
ಪ್ರತಿಭಾವಂತ ಕ್ರಿಕೆಟಿಗ ಸರ್ಫರಾಜ್ ಖಾನ್ ಭಾರತ ತಂಡದ ಪರ ಕೊನೆಯ ಪಂದ್ಯವಾಡಿ ಸುಮಾರು ಎರಡು ವರ್ಷಗಳಾಗಿವೆ. ದೇಶೀಯ ಕ್ರಿಕೆಟ್‌ನಲ್ಲಿ ಸತತವಾಗಿ ಉತ್ತಮ ಪ್ರದರ್ಶನ ನೀಡುತ್ತಿರುವ ಸರ್ಫರಾಜ್‌ಗೆ ರಾಷ್ಟ್ರೀಯ ತಂಡದಲ್ಲಿ ಅವಕಾಶ ಸಿಗುತ್ತಿಲ್ಲ. ಇದರಿಂದ ಕುಗ್ಗಿಹೋಗಿರುವ ಸರ್ಫರಾಜ್ ತಮ್ಮ ಅಳಲು ತೋಡಿಕೊಂಡಿದ್ದಾರೆ. ಉತ್ತಮ ಪ್ರದರ್ಶನದ ಹೊರತಾಗಿಯೂ ಟೀಂ ಇಂಡಿಯಾದಲ್ಲಿ ಮತ್ತೆ ಅವಕಾಶ ಸಿಗದಿರುವುದು ಬೇಸರ ತಂದಿದೆ ಎಂದಿರುವ ಸರ್ಫರಾಜ್ ಕೆಲವೊಮ್ಮೆ ಇಷ್ಟೊಂದು ಕಷ್ಟಪಟ್ಟು ಕ್ರಿಕೆಟ್ ಆಡುವುದರ ಅಗತ್ಯವೇನಿದೆ ಎಂಬ ಪ್ರಶ್ನೆ ತಮ್ಮ ಮನಸ್ಸಿನಲ್ಲೂ ಮೂಡಿರುವುದಾಗಿಯೂ ಹೇಳಿದ್ದಾರೆ.
ರೈಲ್ವೇಸ್ ವಿರುದ್ಧ ಆರಂಭವಾದ ರಣಜಿ ಟ್ರೋಫಿ ಪಂದ್ಯದಲ್ಲಿ ಮೊದಲ ದಿನ 55 ರನ್ ಗಳಿಸಿದ ಬಳಿಕ ಸರ್ಫರಾಜ್ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ನಿರಂತರವಾಗಿ ರನ್ ಗಳಿಸುತ್ತಿದ್ದರೂ ಭಾರತ ಟೆಸ್ಟ್ ತಂಡದಲ್ಲಿ ಅವಕಾಶ ಸಿಗದಿರುವ ಬಗ್ಗೆ ಚರ್ಚೆ ನಡೆಯುತ್ತಿರುವ ನಡುವೆಯೇ ಅವರ ಈ ಹೇಳಿಕೆ ಹೊರಬಿದ್ದಿದೆ.
ಪ್ರತಿದಿನ ಬೆಳಗ್ಗೆ ಎದ್ದಾಗ ನನ್ನ ಮನಸ್ಸಿನಲ್ಲಿ ಒಂದೇ ಪ್ರಶ್ನೆ ಮೂಡುತ್ತದೆ. ನಾನೇಕೆ ಮತ್ತೆ ಮತ್ತೆ ಇಷ್ಟೊಂದು ಕಷ್ಟಪಡಬೇಕು? ಯಾಕೆ ಅದೇ ರೀತಿಯ ಹೋರಾಟವನ್ನು ಮುಂದುವರಿಸಬೇಕು? ನಾನು ಈಗಾಗಲೇ ಭಾರತ ತಂಡದ ಪರ ಆಡಿದ್ದೇನೆ. ಆದರೂ ಬೆಳಗ್ಗೆ 5 ಗಂಟೆಗೆ ಎದ್ದು ಅಭ್ಯಾಸಕ್ಕೆ ಹೋಗುತ್ತೇನೆ. ಬೇಕೆಂದರೆ ಮುಂಬೈ ಪರ ಮಾತ್ರ ಆಡಿಕೊಂಡು ಇರಬಹುದು. ಆದರೆ ಕೆಲವೊಮ್ಮೆ ಇಂತಹ ಪ್ರಶ್ನೆಗಳು ಮನಸ್ಸಿನಲ್ಲಿ ಮೂಡುತ್ತವೆ. ಆದರೆ, ನನ್ನ ತಂದೆ ನನಗಾಗಿ ಇಂದಿಗೂ ಕಷ್ಟಪಟ್ಟು ದುಡಿಯುತ್ತಿರುವುದನ್ನು ನೋಡಿದಾಗ ಅವರಿಗಾಗಿ ರನ್ ಗಳಿಸಬೇಕು ಎನಿಸುತ್ತದೆ. ಅವರೇ ನನ್ನನ್ನು ಮುಂದೆ ಸಾಗಲು ಪ್ರೇರೇಪಿಸುವ ಏಕೈಕ ಶಕ್ತಿ’ ಎಂದು ಸರ್ಫರಾಜ್ ಹೇಳಿದ್ದಾರೆ.
