Rajat Patidar: ಇಡೀ ಪಂದ್ಯದ ಚಿತ್ರಣ ಬದಲಿಸಿದ್ದು ಇವರೇ..!

IPL 2026 RCB vs GT: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡವು 20 ಓವರ್​ಗಳಲ್ಲಿ 205 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಆರ್​ಸಿಬಿ ತಂಡ 18.5 ಓವರ್​ಗಳಲ್ಲಿ 206 ರನ್​ ಬಾರಿಸಿ 5 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

Rajat Patidar: ಇಡೀ ಪಂದ್ಯದ ಚಿತ್ರಣ ಬದಲಿಸಿದ್ದು ಇವರೇ..!
Rajat Patidar

Updated on: Apr 25, 2026 | 10:57 AM

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 34ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (GT) ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಭರ್ಜರಿ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್​ ತಂಡವು 20 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು 205 ರನ್​ ಕಲೆಹಾಕಿದ್ದರು. ಈ ಗುರಿಯನ್ನು ಆರ್​ಸಿಬಿ 18.5 ಓವರ್​ಗಳಲ್ಲಿ ಚೇಸ್ ಮಾಡಿ 5 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಭರ್ಜರಿ ಗೆಲುವಿನ ಬಳಿಕ ಮಾತನಾಡಿದ ಆರ್‌ಸಿಬಿ ತಂಡದ ನಾಯಕ ರಜತ್ ಪಾಟಿದಾರ್, ತಂಡದ ಸಂಘಟಿತ ಪ್ರದರ್ಶನ ಮತ್ತು ವಿಶೇಷವಾಗಿ ಬೌಲರ್‌ಗಳ ಸಮಯೋಚಿತ ಲಯದ ಬಗ್ಗೆ ಮೆಚ್ಚುಗೆಗಳನ್ನು ವ್ಯಕ್ತಪಡಿಸಿದ್ದಾರೆ.

ಆರ್​ಸಿಬಿ ಬೌಲರ್​ಗಳ ಭರ್ಜರಿ ಪ್ರದರ್ಶನದ ಬಗ್ಗೆ ಮಾತನಾಡಿದ ರಜತ್ ಪಾಟಿದಾರ್, “ಭುವನೇಶ್ವರ್ ಕುಮಾರ್ ಮತ್ತು ಹೇಝಲ್​ವುಡ್​ ಪಂದ್ಯದ ಆರಂಭದಲ್ಲಿ ಹಾಕಿದ ಲೈನ್ ಮತ್ತು ಲೆಂತ್ ಅದ್ಭುತವಾಗಿತ್ತು. ಮಧ್ಯಮ ಓವರ್‌ಗಳಲ್ಲಿ ಸುಯಶ್ ಶರ್ಮಾ ರನ್ ವೇಗಕ್ಕೆ ಬ್ರೇಕ್ ಹಾಕಿದರು.

ಅದರಲ್ಲೂ ಮುಖ್ಯವಾಗಿ ಡೆತ್ ಓವರ್‌ಗಳಲ್ಲಿ ರಾಸಿಖ್ ಸಲಾಮ್, ಭುವಿ ಮತ್ತು ಹೇಝಲ್​ವುಡ್​ ನಿಖರವಾದ ಯಾರ್ಕರ್ ಎಸೆಯುವ ಮೂಲಕ ಎದುರಾಳಿಗಳನ್ನು 200-205 ರನ್ ಆಸುಪಾಸಿನಲ್ಲಿ ಕಟ್ಟಿಹಾಕಿದರು. ಇದುವೇ ಪಂದ್ಯದ ಟರ್ನಿಂಗ್ ಪಾಯಿಂಟ್. ಹೀಗಾಗಿ ಈ ಗೆಲುವಿನ ಶ್ರೇಯಸ್ಸು ವೇಗಿಗಳಿಗೆ ಸಲ್ಲಬೇಕು ಎಂದು ರಜತ್ ಪಾಟಿದಾರ್ ಹೇಳಿದ್ದಾರೆ.

