
ಸೌತ್ ಆಫ್ರಿಕಾ, ಝಿಂಬಾಬ್ವೆ ಮತ್ತು ನಮೀಬಿಯಾ ಜಂಟಿಯಾಗಿ ಆಯೋಜಿಸಲಿರುವ 2027ರ ಏಕದಿನ ವಿಶ್ವಕಪ್‌ಗೆ ಭಾರತ ತಂಡ ಹೇಗಿರಬೇಕೆಂದು ಟೀಮ್ ಇಂಡಿಯಾದ ಮಾಜಿ ಆಟಗಾರ ರಾಬಿನ್ ಉತ್ತಪ್ಪ ತಿಳಿಸಿದ್ದಾರೆ. ಈ ತಂಡದಲ್ಲಿ ಅನುಭವಿ ಆಟಗಾರರೊಂದಿಗೆ ಯುವ ಆಟಗಾರರನ್ನೂ ಆಯ್ಕೆ ಮಾಡಿರುವುದು ವಿಶೇಷವಾಗಿದೆ.
ವಯಸ್ಸಿನ ಲೆಕ್ಕಾಚಾರ ಬದಿಗಿಟ್ಟು ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರಂತಹ ಹಿರಿಯ ದಿಗ್ಗಜರೇ 2027ರ ವಿಶ್ವಕಪ್‌ನಲ್ಲೂ ಭಾರತದ ಶಕ್ತಿಯಾಗಲಿದ್ದಾರೆ ಎಂದು ಉತ್ತಪ್ಪ ನಂಬಿದ್ದಾರೆ. ಇವರೊಂದಿಗೆ ಶುಭ್‌ಮನ್ ಗಿಲ್ ಮತ್ತು ಶ್ರೇಯಸ್ ಅಯ್ಯರ್ ಮಧ್ಯಮ ಕ್ರಮಾಂಕದ ಜವಾಬ್ದಾರಿ ಹೊರಲಿದ್ದಾರೆ.
ವಿಕೆಟ್ ಕೀಪರ್ ಸ್ಥಾನಕ್ಕಾಗಿ ಕನ್ನಡಿಗ ಕೆ.ಎಲ್. ರಾಹುಲ್ ಮತ್ತು ಕೇರಳದ ಸ್ಫೋಟಕ ಬ್ಯಾಟರ್ ಸಂಜು ಸ್ಯಾಮ್ಸನ್ ಇಬ್ಬರಿಗೂ ಉತ್ತಪ್ಪ ಮಣೆ ಹಾಕಿದ್ದಾರೆ. ರಾಹುಲ್ ಮಧ್ಯಮ ಕ್ರಮಾಂಕಕ್ಕೆ ಸ್ಥಿರತೆ ನೀಡಿದರೆ, ಸಂಜು ಸ್ಯಾಮ್ಸನ್ ಯಾವುದೇ ಕ್ರಮಾಂಕದಲ್ಲೂ ಕಣಕ್ಕಿಳಿದು ಪಂದ್ಯದ ಚಿತ್ರಣ ಬದಲಿಸಬಲ್ಲ ಎಕ್ಸ್-ಫ್ಯಾಕ್ಟರ್ ಆಗಿ ಗುರುತಿಸಿಕೊಂಡಿದ್ದಾರೆ.
ಉತ್ತಪ್ಪ ಆಯ್ಕೆ ಮಾಡಿರುವ ತಂಡದಲ್ಲಿ ಜಡ್ಡು-ಅಕ್ಷರ್ ಜೋಡಿ ಮತ್ತೆ ಒಂದಾಗಿದೆ. ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ಇಬ್ಬರೂ ಎಡಗೈ ಸ್ಪಿನ್ ಜೊತೆಗೆ ಬ್ಯಾಟಿಂಗ್ ಆಳವನ್ನು ಹೆಚ್ಚಿಸಲಿದ್ದಾರೆ. ಇವರೊಂದಿಗೆ ಹಾರ್ದಿಕ್ ಪಾಂಡ್ಯ ಪ್ರಮುಖ ವೇಗದ ಆಲ್‌ರೌಂಡರ್ ಆಗಿ ತಂಡದ ಸಮತೋಲನ ಕಾಯ್ದುಕೊಳ್ಳಲಿದ್ದಾರೆ ಎಂದು ರಾಬಿನ್ ಉತ್ತಪ್ಪ ತಿಳಿಸಿದ್ದಾರೆ.
ಈ ತಂಡದ ಅತ್ಯಂತ ದೊಡ್ಡ ಹೈಲೈಟ್ ಎಂದರೆ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರ ಆಯ್ಕೆ. ದೇಶಿ ಕ್ರಿಕೆಟ್‌ನಲ್ಲಿ ಸಣ್ಣ ವಯಸ್ಸಿಗೆ ಭಾರಿ ಸದ್ದು ಮಾಡಿರುವ ಈ ಎಡಗೈ ಬ್ಯಾಟರ್‌ನನ್ನು ತಂಡದಲ್ಲಿಟ್ಟುಕೊಳ್ಳುವ ಮೂಲಕ ಉತ್ತಪ್ಪ ಭವಿಷ್ಯದ ತಾರೆಗೆ ಮಣೆ ಹಾಕಿದ್ದಾರೆ.
ವೇಗದ ಬೌಲಿಂಗ್ ಜವಾಬ್ದಾರಿಯನ್ನು ಜಸ್ಪ್ರೀತ್ ಬುಮ್ರಾ ಮುನ್ನಡೆಸಲಿದ್ದು, ಅವರಿಗೆ ಮೊಹಮ್ಮದ್ ಸಿರಾಜ್ ಮತ್ತು ಎಡಗೈ ವೇಗಿ ಅರ್ಷದೀಪ್ ಸಿಂಗ್ ಸಾಥ್ ನೀಡಲಿದ್ದಾರೆ. ಹಾಗೆಯೇ ಹಿರಿಯ ಸ್ವಿಂಗ್ ಮಾಂತ್ರಿಕ ಭುವನೇಶ್ವರ ಕುಮಾರ್ ಅವರಿಗೆ ಉತ್ತಪ್ಪ ತಂಡದಲ್ಲಿ ಸ್ಥಾನ ನೀಡಿದ್ದಾರೆ. ಇನ್ನು ಪ್ರಮುಖ ಸ್ಪಿನ್ನರ್ ಕುಲ್ದೀಪ್ ಯಾದವ್ ಅವರನ್ನು ಆಯ್ಕೆ ಮಾಡಿದ್ದಾರೆ.
ಇದನ್ನೂ ಓದಿ: ಇಬ್ಬರಿಗೂ 5 ವಿಕೆಟ್: ಚೆಂಡು ಕತ್ತರಿಸಿ ಹಂಚಿಕೊಂಡ ಬೌಲರ್ಗಳು!
ರಾಬಿನ್ ಉತ್ತಪ್ಪ ಅವರ ಭಾರತ ಏಕದಿನ ವಿಶ್ವಕಪ್ ತಂಡ: ರೋಹಿತ್ ಶರ್ಮಾ, ಶುಭ್‌ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ವೈಭವ್ ಸೂರ್ಯವಂಶಿ, ಕೆ.ಎಲ್. ರಾಹುಲ್, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಭುವನೇಶ್ವರ ಕುಮಾರ್, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.