ವೈಭವ್​ನ ಆಡಿಸ್ತೀರಾ? ಎಲ್ಲರೂ ರನ್​ಗಳಿಸಿಯೇ ಬಂದಿದ್ದಾರೆ: ಶ್ರೇಯಸ್ ಖಡಕ್ ಉತ್ತರ

India vs England: ಭಾರತ ಮತ್ತು ಇಂಗ್ಲೆಂಡ್ ನಡುವಣ ಟಿ20 ಸರಣಿಯು ಬುಧವಾರದಿಂದ (ಜುಲೈ 1) ಶುರುವಾಗಲಿದೆ. ಐದು ಪಂದ್ಯಗಳ ಈ ಸರಣಿಯ ಮೂಲಕ ವೈಭವ್ ಸೂರ್ಯವಂಶಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೆರಿಯರ್ ಆರಂಭಿಸುವ ಇರಾದೆಯಲ್ಲಿದ್ದಾರೆ. ಒಂದು ವೇಳೆ ಕಣಕ್ಕಿಳಿದರೆ ಟೀಮ್ ಇಂಡಿಯಾ ಪರ ಅಂತಾರಾಷ್ಟ್ರೀಯ ಪಂದ್ಯವಾಡಿದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆ ವೈಭವ್ ಪಾಲಾಗಲಿದೆ.

ವೈಭವ್​ನ ಆಡಿಸ್ತೀರಾ? ಎಲ್ಲರೂ ರನ್​ಗಳಿಸಿಯೇ ಬಂದಿದ್ದಾರೆ: ಶ್ರೇಯಸ್ ಖಡಕ್ ಉತ್ತರ
Shreyas Iyer - Vaibhav
Image Credit source: x.com

Updated on: Jul 01, 2026 | 8:34 AM

ಭಾರತ ಮತ್ತು ಇಂಗ್ಲೆಂಡ್ ನಡುವಣ ಐದು ಮ್ಯಾಚ್​ಗಳ ಟಿ20 ಸರಣಿ ಇಂದಿನಿಂದ (ಜು.1) ಶುರುವಾಗಲಿದೆ. ಈ ಸರಣಿಯ ಆರಂಭಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾಣಿಸಿಕೊಂಡ ಭಾರತ ಟಿ20 ನಾಯಕ ಶ್ರೇಯಸ್ ಅಯ್ಯರ್ ಅವರಿಗೆ ಯಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿಯ ಪಾದಾರ್ಪಣೆ ಕುರಿತಾದ ಪ್ರಶ್ನೆ ಎದುರಾಗಿತ್ತು. ಈ ಪ್ರಶ್ನೆಗೆ ಹಾಗೂ ಇತರೆ ವಿಚಾರಗಳ ಬಗ್ಗೆ ಅಯ್ಯರ್ ಏನು ಹೇಳಿದ್ದಾರೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ…

ಎಲ್ಲರೂ ರನ್​ಗಳಿಸಿಯೇ ಬಂದಿದ್ದಾರೆ:

ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ಭಾರತ 0-2 ಅಂತರದಿಂದ ಆಘಾತಕಾರಿ ಸೋಲು ಅನುಭವಿಸಿದ ಬೆನ್ನಲ್ಲೇ, 15 ವರ್ಷದ ವೈಭವ್ ಸೂರ್ಯವಂಶಿ ಅವರನ್ನು ಪ್ಲೇಯಿಂಗ್ ಇಲೆವೆನ್​  ಸೇರಿಸಬೇಕೆಂಬ ಮಾತುಗಳು ಕೇಳಿ ಬಂದಿದ್ದವು. ಈ ಬಗ್ಗೆ ಮಾತನಾಡಿದ ಅಯ್ಯರ್, “ತಂಡದಲ್ಲಿರುವ ಪ್ರತಿಯೊಬ್ಬ ಆಟಗಾರನೂ ಪ್ರದರ್ಶನ ನೀಡಿಯೇ ಇಲ್ಲಿಗೆ ಬಂದಿದ್ದಾನೆ. ಯಾರೋ ಒಬ್ಬ ಆಟಗಾರ ಮಾತ್ರ ರನ್ ಗಳಿಸುತ್ತಿದ್ದಾನೆ ಎಂದಲ್ಲ” ಎಂದು ಖಡಕ್ ಆಗಿ ಹೇಳಿದ್ದಾರೆ.

“ನಾವು ಆಟಗಾರರಲ್ಲಿ ಭದ್ರತೆ ಮತ್ತು ನಂಬಿಕೆಯನ್ನು ಮೂಡಿಸಬೇಕಿದೆ. ಆಗ ಮಾತ್ರ ಅವರು ಆತ್ಮವಿಶ್ವಾಸದಿಂದ ಆಡಲು ಸಾಧ್ಯ. ಕಳೆದ ಟಿ20 ವಿಶ್ವಕಪ್ ಗೆದ್ದುಕೊಟ್ಟ ಆಟಗಾರರಿಗೆ ಈ ಸ್ವರೂಪದಲ್ಲಿ ಹೇಗೆ ಆಡಬೇಕೆಂಬ ಸ್ಪಷ್ಟ ಕಲ್ಪನೆಯಿದೆ. ಅವರೇ ನಮ್ಮ ಟಿ20 ತಂಡದ ಮುಖ್ಯ ಆಧಾರಸ್ತಂಭಗಳು, ಹಾಗಾಗಿ ಅವರಿಗೆ ಬೆಂಬಲ ನೀಡುವುದು ಅತ್ಯಗತ್ಯ” ಎಂದು ಶ್ರೇಯಸ್ ಅಯ್ಯರ್ ಹೇಳಿದ್ದಾರೆ.

