ಇಂಡಿಯನ್ ಪ್ರೀಮಿಯರ್ ಲೀಗ್ 2023 ರಲ್ಲಿ (IPL 2023) ಶುಕ್ರವಾರ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ (CSK vs SRH) ನಡುವಣ ಪಂದ್ಯ ಕೂಡ ಹೈವೋಲ್ಟೇಜ್ನಿಂದ ಕೂಡಿತ್ತು. ಇದರಲ್ಲಿ ಎಂಎಸ್ ಧೋನಿ ಪಡೆ 7 ವಿಕೆಟ್ಗಳ ಅಮೋಘ ಗೆಲುವು ಸಾಧಿಸಿ ಪಾಯಿಂಟ್ ಟೇಬಲ್ನಲ್ಲಿ ಮೂರನೇ ಸ್ಥಾನಕ್ಕೇರಿದೆ. ಬ್ಯಾಟಿಂಗ್ನಲ್ಲಿ ಡೆವೋನ್ ಕಾನ್ವೆ ಮಿಂಚಿದರೆ, ಬೌಲಿಂಗ್ನಲ್ಲಿ ರವೀಂದ್ರ ಜಡೇಜಾ (Ravindra Jadeja) 4 ಓವರ್ಗೆ 22 ರನ್ ನೀಡಿ ಪ್ರಮುಖ 3 ವಿಕೆಟ್ ಕಿತ್ತು ಪಂದ್ಯಶ್ರೇಷ್ಠ ಬಾಚಿಕೊಂಡರು. ವಿಶೇಷ ಎಂದರೆ ಹೆಚ್ಚಾಗಿ ಪಂದ್ಯದ ಮಧ್ಯೆ ತಾಳ್ಮೆ ಕಳೆದುಕೊಳ್ಳದಿರುವ ಜಡೇಜಾ ಈ ಪಂದ್ಯದಲ್ಲಿ ಎದುರಾಳಿಯ ಬ್ಯಾಟರ್ ಮೇಲೆ ಕೋಪಗೊಂಡ ಘಟನೆ ನಡೆಯಿತು.
ಎಸ್ಆರ್ಹೆಚ್ ಬ್ಯಾಟಿಂಗ್ ಇನ್ನಿಂಗ್ಸ್ ವೇಳೆ 14ನೇ ಓವರ್ ಅನ್ನು ರವೀಂದ್ರ ಜಡೇಜಾ ಮಾಡಲು ಬಂದರು. ಕ್ರೀಸ್ನಲ್ಲಿ ಮಯಾಂಕ್ ಅಗರ್ವಾಲ್ ಇದ್ದರು. ಮಯಾಂಕ್ ಚೆಂಡನ್ನು ನೇರವಾಗಿ ಹೊಡೆಯಲು ಯತ್ನಿಸಿದರು. ಆದರೆ, ಸರಿಯಾಗಿ ಟೈಮ್ ಆಗದ ಕಾರಣ ಚೆಂಡು ಜಡೇಜಾ ಕಡೆ ಬಂತು. ಆದರೆ, ಜಡ್ಡು ಕ್ಯಾಚ್ ಡ್ರಾಪ್ ಮಾಡಿದರು. ವಿಶ್ವದ ಶ್ರೇಷ್ಠ ಫೀಲ್ಡರ್ಗಳಲ್ಲಿ ಒಬ್ಬರಾಗಿರುವ ಜಡೇಜಾ ಕ್ಯಾಚ್ ಕೈಚೆಲ್ಲುವುದು ತೀರಾ ಕಡಿಮೆ. ಈ ಬಾರಿ ಸುಲಭವಾಗಿ ಹಿಡಿಯಬಹುದಾಗಿದ್ದ ಕ್ಯಾಚ್ ಅನ್ನು ಜಡೇಜಾ ಮಿಸ್ ಮಾಡಲು ಕಾರಣ ಎದುರಾಳಿ ಬ್ಯಾಟರ್, ನಾನ್ಸ್ಟ್ರೈಕರ್ನಲ್ಲಿದ್ದ ಹೆನ್ರಿಚ್ ಕ್ಲಾಸೆನ್.
