ಮೊದಲ ಗೆಲುವನ್ನು 11 ಮಂದಿಗೆ ಅರ್ಪಿಸಿದ RCB

IPL 2026 RCB vs SRH: ಐಪಿಎಲ್​ನ ಮೊದಲ ಪಂದ್ಯದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ಜಯ ಸಾಧಿಸಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್​ರೈಸರ್ಸ್ ಹೈದರಾಬಾದ್ ತಂಡವು 20 ಓವರ್​ಗಳಲ್ಲಿ 201 ರನ್ ಕಲೆಹಾಕಿದ್ದರು. ಈ ಕಠಿಣ ಗುರಿಯನ್ನು ಆರ್​ಸಿಬಿ ತಂಡ ಕೇವಲ 15.4 ಓವರ್​ಗಳಲ್ಲಿ ಚೇಸ್ ಮಾಡಿ 6 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿದೆ.

ಮೊದಲ ಗೆಲುವನ್ನು 11 ಮಂದಿಗೆ ಅರ್ಪಿಸಿದ RCB
Rcb

Updated on: Mar 30, 2026 | 9:11 AM

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್​-19 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಶುಭಾರಂಭ ಮಾಡಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ ಉದ್ಘಾಟನಾ ಪಂದ್ಯದಲ್ಲಿ ಎಸ್​ಆರ್​ಹೆಚ್ ತಂಡವನ್ನು ಬಗ್ಗು ಬಡಿದು ಆರ್​ಸಿಬಿ ಗೆಲುವಿನ ಖಾತೆ ತೆರೆದಿದೆ. “ಈ ಗೆಲುವನ್ನು ನಾವು ಕಳೆದುಕೊಂಡ ಆ 11 ಅಭಿಮಾನಿಗಳಿಗೆ ಅರ್ಪಿಸುತ್ತೇವೆ”  ಎಂದಿದ್ದಾರೆ ಆರ್‌ಸಿಬಿ ತಂಡದ ನಾಯಕ ರಜತ್ ಪಾಟೀದಾರ್.

2026ರ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದ ನಂತರ, ಭಾವುಕರಾದ ರಜತ್ ಪಾಟೀದಾರ್, ನಮ್ಮ ಈ ಗೆಲುವನ್ನು ನಮ್ಮನ್ನು ಅಗಲಿದ 11 ಮಂದಿ ಅಭಿಮಾನಿಗಳಿಗೆ ಅರ್ಪಿಸಲು ಬಯಸುತ್ತೇನೆ ಎಂದು ತಿಳಿಸಿದ್ದಾರೆ.

ಕಳೆದ ವರ್ಷ (ಜೂನ್ 2025) ಆರ್‌ಸಿಬಿ ತನ್ನ ಚೊಚ್ಚಲ ಐಪಿಎಲ್ ಟ್ರೋಫಿ ಗೆದ್ದ ಸಂಭ್ರಮಾಚರಣೆಯ ವೇಳೆ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತದಲ್ಲಿ 11 ಅಭಿಮಾನಿಗಳು ಪ್ರಾಣ ಕಳೆದುಕೊಂಡಿದ್ದರು.

ಈ ಅಭಿಮಾನಿಗಳ ನೆನಪಿಗಾಗಿ ಆರ್​ಸಿಬಿ – ಎಸ್​ಆರ್​ಹೆಚ್ ನಡುವಣ ಪಂದ್ಯದ ಆರಂಭಕ್ಕೂ ಮುನ್ನ ಒಂದು ನಿಮಿಷ ಮೌನ ಆಚರಿಸಲಾಯಿತು. ಅಲ್ಲದೆ, ಕ್ರೀಡಾಂಗಣದ ನಾರ್ತ್ ಸ್ಟ್ಯಾಂಡ್‌ನಲ್ಲಿ 11 ಆಸನಗಳನ್ನು ಖಾಲಿ ಬಿಟ್ಟು, ಅವುಗಳಿಗೆ ಮೃತಪಟ್ಟ ಅಭಿಮಾನಿಗಳ ಹೆಸರಿರುವ ಬಿಳಿ ಜೆರ್ಸಿಗಳನ್ನು ಹಾಕಲಾಗಿತ್ತು.

