2025 ರ ಐಪಿಎಲ್ನ ನಾಲ್ಕನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ 210 ರನ್ಗಳ ಟಾರ್ಗೆಟ್ ನೀಡಿದೆ. ಲಕ್ನೋ ಕಲೆಹಾಕಿರುವ ಈ ಬೃಹತ್ ಮೊತ್ತಕ್ಕೆ ಪೂರನ್ ಹಾಗೂ ಮಾರ್ಷ್ ಕೂಡುಗೆಯ ಅಪಾರವಾಗಿತ್ತು. ಆದಾಗ್ಯೂ ಲಕ್ನೋ ತಂಡದ ಹೊಸ ನಾಯಕ ರಿಷಭ್ ಪಂತ್ ಉತ್ತಮ ಪ್ರದರ್ಶನ ನೀಡುತ್ತಾರೆಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಪಂತ್ ತಮ್ಮ ಚೊಚ್ಚಲ ಪಂದ್ಯದಲ್ಲೇ ಎಲ್ಲರ ಭರವಸೆಯನ್ನು ಹುಸಿಗೊಳಿಸಿದ್ದಾರೆ.
ವಾಸ್ತವವಾಗಿ ಸೀಸನ್ ಆರಂಭಕ್ಕೂ ಮುನ್ನ ನಡೆದಿದ್ದ ಮೆಗಾ ಹರಾಜಿನಲ್ಲಿ ಪಂತ್ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಮೊತ್ತಕ್ಕೆ ಅಂದರೆ ಬರೋಬ್ಬರಿ 27 ಕೋಟಿ ರೂ. ಪಡೆದು ಲಕ್ನೋ ತಂಡವನ್ನು ಸೇರಿಕೊಂಡಿದ್ದರು. ತಂಡವನ್ನು ಸೇರಿದ್ದ ಬಳಿಕ ಪಂತ್ಗೆ ನಾಯಕತ್ವವನ್ನು ವಹಿಸಲಾಗಿತ್ತು. ವಾಸ್ತವವಾಗಿ ಈ ಹಿಂದೆ ತಂಡದ ನಾಯಕನಾಗಿದ್ದ ರಾಹುಲ್ ಬದಲಿಯಾಗಿ ಹಾಗೂ ರಾಹುಲ್ಗೆ ಟಕ್ಕರ್ ನೀಡುವ ಸಲುವಾಗಿಯೇ ಲಕ್ನೋ ಫ್ರಾಂಚೈಸಿ ಮತ್ತೊಬ್ಬ ವಿಕೆಟ್ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ರನ್ನು ಅತ್ಯಧಿಕ ಮೊತ್ತ ನೀಡಿ ಖರೀದಿಸಿದೆ ಎಂದು ಹೇಳಲಾಗುತ್ತಿತ್ತು.
Match 4. WICKET! 13.4: Rishabh Pant 0(6) ct Faf Du Plessis b Kuldeep Yadav, Lucknow Super Giants 161/3 #TATAIPL2025 #DCvLSG #TATAIPL #IPL2025 #riahabhpant pic.twitter.com/PZ8XPQi2Uf
— Shailesh Gautam (@Shaileshgautam0) March 24, 2025
ವಾಸ್ತವವಾಗಿ ಕಳೆದ ಆವೃತ್ತಿಯಲ್ಲಿ ಲಕ್ನೋ ತಂಡದ ನಾಯಕತ್ವ ಕೆಎಲ್ ರಾಹುಲ್ ಕೈನಲ್ಲಿತ್ತು. ಈ ಸೀಸನ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಲಕ್ನೋ ತಂಡ ಹೀನಾಯವಾಗಿ ಸೋತಿತ್ತು. ಅದರಲ್ಲೂ ಹೈದರಾಬಾದ್ ತಂಡ ಮೈದಾನದಲ್ಲಿ ರನ್ಗಳ ಮಳೆ ಹರಿಸಿತ್ತು. ಈ ಪಂದ್ಯ ಮುಗಿದ ಬಳಿಕ ಲಕ್ನೋ ತಂಡದ ಮಾಲೀಕ ಸಂಜೀವ್ ಗೋಯಂಕಾ ಮೈದಾನದಲ್ಲೇ ನಾಯಕ ರಾಹುಲ್ರನ್ನು ತರಾಟೆಗೆ ತೆಗೆದುಕೊಂಡಿದ್ದರು. ಬಹಿರಂಗವಾಗಿಯೇ ರಾಹುಲ್ರನ್ನು ನಿಂದಿಸಿದ್ದರು. ಇದರಿಂದ ಬೇಸರಗೊಂಡಿದ್ದ ರಾಹುಲ್ ಹರಾಜಿಗೂ ಮುನ್ನ ತಂಡವನ್ನು ತೊರೆದಿದ್ದರು. ಈ ನಡುವೆ ಅವರನ್ನು ತಂಡದಲ್ಲೇ ಉಳಿಸಿಕೊಳ್ಳಲು ಪ್ರಯತ್ನ ಮಾಡಲಾಗಿತ್ತಾದರೂ ರಾಹುಲ್ ತಂಡದಲ್ಲಿ ಉಳಿದುಕೊಂಡಿರಲಿಲ್ಲ.
