Shane Warne: ಬ್ಯಾಟರ್ಗಳ ಮುಂದಿನ ನಡೆಯನ್ನು ಕರಾರುವಕ್ಕಾಗಿ ಊಹಿಸುತ್ತಿದ್ದ ಶೇನ್ ವಾರ್ನ್; ಇಲ್ಲಿದೆ ವಿಡಿಯೋ ಸಾಕ್ಷಿ
Brisbane Heat | Brendon McCullum: ಶೇನ್ ವಾರ್ನ್ ತಮ್ಮ ಸ್ಪಿನ್ ಮೋಡಿಯಿಂದ ಬ್ಯಾಟರ್ಗಳಿಗೆ ಸಿಂಹಸ್ವಪ್ನವಾಗಿದ್ದವರು. ಬ್ಯಾಟರ್ಗಳ ಮುಂದಿನ ನಡೆಯನ್ನು ಮೊದಲೇ ಊಹಿಸಿ, ಶೇನ್ ಹೇಗೆ ಪ್ರತಿತಂತ್ರ ಹೆಣೆಯುತ್ತಿದ್ದರು? ಇಲ್ಲಿದೆ ಒಂದು ಉದಾಹರಣೆ.
ಶೇನ್ ವಾರ್ನ್ (Shane Warne) ಸ್ಪಿನ್ ಮೋಡಿಯನ್ನು ನೋಡಿ ಕ್ರಿಕೆಟ್ ಪ್ರೇಮಿಗಳು ಸದಾ ಅಚ್ಚರಿಯಾಗುತ್ತಿದ್ದರು. ಸ್ಪಿನ್ನಿಂದ ಬ್ಯಾಟರ್ಗಳನ್ನು ತಮ್ಮ ಖೆಡ್ಡಾಕ್ಕೆ ಕೆಡಗುವ ಮೊದಲು ಶೇನ್ ವಾರ್ನ್ ಹೇಗೆ ಯೋಚಿಸುತ್ತಿದ್ದರು? ಬ್ಯಾಟರ್ ಪ್ಲಾನ್ಗಳನ್ನು ಹೇಗೆ ತಿಳಿದುಕೊಳ್ಳುತ್ತಿದ್ದರು? ಇವುಗಳೆಲ್ಲವೂ ಕುತೂಹಲಕಾರಿ ವಿಚಾರಗಳು. ಇದಕ್ಕೆ ಪೂರಕವಾಗಿ ಆಸ್ಟ್ರೇಲಿಯಾದ ಬಿಬಿಎಲ್ನ ತಂಡವಾದ ಬ್ರಿಸ್ಬೇನ್ ಹೀಟ್ ಒಂದು ವಿಡಿಯೋ ಹಂಚಿಕೊಂಡಿದೆ. ಆಸ್ಟ್ರೇಲಿಯಾದಂತಹ ಪಿಚ್ಗಳಲ್ಲೂ ಟಿ20 ಮಾದರಿಯಲ್ಲಿ ಖ್ಯಾತ ಬ್ಯಾಟರ್ಗಳನ್ನು ಬಲೆಗೆ ಕೆಡವುತ್ತಿದ್ದ ಶೇನ್, ಬ್ರಿಸ್ಬೇನ್ ಪರ ಉತ್ತಮ ಆಟವಾಡಿದ್ದರು. 2011ರಲ್ಲಿ ನಡೆದಿದ್ದ ಪಂದ್ಯದ ವೇಳೆ ಶೇನ್ ವಾರ್ನ್ ಹಾಗೂ ಬ್ರೆಂಡನ್ ಮೆಕಲಮ್ ನಡುವಿನ ‘ಕ್ರಿಕೆಟ್ ಯುದ್ಧ’ದ ತುಣುಕೊಂದನ್ನು ಬ್ರಿಸ್ಬೇನ್ ಹೀಟ್ ಹಂಚಿಕೊಂಡಿದೆ. ಟ್ವಿಟರ್ನಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದ್ದು ವೈರಲ್ ಆಗಿದೆ.
ವಿಡಿಯೋದಲ್ಲಿ ಏನಿದೆ?
ವಿಡಿಯೋದಲ್ಲಿ ಶೇನ್ ವಾರ್ನ್ ಬೌಲಿಂಗ್ ಮಾಡುತ್ತಿದ್ದು, ಮೈಕ್ ಧರಿಸಿದ್ದನ್ನು ತೋರಿಸಲಾಗಿದೆ.. ಸ್ಟ್ರೈಕರ್ನಲ್ಲಿ ಬ್ರೆಂಡನ್ ಮೆಕಲಮ್ ಇದ್ದಾರೆ. ಕಮೆಂಟೇಟರ್ ಜತೆ ಮಾತನಾಡುತ್ತಾ ಶೇನ್, ಬ್ಯಾಟರ್ನ ಮುಂದಿನ ನಡೆಯನ್ನು ಊಹಿಸುತ್ತಾರೆ. ಜತೆಗೆ ತಾವು ಯಾವ ಎಸೆತವನ್ನು ಅದಕ್ಕೆ ಪ್ರತಿಯಾಗಿ ಹಾಕಲಿದ್ದೇನೆ ಎನ್ನುವುದನ್ನೂ ತಿಳಿಸಿದ್ದಾರೆ.
