ಕೊಲಂಬೊ ಟೆಸ್ಟ್ ಡ್ರಾ; ಡಬ್ಲ್ಯೂಟಿಸಿ ಫೈನಲ್​ ರೇಸ್​ನಲ್ಲಿ ಟೀಂ ಇಂಡಿಯಾಕ್ಕೆ ಹಿನ್ನಡೆ

India's WTC Final Path: ಕೊಲಂಬೊ ಟೆಸ್ಟ್‌ನಲ್ಲಿ ಶ್ರೀಲಂಕಾ ವಿರುದ್ಧ ಭಾರತ ತಂಡ ಡ್ರಾ ಸಾಧಿಸಿದ್ದು, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪ್ರವೇಶಕ್ಕೆ ದೊಡ್ಡ ಹಿನ್ನಡೆ ನೀಡಿದೆ. ಈ ಡ್ರಾ ಭಾರತವನ್ನು ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿ ಉಳಿಸಿದ್ದು, ಫೈನಲ್ ತಲುಪಲು ಉಳಿದಿರುವ ಬಹುತೇಕ ಎಲ್ಲಾ ಪಂದ್ಯಗಳನ್ನು ಗೆಲ್ಲುವುದು ಅನಿವಾರ್ಯವಾಗಿದೆ. ಮುಂಬರುವ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ಸರಣಿಗಳು ನಿರ್ಣಾಯಕವಾಗಲಿವೆ.

ಕೊಲಂಬೊ ಟೆಸ್ಟ್ ಡ್ರಾ; ಡಬ್ಲ್ಯೂಟಿಸಿ ಫೈನಲ್​ ರೇಸ್​ನಲ್ಲಿ ಟೀಂ ಇಂಡಿಯಾಕ್ಕೆ ಹಿನ್ನಡೆ
Team India

Updated on: Aug 27, 2026 | 5:54 PM

ಗಾಲೆ ಟೆಸ್ಟ್‌ ಪಂದ್ಯವನ್ನು ಭರ್ಜರಿಯಾಗಿ ಗೆದ್ದುಕೊಂಡಿದ್ದ ಟೀಂ ಇಂಡಿಯಾ (Team India), ಕೊಲಂಬೊ ಟೆಸ್ಟ್‌ನಲ್ಲಿಯೂ (Colombo Test) ಗೆಲ್ಲುವ ಸುಳಿವು ನೀಡಿತ್ತು. ಆದರೆ ಎರಡನೇ ಇನ್ನಿಂಗ್ಸ್​ನಲ್ಲಿ ಶ್ರೀಲಂಕಾ ಆಟಗಾರರ ದಿಟ್ಟ ಹೋರಾಟ ಟೀಂ ಇಂಡಿಯಾದ ಗೆಲುವು ಕಸಿಯಿತು. ಅದರಲ್ಲೂ ಲಂಕಾ ತಂಡದ ಪರ ಎರಡೂ ಇನ್ನಿಂಗ್ಸ್​ಗಳಲ್ಲಿ ಶತಕ ಬಾರಿಸಿದ ಸೋನಲ್ ದಿನುಷಾ ಭಾರತದ ಭರವಸೆಯನ್ನು ಹುಸಿಗೊಳಿಸಿದರು. ಅಂತಿಮವಾಗಿ ಟೀಂ ಇಂಡಿಯಾ ಕೊನೆಯ ಟೆಸ್ಟ್ ಪಂದ್ಯವನ್ನು ಡ್ರಾ ಮಾಡಿಕೊಳ್ಳಬೇಕಾಯಿತು. ಕೊಲಂಬೊ ಟೆಸ್ಟ್ ಡ್ರಾದಲ್ಲಿ ಅಂತ್ಯಗೊಂಡಿದ್ದು, ಡಬ್ಲ್ಯೂಟಿಸಿ ಫೈನಲ್ (WTC Final)​ ರೇಸ್​ನಲ್ಲಿರುವ ಟೀಂ ಇಂಡಿಯಾಕ್ಕೆ ದೊಡ್ಡ ಹೊಡೆತ ನೀಡಿದೆ. ಈ ಪಂದ್ಯವನ್ನು ಗೆದ್ದಿದ್ದರೆ, ಟೀಂ ಇಂಡಿಯಾ ಡಬ್ಲ್ಯೂಟಿಸಿ ಪಾಯಿಂಟ್ಸ್ ಟೇಬಲ್‌ನಲ್ಲಿ ನಾಲ್ಕನೇ ಸ್ಥಾನಕ್ಕೇರುತ್ತಿತ್ತು. ಆದರೆ ಕೊಲಂಬೊ ಟೆಸ್ಟ್‌ ಡ್ರಾದಲ್ಲಿ ಕೊನೆಗೊಂಡಿದ್ದರಿಂದ ಭಾರತ ತಂಡ ಐದನೇ ಸ್ಥಾನದಲ್ಲಿಯೇ ಉಳಿದಿದೆ.

