
2026 ರ ಟಿ20 ವಿಶ್ವಕಪ್ನ (T20 World Cup 2026) ಮೊದಲ ದಿನವೇ ಪಂದ್ಯವನ್ನಾಡಿದ ಆತಿಥೇಯ ಭಾರತ ತಂಡ ತನ್ನ ಮೊದಲ ಪಂದ್ಯದಲ್ಲಿ ಅಮೆರಿಕ ತಂಡವನ್ನು (India vs USA) ಎದುರಿಸಿತು. ಈ ಪಂದ್ಯಕ್ಕೂ ಮುನ್ನ ಅನುಭವಿಗಳು ಹಾಗೂ ಪರಿಣಿತರ ಹೇಳಿಕೆಯ ಪ್ರಕಾರ, ಬಲಿಷ್ಠ ಬ್ಯಾಟಿಂಗ್ ವಿಭಾಗವನ್ನು ಹೊಂದಿರುವ ಟೀಂ ಇಂಡಿಯಾ, ಯುಎಸ್ಎ ಬೌಲಿಂಗ್ ವಿಭಾಗವನ್ನು ಪುಡಿಪುಡಿ ಮಾಡಲಿದೆ ಎನ್ನಲಾಗುತ್ತಿತ್ತು. ಆದರೆ ಪಂದ್ಯ ಆರಂಭವಾದ ಮೊದಲ 6 ಓವರ್ಗಳಲ್ಲೇ ಟೀಂ ಇಂಡಿಯಾದ ಬ್ಯಾಟಿಂಗ್ ವಿಭಾಗದ ನ್ಯೂನತೆ ಜಗಜ್ಜಾಹೀರಾಯಿತು.
ಟಿ20 ವಿಶ್ವಕಪ್ ಇತಿಹಾಸದಲ್ಲಿ ಎರಡನೇ ಆವೃತ್ತಿಯನ್ನು ಆಡುತ್ತಿರುವ ಅಮೆರಿಕ ತಂಡ ತನ್ನ ಮೊದಲ ಆವೃತ್ತಿಯಲ್ಲಿ ಅಂದರೆ 2024 ರ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನಕ್ಕೆ ಮಣ್ಣು ಮುಕ್ಕಿಸಿ ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ಇದೀಗ ಈ ಆವೃತ್ತಿಯ ತನ್ನ ಮೊದಲ ಪಂದ್ಯದಲ್ಲೇ ಟೀಂ ಇಂಡಿಯಾದ ಅಹಂ ಮುರಿಯಿತು. ಅನಾನುಭವಿ ಯುಎಸ್ಎ ತಂಡದ ಎದುರು ಭಾರತದ ಬ್ಯಾಟರ್ಗಳ ಗರ್ವಭಂಗವಾಯಿತು. ಅಮೆರಿಕ ತಂಡದ ಕಾರ್ಯತಂತ್ರದ ಮುಂದೆ ಮಂಡಿಯೂರಿದ ಟೀಂ ಇಂಡಿಯಾ ಬ್ಯಾಟರ್ಗಳು ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ಇದರ ಫಲವಾಗಿ ತಂಡದ ಪ್ರಮುಖ 4 ವಿಕೆಟ್ಗಳು ಪವರ್ ಪ್ಲೇ ಒಳಗೆ ಪತನಗೊಂಡವು.
ಭಾರತದ ಪರ ಅಭಿಷೇಕ್ ಶರ್ಮಾ ಹಾಗೂ ಇಶಾನ್ ಕಿಶನ್ ಇನ್ನಿಂಗ್ಸ್ ಆರಂಭಿಸಿದರು. ಮೊದಲ ಓವರ್ನಲ್ಲಿ ಸಿಕ್ಸರ್ ಬಾರಿಸುವ ಮೂಲಕ ಕಿಶನ್ ತಂಡದ ಇನ್ನಿಂಗ್ಸ್ ಆರಂಭಿಸಿದರು. ಆದರೆ ಮುಂದಿನ ಓವರ್ನಲ್ಲಿ ಸ್ಟ್ರೈಕ್ಗೆ ಬಂದ ಅಭಿಷೇಕ್ ಶರ್ಮಾ ಎದುರಿಸಿದ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸುವ ಯತ್ನದಲ್ಲಿ ಕ್ಯಾಚಿತ್ತು ನಿರ್ಗಮಿಸಿದರು. ಇದರಿಂದ ಅಭಿಷೇಕ್ಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ.