IPL 2023: 1 ರನ್ಗೆ 1 ಕೋಟಿ ಸಂಭಾವನೆ..! ಡೆಲ್ಲಿ ತಂಡಕ್ಕೆ ದುಬಾರಿಯಾದ ದುಬಾರಿ ಪ್ಲೇಯರ್
ಚೆಂಡು ನೇರವಾಗಿ ತನ್ನ ಕೈಗೆ ಬರುತ್ತಿರುವುದನ್ನು ಕಂಡ ಜಡೇಜಾ ಕ್ಯಾಚ್ಗೆಂದು ಎರಡು ಕೈಗಳನ್ನು ಜೋಡಿಸಿದರು. ಆದರೆ, ಇದೇ ಸಂದರ್ಭ ನಾನ್ಸ್ಟ್ರೈಕ್ನಲ್ಲಿದ್ದ ಸನ್ರೈಸರ್ಸ್ ಹೈದರಾಬಾದ್ ತಂಡದ ಬ್ಯಾಟರ್ ಹೆನ್ರಿಚ್ ಕ್ಲಾಸೆನ್ ಅಡ್ಡ ಬಂದರು. ಚೆಂಡು ಜಡೇಜಾ ಕೈಗೆ ಬಂದರೂ ಅದನ್ನು ಹಿಡಿದುಕೊಳ್ಳಲು ಸಾಧ್ಯವಾಗಲಿಲ್ಲ. ಕ್ಲಾಸೆನ್ ಅಡ್ಡ ಬಂದ ಪರಿಣಾಮ ಲಯಕಳೆದುಕೊಂಡು ಜಡ್ಡು ಕೆಳಕ್ಕೆ ಬಿದ್ದರು. ಇದರಿಂದ ಕೋಪಗೊಂಡ ಅವರು ಕ್ಲಾಸೆನ್ಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಇಲ್ಲಿದೆ ನೋಡಿ ಆ ವಿಡಿಯೋ.
— IPLT20 Fan (@FanIplt20) April 21, 2023
ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಹೈದರಾಬಾದ್ ಆರಂಭ ನಿಧಾನ ಗತಿಯಿಂದ ಕೂಡಿತ್ತು. 13 ಎಸೆತಗಳಿಂದ 18 ರನ್ ಮಾಡಿ ಬ್ರೂಕ್ ಪೆವಿಲಿಯನ್ ಸೇರಿಕೊಂಡರು. ದ್ವಿತೀಯ ವಿಕೆಟಿಗೆ ಅಭಿಷೇಕ್ ಶರ್ಮ-ರಾಹುಲ್ ತ್ರಿಪಾಠಿ 36 ರನ್ ಪೇರಿಸಿದರು. 26 ಎಸೆತಗಳಲ್ಲಿ, 3 ಬೌಂಡರಿ, 1 ಸಿಕ್ಸರ್ ಮೂಲಕ 34 ರನ್ ಮಾಡಿದ ಅಭಿಷೇಕ್ ತಂಡದ ಪರ ಗರಿಷ್ಠ ಮೊತ್ತ ಕಲೆಹಾಕಿದರು. ತ್ರಿಪಾಠಿ ಆಟ 21 ರನ್ಗೆ ಅಂತ್ಯವಾಯಿತು. ನಾಯಕ ಮಾರ್ಕ್‌ರಮ್ (12), ಕೀಪರ್ ಕ್ಲಾಸೆನ್ (17), ಜಾನ್ಸೆನ್ (ಅಜೇಯ 17) ಸಿಡಿಯಲು ವಿಫಲರಾದರು. ಎಸ್ಆರ್ಹೆಚ್ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 134 ರನ್ ಗಳಿಸಿತು. ಜಡೇಜಾ 3 ವಿಕೆಟ್ ಪಡೆದರು.
ಟಾರ್ಗೆಟ್ ಬೆನ್ನಟ್ಟಿದ ಚೆನ್ನೈಗೆ ಉತ್ತಮ ಆರಂಭ ದೊರೆಯಿತು. ಕಾನ್ವೆ ಮತ್ತು ಗಾಯಕ್ವಾಡ್ (35 ರನ್) 87 ರನ್ಗಳ ಜೊತೆಯಾಟ ಮಾಡಿದರು. ರಹಾನೆ 9 ರನ್ಗೆ ವಿಕೆಟ್ ಒಪ್ಪಿಸಿದರು. ಅಂಬಟಿ ರಾಯುಡು ಸಹ 9 ರನ್ಗೆ ಪೆವಿಲಿಯನ್ ದಾರಿ ಹಿಡಿದರು. ಒಂದೆಡೆ ವಿಕೆಟ್ ಹೋಗುತ್ತಿದ್ದರೂ ಕಾನ್ವೆ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. 57 ಎಸೆತಗಳಲ್ಲಿ 12 ಬೌಂಡರಿ ಮತ್ತು 1 ಸಿಕ್ಸ್ನಿಂದ ಅಜೇಯ 77 ರನ್ ಗಳಿಸಿ ತಂಡದ ಗೆಲುವಿನಲ್ಲಿ ಮುಖ್ಯ ಪಾತ್ರವಹಿಸಿದರು. ಸಿಎಸ್ಕೆ 18.4 ಓವರ್ನಲ್ಲಿ 3 ವಿಕೆಟ್ ನಷ್ಟಕ್ಕೆ 138 ರನ್ ಗಳಿಸಿ ಗೆಲುವು ಸಾಧಿಸಿತು. ಎಸ್ಆರ್ಹೆಚ್ ಪರ ಮಯಾಂಕ್ ಮಾರ್ಕಂಡೆ 2 ವಿಕೆಟ್ ಕಿತ್ತರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