್ಸಿಬಿ ಪರ ಅತಿರಥ ಮಹಾರಥ ಎನಿಸಿಕೊಂಡಿರುವ ಬ್ಯಾಟ್ಸ್ಮನ್ಗಳೇ ವಿಫಲರಾಗಿದ್ದರು. ನಾಯಕ ಫಾಫ್ ಡುಪ್ಲೆಸಿಸ್ ಶೂನ್ಯಕ್ಕೆ ಔಟಾದರೆ, ವಿರಾಟ್ ಕೊಹ್ಲಿ 25 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಇನ್ನು ಗ್ಲೆನ್ ಮ್ಯಾಕ್ಸ್ವೆಲ್ ಕೇವಲ 9 ರನ್ಗೆ ತಮ್ಮ ಇನಿಂಗ್ಸ್ ಅಂತ್ಯಗೊಳಿಸಿದರು. ಒಂದೆಡೆ ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ಗಳ ವೈಫಲ್ಯದ ನಡುವೆ ಏಕಾಂಗಿಯಾಗಿ ರಜತ್ ಪಾಟಿದಾರ್ ಲಕ್ನೋ ಸೂಪರ್ ಜೈಂಟ್ಸ್ ಬೌಲರ್ಗಳ ಬೆಂಡೆತ್ತಿದರು. ಪರಿಣಾಮ ಮಳೆಯನ್ನು ನಿರೀಕ್ಷಿಸಲಾಗಿದ್ದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಸಿಕ್ಸ್-ಫೋರ್ಗಳ ಸುರಿಮಳೆಯಾಯಿತು.
ಅದರಂತೆ ಕೇವಲ 49 ಎಸೆತಗಳಲ್ಲಿ ರಜತ್ ಪಾಟಿದಾರ್ ತಮ್ಮ ಚೊಚ್ಚಲ ಐಪಿಎಲ್ ಶತಕ ಪೂರೈಸಿದರು. ಈ ಶತಕದೊಂದಿಗೆ ಆರ್ಸಿಬಿ ತಂಡದ ಯುವ ಆಟಗಾರ ಹಲವು ದಾಖಲೆಗಳನ್ನೂ ಕೂಡ ತಮ್ಮದಾಗಿಸಿಕೊಂಡರು. ಆ ದಾಖಲೆಗಳು ಯಾವುವು ಎಂದು ನೋಡುವುದಾದದರೆ…
- – ರಜತ್ ಪಾಟಿದಾರ್ ಐಪಿಎಲ್‌ನ ಪ್ಲೇಆಫ್‌ನಲ್ಲಿ ಶತಕ ಗಳಿಸಿದ ಮೊದಲ ಅನ್‌ಕ್ಯಾಪ್ ಆಟಗಾರ. ಅಂದರೆ ಅಂತಾರಾಷ್ಟ್ರೀಯ ಪಂದ್ಯವಾಡದ ಆಟಗಾರ ಐಪಿಎಲ್‌ನ ಪ್ಲೇಆಫ್‌ನಲ್ಲಿ ಶತಕ ಬಾರಿಸಿದ್ದು ಇದೇ ಮೊದಲು. ಇದಕ್ಕೂ ಮುನ್ನ 2014ರ ಐಪಿಎಲ್‌ನ ಫೈನಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಮನೀಶ್ ಪಾಂಡೆ 50 ಎಸೆತಗಳಲ್ಲಿ 94 ರನ್ ಗಳಿಸಿದ್ದು ಅನ್‌ಕ್ಯಾಪ್ಡ್ ಆಟಗಾರನ ಗರಿಷ್ಠ ಸ್ಕೋರ್ ಆಗಿತ್ತು.
- – ಕೇವಲ 49 ಎಸೆತಗಳಲ್ಲಿ ಶತಕ ಸಿಡಿಸಿ ಮತ್ತೊಂದು ದಾಖಲೆಯನ್ನು ಕೂಡ ರಜತ್ ಪಾಟಿದಾರ್ ತಮ್ಮದಾಗಿಸಿಕೊಂಡರು. ಅಂದರೆ ಐಪಿಎಲ್‌ನ ಪ್ಲೇಆಫ್ ಪಂದ್ಯದಲ್ಲಿ ಮೂಡಿಬಂದ ಅತೀ ವೇಗದ ಶತಕ ಇದಾಗಿದೆ. ಆದರೆ ಈ ದಾಖಲೆಯನ್ನು ಪಾಟಿದಾರ್ ವೃದ್ದಿಮಾನ್ ಸಾಹ ಅವರೊಂದಿಗೆ ಹಂಚಿಕೊಂಡಿದ್ದಾರೆ. ಸಾಹ 2014ರ ಐಪಿಎಲ್ ಫೈನಲ್ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ 49 ಎಸೆತಗಳಲ್ಲಿ ಸೆಂಚುರಿ ಸಿಡಿಸಿದ್ದರು. ಇದೀಗ ರಜತ್ ಪಾಟಿದಾರ್ ಕೂಡ 49 ಎಸೆತಗಳಲ್ಲಿ ವೇಗದ ಶತಕ ಬಾರಿಸಿ ಈ ದಾಖಲೆಯನ್ನು ಸರಿಗಟ್ಟಿದ್ದಾರೆ.