ಇನ್ನು 206 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ಪರ ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದರು. ಈ ಭರ್ಜರಿ ಬ್ಯಾಟಿಂಗ್ ಬಗ್ಗೆ ಮಾತನಾಡಿದ ಪಾಟಿದಾರ್,  ಜೇಕಬ್ ಬೆಥೆಲ್ ಮತ್ತು ಕೊಹ್ಲಿ ಉತ್ತಮ ಆರಂಭ ಒದಗಿಸಿದ್ದರು. ಆ ನಂತರ ದೇವದತ್ ಪಡಿಕ್ಕಲ್ ಅವರ ಆಟ ಅದ್ಭುತವಾಗಿತ್ತು. ಅವರ ಕ್ವಿಕ್‌ಫೈರ್ ಬ್ಯಾಟಿಂಗ್ ತಂಡಕ್ಕೆ ಅಗತ್ಯವಿತ್ತು. ಇಲ್ಲಿ ಕೊಹ್ಲಿ ಹಾಗೂ ಪಡಿಕ್ಕಲ್ ಪ್ರಚಂಡ ಬ್ಯಾಟಿಂಗ್ ಚೇಸಿಂಗ್​ ಅನ್ನು ಸುಲಭವನ್ನಾಗಿಸಿತು ಎಂದು ಪಾಟಿದಾರ್ ಅಭಿಪ್ರಾಯಪಟ್ಟಿದ್ದಾರೆ.

ಈ ಗೆಲುವಿನ ಹೊರತಾಗಿಯೂ ತಂಡದ ತಪ್ಪುಗಳನ್ನು ಸುಧಾರಿಸಿಕೊಳ್ಳಬೇಕಿದೆ. ಮಧ್ಯಮ ಓವರ್‌ಗಳಲ್ಲಿ ನಾವು ಬೆನ್ನುಬೆನ್ನಿಗೆ ವಿಕೆಟ್ ಕಳೆದುಕೊಂಡೆವು. ಇದು ಈ ಪಂದ್ಯದ ಪ್ರಮುಖ ಕಲಿಕೆಯಾಗಿದೆ. ಮುಂದಿನ ಪಂದ್ಯಗಳಲ್ಲಿ ಇಂತಹ ತಪ್ಪುಗಳು ಮರುಕಳಿಸದಂತೆ ನಾವು ಕೆಲಸ ಮಾಡಬೇಕಿದೆ.

ಮಧ್ಯಮ ಕ್ರಮಾಂಕದಲ್ಲಿ ಬ್ಯಾಕ್ ಟು ಬ್ಯಾಕ್ ವಿಕೆಟ್ ಕೈಚೆಲ್ಲಿರುವುದನ್ನು ಹೊರತುಪಡಿಸಿದರೆ, ನಮ್ಮ ತಂಡವು ಇಂದು ಸಹ ಅತ್ಯುತ್ತಮ ಪ್ರದರ್ಶನ ನೀಡಿದೆ. ಇದೇ ಪ್ರದರ್ಶನವನ್ನು ಮುಂದಿನ ಮ್ಯಾಚ್​ಗಳಲ್ಲೂ ಮುಂದುವರೆಸುವ ವಿಶ್ವಾಸವಿದೆ ಎಂದು ರಜತ್ ಪಾಟಿದಾರ್ ಹೇಳಿದ್ದಾರೆ.

ಇದನ್ನೂ ಓದಿ: IPL 2026: ಮುಖಕ್ಕೆ ಚೆಂಡು ಬಡಿದು ಯುವ ಆಟಗಾರನಿಗೆ ಗಂಭೀರ ಗಾಯ!

ಅಂದಹಾಗೆ ಗುಜರಾತ್ ಟೈಟಾನ್ಸ್ ವಿರುದ್ಧದ ಗೆಲುವಿನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಿದೆ. ಇನ್ನು ದ್ವಿತೀಯಾರ್ಧದಲ್ಲಿ ಆರ್​ಸಿಬಿ ತಂಡ ಮೂರು ಗೆಲುವು ದಾಖಲಿಸಿದರೆ ಪ್ಲೇಆಫ್ ಆಡುವುದು ಖಚಿತವಾಗಲಿದೆ.

 

 

Follow Us