ಗೆಬ್ಬೆಗಾದ ಸೇಂಟ್ ಜಾರ್ಜ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆದ ಟೀಮ್ ಇಂಡಿಯಾ (Team India) ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಸೌತ್ ಆಫ್ರಿಕಾ ತಂಡದ ನಾಯಕ ಐಡೆನ್ ಮಾರ್ಕ್ರಾಮ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆದಿರಲಿಲ್ಲ.
ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ (0) ಮಾರ್ಕೊ ಯಾನ್ಸೆನ್ ಎಸೆದ ಮೊದಲ ಓವರ್ನ 3ನೇ ಎಸೆತದಲ್ಲಿ ಕ್ಯಾಚ್ ನೀಡಿ ಔಟಾದರು. ಇದರ ಬೆನ್ನಲ್ಲೇ ವಿಲಿಯಮ್ಸ್ ಎಸೆತದಲ್ಲಿ ಶುಭ್ಮನ್ ಗಿಲ್ (0) ಎಲ್ಬಿಡಬ್ಲ್ಯೂ ಆಗಿ ನಿರ್ಗಮಿಸಿದರು.
ಆ ಬಳಿಕ ಬಂದ ಎಡಗೈ ದಾಂಡಿಗ ತಿಲಕ್ ವರ್ಮಾ 20 ಎಸೆತಗಳಲ್ಲಿ 29 ರನ್ ಬಾರಿಸಿದರೂ ಹೆಚ್ಚು ಹೊತ್ತು ಕ್ರೀಸ್ನಲ್ಲಿರಲಿಲ್ಲ. ಈ ಹಂತದಲ್ಲಿ ಜೊತೆಗೂಡಿದ ಸೂರ್ಯಕುಮಾರ್ ಯಾದವ್ ಹಾಗೂ ರಿಂಕು ಸಿಂಗ್ ಟೀಮ್ ಇಂಡಿಯಾಗೆ ಆಸರೆಯಾಗಿ ನಿಂತರು.
ಒಂದೆಡೆ ಸೂರ್ಯಕುಮಾರ್ ಯಾದವ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರೆ ರಿಂಕು ಸಿಂಗ್ ಉತ್ತಮ ಸಾಥ್ ನೀಡಿದರು. ಪರಿಣಾಮ ಕೇವಲ 29 ಎಸೆತಗಳಲ್ಲಿ ಸೂರ್ಯಕುಮಾರ್ ಅರ್ಧಶತಕ ಪೂರೈಸಿದರು. ಆ ಬಳಿಕ ಕೂಡ ಸ್ಪೋಟಕ ಬ್ಯಾಟಿಂಗ್ ಮುಂದುವರೆಸಿದ ಸೂರ್ಯ 36 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ 56 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.
ನಾಯಕ ನಿರ್ಗಮಿಸುತ್ತಿದ್ದಂತೆ ರಿಂಕು ಸಿಂಗ್ ಅಬ್ಬರ ಶುರು ಮಾಡಿದ್ದರು. ಅಂತಿಮ ಓವರ್ಗಳಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ರಿಂಕು ಸಿಂಗ್ 30 ಎಸೆತಗಳಲ್ಲಿ ಚೊಚ್ಚಲ ಅರ್ಧಶತಕ ಪೂರೈಸಿದರು.
ಅರ್ಧಶತಕ ಬಳಿಕ ಹೊಡಿಬಡಿ ಆಟಕ್ಕೆ ಒತ್ತು ನೀಡಿದ ರಿಂಕು ಸಿಂಗ್ ಕೇವಲ 39 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 9 ಫೋರ್ಗಳೊಂದಿಗೆ 68 ರನ್ ಚಚ್ಚಿದರು. ಟೀಮ್ ಇಂಡಿಯಾ 19.3 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 180 ರನ್ಗಳಿಸಿದ್ದ ವೇಳೆ ಮಳೆ ಬಂದಿದ್ದರಿಂದ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು.
