
IPL 2026: ಐಪಿಎಲ್ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (GT) ತಂಡ ಸೋಲನುಭವಿಸಿದೆ. ಧರ್ಮಶಾಲಾದ ಹೆಚ್ಪಿಸಿಎ ಮೈದಾನದಲ್ಲಿ ನಡೆದ ಆರ್ಸಿಬಿ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದು ಶುಭ್ಮನ್ ಗಿಲ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ 20 ಓವರ್ಗಳಲ್ಲಿ ಬರೋಬ್ಬರಿ 254 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಗುಜರಾತ್ ಟೈಟಾನ್ಸ್ ತಂಡವು 19.3 ಓವರ್ಗಳಲ್ಲಿ 162 ರನ್ಗಳಿಗೆ ಆಲೌಟ್ ಆಗಿದೆ. ಈ ಮೂಲಕ 92 ರನ್ಗಳಿಂದ ಹೀನಾಯವಾಗಿ ಸೋಲೊಪ್ಪಿಕೊಂಡಿದೆ.
ಈ ಸೋಲಿನ ಬಳಿಕ ಮಾತನಾಡಿದ ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭ್ಮನ್ ಗಿಲ್, ನಮ್ಮ ಸೋಲಿಗೆ ಕಳಪೆ ಫೀಲ್ಡಿಂಗ್ ಪ್ರಮುಖ ಕಾರಣ ಎಂದಿದ್ದಾರೆ. ಈ ಪಂದ್ಯದಲ್ಲಿ 12 ಅಥವಾ 13ನೇ ಓವರ್ವರೆಗೆ ನಾವು ಉತ್ತಮ ಹಿಡಿತ ಸಾಧಿಸಿದ್ದೆವು. ಆದರೆ ಆ ಬಳಿಕ ನಮ್ಮ ಕಳಪೆ ಫೀಲ್ಡಿಂಗ್ಗೆ ಭಾರೀ ಬೆಲೆ ತೆರಬೇಕಾಯಿತು.
ನಮ್ಮ ಫೀಲ್ಡಿಂಗ್ ಅತ್ಯಂತ ಕಳಪೆ ಮಟ್ಟದಲ್ಲಿತ್ತು ಎಂಬುದನ್ನು ಒಪ್ಪಿಕೊಳ್ಳಲೇಬೇಕು. ಏಕೆಂದರೆ ಕೆಲ ಪ್ರಮುಖ ಕ್ಯಾಚ್ಗಳನ್ನು ಕೈ ಬಿಟ್ಟೆವು. ಇದರ ಸಂಪೂರ್ಣ ಲಾಭ ಪಡೆದ ಆರ್ಸಿಬಿ ಬ್ಯಾಟರ್ಗಳು ಬೃಹತ್ ಮೊತ್ತ ಪೇರಿಸಿದ್ದಾರೆ. ಇದರಿಂದ ನಾವು ಸೋಲಬೇಕಾಯಿತು ಎಂದು ಗಿಲ್ ಹೇಳಿದ್ದಾರೆ.
ಇನ್ನು 255 ರನ್ಗಳ ಗುರಿ ಬೆನ್ನತ್ತಲು ಸಾಧ್ಯವಿತ್ತೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಶುಭ್ಮನ್ ಗಿಲ್, ನಾವು ಉತ್ತಮ ಆರಂಭ ಪಡೆದಿದ್ದರೆ ಖಂಡಿತವಾಗಿಯೂ ಸಾಧ್ಯವಿತ್ತು. ಏಕೆಂದರೆ ಪವರ್ಪ್ಲೇನಲ್ಲಿ ಉತ್ತಮವಾಗಿ ರನ್ ಗಳಿಸಿದ್ದರೆ ಈ ಗುರಿಯನ್ನು ಚೇಸ್ ಮಾಡುವುದು ಕಷ್ಟವಾಗಿರಲಿಲ್ಲ.