- – ಇದು ಐಪಿಎಲ್‌ನಲ್ಲಿ ಅನ್‌ಕ್ಯಾಪ್ಡ್ ಆಟಗಾರನ ಮೂರನೇ ಅತಿ ಹೆಚ್ಚು ಸ್ಕೋರ್ ಎಂಬುದು ವಿಶೇಷ. ಕಳೆದ ಸೀಸನ್ನಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ RCB ಪರ ದೇವದತ್ ಪಡಿಕ್ಕಲ್ ಅಜೇಯ 101 ಬಾರಿಸಿದ್ದರು. ಇದೀಗ ರಜತ್ ಪಾಟಿದಾರ್ 112 ರನ್ಗಳಿಸುವ ಮೂಲಕ 3ನೇ ಸ್ಥಾನಕ್ಕೇರಿದ್ದಾರೆ. ಮೊದಲ ಸ್ಥಾನದಲ್ಲಿ ಪಾಲ್ ವಾಲ್ತಾಟಿ (120) ಇದ್ದು, 2ನೇ ಸ್ಥಾನದಲ್ಲಿ ಮನೀಷ್ ಪಾಂಡೆ (114) ಇದ್ದಾರೆ.
- – ಐಪಿಎಲ್ ಪ್ಲೇಆಫ್‌ನಲ್ಲಿ ಆಟಗಾರನೊಬ್ಬ ಶತಕ ಸಿಡಿಸಿದ ಐದನೇ ಶತಕ ಇದಾಗಿದೆ. ರಜತ್ ಪಾಟಿದಾರ್ ಔಟಾಗದೆ 112 ರನ್ ಗಳಿಸಿದ್ದು ಪ್ಲೇಆಫ್‌ನಲ್ಲಿ ಇದುವರೆಗಿನ ನಾಲ್ಕನೇ ಗರಿಷ್ಠ ಸ್ಕೋರ್ ಆಗಿದೆ.
- – ಎಲಿಮಿನೇಟರ್ ಪಂದ್ಯದಲ್ಲಿ ಶತಕ ಬಾರಿಸಿದ ಮೊದಲ ಬ್ಯಾಟ್ಸ್ಮನ್ ದಾಖಲೆಯನ್ನೂ ಕೂಡ ರಜತ್ ಪಾಟಿದಾರ್ ಬರೆದಿದ್ದಾರೆ. ಅಂದರೆ ಇದುವರೆಗೆ ಯಾವುದೇ ಬ್ಯಾಟ್ಸ್ಮನ್ ಐಪಿಎಲ್ ಎಲಿಮಿನೇಟರ್ ಪಂದ್ಯದಲ್ಲಿ ಸೆಂಚುರಿ ಬಾರಿಸಿಲ್ಲ.
- – ಇದಲ್ಲದೆ ನಾಕೌಟ್/ಪ್ಲೇಆಫ್ ಹಂತದಲ್ಲಿ ಆರ್ಸಿಬಿ ಪರ ಶತಕ ಸಿಡಿಸಿದ ಮೊದಲ ಬ್ಯಾಟ್ಸ್ಮನ್ ಎಂಬ ದಾಖಲೆ ಕೂಡ ರಜತ್ ಪಾಟಿದಾರ್ ಪಾಲಾಗಿದೆ. ಅಂದರೆ ಕಳೆದ 14 ಸೀಸನ್ ಐಪಿಎಲ್‌ನಲ್ಲಿ ಪ್ಲೇಆಫ್ ಹಂತದಲ್ಲಿ ಆರ್ಸಿಬಿ ಪರ ಯಾವುದೇ ಬ್ಯಾಟ್ಸ್ಮನ್ ಮೂರಂಕಿ ರನ್ ಕಲೆಹಾಕಿಲ್ಲ.
- – ಐಪಿಎಲ್ ನಾಕೌಟ್ ಪಂದ್ಯದಲ್ಲಿ ಅಜೇಯ ಶತಕ ಬಾರಿಸಿದ ಭಾರತದ ಮೊದಲ ಅನ್‌ಕ್ಯಾಪ್ಡ್ ಆಟಗಾರ ಎಂಬ ದಾಖಲೆಯನ್ನೂ ಕೂಡ ರಜತ್ ಪಾಟಿದಾರ್ ತಮ್ಮದಾಗಿಸಿಕೊಂಡಿದ್ದಾರೆ.
- – ಪ್ಲೇಆಫ್‌ನಲ್ಲಿ ಶತಕ ಬಾರಿಸಿದ ಭಾರತದ 4ನೇ ಆಟಗಾರ ಎಂಬ ಹಿರಿಮೆಗೂ ಪಾಟಿದಾರ್ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಸೆಹ್ವಾಗ್, ಮುರುಳಿ ವಿಜಯ್ ಹಾಗೂ ಸಾಹ ಪ್ಲೇಆಫ್‌ನಲ್ಲಿ ಶತಕ ಬಾರಿಸಿದ್ದರು.
- – ಐಪಿಎಲ್ ಪ್ಲೇಆಫ್‌ಗಳಲ್ಲಿ RCB ಆಟಗಾರನ ಅತ್ಯಧಿಕ ಸ್ಕೋರ್ ಕೂಡ ಇದಾಗಿದೆ. ಈ ಹಿಂದೆ ಕ್ರಿಸ್ ಗೇಲ್ ಅವರ 47 ಎಸೆತಗಳಲ್ಲಿ 89 ರನ್ಗಳಿಸಿದ್ದು ದಾಖಲೆಯಾಗಿತ್ತು. ಇದೀಗ 112 ರನ್ ಬಾರಿಸಿ ಯೂನಿವರ್ಸ್ ಬಾಸ್ ದಾಖಲೆಯನ್ನು ಮುರಿದು ರಜತ್ ಪಾಟಿದಾರ್ ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.