ನಮ್ಮ ಕೈಗಳೂ ಕಟ್ಟಲ್ಪಟ್ಟಿವೆ!

ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಸರಣಿಯಲ್ಲಿ ವೈಭವ್‌ ಸೂರ್ಯವಂಶಿಗೆ ಅವಕಾಶ ನೀಡಲಿದ್ದಾಋಆ ಎಂಬ ನೇರ ಪ್ರಶ್ನೆಗೆ ಉತ್ತರಿಸಿದ ಅಯ್ಯರ್, “ಮುಂದೇನಾಗಲಿದೆ ಎಂದು ಹೇಳಲು ಸಾಧ್ಯವಿಲ್ಲ. ಸದ್ಯಕ್ಕೆ ನಮ್ಮ ಕೈಗಳೂ ಕಟ್ಟಲ್ಪಟ್ಟಿವೆ. ತಂಡದ ರಣತಂತ್ರಗಳು ಅತ್ಯಂತ ರಹಸ್ಯವಾಗಿದ್ದು, ಅದನ್ನು ನಾವು ತಂಡದ ಒಳಗೆ ಮಾತ್ರ ಚರ್ಚಿಸುತ್ತೇವೆ. ಪಂದ್ಯದ ಸಂಯೋಜನೆಯನ್ನು ಮೊದಲೇ ಬಹಿರಂಗಪಡಿಸಿ ಎದುರಾಳಿ ತಂಡಕ್ಕೆ ಅನುಕೂಲ ಮಾಡಿಕೊಡಲು ಸಾಧ್ಯವಿಲ್ಲ” ಎಂದರು.

ಅಯ್ಯರ್ ಖಡಕ್ ಉತ್ತರ:

ಐರ್ಲೆಂಡ್ ವಿರುದ್ಧದ ಸರಣಿ ಬೆನ್ನಲ್ಲೇ ಮಾಜಿ ಕ್ರಿಕೆಟರುಗಳು ವೈಭವ್ ಸೂರ್ಯವಂಶಿಗೆ ಚಾನ್ಸ್ ನೀಡದಿರುವ ಬಗ್ಗೆ ಪ್ರಶ್ನೆಗಳನ್ನೆತ್ತಿದ್ದರು. ಇನ್ನು ಸೋಷಿಯಲ್ ಮೀಡಿಯಾದಲ್ಲೂ ಈ ಬಗ್ಗೆ ಭಾರೀ ಚರ್ಚೆಗಳು ನಡೆದಿದ್ದವು.

ಆದರೆ ವಿಶ್ವಕಪ್​ ಗೆದ್ದುಕೊಟ್ಟಂತಹ ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಅವರಂತಹ ಆರಂಭಿಕ ಜೋಡಿಯನ್ನು ಬದಲಾಯಿಸಲು ಮ್ಯಾನೇಜ್‌ಮೆಂಟ್ ಸದ್ಯಕ್ಕೆ ಸಿದ್ಧವಿಲ್ಲ ಎಂಬ ಮುನ್ಸೂಚನೆಯನ್ನು ಶ್ರೇಯಸ್ ಅಯ್ಯರ್ ನೀಡಿದ್ದಾರೆ.

ಅಲ್ಲದೆ ನಾನು ಸೋಶಿಯಲ್ ಮೀಡಿಯಾ ಅಥವಾ ಇನ್‌ಸ್ಟಾಗ್ರಾಮ್ ಸುದ್ದಿಗಳನ್ನು ಫಾಲೋ ಮಾಡುವುದಿಲ್ಲ, ಅಲ್ಲಿ ಏನು ನಡೆಯುತ್ತಿದೆ, ಯಾರ ಬಗ್ಗೆ ಹೈಪ್ ಇದೆ ಎಂಬುದೂ ನನಗೆ ತಿಳಿಯದು ಶ್ರೇಯಸ್ ಅಯ್ಯರ್ ಹೇಳಿದ್ದಾರೆ.

ಇದನ್ನೂ ಓದಿ: IND vs ENG: ಬಲಿಷ್ಠ ಪ್ಲೇಯಿಂಗ್ 11 ಪ್ರಕಟಿಸಿದ ಇಂಗ್ಲೆಂಡ್

ಇದಾಗ್ಯೂ ವೈಭವ್ ಸೂರ್ಯವಂಶಿ ಒಬ್ಬ ಅದ್ಭುತ ಪ್ರತಿಭೆಯಾಗಿದ್ದು, ಅವಕಾಶ ಸಿಕ್ಕಾಗ ಖಂಡಿತವಾಗಿಯೂ ಅದ್ಭುತ ಪ್ರದರ್ಶನ ನೀಡಲಿದ್ದಾರೆ ಎಂಬ ಭರವಸೆಯನ್ನೂ ಶ್ರೇಯಸ್ ಅಯ್ಯರ್ ವ್ಯಕ್ತಪಡಿಸಿದ್ದಾರೆ.

Follow Us