‘ಮುಸ್ಲಿಂ ಎಂಬ ಕಾರಣಕ್ಕೆ ಸರ್ಫರಾಜ್ ಕಡೆಗಣನೆ’; ಗಂಭೀರ್ ವಿರುದ್ಧ ಕಾಂಗ್ರೆಸ್ ವಕ್ತಾರೆಯಿಂದ ಗಂಭೀರ ಆರೋಪ
Sarfaraz Khan Snub: ಭಾರತ 'ಎ' ತಂಡದಿಂದ ಸರ್ಫರಾಜ್ ಖಾನ್ ಅವರನ್ನು ಕೈಬಿಟ್ಟಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಕಾಂಗ್ರೆಸ್ ವಕ್ತಾರೆ ಶಮಾ ಮೊಹಮ್ಮದ್, ಟೀಂ ಇಂಡಿಯಾ ಕೋಚ್ ಗೌತಮ್ ಗಂಭೀರ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಸರ್ಫರಾಜ್ ಅವರ 'ಉಪನಾಮ' ಕಾರಣಕ್ಕೆ ಆಯ್ಕೆ ಮಾಡಿಲ್ಲವೇ ಎಂದು ಪ್ರಶ್ನಿಸಿದ್ದು, ಧಾರ್ಮಿಕ ತಾರತಮ್ಯದ ಸುಳಿವು ನೀಡಿದ್ದಾರೆ. ಫಿಟ್ನೆಸ್ ಸುಧಾರಿಸಿದರೂ ಅವಕಾಶ ವಂಚಿತರಾಗಿರುವ ಸರ್ಫರಾಜ್ ವಿಷಯ ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯ ವಿಷಯವಾಗಿದೆ.

ಪ್ರಸ್ತುತ ಟೀಂ ಇಂಡಿಯಾ (Team India ಆಸ್ಟ್ರೇಲಿಯಾ ಪ್ರವಾಸದಲ್ಲಿದೆ. ಆ ಬಳಿಕ ತವರಿನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ. ಆದರೆ ಅದಕ್ಕೂ ಮುನ್ನ ಭಾರತ ಎ ತಂಡ, ದಕ್ಷಿಣ ಆಫ್ರಿಕಾ ಎ (India A vs South Africa A) ತಂಡದ ವಿರುದ್ಧ ಅನಧಿಕೃತ ಟೆಸ್ಟ್ ಸರಣಿಯನ್ನು ಆಡಲಿದೆ. ಈ ಸರಣಿಗೆ ನಿನ್ನೆಯಷ್ಟೆ ಬಿಸಿಸಿಐ ತಂಡವನ್ನು ಪ್ರಕಟಿಸಿದ್ದು, ಈ ತಂಡದ ನಾಯಕತ್ವವನ್ನು ರಿಷಭ್ ಪಂತ್ಗೆ ವಹಿಸಲಾಗಿದೆ. ಆದಾಗ್ಯೂ ಈ ಸರಣಿಗೆ ಸರ್ಫರಾಜ್ ಖಾನ್ (Sarfaraz Khan) ಅವರನ್ನು ಆಯ್ಕೆ ಮಾಡದಿರುವುದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ, ಸರ್ಫರಾಜ್ ಕಡಗಣನೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದರು. ಇದೀಗ ಕಾಂಗ್ರೆಸ್ ವಕ್ತಾರೆ ಶಮಾ ಮೊಹಮ್ಮದ್ (Shama Mohammed) ಅವರು, ಸರ್ಫರಾಜ್ ಆಯ್ಕೆಯಾಗದಿರಲು ಟೀಂ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ ಕಾರಣ ಎಂಬ ಗಂಭೀರ ಆರೋಪ ಮಾಡಿದ್ದಾರೆ.
15 ಕೆಜಿ ತೂಕ ಇಳಿಸಿಕೊಂಡಿದ್ದ ಸರ್ಫರಾಜ್
ವಾಸ್ತವವಾಗಿ ಸರ್ಫರಾಜ್ ಖಾನ್ ಕೊನೆಯ ಬಾರಿಗೆ ನ್ಯೂಜಿಲೆಂಡ್ ವಿರುದ್ಧದ ದೇಶೀಯ ಸರಣಿಯಲ್ಲಿ ಭಾರತ ಪರ ಆಡಿದ್ದರು. ಆದರೆ ಆ ಬಳಿಕ ಅವರನ್ನು ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿಯಿಂದ ಕೈಬಿಡಲಾಯಿತು. ಆ ವೇಳೆ ಅವರನ್ನು ಕೈಬಿಡಲು ಫಿಟ್ನೆಸ್ ಕಾರಣ ನೀಡಲಾಗಿತ್ತು. ಹೀಗಾಗಿ ತನ್ನ ಫಿಟ್ನೆಸ್ ಮೇಲೆ ಸಾಕಷ್ಟು ಕೆಲಸ ಮಾಡಿದ್ದ ಸರ್ಫರಾಜ್ ಖಾನ್ 15 ಕೆಜಿ ತೂಕ ಇಳಿಸಿಕೊಂಡಿದ್ದರು.
