AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs AUS: ನಾಯಕನಾಗಿ ಮೊದಲ ಪಂದ್ಯ ಸೋತ ಬಳಿಕ ಶುಭ್​ಮನ್ ಗಿಲ್ ಹೇಳಿದ್ದೇನು?

Shubman Gill post match comments: ಭಾರತವು ಆಸ್ಟ್ರೇಲಿಯಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ 7 ವಿಕೆಟ್‌ಗಳ ಹೀನಾಯ ಸೋಲು ಅನುಭವಿಸಿತು. ರೋಹಿತ್, ಕೊಹ್ಲಿ ಅವರಂತಹ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ವೈಫಲ್ಯ ಹಾಗೂ ಮಳೆಯ ಅಡಚಣೆಯಿಂದ ತಂಡಕ್ಕೆ ದೊಡ್ಡ ಗುರಿ ನೀಡಲು ಸಾಧ್ಯವಾಗಲಿಲ್ಲ. ಶುಭಮನ್ ಗಿಲ್ ಪಂದ್ಯದ ನಂತರ, ತಂಡವು ಬಹಳಷ್ಟು ಕಲಿತಿದ್ದು, ಕಠಿಣ ಸನ್ನಿವೇಶದಲ್ಲಿ ಆಡಲು ಪ್ರಯತ್ನಿಸಿದೆ ಎಂದು ಹೇಳಿದ್ದಾರೆ.

IND vs AUS: ನಾಯಕನಾಗಿ ಮೊದಲ ಪಂದ್ಯ ಸೋತ ಬಳಿಕ ಶುಭ್​ಮನ್ ಗಿಲ್ ಹೇಳಿದ್ದೇನು?
Shubman Gill
ಪೃಥ್ವಿಶಂಕರ
|

Updated on:Oct 19, 2025 | 9:09 PM

Share

ಭಾನುವಾರ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ಭಾರತ (India vs Australia) 7 ವಿಕೆಟ್‌ಗಳ ಹೀನಾಯ ಸೋಲು ಅನುಭವಿಸಿತು. ತಂಡದ ಈ ಸೋಲಿಗೆ ಅಗ್ರ ಕ್ರಮಾಂಕದ ಬ್ಯಾಟರ್​ಗಳ ವೈಫಲ್ಯವೇ ಕಾರಣ ಎನ್ನಬಹುದು. ಅದರಲ್ಲೂ ಅನುಭವಿಗಳಾದ ರೋಹಿತ್ ಶರ್ಮಾ (Rohit Sharma) ಹಾಗೂ ವಿರಾಟ್ ಕೊಹ್ಲಿ (Virat Kohli) ಬಹುಬೇಗನೇ ಪೆವಿಲಿಯನ್ ಸೇರಿಕೊಂಡಿದ್ದು, ತಂಡವನ್ನು ಚೇತರಿಸಿಕೊಳ್ಳಲಾಗದಷ್ಟು ಹಿಂದಕ್ಕೆ ತಳ್ಳಿತು. ಇದರ ಜೊತೆಗೆ ನಿರಂತರ ಮಳೆಯಿಂದಾಗಿ ಪಂದ್ಯವನ್ನು ಆಗಾಗ್ಗೆ ನಿಲ್ಲಿಸಬೇಕಾಯಿತು. ಇದರಿಂದ ಭಾರತ ತಂಡ 26 ಓವರ್​ಗಳಲ್ಲಿ ತನ್ನ ಗುರಿ ನಿಗದಿಪಡಿಸಬೇಕಾಯಿತು. ಆದರೆ ಆರಂಭದಲ್ಲೇ ತಂಡದ ಪ್ರಮುಖ ವಿಕೆಟ್​ಗಳು ಉದುರಿದ ಕಾರಣ ಆಸೀಸ್ ವಿರುದ್ಧ ಬೃಹತ್ ಮೊತ್ತವನ್ನು ಕಲೆಹಾಕಲು ಸಾಧ್ಯವಾಗಲಿಲ್ಲ. ಇನ್ನು ಪಂದ್ಯದ ಬಳಿಕ ಮಾತನಾಡಿದ ಗಿಲ್ ಕೂಡ ಯಾರನ್ನು ದೂರದೆ, ಸಾಕಷ್ಟು ಕಲಿತಿರುವುದಾಗಿ ಹೇಳಿದ್ದಾರೆ.

