ಟೀಮ್ ಇಂಡಿಯಾವನ್ನು ನಾವು ಮಕಾಡೆ ಮಲಗಿಸುತ್ತಿದ್ದೆವು…ಈಗ ಏನಾಗಿದೆ ನೋಡಿ: ಶೊಯೆಬ್ ಅಖ್ತರ್
India vs Pakistan: ಭಾರತ ಮತ್ತು ಪಾಕಿಸ್ತಾನ್ ತಂಡಗಳು ಒಟ್ಟು 208 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ವೇಳೆ ಪಾಕಿಸ್ತಾನ್ ತಂಡ 88 ಮ್ಯಾಚ್ಗಳಲ್ಲಿ ಜಯ ಸಾಧಿಸಿದರೆ, ಭಾರತ ತಂಡ ಗೆದ್ದಿರುವುದು 76 ಪಂದ್ಯಗಳನ್ನು ಮಾತ್ರ. ಇದಾಗ್ಯೂ 2000 ರಿಂದ ಟೀಮ್ ಇಂಡಿಯಾ ಪಾಕ್ ವಿರುದ್ಧ ಪಾರುಪತ್ಯ ಮರೆಯುತ್ತಾ ಬರುತ್ತಿದೆ.

ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಮೂಲಕ ಮೂರು ಬಾರಿ ಚಾಂಪಿಯನ್ಸ್ ಟ್ರೋಫಿ ಗೆದ್ದ ವಿಶ್ವದ ಏಕೈಕ ತಂಡವೆಂಬ ಹೆಗ್ಗಳಿಕೆಯನ್ನು ಟೀಮ್ ಇಂಡಿಯಾ ತನ್ನದಾಗಿಸಿಕೊಂಡಿದೆ. ಇದಕ್ಕೂ ಮುನ್ನ 2002 ರಲ್ಲಿ ಸೌರವ್ ಗಂಗೂಲಿ ನಾಯಕತ್ವದಲ್ಲಿ ಭಾರತ ತಂಡ ಚಾಂಪಿಯನ್ಸ್ ಟ್ರೋಫಿ ಜಯಿಸಿತ್ತು. ಇದಾದ ಬಳಿಕ 2013 ರಲ್ಲಿ ಧೋನಿ ಮುಂದಾಳತ್ವದಲ್ಲಿ ಟೀಮ್ ಇಂಡಿಯಾ ಚಾಂಪಿಯನ್ಸ್ ಟ್ರೋಫಿ ಎತ್ತಿ ಹಿಡಿಯಿತು.
ಇಂತಹ ಯಶಸ್ಸಿಗೆ ಕಾರಣ ಭಾರತೀಯ ಕ್ರಿಕೆಟ್ ಮಂಡಳಿಯ ವ್ಯವಸ್ಥೆ ಎಂದು ಅಭಿಪ್ರಾಯಪಟ್ಟಿದ್ದಾರೆ ಪಾಕಿಸ್ತಾನ್ ತಂಡದ ಮಾಜಿ ವೇಗಿ ಶೊಯೆಬ್ ಅಖ್ತರ್. ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದ ಬಳಿಕ ಚಾನೆಲ್ ಚರ್ಚೆಯೊಂದರಲ್ಲಿ ಮಾತನಾಡಿದ ಶೊಯೆಬ್ ಅಖ್ತರ್, 2000 ಕ್ಕಿಂತ ಮೊದಲು 2002 ರವರೆಗೆ ಪಾಕಿಸ್ತಾನ್ ವಿರುದ್ಧ ಗೆಲ್ಲುವ ಬಗ್ಗೆ ಭಾರತಕ್ಕೆ ಯೋಚಿಸಲೂ ಸಾಧ್ಯವಾಗುತ್ತಿರಲಿಲ್ಲ. ಇದಂತು ನಿಜ. ನಾವು ಅವರನ್ನು ಅವರ ಮನೆಯಲ್ಲಿ ಸಾಧ್ಯವಾದಷ್ಟು ಸೋಲಿಸಿದ್ದೆವು. ಆದರೆ ಆ ಬಳಿಕ ಎಲ್ಲವೂ ಬದಲಾಯಿತು.
ಇದ್ದಕ್ಕಿದ್ದಂತೆ ಭಾರತ ತಂಡದ ನಾಯಕ ಬದಲಾಯಿತು. ಟೀಮ್ ಇಂಡಿಯಾಗೆ ಸೌರವ್ ಗಂಗೂಲಿ ನಾಯಕರಾದರು. ಅವರು ಹೊಸ ತಂಡವನ್ನು ಕಟ್ಟಿದರು. ಸೌರವ್ ಗಂಗೂಲಿ ಮುಂದಾಳತ್ವದಲ್ಲಿ ಭಾರತ ತಂಡಕ್ಕೆ ಹೊಸ ಕಾಯಕಲ್ಪ ಲಭಿಸಿತು. ಆ ಬಳಿಕ ಧೋನಿ ನಾಯಕರಾದರು. ಅವರು ಸಹ ಇದೇ ಯೋಜನೆಯನ್ನು ಮುಂದುವರೆಸಿದರು.
ಹೊಸ ಸಿಬ್ಬಂದಿಗಳು ಬಂದರು. ಹೊಸ ಹೊಸ ಯೋಜನೆಗಳು ರೂಪುಗೊಂಡವು. ಕೋಚ್ ಆಗಿ ಬಂದ ರವಿಶಾಸ್ತ್ರಿ ತಂಡವನ್ನು ಮತ್ತಷ್ಟು ಬಲಿಷ್ಠಗೊಳಿಸಿದರು. ಇದೀಗ ಅದರ ಫಲವಾಗಿ ಟೀಮ್ ಇಂಡಿಯಾ ವಿಶ್ವದ ಅತ್ಯುತ್ತಮ ತಂಡವಾಗಿ ಗುರುತಿಸಿಕೊಂಡಿದೆ. ಹೀಗೆ ಬಲಿಷ್ಠ ತಂಡದ ಯಶಸ್ಸಿನ ಹಿಂದೆ ಟೀಮ್ ಇಂಡಿಯಾದ 20 ವರ್ಷಗಳ ಕಠಿಣ ಪರಿಶ್ರಮವಿದೆ ಎಂದು ಶೊಯೆಬ್ ಅಖ್ತರ್ ಹೇಳಿದ್ದಾರೆ.
ಇದನ್ನೂ ಓದಿ: ಮುಂದಿನ ವಿಶ್ವಕಪ್ಗೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಇಲ್ಲ..!
ಈ 20 ವರ್ಷಗಳ ಕಠಿಣ ಪರಿಶ್ರಮದ ಫಲವಾಗಿ ನಾವು ಸತತವಾಗಿ ಸೋಲಿಸುತ್ತಿದ್ದ ಟೀಮ್ ಇಂಡಿಯಾ ಇಂದು ನಮ್ಮ ವಿರುದ್ಧ ಅತ್ಯಂತ ಸುಲಭವಾಗಿ ಗೆಲ್ಲುತ್ತಿದೆ. ವಿಶ್ವದ ಅತ್ಯುತ್ತಮ ತಂಡವಾಗಿ ಗುರುತಿಸಿಕೊಂಡಿದೆ. ಇದಕ್ಕೆ ಸಾಕ್ಷಿ ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯಲ್ಲಿನ ಪ್ರದರ್ಶನ ಎಂದು ಶೊಯೆಬ್ ಅಖ್ತರ್ ಅಭಿಪ್ರಾಯಪಟ್ಟಿದ್ದಾರೆ.