ಡಬ್ಲ್ಯೂಟಿಸಿ ಪಾಯಿಂಟ್‌ ಪಟ್ಟಿ ಹೀಗಿದೆ

ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯ ಬಳಿಕ ಡಬ್ಲ್ಯೂಟಿಸಿ ಪಾಯಿಂಟ್‌ ಪಟ್ಟಿಯಲ್ಲಿ ಭಾರತ ತಂಡ 51.32 ರ ಗೆಲುವಿನ ಶೇಕಡಾವಾರುವಿನೊಂದಿಗೆ ಐದನೇ ಸ್ಥಾನದಲ್ಲಿದೆ. ಇತ್ತ ಶ್ರೀಲಂಕಾ 33.33 ರ ಗೆಲುವಿನ ಶೇಕಡಾವಾರುವಿನೊಂದಿಗೆ ಆರನೇ ಸ್ಥಾನಕ್ಕೆ ಏರಿದೆ. ಬಾಂಗ್ಲಾದೇಶ 55.56 ರ ಗೆಲುವಿನ ಶೇಕಡಾವಾರುವಿನೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಮೊದಲ ಎರಡು ಸ್ಥಾನಗಳಲ್ಲಿದ್ದರೆ ಪಾಕಿಸ್ತಾನ ಕೊನೆಯ ಸ್ಥಾನದಲ್ಲಿದೆ.

ಟೀಂ ಇಂಡಿಯಾ ಫೈನಲ್ ತಲುಪುವುದು ಹೇಗೆ?

ಕೊಲಂಬೊ ಟೆಸ್ಟ್ ಡ್ರಾದಲ್ಲಿ ಅಂತ್ಯಗೊಂಡ ಬಳಿಕ ಟೀಂ ಇಂಡಿಯಾ ಡಬ್ಲ್ಯೂಟಿಸಿ ಫೈನಲ್​ಗೇರುವುದು ಕಷ್ಟಕರವಾಗಿದೆ. ಫೈನಲ್ ತಲುಪಬೇಕೆಂದರೆ ಟೀಂ ಇಂಡಿಯಾ ಉಳಿದಿರುವ ಎಲ್ಲಾ ಪಂದ್ಯಗಳನ್ನು ಗೆಲ್ಲಲೇಬೇಕಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಟೀಂ ಇಂಡಿಯಾಕ್ಕೆ ಇನ್ನು ಏಳು ಪಂದ್ಯಗಳು ಬಾಕಿ ಉಳಿಸಿಕೊಂಡಿವೆ. ಈ ಏಳು ಪಂದ್ಯಗಳಲ್ಲಿ 6 ಆರು ಪಂದ್ಯಗಳನ್ನು ಗೆಲ್ಲಲೇಬೇಕು. ಇದರರ್ಥ ಟೀಂ ಇಂಡಿಯಾ ಒಂದಕ್ಕಿಂತ ಹೆಚ್ಚು ಪಂದ್ಯಗಳನ್ನು ಸೋತರೆ ಅಥವಾ ಒಂದಕ್ಕಿಂತ ಹೆಚ್ಚು ಡ್ರಾ ಮಾಡಿಕೊಂಡರೆ, ಫೈನಲ್‌ ಸ್ಪರ್ಧೆಯಿಂದ ಹೊರಗುಳಿಯುತ್ತದೆ.

IND vs SL: ಫಾಲೋ ಆನ್ ಹೇರಿಯೂ ಗೆಲ್ಲುವ ಪಂದ್ಯವನ್ನು ಕೈಚೆಲ್ಲಿದ ಟೀಂ ಇಂಡಿಯಾ

ಭಾರತದ ಮುಂದಿನ ಎದುರಾಳಿ ಯಾರು?

ಭಾರತ ತಂಡವು ಈಗ ಅಕ್ಟೋಬರ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಬೇಕಾಗಿದೆ. ಈ ಸರಣಿಯು ಟೀಂ ಇಂಡಿಯಾಕ್ಕೆ ಅತ್ಯಂತ ಸವಾಲಿನದ್ದಾಗಿರುತ್ತದೆ, ಏಕೆಂದರೆ ನ್ಯೂಜಿಲೆಂಡ್ ನೆಲದಲ್ಲಿ ಟೆಸ್ಟ್ ಸರಣಿಯನ್ನು ಗೆಲ್ಲುವುದು ಅತ್ಯಂತ ಕಷ್ಟಕರ. ಇದರ ಜೊತೆಗೆ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ತವರಿನಲ್ಲಿ ಆಡಲಿದೆ. ಈ ಏಳು ಪಂದ್ಯಗಳಲ್ಲಿ ಗಿಲ್ ಪಡೆ ಎಷ್ಟು ಪಂದ್ಯಗಳನ್ನು ಗೆಲ್ಲುತ್ತದೆ ಎಂಬುದನ್ನು ಕಾದುನೋಡಬೇಕಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:53 pm, Thu, 27 August 26

Loading...
Unable to load recommendations.
Follow Us