ಬಹಳಷ್ಟು ಕಲಿತಿದ್ದೇವೆ ಎಂದ ಗಿಲ್

ಪಂದ್ಯದ ನಂತರದ ಪ್ರಸ್ತುತಿ ಸಮಾರಂಭದಲ್ಲಿ ಮಾತನಾಡಿದ ಗಿಲ್, ‘ಪವರ್‌ಪ್ಲೇನಲ್ಲಿ ನೀವು ಮೂರು ವಿಕೆಟ್‌ಗಳನ್ನು ಕಳೆದುಕೊಂಡಾಗ, ಮತ್ತೆ ಆಟಕ್ಕೆ ಮರಳುವುದು ಸುಲಭವಲ್ಲ. ಮೊದಲೇ ಆರಂಭಿಕ ವಿಕೆಟ್​ಗಳನ್ನು ಕಳೆದುಕೊಂಡ ನಂತರ ಮಳೆಯಿಂದಾಗಿ ಪಂದ್ಯ ಆಗಾಗ್ಗೆ ನಿಂತಿತು. ಇದೆಲ್ಲದರ ನಡುವೆಯೂ ತಂಡವು ಮತ್ತೆ ಆಟಕ್ಕೆ ಮರಳಲು ಬಯಸಿತು. ಆದರೆ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಆದಾಗ್ಯೂ ಈ ಪಂದ್ಯದಿಂದ ನಾವು ಬಹಳಷ್ಟು ಕಲಿತಿದ್ದೇವೆ ಮತ್ತು ಕೆಲವು ಸಕಾರಾತ್ಮಕ ಅಂಶಗಳನ್ನು ಪಡೆದುಕೊಂಡಿದ್ದೇವೆ. ನಾವು 130 ರನ್‌ಗಳನ್ನು ಡಿಫೆಂಡ್ ಮಾಡಬೇಕಿತ್ತು. ಆದರೆ ಪಂದ್ಯವನ್ನು ಕೊನೆಯವರೆಗೂ ಕೊಂಡೊಯ್ಯಲು ಸಾಧ್ಯವಾಗಲಿಲ್ಲ, ಆದರೆ ಆಸೀಸ್ ತಂಡವನ್ನು ಸುಲಭವಾಗಿ ಗೆಲ್ಲಲು ಬಿಡಲಿಲ್ಲ. ಇದರಿಂದ ನಾವು ತುಂಬಾ ತೃಪ್ತರಾಗಿದ್ದೇವೆ’ ಎಂದಿದ್ದಾರೆ.

IND vs AUS: ರೋಹಿತ್ ಎದುರು 176.5 ಕಿ.ಮೀ ವೇಗದಲ್ಲಿ ಬೌಲ್ ಮಾಡಿದ್ರ ಸ್ಟಾರ್ಕ್​?

ಪಂದ್ಯ ಹೀಗಿತ್ತು

ಪಂದ್ಯದ ಬಗ್ಗೆ ಹೇಳುವುದಾದರೆ.. ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಭಾರತವನ್ನು ಏಳು ವಿಕೆಟ್‌ಗಳಿಂದ ಸೋಲಿಸಿ, ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. ಮಳೆಯಿಂದಾಗಿ ಪಂದ್ಯವನ್ನು ನಾಲ್ಕು ಬಾರಿ ನಿಲ್ಲಿಸಬೇಕಾಯಿತು, ಇದರಿಂದಾಗಿ ತಲಾ 26 ಓವರ್‌ಗಳನ್ನು ಆಡಲು ನಿರ್ಧರಿಸಲಾಯಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ 26 ಓವರ್‌ಗಳಲ್ಲಿ ಒಂಬತ್ತು ವಿಕೆಟ್‌ಗಳಿಗೆ 136 ರನ್ ಗಳಿಸಿತು. ಡಕ್‌ವರ್ತ್-ಲೂಯಿಸ್ ನಿಯಮದಡಿಯಲ್ಲಿ, ಆಸ್ಟ್ರೇಲಿಯಾ ಗೆಲ್ಲಲು 131 ರನ್‌ಗಳ ಗುರಿಯನ್ನು ಪಡೆಯಿತು. ನಾಯಕ ಮಿಚೆಲ್ ಮಾರ್ಷ್ ಅವರ ಅದ್ಭುತ ಇನ್ನಿಂಗ್ಸ್ ಆಧಾರದ ಮೇಲೆ ಆಸ್ಟ್ರೇಲಿಯಾ 21.1 ಓವರ್‌ಗಳಲ್ಲಿ ಮೂರು ವಿಕೆಟ್‌ಗಳಿಗೆ 131 ರನ್ ಗಳಿಸುವ ಮೂಲಕ ಪಂದ್ಯವನ್ನು ಗೆದ್ದುಕೊಂಡಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:03 pm, Sun, 19 October 25