10ನೇ ಓವರ್ನ ಮೂರನೇ ಎಸೆತವನ್ನು ಎಸೆಯುವ ಮುನ್ನ ಶೇನ್ ವಾರ್ನ್ ವೀಕ್ಷಕ ವಿವರಣೆಕಾರರೊಂದಿಗೆ ಮಾತನಾಡುತ್ತಿದ್ದಾರೆ. ‘‘ಮೆಕಲಮ್ ಮುಂದಿನ ಎಸೆತವನ್ನು ಸ್ವೀಪ್ ಮಾಡಲು ಯತ್ನಿಸಬಹುದು’’ ಎಂದು ಮೈಕ್ನಲ್ಲಿ ಹೇಳುವ ಶೇನ್, ಈ ಕಾರಣದಿಂದ ಅವರಿಗೆ ಸ್ವಲ್ಪ ವೇಗವಾಗಿ ಬೌಲ್ ಮಾಡುತ್ತೇನೆ ಎಂದಿದ್ದಾರೆ.
ಅದರಂತೆ ವಾರ್ನ್ ವೇಗವಾಗಿ ಬೌಲ್ ಮಾಡಿದ್ದು, ಮೆಕಲಮ್ ಸ್ವೀಪ್ ಮಾಡಲು ಯತ್ನಿಸಿದ್ದಾರೆ. ಆದರೆ ಚೆಂಡು ಅವರ ಬ್ಯಾಟ್ ತಪ್ಪಿಸಿ ನೇರವಾಗಿ ವಿಕೆಟ್ನತ್ತ ತಲುಪಿದೆ. ಈ ವಿಡಿಯೋವನ್ನು ಟ್ವಿಟರ್ನಲ್ಲಿ ಹಂಚಿಕೊಳ್ಳಲಾಗಿದ್ದು, ಶೇನ್ ವಾರ್ನ್ ಗೇಮ್ ಪ್ಲಾನ್ಗೆ ಕ್ರಿಕೆಟ್ ಪ್ರೇಮಿಗಳು ಮತ್ತೊಮ್ಮೆ ಮಂತ್ರಮುಗ್ಧರಾಗಿದ್ದಾರೆ.
ಬ್ರಿಸ್ಬೇನ್ ಹೀಟ್ ಹಂಚಿಕೊಂಡ ವಿಡಿಯೋ ಇಲ್ಲಿದೆ:
The King of Spin talking through his dismissal of @Bazmccullum on the mic, legendary? #GOAT?
RIP @ShaneWarne ? pic.twitter.com/5Plq2CjSuC
— Brisbane Heat (@HeatBBL) March 5, 2022
ಶೇನ್ ವಾರ್ನ್ 1992ರಲ್ಲಿ ಎಸ್ಸಿಜಿಯಲ್ಲಿ ಭಾರತದ ವಿರುದ್ಧ ಪದಾರ್ಪಣೆ ಮಾಡಿದ್ದರು. ಆ ಮಾದರಿಯಲ್ಲಿ ಅವರು 708 ವಿಕೆಟ್ ಪಡೆದಿದ್ದು, ಅತ್ಯಂತ ಹೆಚ್ಚು ವಿಕೆಟ್ ಪಡೆದ ಎರಡನೇ ಬೌಲರ್ ಎನಿಸಿದ್ದಾರೆ. ಮೊದಲ ಸ್ಥಾನದಲ್ಲಿ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಇದ್ದಾರೆ. ಏಕದಿನ ಮಾದರಿಯಲ್ಲಿ 194 ಪಂದ್ಯಗಳಿಂದ 293 ವಿಕೆಟ್ಗಳನ್ನು ವಾರ್ನ್ ಪಡೆದಿದ್ದಾರೆ. 1993 ಹಾಗೂ 2003ರ ವಿಶ್ವಕಪ್ ಗೆದ್ದ ತಂಡದ ಆಸ್ಟ್ರೇಲಿಯಾ ತಂಡದ ಸದಸ್ಯರಾಗಿದ್ದರು ವಾರ್ನ್.
ಇದನ್ನೂ ಓದಿ:
MCC: ಮಂಕಡಿಂಗ್ ಇನ್ನು ಮುಂದೆ ರನ್ ಔಟ್ ಎಂದು ಪರಿಗಣನೆ; ಎಂಸಿಸಿ ಸೂಚಿಸಿರುವ ಹೊಸ ನಿಯಮಗಳು ಇಲ್ಲಿವೆ
Shane Warne Records: ಕ್ರಿಕೆಟ್ ಇತಿಹಾಸದಲ್ಲಿ ಲೆಕ್ಕವಿಲ್ಲದಷ್ಟು ದಾಖಲೆಗಳ ಸರದಾರ ಶೇನ್ ವಾರ್ನ್
Published On - 12:51 pm, Wed, 9 March 22