ಇದೀಗ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧದ ಮೊದಲ ಗೆಲುವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಗಲಿದ 11 ಅಭಿಮಾನಿಗಳಿಗೆ ಅರ್ಪಿಸಿದ್ದಾರೆ.

RCBಯ 11 ಅಭಿಮಾನಿಗಳು:

ಬೆಂಗಳೂರಿನಲ್ಲಿ ನಡೆದ ಆರ್‌ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟ 11 ಅಭಿಮಾನಿಗಳ ಹೆಸರು ಈ ಕೆಳಗಿನಂತಿದೆ…

ಹೆಸರು ಊರು / ಜಿಲ್ಲೆ
ಪೂರ್ಣಚಂದ್ರ ಮಂಡ್ಯ
ದಿವ್ಯಾಂಶಿ ಬೆಂಗಳೂರು (ಕೆ.ಆರ್. ಪುರಂ)
ಶಿವಲಿಂಗು ಮೈಸೂರು
ಮನೋಜ್ ಕುಮಾರ್ ತುಮಕೂರು
ಭೂಮಿಕಾ ಹಾಸನ
ಚಿನ್ನಯ್ಯ ಬಳ್ಳಾರಿ
ಚಿನ್ಮಯಿ ಶಿವಮೊಗ್ಗ
ಪ್ರಜ್ವಲ್ ಜಿ ಬೆಂಗಳೂರು (ವಿಜಯನಗರ)
ಸಹನಾ ಚಿತ್ರದುರ್ಗ
ಅಕ್ಷತಾ ಪೈ ಮಂಗಳೂರು (ದಕ್ಷಿಣ ಕನ್ನಡ)

ಇನ್ನು ಈ ಕಾಲ್ತುಳಿತದಲ್ಲಿ ಮೃತಪಟ್ಟ ಪ್ರತಿಯೊಬ್ಬ ಅಭಿಮಾನಿಯ ಕುಟುಂಬಕ್ಕೆ ಆರ್‌ಸಿಬಿ ಮ್ಯಾನೇಜ್‌ಮೆಂಟ್  ₹25 ಲಕ್ಷ ಆರ್ಥಿಕ ನೆರವನ್ನು ಘೋಷಿಸಿದೆ.

ಹಾಗೆಯೇ ಅಭಿಮಾನಿಗಳ ಸುರಕ್ಷತೆ, ಸಮುದಾಯ ಕಲ್ಯಾಣ ಮತ್ತು ತುರ್ತು ಸಂದರ್ಭಗಳಲ್ಲಿ ಸಹಾಯ ಮಾಡಲು ‘ಆರ್‌ಸಿಬಿ ಕೇರ್ಸ್’ (RCB CARES) ಎಂಬ ವಿಶೇಷ ಫೌಂಡೇಶನ್ ಸ್ಥಾಪಿಸಿದೆ.

ಇದನ್ನೂ ಓದಿ: VIDEO: ಟಾಸ್ ಫಿಕ್ಸಿಂಗ್..? ಮುಂಬೈ ಇಂಡಿಯನ್ಸ್ ವಿರುದ್ಧ ಗಂಭೀರ ಆರೋಪ

ಇನ್ನು ಕಾಲ್ತುಳಿತದಲ್ಲಿ ಗಾಯಗೊಂಡ 50ಕ್ಕೂ ಹೆಚ್ಚು ಅಭಿಮಾನಿಗಳ ವೈದ್ಯಕೀಯ ವೆಚ್ಚ ಮತ್ತು ಚಿಕಿತ್ಸೆಗೂ ಈ ನಿಧಿಯ ಮೂಲಕ ಬೆಂಬಲ ನೀಡುವುದಾಗಿ ತಿಳಿಸಿತ್ತು.

Published On - 9:00 am, Mon, 30 March 26

Follow Us