ಆ ನಂತರ ಕಿಶನ್ ಹಾಗೂ ತಿಲಕ್ ನಿಧಾನವಾಗಿ ಇನ್ನಿಂಗ್ಸ್ ಕಟ್ಟಲು ಶುರು ಮಾಡಿದರು. ಇದೇ ಹಂತದಲ್ಲಿ ಕಿಶನ್ಗೆ ಜೀವದಾನವೂ ಸಿಕ್ಕಿತು. ಆದರೆ ಇದನ್ನು ಸದುಪಯೋಗಪಡಿಸಿಕೊಳ್ಳದ ಕಿಶನ್ 6ನೇ ಓವರ್ನ 2ನೇ ಎಸೆತದಲ್ಲಿ ಕ್ಯಾಚಿತ್ತು ಔಟಾದರು. ಅದೇ ಓವರ್ನಲ್ಲಿ ತಿಲಕ್ ವರ್ಮಾ ಕೂಡ ಪೆವಿಲಿಯನ್ ಸೇರಿಕೊಂಡರು. ಆ ನಂತರ ಬಂದ ಶಿವಂ ದುಬೆ ಕೂಡ ಮೊದಲ ಎಸೆತದಲ್ಲೇ ಕ್ಯಾಚ್ ನೀಡಿದರು. ಹೀಗಾಗಿ ಟೀಂ ಇಂಡಿಯಾದ ಪ್ರಮುಖ 3 ವಿಕೆಟ್ಗಳು ಒಂದೇ ಓವರ್ನಲ್ಲಿ ಅಂದರೆ 6ನೇ ಓವರ್ನಲ್ಲೇ ಪತನಗೊಂಡವು. ಆರಂಭಿಕ ವಿಕೆಟ್ ಪತನದ ಒತ್ತಡಕ್ಕೊಳಗಾದ ರಿಂಕು ಸಿಂಗ್ ಕೂಡ ರನ್ ಗಳಿಸಲು ತಿಣುಕಾಡಿ 6 ರನ್ಗಳಿಗೆ ಸುಸ್ತಾದರು. ಹಾರ್ದಿಕ್ ಪಾಂಡ್ಯ ಇನ್ನಿಂಗ್ಸ್ ಕಟ್ಟುವ ಕೆಲಸ ಮಾಡುವುದನ್ನು ಬಿಟ್ಟು ಎಂದಿನಂತೆ ಹೊಡಿಬಡಿ ಆಟಕ್ಕೆ ಮುಂದಾಗಿ 5 ರನ್ಗಳಿಗೆ ಸುಸ್ತಾದರು. ಅಕ್ಷರ್ ಇನ್ನಿಂಗ್ಸ್ ಕೂಡ 14 ರನ್ಗಳಿಗೆ ಅಂತ್ಯವಾಯಿತು.
ಒಂದೆಡೆ ತಂಡದ ವಿಕೆಟ್ಗಳು ತರಗೆಲೆಗಳಂತೆ ಉದುರುತ್ತಿದ್ದರೆ, ಇನ್ನೊಂದು ತುದಿಯಲ್ಲಿ ನಾಯಕನ ಜವಾಬ್ದಾರಿ ಇನ್ನಿಂಗ್ಸ್ ಆಡಿದ ಸೂರ್ಯಕುಮಾರ್ ಯಾದವ್ ಅರ್ಧಶತಕದ ಇನ್ನಿಂಗ್ಸ್ ಕೂಡ ಆಡಿದರು. ಕೊನೆಯವರೆಗೂ ಅಜೇಯರಾಗಿ ಉಳಿದ ಸೂರ್ಯ 49 ಎಸೆತಗಳಲ್ಲಿ 10 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 84 ರನ್ ಬಾರಿಸಿದರು. ಸೂರ್ಯ ಅವರ ಈ ಅರ್ಧಶತಕದಿಂದಾಗಿ ಭಾರತ 161 ರನ್ ಕಲೆಹಾಕಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:11 pm, Sat, 7 February 26