ಆ ಸಂದರ್ಭದಲ್ಲಿ ಲಕ್ನೋ ಮಾಲೀಕ ಸಂಜೀವ್ ಗೋಯಂಕಾ ಕೂಡ ರಾಹುಲ್ ವಿರುದ್ಧ ಪರೋಕ್ಷವಾಗಿ ಹರಿಹಾಯ್ದಿದ್ದರು. ಆ ನಂತರ ನಡೆದಿದ್ದ ಮೆಗಾ ಹರಾಜಿನಲ್ಲಿ ರಾಹುಲ್ಗೆ ಟಕ್ಕರ್ ನೀಡಲೆಂದೇ ಸಂಜೀವ್, ಪಂತ್ರನ್ನು ಅತ್ಯಧಿಕ ಮೊತ್ತ ನೀಡಿ ಖರೀದಿಸಿದ್ದರು. ಆದರೆ ಪಂತ್ ಆಡಿದ ಮೊದಲ ಪಂದ್ಯದಲ್ಲೇ ಶೂನ್ಯಕ್ಕೆ ಔಟಾಗಿದ್ದಾರೆ. ಹೀಗಾಗಿ ಪಂತ್ ಸೊನ್ನೆಗೆ ಔಟಾಗಿದ್ದನ್ನು ಟ್ರೋಲ್ ಮಾಡಿರುವ ಫ್ಯಾನ್ಸ್, ಪಂತ್ ಡ್ರೆಸಿಂಗ್ ರೂಂಗೆ ಮರಳಿದ ಬಳಿಕ ಮಾಲೀಕನಿಂದ ಮಂಗಳಾರತಿ ಕಾದಿದೆ ಎಂದಿದ್ದಾರೆ.
ಈ ಪಂದ್ಯದಲ್ಲಿ ಪಂತ್ ನಿರಾಶೆ ಮೂಡಿಸಿದರಾದರೂ ಉಳಿದ ಆಟಗಾರರ ಭರ್ಜರಿ ಬ್ಯಾಟಿಂಗ್ ಮಾಡಿದರು. ಆರಂಭಿಕನಾಗಿ ಕಣಕ್ಕಿಳಿದಿದ್ದ ಮಾರ್ಷ್ 36 ಎಸೆತಗಳಲ್ಲಿ 6 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ 72 ರನ್ ಬಾರಿಸಿದರೆ, ನಿಕೋಲಸ್ ಪೂರನ್ ಕೂಡ 30 ಎಸೆತಗಳಲ್ಲಿ 6 ಬೌಂಡರಿ ಹಾಗೂ 7 ಸಿಕ್ಸರ್ಗಳ ಸಹಾಯದಿಂದ 75ರನ್ ಸಿಡಿಸಿದರು. ಅಂತಿಮವಾಗಿ ಲಕ್ನೋ ತಂಡ 20 ಓವರ್ಗಳ ಅಂತ್ಯಕ್ಕೆ 209 ರನ್ ಕಲೆಹಾಕಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