T20 World Cup: ಟಿ20 ವಿಶ್ವಕಪ್‌ನಲ್ಲಿ ಈ ಕ್ರಿಕೆಟಿಗರ ಹೆಸರಿನಲ್ಲಿವೆ ಮುರಿಯದ ದಾಖಲೆಗಳು..!
T20 World Cup: ಒಂದು ವಿಶ್ವಕಪ್ ಸೀಸನ್ನಲ್ಲಿ ಬರೋಬ್ಬರಿ 319 ರನ್ಗಳನ್ನು ಬಾರಿಸುವ ಮೂಲಕ ಕೊಹ್ಲಿ ಈ ದಾಖಲೆ ಬರೆದಿದ್ದಾರೆ. ವಿರಾಟ್, 2014 ರಲ್ಲಿ ನಡೆದ ವಿಶ್ವಕಪ್‌ನಲ್ಲಿ ಕೇವಲ 6 ಪಂದ್ಯಗಳಲ್ಲಿ ಈ ರನ್ ಗಳಿಸಿದ್ದರು.
ಆಸ್ಟ್ರೇಲಿಯಾದಲ್ಲಿ ಆಯೋಜಿಸಲಾಗಿರುವ ಟಿ20 ವಿಶ್ವಕಪ್ (T20 World Cup 2022) ಸಂಭ್ರಮ ಅಕ್ಟೋಬರ್ 16 ರಿಂದ ಆರಂಭವಾಗಲಿದೆ. ಆದಾಗ್ಯೂ, ನಿಜವಾದ ರೋಚಕತೆ ಅಕ್ಟೋಬರ್ 22 ರಿಂದ ಪ್ರಾರಂಭವಾಗಲಿದ್ದು, ಸೂಪರ್-12 ಪಂದ್ಯಗಳು ಈ ದಿನಾಂಕದಿಂದ ಪ್ರಾರಂಭವಾಗಲಿವೆ. ಹೀಗಾಗಿ ಚುಟುಕು ಸಮರದಲ್ಲಿ ಭಾಗವಹಿಸುವ ಎಲ್ಲಾ ತಂಡಗಳು ವ್ಯಾಪಕ ಸಿದ್ಧತೆಗಳನ್ನು ನಡೆಸುತ್ತಿವೆ. ಸದ್ಯ, ಟ್ರೋಫಿಗಾಗಿ ಸ್ಪರ್ಧಿಸುತ್ತಿರುವ ದೇಶಗಳ ತಂಡಗಳು ಇತರ ದೇಶಗಳೊಂದಿಗೆ ಟಿ20 ಕ್ರಿಕೆಟ್ ಸರಣಿಯಲ್ಲಿ ನಿರತವಾಗಿವೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟಿ20 ಸರಣಿ (India Vs Australia) ಭಾನುವಾರವೇ ಮುಕ್ತಾಯಗೊಂಡಿದ್ದು, ಭಾರತ ಈ ಸರಣಿಯನ್ನು ಗೆದ್ದುಕೊಂಡಿದೆ. ಈಗ ಭಾರತ ಮತ್ತು ದಕ್ಷಿಣ ಆಫ್ರಿಕಾ (India Vs South Africa) ನಡುವೆ ವೈಟ್ ಬಾಲ್ ಸರಣಿ ನಡೆಯಲಿದೆ. ಸದ್ಯ ಇಂಗ್ಲೆಂಡ್ ಮತ್ತು ಪಾಕಿಸ್ತಾನ ಕೂಡ ಟಿ20 ಸರಣಿಯಲ್ಲಿ ಬ್ಯುಸಿಯಾಗಿವೆ.
ಈ ವರ್ಷವ ನಡೆಯುವ ಮಿನಿ ವಿಶ್ವಕಪ್, ಟಿ20 ವಿಶ್ವಕಪ್‌ನ ಎಂಟನೇ ಆವೃತ್ತಿಯಾಗಿದೆ. ಇದಕ್ಕೂ ಮುನ್ನ 7 ಟಿ20 ವಿಶ್ವಕಪ್‌ಗಳು ನಡೆದಿದ್ದು, ಈ 7 ವಿಶ್ವಕಪ್‌ಗಳಲ್ಲಿ ಆಟಗಾರರು ಮತ್ತು ಭಾಗವಹಿಸುವ ತಂಡಗಳು ಹಲವು ದಾಖಲೆಗಳನ್ನು ಮಾಡಿದ್ದು, ಆ ದಾಖಲೆಗಳಲ್ಲಿ ಕೆಲವನ್ನು ಮುರಿಯುವುದು ಕೊಂಚ ಕಷ್ಟವಂತಲೇ ಹೇಳಬಹುದು.
ಅಂತಹ ಕೆಲವು ಅದ್ಭುತ ದಾಖಲೆಗಳಿವು
ಒಂದು ಸೀಸನ್ನಲ್ಲಿ ಅತಿ ಹೆಚ್ಚು ರನ್: ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಈ ದಾಖಲೆಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಒಂದು ವಿಶ್ವಕಪ್ ಸೀಸನ್ನಲ್ಲಿ ಬರೋಬ್ಬರಿ 319 ರನ್ಗಳನ್ನು ಬಾರಿಸುವ ಮೂಲಕ ಕೊಹ್ಲಿ ಈ ದಾಖಲೆ ಬರೆದಿದ್ದಾರೆ. ವಿರಾಟ್, 2014 ರಲ್ಲಿ ನಡೆದ ವಿಶ್ವಕಪ್‌ನಲ್ಲಿ ಕೇವಲ 6 ಪಂದ್ಯಗಳಲ್ಲಿ ಈ ರನ್ ಗಳಿಸಿದ್ದರು.
ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್: ಟಿ20 ವಿಶ್ವಕಪ್‌ನಲ್ಲಿ ಒಟ್ಟಾರೆ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಮಹೇಲ ಜಯವರ್ಧನೆ ಹೊಂದಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ಅವರು ಒಟ್ಟು 31 ಪಂದ್ಯಗಳನ್ನು ಆಡಿದ್ದು, ಈ ವೇಳೆ ಅವರು ಒಂದು ಶತಕ ಮತ್ತು 6 ಅರ್ಧ ಶತಕಗಳ ಸಹಾಯದಿಂದ 1016 ರನ್ ಗಳಿಸಿದ್ದಾರೆ. ಕ್ರಿಸ್ ಗೇಲ್ 965 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. ರೋಹಿತ್ ಶರ್ಮಾ (847 ರನ್) ಮತ್ತು ವಿರಾಟ್ ಕೊಹ್ಲಿ (845 ರನ್) ನಾಲ್ಕು ಮತ್ತು ಐದನೇ ಸ್ಥಾನದಲ್ಲಿದ್ದಾರೆ.
ವೇಗದ ಶತಕ: ಟಿ20 ವಿಶ್ವಕಪ್‌ನಲ್ಲಿ ಅತಿವೇಗದ ಶತಕ ಬಾರಿಸಿದ ದಾಖಲೆ ವೆಸ್ಟ್ ಇಂಡೀಸ್‌ನ ಸ್ಫೋಟಕ ಬ್ಯಾಟರ್ ಕ್ರಿಸ್ ಗೇಲ್ ಹೆಸರಿನಲ್ಲಿದೆ. ಗೇಲ್ 2016 ರಲ್ಲಿ ಈ ಸಾಧನೆ ಮಾಡಿದ್ದು, ಅವರು ಇಂಗ್ಲೆಂಡ್ ವಿರುದ್ಧ 48 ಎಸೆತಗಳಲ್ಲಿ ಈ ಶತಕ ಗಳಿಸಿದ್ದರು.
ಅತಿ ಹೆಚ್ಚು ಸಿಕ್ಸರ್: ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ದಾಖಲೆಯು ಸಹ ಕೆರಿಬಿಯನ್ ದೈತ್ಯ, ಯೂನಿವರ್ಸಲ್ ಬಾಸ್ ಹೆಸರಿನಲ್ಲಿದೆ. ಗೇಲ್ 2007 ರಿಂದ 2021 ರವರೆಗೆ 33 ಪಂದ್ಯಗಳಲ್ಲಿ 63 ಸಿಕ್ಸರ್ಗಳನ್ನು ಬಾರಿಸಿದ್ದಾರೆ. ರೋಹಿತ್ ಶರ್ಮಾ 31 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ 2ನೇ ಸ್ಥಾನದಲ್ಲಿದ್ದಾರೆ.
ಜೊತೆಯಾಟ: 2010 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಜಯವರ್ಧನೆ ಮತ್ತು ಸಂಗಕ್ಕಾರ ಮುರಿಯದ ವಿಕೆಟ್ಗೆ 166 ರನ್ ಜೊತೆಯಾಟ ನಡೆಸಿದ್ದರು. ಹೀಗಾಗಿ ಈ ದಾಖಲೆ ಇಂದಿಗೂ ಹಾಗೆಯೇ ಉಳಿದಿದೆ. 2021 ರಲ್ಲಿ, ರಿಜ್ವಾನ್ ಮತ್ತು ಬಾಬರ್ ಅಜಮ್ ಆರಂಭಿಕ ಜೋಡಿಯಾಗಿ 152 ರನ್‌ಗಳ ಜೊತೆಯಾಟವನ್ನು ದಾಖಲಿಸಿದ್ದರು. ಅಲ್ಲದೆ ಭಾರತದ ಪರ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಕೂಡ 140 ರನ್‌ಗಳ ಜೊತೆಯಾಟವನ್ನು ದಾಖಲಿಸಿದ್ದಾರೆ.
ತಂಡದ ಗರಿಷ್ಠ ಸ್ಕೋರ್: ಶ್ರೀಲಂಕಾ 2007 ರಲ್ಲಿ ಕೀನ್ಯಾ ವಿರುದ್ಧ 20 ಓವರ್‌ಗಳಲ್ಲಿ 260 ರನ್ ಗಳಿಸಿತ್ತು. ಈ ಪಂದ್ಯದಲ್ಲಿ ಸನತ್ ಜಯಸೂರ್ಯ ಮತ್ತು ಮಹೇಲ ಜಯವರ್ಧನೆ ಬಿರುಸಿನ ಅರ್ಧಶತಕ ಗಳಿಸಿದ್ದರು. ಗುರಿ ಬೆನ್ನಟ್ಟಿದ ಕೀನ್ಯಾ ತಂಡ ಕೇವಲ 88 ರನ್‌ಗಳಿಗೆ ಆಲೌಟಾಯಿತು.