
ಐಪಿಎಲ್ 2026 ರ ಫೈನಲ್ (IPL 2026 Final) ಪಂದ್ಯ ಇದೇ ಭಾನುವಾರ ಸಂಜೆ 7:30 ಕ್ಕೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ (RCB vs GT) ನಡುವೆ ನಡೆಯಲಿದೆ. ಎರಡೂ ತಂಡಗಳು ತಮ್ಮ ಎರಡನೇ ಐಪಿಎಲ್ ಟ್ರೋಫಿಯನ್ನು ಎತ್ತುವ ಗುರಿಯೊಂದಿಗೆ ಕಣಕ್ಕಿಳಿಯುತ್ತಿವೆ. ಲೀಗ್ ಹಂತದಲ್ಲಿ ಅಗ್ರಸ್ಥಾನದಲ್ಲಿದ್ದ ಆರ್‌ಸಿಬಿ ಕ್ವಾಲಿಫೈಯರ್ -1 ರಲ್ಲಿ ಗುಜರಾತ್ ಮಣಿಸಿ ಫೈನಲ್ಗೇರಿತ್ತು. ಇತ್ತ ಗುಜರಾತ್ ಕ್ವಾಲಿಫೈಯರ್ -2 ರಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಸೋಲಿಸಿ ಫೈನಲ್‌ಗೆ ಪ್ರವೇಶಿಸಿದೆ. ಈ ಆವೃತ್ತಿಯಲ್ಲಿ ಎರಡೂ ತಂಡಗಳು ಮುಖಾಮುಖಿಯಾಗುತ್ತಿರುವುದು ಇದು ನಾಲ್ಕನೇ ಬಾರಿ. ಕಳೆದ ಮೂರು ಪಂದ್ಯಗಳಲ್ಲಿ ಆರ್‌ಸಿಬಿ ಎರಡು ಬಾರಿ ಗೆದ್ದಿದ್ದರೆ, ಗುಜರಾತ್ ಒಂದು ಪಂದ್ಯವನ್ನು ಗೆದ್ದಿದೆ. ಇನ್ನು ಫೈನಲ್ ಪಂದ್ಯವನ್ನು ಆಯೋಜಿಸುತ್ತಿರುವ ಅಹಮದಾಬಾದ್‌ನ ಮೋದಿ ಮೈದಾನದ ಪಿಚ್ ಯಾರಿಗೆ ಸಹಕಾರಿಯಾಗಲಿದೆ? ಪಂದ್ಯದ ದಿನದಂದು ಹವಾಮಾನ ಹೇಗಿರಲಿದೆ ಎಂಬುದನ್ನು ನೋಡುವುದಾದರೆ..
ಅಹಮದಾಬಾದ್ ಪಿಚ್ ಯಾರಿಗೆ ಸಹಕಾರಿ?
ವಿಶ್ವದ ಅತಿದೊಡ್ಡ ಕ್ರಿಕೆಟ್ ಮೈದಾನವಾಗಿರುವ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣವು ಬ್ಯಾಟಿಂಗ್ ಸ್ನೇಹಿ ಪಿಚ್ ಆಗಿದೆ. ಈ ಆವೃತ್ತಿಯಲ್ಲೇ ಈ ಮೈದಾನದಲ್ಲಿ ದೊಡ್ಡ ಸ್ಕೋರಿಂಗ್ ಪಂದ್ಯಗಳು ನಡೆದಿವೆ. ಆದಾಗ್ಯೂ ಆರಂಭದಲ್ಲಿ ವೇಗದ ಬೌಲರ್‌ಗಳು ಸ್ವಲ್ಪ ಬೌನ್ಸ್ ಪಡೆಯಬಹುದು. ಹಾಗೆಯೇ ದೊಡ್ಡ ಬೌಂಡರಿಗಳಿಂದಾಗಿ ಸ್ಪಿನ್ನರ್‌ಗಳು ಮಧ್ಯಮ ಓವರ್‌ಗಳಲ್ಲಿ ಸ್ವಲ್ಪ ಸಹಾಯವನ್ನು ಪಡೆಯಬಹುದು. ಒಟ್ಟಾರೆಯಾಗಿ, ಇದು ಹೆಚ್ಚಿನ ಸ್ಕೋರಿಂಗ್ ಪಂದ್ಯವಾಗಬಹುದು. ಆದರೆ ಸಂಜೆಯಾಗುತ್ತಿದ್ದಂತೆ ಇಬ್ಬನಿ ಪ್ರಮುಖ ಪಾತ್ರ ವಹಿಸುವುದರಿಂದ ಇದು ಚೇಸಿಂಗ್ ತಂಡಕ್ಕೆ ಅನುಕೂಲಕರವಾಗಬಹುದು. ಹೀಗಾಗಿ ಟಾಸ್ ಗೆದ್ದ ತಂಡ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಬಹುದು.
IPL 2026 Final: ಆರ್‌ಸಿಬಿ- ಗುಜರಾತ್ ನಡುವೆ ಫೈನಲ್ ಫೈಟ್; ಮುಖಾಮುಖಿ ದಾಖಲೆ ಹೇಗಿದೆ?
ಅಹಮದಾಬಾದ್‌ನ ಹವಾಮಾನ ವರದಿ
ಭಾನುವಾರ ಅಹಮದಾಬಾದ್‌ನಲ್ಲಿ ಮಳೆಯಾಗುವ ಸಾಧ್ಯತೆ ಕಡಿಮೆ. ಹವಾಮಾನ ಮುನ್ಸೂಚನೆಯ ಪ್ರಕಾರ, ಅಹಮದಾಬಾದ್‌ನಲ್ಲಿ ಸ್ಪಷ್ಟ ಹವಾಮಾನವಿರುತ್ತದೆ, ಗರಿಷ್ಠ ತಾಪಮಾನ 39 ಡಿಗ್ರಿ ಸೆಲ್ಸಿಯಸ್ ತಲುಪುವ ನಿರೀಕ್ಷೆಯಿದೆ. ಇದರರ್ಥ ಪಂದ್ಯದ ದಿನದಂದು ಮಳೆ ಬರುವ ಸಾಧ್ಯತೆಯೇ ಇಲ್ಲ. ಆದ್ದರಿಂದ, ಅಭಿಮಾನಿಗಳು ಸಂಪೂರ್ಣ ಪಂದ್ಯವನ್ನು ಆನಂದಿಸಬಹುದು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