
ಸೆಡ್ಡನ್ ಪಾರ್ಕ್ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಐದನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಭಾರತ ತಂಡ 7 ವಿಕೆಟ್ಗಳ ಸೋಲು ಅನುಭವಿಸಿತು. ಈ ಸೋಲಿನ ಬಳಿಕ ಮಾತನಾಡಿದ ಭಾರತ ಟಿ20 ತಂಡದ ನಾಯಕ ಶ್ರೇಯಸ್ ಅಯ್ಯರ್, ತಮ್ಮ ತಂಡ ಇನ್ನೂ ಉತ್ತಮ ಪ್ರದರ್ಶನ ನೀಡಬಹುದಿತ್ತು ಎಂದು ಒಪ್ಪಿಕೊಂಡಿದ್ದಾರೆ. ಭಾರತದ ಪ್ರದರ್ಶನದ ಬಗ್ಗೆ ಪ್ರತಿಕ್ರಿಯಿಸಿದ ಅಯ್ಯರ್, ಇಶಾನ್ ಕಿಶನ್ ಜೊತೆಗಿನ ತಮ್ಮ ಜೊತೆಯಾಟದ ಮೂಲಕ ತಂಡ ಉತ್ತಮ ಲಯ ಕಂಡುಕೊಂಡಿತ್ತು. ಆದರೆ ಮಧ್ಯಮ ಓವರ್ಗಳಲ್ಲಿ ಸತತ ವಿಕೆಟ್ಗಳನ್ನು ಕಳೆದುಕೊಂಡ ಪರಿಣಾಮ ಹೊಸದಾಗಿ ಕ್ರೀಸ್ಗೆ ಬಂದ ಬ್ಯಾಟರ್ಗಳ ಮೇಲೆ ಒತ್ತಡ ಹೆಚ್ಚಾಯಿತು ಎಂದಿದ್ದಾರೆ.
‘ನಿಜ ಹೇಳಬೇಕೆಂದರೆ, ನಾವು ಇದಕ್ಕಿಂತ ಉತ್ತಮವಾಗಿ ಆಡಬಹುದಿತ್ತು. ಇಶಾನ್ ಮತ್ತು ನಾನು ಜೊತೆಯಾಗಿ ಉತ್ತಮ ಆಟವಾಡುವ ಮೂಲಕ ತಂಡಕ್ಕೆ ವೇಗ ನೀಡಿದ್ದೆವು. ಆದರೆ ಆ ಬಳಿಕ ಸತತವಾಗಿ ವಿಕೆಟ್ಗಳನ್ನು ಕಳೆದುಕೊಂಡೆವು. ಇದರಿಂದ ಹೊಸದಾಗಿ ಬಂದ ಬ್ಯಾಟರ್ಗಳ ಮೇಲೆ ಒತ್ತಡ ಹೆಚ್ಚಾಯಿತು. ಆದಾಗ್ಯೂ ಪಿಚ್ ಬ್ಯಾಟಿಂಗ್ಗೆ ಅಷ್ಟೊಂದು ಸುಲಭವಾಗಿರಲಿಲ್ಲ. ಚೆಂಡು ಕೆಲವೊಮ್ಮೆ ಸ್ವಿಂಗ್ ಆಗುತ್ತಿದ್ದರೆ, ಮತ್ತೆ ಕೆಲವು ಸಂದರ್ಭಗಳಲ್ಲಿ ಪಿಚ್ನಲ್ಲಿ ನಿಂತು ಬರುತ್ತಿತ್ತು. ಇನ್ನು ಕೆಲವೊಮ್ಮೆ ವೇಗವಾಗಿ ಬ್ಯಾಟ್ಗೆ ಬರುತ್ತಿತ್ತು. ಇದೇ ಕಾರಣಕ್ಕೆ ಬ್ಯಾಟರ್ಗಳಿಗೆ ರನ್ ಗಳಿಸುವುದು ಸವಾಲಾಗಿತ್ತು.
‘ವಿಶೇಷವಾಗಿ ಚೆಂಡು ಸ್ವಿಂಗ್ ಆಗುತ್ತಿದ್ದಾಗ ಮತ್ತು ಪಿಚ್ನಲ್ಲಿ ನಿಂತು ಬರುತ್ತಿದ್ದಾಗ ಬ್ಯಾಟಿಂಗ್ ಮಾಡುವುದು ಸುಲಭವಾಗಿರಲಿಲ್ಲ. ಕೆಲವೊಮ್ಮೆ ಚೆಂಡು ವೇಗವಾಗಿಯೂ ಬರುತ್ತಿತ್ತು. ನಾನು ಮತ್ತು ತಿಲಕ್ ವರ್ಮಾ ಕೂಡ ಇದೇ ರೀತಿಯ ಎಸೆತಗಳಲ್ಲಿ ವಿಕೆಟ್ ಕಳೆದುಕೊಂಡೆವು. ಹೀಗಾಗಿ ಬ್ಯಾಟಿಂಗ್ ಸವಾಲಿನಿಂದ ಕೂಡಿತ್ತು. ಆದರೂ 194 ರನ್ ಗಳಿಸಿದ್ದು ಉತ್ತಮ ಮೊತ್ತ ಎಂದು ಭಾವಿಸುತ್ತೇನೆ’ ಎಂದರು.
