AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಇಕ್ಕಟ್ಟಿಗೆ ಸಿಲುಕಿದ ರೋಹಿತ್ ಶರ್ಮಾ

Champions Trophy 2025: ನಾಯಕ ರೋಹಿತ್ ಶರ್ಮಾಗೆ ಚಾಂಪಿಯನ್ಸ್ ಟ್ರೋಫಿಗಾಗಿ ತಂಡ ಆಯ್ಕೆ ಮಾಡುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ಇಬ್ಬರೂ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಜಡೇಜಾ ರಣಜಿ ಟ್ರೋಫಿಯಲ್ಲಿ ಅದ್ಭುತ ಬೌಲಿಂಗ್ ಮಾಡಿದರೆ, ಅಕ್ಷರ್ ಇಂಗ್ಲೆಂಡ್ ವಿರುದ್ಧದ ಟಿ20 ಪಂದ್ಯಗಳಲ್ಲಿ ಉತ್ತಮವಾಗಿ ಆಡಿದ್ದಾರೆ. ಇಬ್ಬರೂ ಸ್ಪಿನ್ ಆಲ್-ರೌಂಡರ್ ಆಗಿರುವುದರಿಂದ ರೋಹಿತ್ ಯಾರನ್ನು ಆಯ್ಕೆ ಮಾಡುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ.

ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಇಕ್ಕಟ್ಟಿಗೆ ಸಿಲುಕಿದ ರೋಹಿತ್ ಶರ್ಮಾ
ರೋಹಿತ್ ಶರ್ಮಾ
ಪೃಥ್ವಿಶಂಕರ
|

Updated on: Jan 26, 2025 | 9:55 PM

Share

ಸದ್ಯ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾಗೆ ಯಾವುದು ಅಂದುಕೊಂಡಂತೆ ನಡೆಯುತ್ತಿಲ್ಲ. ಒಂದೆಡೆ ಆಟಗಾರನಾಗಿ ಸತತ ವೈಫಲ್ಯಗಳಿಂದ ಕಂಗೆಟ್ಟಿರುವ ರೋಹಿತ್, ಇತ್ತ ನಾಯಕನಾಗಿಯೂ ಮೈದಾನದಲ್ಲಿ ಪರಿಣಾಮಕಾರಿಯಾಗಿಲ್ಲ. ಇದೆಲ್ಲದರ ನಡುವೆ ರೋಹಿತ್​ಗೆ ಚಾಂಪಿಯನ್ಸ್ ಟ್ರೋಫಿಯಂತಹ ಬಿಗ್ ಟೂರ್ನಿಯನ್ನು ಗೆಲ್ಲುವಂತಹ ಒತ್ತಡ ಕೂಡ ಎದುರಾಗಿದೆ. ಇದರ ಜೊತೆಗೆ ಈ ಟೂರ್ನಿಗೂ ಮುನ್ನ ರೋಹಿತ್‌ಗೆ ಅವರ ಫಾರ್ಮ್ ಮಾತ್ರವಲ್ಲದೆ, ಕೆಲವು ಪ್ರಮುಖ ನಿರ್ಧಾರಗಳು ಸಹ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿವೆ. ಅಂತಹ ಒಂದು ನಿರ್ಧಾರವೆಂದರೆ ಇಬ್ಬರು ಆಟಗಾರರಲ್ಲಿ ಒಬ್ಬರ ಆಯ್ಕೆ.

ರೋಹಿತ್ ಯಾರಿಗೆ ಅವಕಾಶ ಕೊಡುತ್ತಾರೆ?

ಚಾಂಪಿಯನ್ಸ್ ಟ್ರೋಫಿಗೆ ಟೀಂ ಇಂಡಿಯಾ ತಂಡವನ್ನು ಈಗಾಗಲೇ ಪ್ರಕಟಿಸಲಾಗಿದೆ. ಆದಾಗ್ಯೂ, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಅವರ ಫಿಟ್ನೆಸ್ ಬಗ್ಗೆ ಇನ್ನೂ ಪ್ರಶ್ನೆಗಳು ಉಳಿದಿದ್ದು, ಮುಂದಿನ ದಿನಗಳಲ್ಲಿ ಈ ಬಗ್ಗೆ ಖಚಿತತೆ ಸಿಗಲಿದೆ. ಇದರ ಹೊರತಾಗಿ ಇದೀಗ ಚಾಂಪಿಯನ್ಸ್ ಟ್ರೋಫಿ ವೇಳೆ ಪ್ಲೇಯಿಂಗ್ ಇಲೆವೆನ್​ನಲ್ಲಿ ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ಪೈಕಿ ಯಾರನ್ನು ಆಯ್ಕೆ ಮಾಡಬೇಕು ಎಂಬ ಹೊಸ ಪ್ರಶ್ನೆ ರೋಹಿತ್ ಹಾಗೂ ಕೋಚ್ ಗೌತಮ್ ಗಂಭೀರ್ ಮುಂದೆ ಎದ್ದಿದೆ.