ಆದರೆ ನಮ್ಮ ಆರಂಭಿಕ ದಾಂಡಿಗ ಸಾಯಿ ಸುದರ್ಶನ್ ದುರಾದೃಷ್ಟಕರ ರೀತಿಯಲ್ಲಿ ಔಟಾದರು. ಇಂತಹ ಹಿಟ್ ವಿಕೆಟ್ ಔಟ್ಗಳು ಸಾಮಾನ್ಯವಾಗಿ ಕಾಣಿಸುವುದಿಲ್ಲ. ಆದರೆ ಇಂದು ದುರಾದೃಷ್ಟದಿಂದ ಅವರು ಬೇಗನೆ ವಿಕೆಟ್ ಒಪ್ಪಿಸಿದರು. ಇನ್ನು ನಮ್ಮ ಕಡೆಯಿಂದಲೂ ಉತ್ತಮ ಬ್ಯಾಟಿಂಗ್ ಬಂದಿರಲಿಲ್ಲ.
ಒಂದು ವೇಳೆ ಪವರ್ಪ್ಲೇನಲ್ಲಿ ನಾವು ಉತ್ತಮವಾಗಿ ಬ್ಯಾಟ್ ಬೀಸಿದ್ದರೆ, 255 ರನ್ ಚೇಸ್ ಮಾಡುವುದು ಕಷ್ಟವೇನು ಆಗುತ್ತಿರಲಿಲ್ಲ. ಏಕೆಂದರೆ ಈ ಮೈದಾನವು ವೇಗದ ಔಟ್ ಫೀಲ್ಡ್ ಹೊಂದಿದೆ. ಹೀಗಾಗಿ ದಾಖಲೆಯ ಮೊತ್ತವನ್ನು ಚೇಸ್ ಮಾಡಲು ಅವಕಾಶವಿತ್ತು. ಆದರೆ ನಾವು ಆರಂಭಿಕ ಆಘಾತಕ್ಕೆ ಒಳಗಾದ ಕಾರಣ ಸೋಲಬೇಕಾಯಿತು ಎಂದರು.
ಈ ಸೋಲಿನ ಹೊರತಾಗಿಯೂ ನಮಗೆ ಮತ್ತೊಂದು ಅವಕಾಶವಿದೆ. ದ್ವಿತೀಯ ಕ್ವಾಲಿಫೈಯರ್ನಲ್ಲಿ ಗೆದ್ದು ಫೈನಲ್ಗೇರಬಹುದು. ಹೀಗಾಗಿ ಈ ಸೋಲನ್ನು ನಾವು ಆದಷ್ಟು ಬೇಗ ಮರೆಯಬೇಕು ಎಂದು ಶುಭ್ಮನ್ ಗಿಲ್ ಸಹ ಆಟಗಾರರಿಗೆ ಕಿವಿಮಾತು ಹೇಳಿದರು.
ಇದನ್ನೂ ಓದಿ: IPL 2026: ಪ್ಲೇಆಫ್ ಚರಿತ್ರೆಯನ್ನೇ ಬದಲಿಸಿದ RCB
ಅಲ್ಲದೆ ಮೊಹಾಲಿಯಲ್ಲಿ ನಡೆಯಲಿರುವ ದ್ವಿತೀಯ ಕ್ವಾಲಿಫೈಯರ್ ಪಂದ್ಯದಲ್ಲಿ ಇಂದಿನ ತಪ್ಪುಗಳನ್ನು ತಿದ್ದುಕೊಂಡು ಕಣಕ್ಕಿಳಿಯಬೇಕಿದೆ. ಅಲ್ಲಿ ಹೊಸ ಆರಂಭ ಹಾಗೂ ಹೊಸ ಉತ್ಸಾಹದೊಂದಿಗೆ ಕಣಕ್ಕಿಳಿಯುವ ಮೂಲಕ ಗೆಲ್ಲುವ ವಿಶ್ವಾಸವಿದೆ. ಈ ಮೂಲಕ ಗುಜರಾತ್ ಟೈಟಾನ್ಸ್ ತಂಡವು ಫೈನಲ್ಗೇರುವ ವಿಶ್ವಾಸವನ್ನು ಶುಭ್ಮನ್ ಗಿಲ್ ವ್ಯಕ್ತಪಡಿಸಿದ್ದಾರೆ.