
ಮುಂದಿನ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್‌ಗಾಗಿ ಟೀಂ ಇಂಡಿಯಾ ಈಗಿನಿಂದಲೇ ತನ್ನ ತಯಾರಿಯನ್ನು ಶುರು ಮಾಡಿದೆ. ಹೀಗಾಗಿ ವಿಶ್ವಕಪ್ ತಂಡದಲ್ಲಿ ಯಾರಿಗೆಲ್ಲ ಸ್ಥಾನ ನೀಡಬೇಕು ಎಂಬುದರ ಬಗ್ಗೆ ಚರ್ಚೆಗಳು ಶುರುವಾಗಿವೆ. ಅದರಲ್ಲೂ ಅನುಭವಿ ಆರಂಭಿಕ ರೋಹಿತ್ ಶರ್ಮಾರನ್ನು ಏಕದಿನ ವಿಶ್ವಕಪ್‌ನಲ್ಲಿ ಆಡಿಸಲಾಗುತ್ತದೆಯೇ ಎಂಬ ಪ್ರಶ್ನೆ ಆಗಾಗ್ಗೆ ಮುನ್ನಲೆಗೆ ಬರುತ್ತಿದೆ. ಆದರೆ ಬಿಸಿಸಿಐ ಮಾತ್ರ ಈ ಬಗ್ಗೆ ಇದುವರೆಗೆ ಯಾವುದೇ ಖಚಿತ ಉತ್ತರ ನೀಡಿಲ್ಲ. ಇದೀಗ ಮಾಜಿ ನಾಯಕ ರೋಹಿತ್ ಶರ್ಮಾರನ್ನು ಈ ಬಗ್ಗೆ ಪ್ರಶ್ನೆ ಕೇಳಲಾಗಿದೆ. ಇದಕ್ಕೆ ಉತ್ತರಿಸಿರುವ ರೋಹಿತ್ ಅದಕ್ಕಿನ್ನು ಸಾಕಷ್ಟು ಸಮಯವಿದೆ. ವಿಶ್ವಕಪ್ ಹತ್ತಿರ ಬಂದಾಗ ಆ ಬಗ್ಗೆ ಚಿಂತಿಸುತ್ತೇನೆ ಎಂದಿದ್ದಾರೆ.
ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರೇಕ್ಷಕರ ಪ್ರಶ್ನೆಗಳಿಗೆ ರೋಹಿತ್ ಉತ್ತರಿಸಿದರು. ಈ ಸಂದರ್ಭದಲ್ಲಿ, ಮುಂದಿನ ವರ್ಷ ಅಕ್ಟೋಬರ್‌ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲಿ ಆಡುತ್ತೀರಾ ಎಂಬ ಪ್ರಶ್ನೆಯನ್ನು ಹಿಟ್‌ಮ್ಯಾನ್ ಮುಂದಿಡಲಾಯಿತು. ಇದಕ್ಕೆ ಉತ್ತರಿಸಿದ ರೋಹಿತ್, ‘ಅಕ್ಟೋಬರ್ 2027 ಬಹಳ ದೂರದಲ್ಲಿದೆ. ಹೀಗಾಗಿ ನಾವು ಅದರ ಬಗ್ಗೆ ನಂತರ ನೋಡೋಣ ಎಂದು ಉತ್ತರಿಸಿದರು. ಏಕದಿನ ವಿಶ್ವಕಪ್‌ಗೆ ಇನ್ನೂ 13 ತಿಂಗಳುಗಳು ಉಳಿದಿವೆ. ಇದರೊಂದಿಗೆ, ಫಾರ್ಮ್ ಮತ್ತು ಫಿಟ್‌ನೆಸ್ ವಿಷಯದಲ್ಲಿ ಏನು ಬೇಕಾದರೂ ಆಗಬಹುದು. ಭವಿಷ್ಯದಲ್ಲಿ ಏನಾಗುತ್ತದೆ ಎಂದು ಯಾರೂ ಹೇಳಲು ಸಾಧ್ಯವಿಲ್ಲ. ಇದರ ಜೊತೆಗೆ ರೋಹಿತ್ ಶರ್ಮಾ ಇದೀಗ ಈ ರೀತಿಯ ಉತ್ತರ ನೀಡಿರುವುದು ಸಾಕಷ್ಟು ಗೊಂದಲ ಮೂಡಿಸಿದೆ. ಕಳೆದ ವರ್ಷ ಮಾರ್ಚ್‌ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ ನಂತರ ರೋಹಿತ್ ಅವರನ್ನು ನಾಯಕತ್ವದಿಂದ ತೆಗೆದುಹಾಕಲಾಯಿತು. ಅದಾದ ಬಳಿಕ ರೋಹಿತ್ ಅವರ ವೃತ್ತಿಜೀವನದ ಬಗ್ಗೆ ಊಹಾಪೋಹಗಳು ಆಗಾಗ್ಗೆ ಹುಟ್ಟಿಕೊಳ್ಳುತ್ತಲೇ ಇವೆ.