ಇನ್ನು ಮಳೆ ನಿಂತ ಬಳಿಕ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಓವರ್ ಕಡಿತಗಳೊಂದಿಗೆ ಸೌತ್ ಆಫ್ರಿಕಾ ತಂಡಕ್ಕೆ 15 ಓವರ್ಗಳಲ್ಲಿ 152 ರನ್ಗಳ ಗುರಿ ನೀಡಲಾಯಿತು. ಈ ಗುರಿಯನ್ನು ಬೆನ್ನತ್ತಿದ ಸೌತ್ ಆಫ್ರಿಕಾ ತಂಡಕ್ಕೆ ರೀಝ ಹೆಂಡ್ರಿಕ್ಸ್ ಹಾಗೂ ಮ್ಯೂಥ್ಯೂ ಬ್ರೀಟ್ಝ್ಕೆ ಸ್ಪೋಟಕ ಆರಂಭ ಒದಗಿಸಿದ್ದರು. ಮೊದಲ 2 ಓವರ್ಗಳಲ್ಲಿ 38 ರನ್ ಬಾರಿಸಿ ಬೃಹತ್ ಮೊತ್ತದ ಚೇಸಿಂಗ್ಗೆ ಉತ್ತಮ ಅಡಿಪಾಯ ಹಾಕಿಕೊಂಡಿದ್ದರು.
ಉತ್ತಮ ಆರಂಭದ ಬೆನ್ನಲ್ಲೇ ಮ್ಯಾಥ್ಯೂ ಬ್ರೀಟ್ಝ್ಕೆ (17) ರನೌಟ್ಗೆ ಬಲಿಯಾದರು. ಇದಾಗ್ಯೂ ಮೊದಲ 5 ಓವರ್ಗಳಲ್ಲಿ 68 ರನ್ ಬಾರಿಸಿ ಸೌತ್ ಆಫ್ರಿಕಾ ಬ್ಯಾಟರ್ಗಳು ಅಬ್ಬರಿಸಿದರು. ಈ ಹಂತದಲ್ಲಿ ಹೆಂಡ್ರಿಕ್ಸ್ ಜೊತೆಗೂಡಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಐಡೆನ್ ಮಾರ್ಕ್ರಾಮ್ (30) ಔಟಾದರು. ಆದರೆ ಅಷ್ಟರಲ್ಲಾಗಲೇ ಸೌತ್ ಆಫ್ರಿಕಾ ತಂಡವು 8 ಓವರ್ಗಳಲ್ಲಿ 98 ರನ್ ಕಲೆಹಾಕಿತ್ತು.
ಈ ಹಂತದಲ್ಲಿ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಟೀಮ್ ಇಂಡಿಯಾ ಬೌಲರ್ಗಳು ರೀಝ ಹೆಂಡ್ರಿಕ್ಸ್ (49) ಹಾಗೂ ಹೆನ್ರಿಕ್ ಕ್ಲಾಸೆನ್ (7) ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಆದರೆ ಐದನೇ ವಿಕೆಟ್ಗೆ ಜೊತೆಗೂಡಿದ ಡೇವಿಡ್ ಮಿಲ್ಲರ್ ಹಾಗೂ ಟ್ರಿಸ್ಟಾನ್ ಸ್ಟಬ್ಸ್ ಉತ್ತಮ ಜೊತೆಯಾಟ ಪ್ರದರ್ಶಿಸಿದರು.
ಅಂತಿಮವಾಗಿ ಸೌತ್ ಆಫ್ರಿಕಾ ತಂಡವು 13.5 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 154 ರನ್ ಬಾರಿಸುವ ಮೂಲಕ 5 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಸೌತ್ ಆಫ್ರಿಕಾ (ಪ್ಲೇಯಿಂಗ್ XI): ಮ್ಯಾಥ್ಯೂ ಬ್ರೀಟ್ಝ್ಕೆ, ರೀಝ ಹೆಂಡ್ರಿಕ್ಸ್, ಐಡೆನ್ ಮಾರ್ಕ್ರಾಮ್ (ನಾಯಕ), ಹೆನ್ರಿಕ್ ಕ್ಲಾಸೆನ್ (ವಿಕೆಟ್ ಕೀಪರ್), ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ಮಾರ್ಕೊ ಜಾನ್ಸೆನ್, ಆಂಡಿಲ್ ಫೆಹ್ಲುಕ್ವಾಯೊ, ಜೆರಾಲ್ಡ್ ಕೊಯೆಟ್ಜಿ, ಲಿಜಾಡ್ ವಿಲಿಯಮ್ಸ್, ತಬ್ರೇಝ್ ಶಮ್ಸಿ.
ಇದನ್ನೂ ಓದಿ: ವಿರಾಟ್ ಕೊಹ್ಲಿಯ ದಾಖಲೆ ಸರಿಗಟ್ಟಿದ ಸೂರ್ಯಕುಮಾರ್ ಯಾದವ್
ಭಾರತ (ಪ್ಲೇಯಿಂಗ್ XI): ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ರಿಂಕು ಸಿಂಗ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್, ಮುಕೇಶ್ ಕುಮಾರ್.