ರವೀಂದ್ರ ಜಡೇಜಾನ ಕಡೆಗಣಿಸಿ ಪಂದ್ಯ ಸೋತ ರಾಜಸ್ಥಾನ್ ರಾಯಲ್ಸ್
IPL 2026 KKR vs RR: ಐಪಿಎಲ್ನ 28ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡವು 20 ಓವರ್‌ಗಳಲ್ಲಿ 155 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು 19.4 ಓವರ್‌ಗಳಲ್ಲಿ 161 ರನ್ ಬಾರಿಸಿ 4 ವಿಕೆಟ್ಗಳ ಜಯ ಸಾಧಿಸಿದೆ.

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ 28ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ (KKR) ವಿರುದ್ಧ ರಾಜಸ್ಥಾನ್ ರಾಯಲ್ಸ್ (RR) ತಂಡ ಸೋಲನುಭವಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡವು 20 ಓವರ್‌ಗಳಲ್ಲಿ ಕಲೆಹಾಕಿದ್ದು 155 ರನ್ಗಳು ಮಾತ್ರ. ಈ ಗುರಿಯನ್ನು ಬೆನ್ನತ್ತಿದ ಕೆಕೆಆರ್ ತಂಡವು ಕೊನೆಯ ಓವರ್ನಲ್ಲಿ ಗೆಲುವು ದಾಖಲಿಸಿತ್ತು. ಅಂದರೆ ಈ ಪಂದ್ಯದಲ್ಲಿ ಗೆಲ್ಲುವ ಅವಕಾಶ ರಾಜಸ್ಥಾನ್ ರಾಯಲ್ಸ್ ತಂಡದ ಮುಂದಿತ್ತು. ಇದಾಗ್ಯೂ ನಾಯಕ ರಿಯಾನ್ ಪರಾಗ್ ತೆಗೆದುಕೊಂಡು ಒಂದು ನಿರ್ಧಾರದಿಂದ ಆರ್ಆರ್ ಪಡೆ ಸೋಲನುಭವಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಸೋಲಿಗೆ ಕಾರಣವೇನು?
ಈ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಅತ್ಯುತ್ತಮ ದಾಳಿ ಸಂಘಟಿಸಿದ್ದು ರವೀಂದ್ರ ಜಡೇಜಾ. ಮೂರು ಓವರ್‌ಗಳನ್ನು ಎಸೆದಿದ್ದ ಜಡೇಜಾ ಕೇವಲ 8 ರನ್ ನೀಡಿ 2 ವಿಕೆಟ್ ಕಬಳಿಸಿದ್ದರು. ಇದಾಗ್ಯೂ ರಿಯಾನ್ ಪರಾಗ್ ಅವರು ರವೀಂದ್ರ ಜಡೇಜಾ ಅವರಿಗೆ ಪೂರ್ಣ ನಾಲ್ಕು ಓವರ್‌ಗಳನ್ನು ಬೌಲ್ ಮಾಡಲು ಅವಕಾಶ ನೀಡಲಿಲ್ಲ ಎಂಬುದೇ ಅಚ್ಚರಿ.
ಅದರಲ್ಲೂ ನಿರ್ಣಾಯಕ ಹಂತದಲ್ಲಿ ಜಡೇಜಾ ಅವರ ಅನುಭವವನ್ನು ಬಳಸಿಕೊಳ್ಳಲು ರಿಯಾನ್ ಪರಾಗ್ ಮುಂದಾಗಲಿಲ್ಲ. ಬದಲಾಗಿ ಡೆತ್ ಓವರ್‌ಗಳಲ್ಲಿ ಅನ್-ಕ್ಯಾಪ್ಡ್ ಬೌಲರ್ ಬ್ರಿಜೇಶ್ ಶರ್ಮಾ ಅವರಿಗೆ ಚೆಂಡನ್ನು ನೀಡಿದರು. ಹೀಗೆ ಎಸೆದ 10 ಎಸೆತಗಳಲ್ಲಿ ಬ್ರಿಜೇಶ್ ನೀಡಿದ್ದು ಬರೋಬ್ಬರಿ 21 ರನ್ಗಳು.
ನಿರ್ಣಾಯಕ ಹಂತದಲ್ಲಿ ಬ್ರಿಜೇಶ್ ಶರ್ಮಾ ನೀಡಿದ 21 ರನ್ಗಳಿಂದ ರಾಜಸ್ಥಾನ್ ರಾಯಲ್ಸ್ ತಂಡ ಸೋಲನುಭವಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಏಕೆಂದರೆ ರವೀಂದ್ರ ಜಡೇಜಾಗೆ ಒಂದು ಓವರ್ ಇದ್ದರೂ ಅದನ್ನು ಮಧ್ಯ ಭಾಗದಲ್ಲಿ ಹಾಕಿಸಿ, ಕೊನೆಯ ಹಂತದಲ್ಲಿ ಜೋಫ್ರಾ ಆರ್ಚರ್ ಅವರನ್ನು ಬಳಸಿಕೊಳ್ಳಲು ಆರ್ಆರ್ ತಂಡಕ್ಕೆ ಉತ್ತಮ ಅವಕಾಶವಿತ್ತು. ಆದರೆ ರಿಯಾನ್ ಪರಾಗ್ ತೆಗೆದುಕೊಂಡ ಒಂದು ನಿರ್ಧಾರವು ಆರ್ಆರ್ ಪಾಲಿಗೆ ಮುಳುವಾಯಿತು.