ರೋಹಿತ್ ಅವರ ಇತ್ತೀಚಿನ ಹೇಳಿಕೆಯನ್ನು ನೋಡಿದರೆ, ಮುಂದಿನ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲಿ ಆಡುವ ಬಗ್ಗೆ ಅವರು ಇನ್ನೂ ನಿರ್ಧರಿಸಿಲ್ಲ ಎಂದು ತೋರುತ್ತದೆ. ಅವರು ಟೆಸ್ಟ್ ಮತ್ತು ಟಿ20 ಸ್ವರೂಪಗಳಿಂದ ನಿವೃತ್ತಿ ಘೋಷಿಸಿದ್ದರೂ, ಏಕದಿನ ಸ್ವರೂಪದಲ್ಲಿ ಮಾತ್ರ ಆಡುತ್ತಿದ್ದಾರೆ. ಅನಿರೀಕ್ಷಿತವಾಗಿ ಏಕದಿನ ನಾಯಕತ್ವದಿಂದ ಅವರನ್ನು ತೆಗೆದುಹಾಕಲಾದ ನಂತರ ರೋಹಿತ್ ಅವರ ಭವಿಷ್ಯದ ಬಗ್ಗೆ ಊಹಾಪೋಹಗಳು ಪ್ರಾರಂಭವಾಗಿವೆ. ಮುಂದಿನ ವರ್ಷ ದಕ್ಷಿಣ ಆಫ್ರಿಕಾ, ನಮೀಬಿಯಾ ಮತ್ತು ಜಿಂಬಾಬ್ವೆಯಲ್ಲಿ ವಿಶ್ವಕಪ್ ನಡೆಯಲಿದೆ. ಆದಾಗ್ಯೂ, ರೋಹಿತ್ ಶರ್ಮಾ ಆಡುತ್ತಾರೋ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ.
ರೋಹಿತ್ ಶರ್ಮಾ ಭವಿಷ್ಯದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಬಿಸಿಸಿಐ
ಈ ನಡುವೆ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಈ ಹಿಂದೆ ರೋಹಿತ್ ಅವರ ಭವಿಷ್ಯದ ಕುರಿತಾದ ಊಹಾಪೋಹಗಳಿಗೆ ಪ್ರತಿಕ್ರಿಯಿಸಿ, ರೋಹಿತ್ ಅದ್ಭುತವಾಗಿ ಆಡುತ್ತಿದ್ದರೆ, ಹೀಗಿರುವಾಗ ಗೊಂದಲ ಏಕೆ. ನಾನು ಸುಳ್ಳು ಸುದ್ದಿಗಳಿಗೆ ಪ್ರತಿಕ್ರಿಯಿಸುವುದಿಲ್ಲ ಎಂದಿದ್ದರು. ರೋಹಿತ್ ಏಕದಿನ ಮಾದರಿಯಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಅವರು ಇನ್ನೂ ಫಿಟ್ ಆಗಿದ್ದಾರೆ. ಕಳೆದ ಮಾರ್ಚ್‌ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತವನ್ನು ಗೆಲುವಿನತ್ತ ಕೊಂಡೊಯ್ದರು. ನಂತರ ಜುಲೈನಲ್ಲಿ ನಡೆದ ಏಕದಿನ ಪಂದ್ಯ ರೋಹಿತ್ ಅವರ ಕೊನೆಯ ಪಂದ್ಯ ಎಂಬ ಪ್ರಚಾರವಿತ್ತು. ಇದರಿಂದಾಗಿ, ಬಿಸಿಸಿಐ ಕಾರ್ಯದರ್ಶಿ ಅಂತಿಮವಾಗಿ ಪ್ರತಿಕ್ರಿಯಿಸಬೇಕಾಯಿತು. ವೃತ್ತಿಜೀವನದ ಬಗ್ಗೆ ಎಲ್ಲಾ ಊಹಾಪೋಹಗಳಿದ್ದರೂ, ರೋಹಿತ್ ಪ್ರತಿಕ್ರಿಯಿಸದೆ ಮೌನವಾಗಿದ್ದಾರೆ.
Published On - 7:47 pm, Fri, 11 September 26