ಈ ಟೂರ್ನಿಗೆ ಟೀಂ ಇಂಡಿಯಾದಲ್ಲಿ 4 ಸ್ಪಿನ್ನರ್‌ಗಳು ಸ್ಥಾನ ಪಡೆದಿದ್ದು, ಅಕ್ಷರ್ ಮತ್ತು ಜಡೇಜಾ ಹೊರತುಪಡಿಸಿ, ವಾಷಿಂಗ್ಟನ್ ಸುಂದರ್ ಮತ್ತು ಕುಲ್ದೀಪ್ ಯಾದವ್ ಸ್ಥಾನ ಪಡೆದಿರುವುದರಿಂದ ಈ ಪ್ರಶ್ನೆ ಉದ್ಭವಿಸಿದೆ. ಈಗ ತಂಡವು 3 ಸ್ಪಿನ್ನರ್‌ಗಳನ್ನು ಆಡಲು ಯೋಚಿಸಿದರೆ ಸುಂದರ್ ಮತ್ತು ಕುಲ್ದೀಪ್ ಆಡುವುದು ಖಚಿತವಾಗಿದೆ ಏಕೆಂದರೆ ಇಬ್ಬರೂ ವಿಭಿನ್ನ ರೀತಿಯ ಸ್ಪಿನ್ನರ್‌ಗಳು. ಅಂತಹ ಪರಿಸ್ಥಿತಿಯಲ್ಲಿ, ಅಕ್ಷರ್ ಮತ್ತು ಜಡೇಜಾ ನಡುವೆ ಒಬ್ಬರನ್ನು ಆಯ್ಕೆ ಮಾಡುವ ಬಗ್ಗೆ ರೋಹಿತ್ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಏಕೆಂದರೆ ಇಬ್ಬರೂ ಒಂದೇ ರೀತಿಯ ಸ್ಪಿನ್-ಆಲ್ರೌಂಡರ್‌ಗಳು.

ಇಬ್ಬರಿಂದ ಅದ್ಭುತ ಪ್ರದರ್ಶನ

ಈ ಇಬ್ಬರೂ ಆಟಗಾರರು ಇತ್ತೀಚೆಗೆ ತಮ್ಮ ಪ್ರದರ್ಶನದೊಂದಿಗೆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಒಂದೆಡೆ, ಜಡೇಜಾ ರಣಜಿ ಟ್ರೋಫಿ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ 5 ಕ್ಕೂ ಹೆಚ್ಚು ವಿಕೆಟ್‌ಗಳನ್ನು (ಒಟ್ಟು 12 ವಿಕೆಟ್‌ಗಳು) ಪಡೆದಿದ್ದರೆ, ಇತ್ತ ಇಂಗ್ಲೆಂಡ್ ವಿರುದ್ಧ ಆಡಿದ ಎರಡೂ ಟಿ20 ಪಂದ್ಯಗಳಲ್ಲಿ ಅಕ್ಷರ್ ತಲಾ 2 ವಿಕೆಟ್ ಕಬಳಿಸಿದ್ದು, ಪರಿಣಾಮಕಾರಿಯಾಗಿ ಬೌಲಿಂಗ್ ಮಾಡಿದ್ದಾರೆ. ಇಬ್ಬರೂ ಆಟಗಾರರ ಪ್ರದರ್ಶನವು ಏಕದಿನದಿಂದ ವಿಭಿನ್ನ ಸ್ವರೂಪದಲ್ಲಿ ಬಂದಿದ್ದರೂ, ಅವರು ತಮ್ಮ ಫಾರ್ಮ್‌ ಅನ್ನು ನಾಯಕ ಮತ್ತು ಕೋಚ್ ಮುಂದೆ ಪ್ರಸ್ತುತಪಡಿಸಿದ್ದಾರೆ. ಹೀಗಾಗಿ ರೋಹಿತ್ ಮತ್ತು ಕೋಚ್ ಗಂಭೀರ್ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