ಭಾರತದ ಬೌಲಿಂಗ್ ಮತ್ತು ಫೀಲ್ಡಿಂಗ್ ವಿಭಾಗದಲ್ಲೂ ಸುಧಾರಣೆ ಅಗತ್ಯವಿದೆ ಎಂದ ಅಯ್ಯರ್, ‘ಬೌಲಿಂಗ್ ಮತ್ತು ಫೀಲ್ಡಿಂಗ್ನಲ್ಲಿ ನಾವು ಇನ್ನೂ ಉತ್ತಮವಾಗಿ ಆಡಬಹುದಿತ್ತು. ಕೆಲವು ಸಂದರ್ಭಗಳಲ್ಲಿ ನಮ್ಮ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ಆದರೆ ಇದೊಂದು ಉತ್ತಮ ಕಲಿಕೆಯ ಅನುಭವ. ನ್ಯೂಜಿಲೆಂಡ್ನಂತಹ ವಿದೇಶಿ ನೆಲದಲ್ಲಿ ವಿಭಿನ್ನ ಮೈದಾನಗಳಲ್ಲಿ ಆಡುವುದರಿಂದ ಸಾಕಷ್ಟು ಅನುಭವ ಸಿಗುತ್ತದೆ. ಸರಣಿಯ ಕೊನೆಯ ಎರಡು ಪಂದ್ಯಗಳಲ್ಲಿ ತಂಡದ ಸಾಮರ್ಥ್ಯವನ್ನು ಪರೀಕ್ಷಿಸುವ ಉದ್ದೇಶವಿತ್ತು. ಮೊದಲ ಮೂರು ಪಂದ್ಯಗಳು ತಂಡಕ್ಕೆ ಉತ್ತಮ ಲಯ ಕಂಡುಕೊಳ್ಳಲು ನೆರವಾದರೆ, ಕೊನೆಯ ಎರಡು ಪಂದ್ಯಗಳಲ್ಲಿ ಹೊಸ ಪ್ರಯೋಗಗಳನ್ನು ಮಾಡಲು ಮತ್ತು ತಂಡವನ್ನು ಸವಾಲಿಗೆ ಒಡ್ಡಲು ಅವಕಾಶ ಸಿಕ್ಕಿತ್ತು ಎಂದರು.
ಮೊದಲ ಮೂರು ಪಂದ್ಯ ಭಾರತಕ್ಕೆ, ಕೊನೆಯ ಎರಡು ಕಿವೀಸ್ಗೆ; 3-2ರಲ್ಲಿ ಸರಣಿ ಅಂತ್ಯ
ಮುಂದಿನ ದಿನಗಳಲ್ಲಿ ನಡೆಯಲಿರುವ ಏಕದಿನ ಸರಣಿಯತ್ತ ತಂಡ ಗಮನ ಹರಿಸಲಿದೆ ಎಂದ ಅವರು, ಸದ್ಯಕ್ಕೆ ಟಿ20 ಸರಣಿಯ ಸೋಲಿನ ಬಗ್ಗೆ ಹೆಚ್ಚು ಯೋಚಿಸಲು ಬಯಸುವುದಿಲ್ಲ ಎಂದರು. ಅದರೆ ವಿಶೇಷವಾಗಿ ಫೀಲ್ಡಿಂಗ್ ವಿಭಾಗದಲ್ಲಿ ಸುಧಾರಣೆ ಮಾಡಿಕೊಳ್ಳಬೇಕಿದೆ ಎಂದು ಒತ್ತಿ ಹೇಳಿದರು. ‘ಸದ್ಯ ನಮ್ಮ ಮುಂದಿರುವ ಏಕದಿನ ಪಂದ್ಯಗಳತ್ತ ಗಮನ ಹರಿಸಬೇಕಿದೆ. ಆಟಗಾರರು ಉತ್ತಮ ಉತ್ಸಾಹದಲ್ಲಿದ್ದಾರೆ. ವಿದೇಶಿ ನೆಲದಲ್ಲಿ ಆಡಿದಾಗ ವಿಭಿನ್ನ ಸವಾಲುಗಳು ಎದುರಾಗುತ್ತವೆ. ಅವುಗಳನ್ನು ಧೈರ್ಯವಾಗಿ ಎದುರಿಸಿದಷ್ಟು ನಮ್ಮ ಆಟ ಉತ್ತಮವಾಗುತ್ತದೆ. ಇಂದಿನ ಪಂದ್ಯದಲ್ಲೂ ಉತ್ತಮ ಅವಕಾಶವಿತ್ತು. ಆದರೆ ಅದನ್ನು ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ. ನಾವು ಒಟ್ಟಿಗೆ ಕುಳಿತು ಚರ್ಚಿಸಿ ಕೆಲವು ಅಂಶಗಳನ್ನು ಸುಧಾರಿಸಿಕೊಳ್ಳಬೇಕು. ಅದರಲ್ಲೂ ಫೀಲ್ಡಿಂಗ್ ನಮ್ಮ ಗಮನ ಹರಿಸಬೇಕಾದ ಪ್ರಮುಖ ವಿಭಾಗವಾಗಿದೆ’ ಎಂದು ಹೇಳಿದರು.
Published On - 6:11 pm, Sun, 1 November 26