ದೇಶೀಯ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಸರ್ಫರಾಜ್ ಖಾನ್ 2024ರ ಫೆಬ್ರವರಿಯಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಭಾರತ ಪರ ಇದುವರೆಗೆ ಆರು ಟೆಸ್ಟ್ ಪಂದ್ಯಗಳನ್ನಾಡಿರುವ ಅವರು 37.10ರ ಸರಾಸರಿಯಲ್ಲಿ 371 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು ಮೂರು ಅರ್ಧಶತಕಗಳು ಸೇರಿವೆ. 2024ರ ಅಕ್ಟೋಬರ್‌ನಲ್ಲಿ ಬೆಂಗಳೂರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಗಳಿಸಿದ 150 ರನ್ ಅವರ ಟೆಸ್ಟ್ ವೃತ್ತಿಜೀವನದ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ.
2024ರ ನವೆಂಬರ್‌ನಲ್ಲಿ ಮುಂಬೈನಲ್ಲಿ ನ್ಯೂಜಿಲೆಂಡ್ ವಿರುದ್ಧ ಆಡಿದ್ದ ಪಂದ್ಯವೇ ಅವರ ಕೊನೆಯ ಅಂತರರಾಷ್ಟ್ರೀಯ ಪಂದ್ಯವಾಗಿದೆ. ಬಳಿಕ ಆಸ್ಟ್ರೇಲಿಯಾ ಪ್ರವಾಸದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದರೂ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಕ್ಕಿರಲಿಲ್ಲ. 2026ರ ಆಗಸ್ಟ್‌ನಲ್ಲಿ ಶ್ರೀಲಂಕಾ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳ ಸರಣಿಗೆ ಸಾಯಿ ಸುದರ್ಶನ್ ಬದಲಿಗೆ ಸರ್ಫರಾಜ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಆದರೆ ಆ ಎರಡೂ ಪಂದ್ಯಗಳಲ್ಲಿ ಅವರಿಗೆ ಆಡುವ ಅವಕಾಶ ದೊರೆಯಲಿಲ್ಲ.