ರಿಯಾನ್ ಪರಾಗ್ ಸಮರ್ಥನೆ:
ಪಂದ್ಯದ ನಂತರ ಮಾತನಾಡಿದ ರಿಯಾನ್ ಪರಾಗ್, “ಆ ಸಮಯದಲ್ಲಿ ಕೆಕೆಆರ್ ಪರವಾಗಿ ರಿಂಕು ಸಿಂಗ್ ಮತ್ತು ಅನುಕುಲ್ ರಾಯ್ ಅವರಂತಹ ಎಡಗೈ ಬ್ಯಾಟರ್‌ಗಳು ಕ್ರೀಸ್‌ನಲ್ಲಿದ್ದರು. ಎಡಗೈ ಸ್ಪಿನ್ನರ್ ಆದ ಜಡೇಜಾ ಅವರಿಗೆ ಬೌಲಿಂಗ್ ನೀಡಿದರೆ ರನ್ ಬಿಟ್ಟುಕೊಡುವ ಸಾಧ್ಯತೆ ಇತ್ತು ಎಂಬ ಕಾರಣಕ್ಕೆ ನಾನು ಈ ನಿರ್ಧಾರ ತೆಗೆದುಕೊಂಡೆ,” ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ವಿಶೇಷ ಎಂದರೆ ರವೀಂದ್ರ ಜಡೇಜಾಗೆ ರಿಯಾನ್ ಪರಾಗ್ ಓವರ್ ನೀಡದಿರುವುದು ಇದೇ ಮೊದಲೇನಲ್ಲ. ಏಪ್ರಿಲ್ 13 ರಂದು ನಡೆದ ಸನ್‌ರೈಸರ್ಸ್ ಹೈದರಾಬಾದ್ (SRH) ವಿರುದ್ಧದ ಪಂದ್ಯದಲ್ಲೂ ಜಡೇಜಾ ಅವರಿಗೆ ಒಂದೇ ಒಂದು ಓವರ್ ನೀಡಿರಲಿಲ್ಲ. ಇದೀಗ ಅನುಭವಿ ಆಟಗಾರರನ್ನು ತಂಡದಲ್ಲಿಟ್ಟುಕೊಂಡು ಅವರನ್ನು ಸರಿಯಾಗಿ ಬಳಸಿಕೊಳ್ಳದಿರುವುದು ಚರ್ಚೆಗೀಡಾಗಿದೆ.
ಅಶ್ವಿನ್ ಅಸಮಾಧಾನ:
ಮಾಜಿ ಕ್ರಿಕೆಟಿಗ ಆರ್. ಅಶ್ವಿನ್ ಸೇರಿದಂತೆ ಹಲವು ವಿಶ್ಲೇಷಕರು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಪರಿಸ್ಥಿತಿ ಏನೇ ಇರಲಿ, ಜಡೇಜಾರಂತಹ ವಿಶ್ವದರ್ಜೆಯ ಬೌಲರ್‌ನ ಅನುಭವದ ಮೇಲೆ ನಂಬಿಕೆ ಇಡಬೇಕಿತ್ತು. ಕೇವಲ ‘ಮ್ಯಾಚ್-ಅಪ್’ (ಎಡಗೈ ಬ್ಯಾಟರ್‌ಗೆ ಎಡಗೈ ಬೌಲರ್) ಲೆಕ್ಕಾಚಾರದಿಂದ ಪಂದ್ಯ ಗೆಲ್ಲಲು ಸಾಧ್ಯವಿಲ್ಲ” ಎಂದು ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: IPL 2026: ನಿನ್ನ ಮುಖ ತೋರಿಸಬೇಡ… ಕಾರಣವೇನು?
ಮೇಲ್ನೋಟಕ್ಕೆ ಯುವ ನಾಯಕ ರಿಯಾನ್ ಪರಾಗ್ ಅವರು ಸಂಪ್ರದಾಯಕ್ಕಿಂತ ಭಿನ್ನವಾಗಿ ಯೋಚಿಸುತ್ತಿರುವುದು ಕಂಡು ಬಂದರೂ, ರವೀಂದ್ರ ಜಡೇಜಾ ಅವರಂತಹ ಆಟಗಾರನನ್ನು ಕಡೆಗಣಿಸುವುದು ತಂಡದ ಫಲಿತಾಂಶದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂಬುದಕ್ಕೆ ಆರ್ಆರ್ ತಂಡ ಕೊನೆಯ ಎರಡು ಸೋಲುಗಳೇ ಸಾಕ್ಷಿ.




