ಭಾರತ ತಂಡವು ಟಿ20 ವಿಶ್ವಕಪ್ ಗೆದ್ದುಕೊಂಡಿದೆ. ಈ ವಿಶ್ವಕಪ್ ಗೆಲುವಿನ ಅಲೆಯ ಬೆನ್ನಲ್ಲೇ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಹಾಗೂ ವಿರಾಟ್ ಕೊಹ್ಲಿ (Virat Kohli) ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಇದಾಗ್ಯೂ ಈ ಇಬ್ಬರು ದಿಗ್ಗಜರು ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ನಲ್ಲಿ ಮುಂದುವರೆಯಲಿದ್ದಾರೆ.
ಅದರಲ್ಲೂ ಮುಂಬರುವ ಚಾಂಪಿಯನ್ಸ್ ಟ್ರೋಫಿವರೆಗೆ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಏಕದಿನ ತಂಡದಲ್ಲಿ ಕಾಣಿಸಿಕೊಳ್ಳುವುದು ಖಚಿತ. ಇದನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಕೂಡ ಖಚಿತಪಡಿಸಿದ್ದಾರೆ. ಹೀಗಾಗಿ 2025 ರವರೆಗೆ ಕಿಂಗ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ವಿದಾಯ ಹೇಳುವುದಿಲ್ಲ ಎಂದೇ ಹೇಳಬಹುದು.
20 ತಂಡಗಳ ನಡುವಣ ಟಿ20 ವಿಶ್ವಕಪ್ ಕದನದಲ್ಲಿ ಚಾಂಪಿಯನ್ ಪಟ್ಟಕ್ಕೇರಿರುವ ಭಾರತ ತಂಡದ ಮುಂದಿನ ಗುರಿ ಚಾಂಪಿಯನ್ಸ್ ಟ್ರೋಫಿ 2025. ಮುಂದಿನ ವರ್ಷ ಫೆಬ್ರವರಿ-ಮಾರ್ಚ್ನಲ್ಲಿ ನಡೆಯಲಿರುವ ಈ ಟೂರ್ನಿಯಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯಲಿವೆ. ಆ ತಂಡಗಳಾವುವು ಎಂದರೆ…
ಈ ತಂಡಗಳ ನಡುವೆ ಚಾಂಪಿಯನ್ ಪಟ್ಟಕ್ಕಾಗಿ ಏಕದಿನ ಟೂರ್ನಿ ನಡೆಯಲಿದೆ. ಇಲ್ಲಿ 8 ತಂಡಗಳು ಬಲಿಷ್ಠವಾಗಿರುವ ಕಾರಣ ಮೊದಲ ಸುತ್ತಿನಿಂದಲೇ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು. ಅದರಲ್ಲೂ ಕಳೆದ ಏಕದಿನ ವಿಶ್ವಕಪ್ನ ಫೈನಲ್ನಲ್ಲಿ ಸೋಲನುಭವಿಸಿದ್ದ ಭಾರತ ತಂಡವು ಮುಂದಿನ ವರ್ಷ ಮತ್ತೆ ಏಕದಿನ ಟೂರ್ನಿಯಲ್ಲಿ ವಿಶ್ವ ಚಾಂಪಿಯನ್ ಆಗುವ ಅವಕಾಶ ಹೊಂದಿದ್ದು, ಈ ಮೂಲಕ ಚಾಂಪಿಯನ್ಸ್ ಟ್ರೋಫಿಯ ಬರವನ್ನು ಟೀಮ್ ಇಂಡಿಯಾ ನೀಗಿಸಲಿದೆಯಾ ಕಾದು ನೋಡಬೇಕಿದೆ.
ಫೆಬ್ರವರಿ-ಮಾರ್ಚ್ ನಡುವೆ ನಡೆಯಲಿರುವ ಬಹುನಿರೀಕ್ಷಿತ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಆತಿಥ್ಯವಹಿಸುತ್ತಿದೆ. ಅಂದರೆ ಟೂರ್ನಿಯು ಪಾಕ್ನಲ್ಲಿ ನಡೆಯಲಿದೆ. ಆದರೆ ಭಾರತ ತಂಡವು ಪಾಕ್ಗೆ ತೆರಳಲು ಹಿಂದೇಟು ಹಾಕಲಿದೆ.
ಅಲ್ಲದೆ ಭಾರತ ತಂಡವು ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸಬೇಕಿದ್ದರೆ, ತಟಸ್ಥ ಸ್ಥಳದಲ್ಲಿ ಟೂರ್ನಿಯನ್ನು ಆಯೋಜಿಸಲು ಬಿಸಿಸಿಐ ಬೇಡಿಕೆ ಮುಂದಿಡಬಹುದು. ಅದರಂತೆ ಟೀಮ್ ಇಂಡಿಯಾದ ಪಂದ್ಯಗಳಿಗೆ ಯುಎಇ ಅಥವಾ ಶ್ರೀಲಂಕಾ ಆತಿಥ್ಯವಹಿಸುವ ಸಾಧ್ಯತೆ ಕೂಡ ಇದೆ.
ಇದನ್ನೂ ಓದಿ: T20 World Cup 2024: ಟೀಮ್ ಇಂಡಿಯಾ ಪರ ಒಂದೇ ಒಂದು ಪಂದ್ಯವಾಡದ ಮೂವರು ಆಟಗಾರರು..!
ಏಕೆಂದರೆ ಈ ಹಿಂದೆ ಪಾಕಿಸ್ತಾನದಲ್ಲಿ ಏಷ್ಯಾಕಪ್ ಆಯೋಜನೆಗೊಂಡಿದ್ದಾಗ, ಭಾರತ ತಂಡವು ತನ್ನ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಿತ್ತು. ಹೀಗಾಗಿ ಈ ಬಾರಿ ಚಾಂಪಿಯನ್ಸ್ ಟ್ರೋಫಿಯನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲು ಐಸಿಸಿಗೆ ಬಿಸಿಸಿಐ ಮನವಿ ಮಾಡುವ ಸಾಧ್ಯತೆ ಹೆಚ್ಚಿದೆ.