
ಟೀಂ ಇಂಡಿಯಾದ ಮಾಜಿ ವೇಗದ ಬೌಲರ್ ಶ್ರೀಶಾಂತ್ ಅವರ ತಂದೆ ವಿ. ಶಾಂತಕುಮಾರನ್ ನಾಯರ್ ಅವರು ಶುಕ್ರವಾರ ತಡರಾತ್ರಿ ಇಹಲೋಕ ತ್ಯಜಿಸಿದ್ದಾರೆ. ವರದಿಗಳ ಪ್ರಕಾರ, ಹೃದಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದ 89 ವರ್ಷ ವಯಸ್ಸಿನ ವಿ. ಶಾಂತಕುಮಾರನ್ ನಾಯರ್ ಅವರನ್ನು ಕೇರಳದ ಕೊಚ್ಚಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ರಾತ್ರಿ 10 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಭಾರತೀಯ ಜೀವ ವಿಮಾ ನಿಗಮದಲ್ಲಿ ಕೆಲಸ ಮಾಡುತ್ತಿದ್ದ ಶಾಂತಕುಮಾರನ್ ಅವರು ಕೇರಳದಲ್ಲಿ ವಲಯ ವ್ಯವಸ್ಥಾಪಕರಾಗಿ ನಿವೃತ್ತರಾಗಿದ್ದರು. ಶಾಂತಕುಮಾರನ್ ಅವರು ಕೇರಳದ ಕೋತಮಂಗಲಂ ನಿವಾಸಿಯಾಗಿದ್ದು, ಶ್ರೀಶಾಂತ್ ಸೇರಿದಂತೆ ಅವರ ಮೂವರು ಮಕ್ಕಳು ಅಲ್ಲಿಯೇ ಜನಿಸಿದ್ದರು.
ಶ್ರೀಶಾಂತ್ ತಮ್ಮ ತಂದೆಯ ನಿಧನದ ಸುದ್ದಿಯನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಶ್ರೀಶಾಂತ್ ಅವರ ತಂದೆಯ ಮೃತದೇಹ ಶನಿವಾರ ಆಸ್ಪತ್ರೆಯಲ್ಲಿಯೇ ಇರಲಿದ್ದು, ಅಲ್ಲಿಂದ ಕೋತಮಂಗಲದಲ್ಲಿರುವ ಕುಟುಂಬದ ಮನೆಗೆ ತೆಗೆದುಕೊಂಡು ಹೋಗಲಾಗುವುದು. ಶನಿವಾರ ಮತ್ತು ಭಾನುವಾರ ಸಂಬಂಧಿಕರ ಆಗಮನಕ್ಕಾಗಿ ಕುಟುಂಬ ಕಾಯುತ್ತಿದೆ. ಸೆಪ್ಟೆಂಬರ್ 13 ರ ಭಾನುವಾರ, ಮೃತದೇಹವನ್ನು ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 2:00 ರವರೆಗೆ ಅಂತಿಮ ದರ್ಶನಕ್ಕಾಗಿ ಮನೆಯಲ್ಲಿ ಇರಿಸಲಾಗುತ್ತದೆ. ನಂತರ ಸಂಜೆ 4:00 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ.
ಮಗನ ವೃತ್ತಿಜೀವನದುದ್ದಕ್ಕೂ ಬೆನ್ನೇಲುಬಾಗಿ ನಿಂತಿದ್ದ ಶಾಂತಕುಮಾರನ್ ಅವರು 2013 ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಶ್ರೀಶಾಂತ್ ಸಿಲುಕಿಕೊಂಡಿದ್ದಾಗ, ಎಂಎಸ್ ಧೋನಿ ಮತ್ತು ಹರ್ಭಜನ್ ಸಿಂಗ್ ಅವರತ್ತ ಬೊಟ್ಟು ಮಾಡಿದ್ದರು. ನನ್ನ ಮಗನ ಮೇಲೆ ಸುಳ್ಳು ಆರೋಪ ಹೊರಿಸಲಾಗುತ್ತಿದೆ ಎಂದಿದ್ದರು. ಹಾಗೆಯೇ ಧೋನಿ ಮತ್ತು ಹರ್ಭಜನ್ ಸಿಂಗ್ ತಮ್ಮ ಮಗನ ವೃತ್ತಿಜೀವನವನ್ನು ಹಾಳುಮಾಡಲು ಬಯಸಿದ್ದರು. ಅದರಲ್ಲೂ ಧೋನಿ ತನ್ನ ಮಗನ ವಿರುದ್ಧ ಸೇಡು ತೀರಿಸಿಕೊಳ್ಳಲು ಬಯಸುತ್ತಿದ್ದಾರೆ ಎಂದು ಹೇಳಿಕೆ ನೀಡುವ ಮೂಲಕ ಹೊಸ ವಿವಾದ ಹುಟ್ಟುಹಾಕಿದ್ದರು. ಆದಾಗ್ಯೂ, ಆ ನಂತರ ಅವರು ತಮ್ಮ ಹೇಳಿಕೆಗಳಿಗೆ ಕ್ಷಮೆಯಾಚಿಸಿದ್ದರು.
ಶ್ರೀಶಾಂತ್ಗೆ ಹರ್ಭಜನ್ ಕಪಾಳಮೋಕ್ಷ; 18 ವರ್ಷಗಳ ಬಳಿಕ ವಿಡಿಯೋ ಹಂಚಿಕೊಂಡ ಲಲಿತ್ ಮೋದಿ
ಇನ್ನು ಶ್ರೀಶಾಂತ್ ಅವರ ವೃತ್ತಿಜೀವನದ ಬಗ್ಗೆ ಹೇಳುವುದಾದರೆ… 43 ವರ್ಷದ ಶ್ರೀಶಾಂತ್ 2022 ರಲ್ಲಿ ಎಲ್ಲಾ ರೀತಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಭಾರತ ಪರ 27 ಟೆಸ್ಟ್, 53 ಏಕದಿನ ಮತ್ತು 10 ಟಿ20ಪಂದ್ಯಗಳನ್ನು ಆಡಿದ್ದ ಶ್ರೀಶಾಂತ್, ಕ್ರಮವಾಗಿ 87, 75 ಮತ್ತು 7 ವಿಕೆಟ್‌ಗಳನ್ನು ಕಬಳಿಸಿದ್ದರು. 2007 ರ ಟಿ20 ವಿಶ್ವಕಪ್ ಮತ್ತು 2011 ರ ಏಕದಿನ ವಿಶ್ವಕಪ್ ಗೆದ್ದ ಭಾರತೀಯ ತಂಡದ ಪ್ರಮುಖ ಸದಸ್ಯರಾಗಿದ್ದರು. 2015 ರಲ್ಲಿ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಆರೋಪದಿಂದ ನ್ಯಾಯಾಲಯದಿಂದ ಅವರು ಖುಲಾಸೆಗೊಂಡಿದ್ದರೂ, ಅವರು ಮತ್ತೆ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಆದಾಗ್ಯೂ ಶ್ರೀಶಾಂತ್ ತಮ್ಮ ಆಟಕ್ಕಿಂತ ಹೆಚ್ಚಾಗಿ ತಮ್ಮ ಹೇಳಿಕೆಗಳಿಂದಲೇ ಸುದ್ದಿಯಲ್ಲಿರುತ್ತಾರೆ ಮತ್ತು ಆಗಾಗ್ಗೆ ವಿವಾದಗಳಿಂದಲೂ ಸುದ್ದಿಯಾಗುತ್ತಿರುತ್ತಾರೆ.
Published On - 5:25 pm, Sat, 12 September 26