ಭಾರತ ತಂಡದ ಆಯ್ಕೆ ಸಮಿತಿಯಿಂದ ತಮಗೆ ಯಾವ ರೀತಿಯ ಭರವಸೆ ಸಿಕ್ಕಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸರ್ಫರಾಜ್, ‘ನಾನು ಭಾರತ ತಂಡಕ್ಕೆ ಆಯ್ಕೆಯಾದಾಗ, ತವರಿನ ಪರಿಸ್ಥಿತಿಗಳಲ್ಲಿ ಹೆಚ್ಚಿನ ಅವಕಾಶ ಸಿಗುತ್ತದೆ ಎಂದು ಕೇಳಿದ್ದೆ. ಆದರೆ ನನಗೆ ಈಗಲೂ ಒಂದು ಪ್ರಶ್ನೆಯಿದೆ. ದಕ್ಷಿಣ ಆಫ್ರಿಕಾಕ್ಕೆ ಹೋದಾಗ ಭಾರತ ತಂಡದ ವಿರುದ್ಧವೇ 60 ಎಸೆತಗಳಲ್ಲಿ 100 ರನ್ ಗಳಿಸಿದ್ದೆ. ಇಂಗ್ಲೆಂಡ್‌ಗೆ ಹೋದಾಗಲೂ 60 ಎಸೆತಗಳಲ್ಲಿ ಶತಕ ಬಾರಿಸಿದ್ದೆ. ಭಾರತಕ್ಕೆ ಮರಳಿದಾಗ ಸ್ಪಿನ್‌ಗೆ ನೆರವಾಗುವ ಪಿಚ್‌ಗಳಲ್ಲಿ ಆಡಬೇಕಾಗುತ್ತದೆ. ದೇಶೀಯ ಕ್ರಿಕೆಟ್‌ನಲ್ಲಿ ಇಷ್ಟೊಂದು ಹೋರಾಟ ನಡೆಸಿ ಭಾರತ ತಂಡಕ್ಕೆ ಬಂದ ಬಳಿಕ ಇಂತಹ ಕಠಿಣ ಪಿಚ್‌ಗಳಲ್ಲಿ ತಕ್ಷಣವೇ ಪ್ರದರ್ಶನ ನೀಡಬೇಕೆಂಬ ನಿರೀಕ್ಷೆ ಇರುತ್ತದೆ. ನಾನು ಭಾರತದ ಹೊರಗೆ ರನ್ ಗಳಿಸಿಲ್ಲ ಎಂದೇನಿಲ್ಲ. ಅಲ್ಲಿಯೂ ಉತ್ತಮವಾಗಿ ಆಡಿದ್ದೇನೆ. ಅದು ಆಯ್ಕೆ ಸಮಿತಿಯ ನಿರ್ಧಾರ ಮತ್ತು ಅವರ ದೃಷ್ಟಿಕೋನ. ಆದರೆ ನನ್ನ ಕೆಲಸ ಕ್ರಿಕೆಟ್ ಆಡುವುದು. ನಾನು ಅದನ್ನು ಮುಂದುವರಿಸುತ್ತೇನೆ’ ಎಂದು ಸರ್ಫರಾಜ್ ಸ್ಪಷ್ಟಪಡಿಸಿದ್ದಾರೆ.
IND vs SL: ಕಾಶ್ಮೀರದಲ್ಲಿ ತರಬೇತಿ; 17 ಕೆಜಿ ತೂಕ ಇಳಿಸಿಕೊಂಡ ಸರ್ಫರಾಜ್ ಖಾನ್
ಸರ್ಫರಾಜ್ ಹೇಳಿರುವುದು ಭಾರತ ‘ಎ’ ತಂಡದ ಅಭ್ಯಾಸ ಪಂದ್ಯಗಳಲ್ಲಿ ಗಳಿಸಿದ ಎರಡು ಶತಕಗಳ ಬಗ್ಗೆ. 2023ರ ಡಿಸೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾದ ಪ್ರಿಟೋರಿಯಾದಲ್ಲಿ ಹಿರಿಯ ಭಾರತ ತಂಡದ ವಿರುದ್ಧ ನಡೆದ ಅಭ್ಯಾಸ ಪಂದ್ಯದಲ್ಲಿ ಕೇವಲ 61 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಇನ್ನು 2025ರ ಜೂನ್‌ನಲ್ಲಿ ಇಂಗ್ಲೆಂಡ್ ಪ್ರವಾಸದ ಸಿದ್ಧತೆಯ ಭಾಗವಾಗಿ ಬೆಕೆನ್‌ಹ್ಯಾಮ್‌ನಲ್ಲಿ ನಡೆದ ಪಂದ್ಯದಲ್ಲಿ 76 ಎಸೆತಗಳಲ್ಲಿ 101 ರನ್ ಗಳಿಸಿದ್ದರು. ಆದರೆ ಈ ಎರಡೂ ಪ್ರವಾಸಗಳಲ್ಲಿ ಅವರಿಗೆ ಹಿರಿಯ ಭಾರತ ತಂಡದ ಪರ ಆಡುವ ಅವಕಾಶ ಸಿಕ್ಕಿರಲಿಲ್ಲ.
Published On - 10:36 pm, Mon, 2 November 26