ಭಾರತದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಅವರನ್ನು ವಂಚಿಸಿ ಸೈಬರ್ ದರೋಡೆಕೋರರು ಹಣ ಲೂಟಿ ಮಾಡಿದ್ದಾರೆ. ಕೆವೈಸಿ ಡೇಟಾ ಅಪ್‌ಡೇಟ್ ಮಾಡುವ ಹೆಸರಿನಲ್ಲಿ ಅವರ ಖಾತೆಯಿಂದ 1.1 ಲಕ್ಷ ರೂ. ಹಣವನ್ನು ವರ್ಗಾವಣೆ ಮಾಡಿಕೊಂಡಿದ್ದಾರೆ. ಕೂಡಲೇ ಎಚ್ಚೆತ್ತುಕೊಂಡ ಕಾಂಬ್ಳಿ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸ್ ಅಧಿಕಾರಿಯ ಪ್ರಕಾರ, ಒಬ್ಬ ವ್ಯಕ್ತಿ ತಾನು ಬ್ಯಾಂಕ್ ಅಧಿಕಾರಿ ಎಂದು ಹೇಳಿ ಕಾಂಬ್ಳಿಗೆ ಕರೆ ಮಾಡಿದ್ದಾನೆ. ಅವರ KYC ಡೇಟಾವನ್ನು ನವೀಕರಿಸುವ ಅಗತ್ಯತೆಯ ಬಗ್ಗೆಯೂ ಆತ ಮಾತನಾಡಿದ್ದಾನೆ. ನಂತರ ಆತ ಆ್ಯಪ್ ಡೌನ್ಲೌಡ್ ಮಾಡಿಕೊಳ್ಳುವಂತೆ ಕಾಂಬ್ಳಿಯನ್ನು ಕೇಳಿಕೊಂಡಿದ್ದಾನೆ. ನಂತರ ಆ್ಯಪ್‌ನಲ್ಲಿ ಡೇಟಾ ಅಪ್‌ಲೋಡ್ ಮಾಡಿದ ತಕ್ಷಣ ಕಾಂಬ್ಳಿ ಅವರ ಮೊಬೈಲ್‌ಗೆ ರಿಮೋಟ್ ಆಕ್ಸೆಸ್ ಪಡೆದುಕೊಂಡು ಬ್ಯಾಂಕ್‌ನಿಂದ ಒನ್‌ಟೈಮ್ ಪಾಸ್‌ವರ್ಡ್ ಪಡೆದು 1.1 ಲಕ್ಷ ರೂ. ದೋಚಿದ್ದಾರೆ.
ಹಣ ಹಿಂಪಡೆದ ತಕ್ಷಣ ಕಾಂಬ್ಳಿಗೆ ಎಚ್ಚರಿಕೆ ಸಂದೇಶ ಬಂದಿದೆ. ಮೋಸ ಹೋದ ಕಾಂಬ್ಳಿ ಕೂಡಲೇ ಕಸ್ಟಮರ್ ಕೇರ್ಗೆ ಮಾಹಿತಿ ನೀಡಿ ಬ್ಯಾಂಕ್ ಖಾತೆಯನ್ನು ಕ್ಲೋಸ್ ಮಾಡಿದ್ದಾರೆ. ಈ ವೇಳೆ ಕಾಂಬ್ಳಿ ಖಾತೆಯಿಂದ ಯಾರ ಖಾತೆಗೆ ಹಣ ವರ್ಗಾವಣೆಯಾಗಿದೆ ಎಂಬುದನ್ನು ಪತ್ತೆ ಹಚ್ಚುವ ಕಾರ್ಯವನ್ನು ಪೊಲೀಸರು ನಡೆಸುತ್ತಿದ್ದಾರೆ.
ಕ್ರಿಕೆಟ್ನಲ್ಲಿ ಕಾಂಬ್ಳಿ ಸಾಧನೆ ODIಗಳಲ್ಲಿ 32.59 ಸರಾಸರಿ ಹೊಂದಿರುವ ವಿನೋದ್ ಕಾಂಬ್ಳಿ, ಭಾರತಕ್ಕಾಗಿ 17 ಟೆಸ್ಟ್‌ಗಳಲ್ಲಿ 54.2 ರ ಸರಾಸರಿಯಲ್ಲಿ 1,084 ರನ್ ಗಳಿಸಿದ್ದಾರೆ. ಅವರು 104 ODIಗಳಲ್ಲಿ 32.59 ಸರಾಸರಿಯಲ್ಲಿ 2,477 ರನ್ ಗಳಿಸಿದರು. ಮಾಜಿ ಕ್ರಿಕೆಟ್ ಆಟಗಾರರಾಗಿರುವ ವಿನೋದ್ ಕಾಂಬ್ಳಿ ಸಚಿನ್ ತೆಂಡೊಲ್ಕರ್ ಜೊತೆಗೆ ಶಾಲಾ ಕ್ರಿಕೆಟ್ನಲ್ಲಿ 664 ರನ್ಗಳ ಜೊತೆಯಾಟ ಆಡಿ ಪ್ರಸಿದ್ಧಿ ಹೊಂದಿದ್ದರು, ಆದರೆ ಅವರು ತಮ್ಮ ನಿರೀಕ್ಷಿತ ಸಾಧನೆಯ ಮಟ್ಟವನ್ನು ತಲುಪಲಿಲ್ಲ.