ಆದಾಗ್ಯೂ, ಇಂಗ್ಲೆಂಡ್ ಪ್ರವಾಸಕ್ಕೆ ಅವರನ್ನು ಆಯ್ಕೆ ಮಾಡಿರಲಿಲ್ಲ. ವೆಸ್ಟ್ ಇಂಡೀಸ್ ವಿರುದ್ಧದ ದೇಶೀಯ ಸರಣಿಗೂ ಸರ್ಫರಾಜ್ ಖಾನ್ ಅವರನ್ನು ಪರಿಗಣಿಸಲಾಗಿಲ್ಲ. ಇದೀಗ ದಕ್ಷಿಣ ಆಫ್ರಿಕಾ ಎ ವಿರುದ್ಧದ ಸರಣಿಗೆ ಸರ್ಫರಾಜ್ ಖಾನ್ ಅವರನ್ನು ಭಾರತ ಎ ತಂಡದಲ್ಲಿ ಆಯ್ಕೆ ಮಾಡಲಾಗಿಲ್ಲ. ಇದೀಗ ಈ ಬಗ್ಗೆ ಕಾಂಗ್ರೆಸ್ ವಕ್ತಾರೆ ಶಮಾ ಮೊಹಮ್ಮದ್, ‘ಸರ್ಫರಾಜ್ ಅವರ ಉಪನಾಮದಿಂದಾಗಿ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿಲ್ಲವೇ? ಎಂಬ ಪ್ರಶ್ನೆಯನ್ನು ಗೌತಮ್ ಗಂಭೀರ್ ಮುಂದಿಟ್ಟಿದ್ದಾರೆ.
IND vs WI: ಫಿಟ್ ಇಲ್ಲ ಎಂದ ಅಜಿತ್ ಅಗರ್ಕರ್; ಫಿಟ್ನೆಸ್ ವಿಡಿಯೋ ಹರಿಬಿಟ್ಟ ಸರ್ಫರಾಜ್
ಶಮಾ ಮೊಹಮ್ಮದ್ ಆರೋಪ
ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಶಮಾ ಮೊಹಮ್ಮದ್, ‘ಸರ್ಫರಾಜ್ ಖಾನ್ ಅವರನ್ನು ಅವರ ಉಪನಾಮದ ಕಾರಣದಿಂದಾಗಿ ಆಯ್ಕೆ ಮಾಡಲಾಗಿಲ್ಲವೇ? #justasking. ಗೌತಮ್ ಗಂಭೀರ್ ಇದರ ಬಗ್ಗೆ ಏನು ಯೋಚಿಸುತ್ತಾರೆಂದು ನಮಗೆ ತಿಳಿದಿದೆ’ ಎಂದು ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
Is Sarfaraz Khan not selected because of his surname ! #justasking . We know where Gautam Gambhir stands on that matter
— Dr. Shama Mohamed (@drshamamohd) October 22, 2025
ಅಂದರೆ ಸರ್ಫರಾಜ್ ಖಾನ್ ಒಬ್ಬ ಮುಸ್ಲಿಂ ಸಮುದಾಯದ ಕ್ರಿಕೆಟಿಗನಾಗಿರುವ ಕಾರಣ, ಮಾಜಿ ಬಿಜೆಪಿ ಸಂಸದರಾಗಿರುವ ಹಾಗೂ ಹಾಲಿ ಟೀಂ ಇಂಡಿಯಾ ಕೋಚ್ ಆಗಿರುವ ಗೌತಮ್ ಗಂಭಿರ್ ಸರ್ಫರಾಜ್ ಖಾನ್ರನ್ನು ಕಡೆಗಣಿಸುತ್ತಿದ್ದಾರೆ ಎಂಬುದು ಕಾಂಗ್ರೆಸ್ ವಕ್ತಾರೆ ಶಮಾ ಮೊಹಮ್ಮದ್ ಅವರ ಎಕ್ಸ್ ಪೋಸ್ಟ್ನ ಒಳಾರ್ಥ ಎಂಬುದನ್ನು ನಾವು ಅರಿತುಕೊಳ್ಳಬಹುದಾಗಿದೆ. ಇದೀಗ ಶಮಾ ಅವರ ಪೋಸ್ಟ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪರ ವಿರೋಧದ ಚರ್ಚೆ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಅದು ಯಾವ ರೂಪ ಪಡೆದುಕೊಳ್ಳುತ್ತದೆ ಎಂಬುದನ್ನು ಕಾದುನೋಡಬೇಕಿದೆ.
ಶಮಾ ಮೊಹಮ್ಮದ್ ಯಾರು?
ಮೂಲತಃ ಕೇರಳದವರಾಗಿರುವ ಶಮಾ ಮೊಹಮ್ಮದ್ ವೃತ್ತಿಯಲ್ಲಿ ದಂತವೈದ್ಯರಾಗಿದ್ದು, 2018 ರಲ್ಲಿ ಅವರನ್ನು ಕಾಂಗ್ರೆಸ್ ರಾಷ್ಟ್ರೀಯ ಮಾಧ್ಯಮ ಪ್ಯಾನಲಿಸ್ಟ್ ಆಗಿ ನೇಮಕ ಮಾಡಲಾಯಿತು. ವಾಸ್ತವವಾಗಿ ಶಮಾ ಮೊಹಮ್ಮದ್ ರೀತಿಯ ಹೇಳಿಕೆಗಳಿಂದ ವಿವಾದ ಸೃಷ್ಟಿಸುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು, ಟೀಂ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮಾ ಅವರ ಫಿಟ್ನೆಸ್ ಅನ್ನು ಅಣಕಿಸಿದ್ದ ಶಮಾ, ‘ರೋಹಿತ್ ಶರ್ಮಾ ಒಬ್ಬ ಆಟಗಾರನಾಗಿ ಅಧಿಕ ತೂಕ ಹೊಂದಿದ್ದಾರೆ. ಇದಲ್ಲದೆ, ಅವರ ನಾಯಕತ್ವವೂ ನಿಷ್ಪರಿಣಾಮಕಾರಿಯಾಗಿದೆ ಎಂದು ಎಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದರು. ಆದರೆ ಆ ಸಮಯದಲ್ಲಿ ಕಾಂಗ್ರೆಸ್ ಪಕ್ಷ ಶಮಾ ಅವರ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿತ್ತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:06 pm, Wed, 22 October 25
