IPL 2026: ಆರ್​​ಸಿಬಿಗೆ ಆಘಾತ; ಟಿಮ್ ಡೇವಿಡ್​ಗೆ ನಿಷೇಧದ ಶಿಕ್ಷೆ ವಿಧಿಸಿದ ಬಿಸಿಸಿಐ

Tim David Banned: ಐಪಿಎಲ್ ಗೆದ್ದ RCB ತಂಡಕ್ಕೆ ಬಿಗ್ ಶಾಕ್. ಅಂಪೈರ್‌ ಮೇಲೆ ಐಸ್ ಪ್ಯಾಕ್ ಎಸೆದ ಟಿಮ್ ಡೇವಿಡ್‌ಗೆ ಬಿಸಿಸಿಐ ಒಂದು ಪಂದ್ಯದ ನಿಷೇಧ ವಿಧಿಸಿದೆ. ಇದರ ಜೊತೆಗೆ ಪಂದ್ಯ ಶುಲ್ಕ ಕಡಿತ ಮತ್ತು ಡಿಮೆರಿಟ್ ಅಂಕಗಳನ್ನೂ ನೀಡಲಾಗಿದೆ. ಐಪಿಎಲ್ ನೀತಿ ಸಂಹಿತೆ ಉಲ್ಲಂಘನೆಗಾಗಿ ಈ ಕ್ರಮ ಕೈಗೊಂಡಿದ್ದು, ಟಿಮ್ ಡೇವಿಡ್ 2027ರ ಐಪಿಎಲ್‌ನ ಮೊದಲ ಪಂದ್ಯದಿಂದ ಹೊರಗುಳಿಯಲಿದ್ದಾರೆ.

IPL 2026: ಆರ್​​ಸಿಬಿಗೆ ಆಘಾತ; ಟಿಮ್ ಡೇವಿಡ್​ಗೆ ನಿಷೇಧದ ಶಿಕ್ಷೆ ವಿಧಿಸಿದ ಬಿಸಿಸಿಐ
Tim David

Updated on: Jun 01, 2026 | 9:39 PM

ಸತತ ಎರಡನೇ ಬಾರಿಗೆ ಐಪಿಎಲ್ (IPL 2026) ಟ್ರೋಫಿ ಗೆದ್ದ ಸಂತಸದಲ್ಲಿದ್ದ ಆರ್​ಸಿಬಿ (RCB) ತಂಡಕ್ಕೆ ಬಿಸಿಸಿಐ (BCCI) ಬಿಗ್ ಶಾಕ್ ನೀಡಿದೆ. ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಟಿಮ್ ಡೇವಿಡ್​ಗೆ (Tim David) ಬಿಸಿಸಿಐ ಒಂದು ಪಂದ್ಯದಿಂದ ನಿಷೇಧದ ಶಿಕ್ಷೆ ವಿಧಿಸಿದೆ. ಇದರ ಜೊತೆಗೆ ಪಂದ್ಯ ಶುಲ್ಕವನ್ನು ಕಡಿತಗೊಳಿಸಲಾಗಿದ್ದು, 2 ಡಿಮೆರಿಟ್ ಅಂಕಗಳನ್ನು ಸಹ ನೀಡಲಾಗಿದೆ. ಇದರನ್ವಯ ಟಿಮ್ ಡೇವಿಡ್ 2027 ರ ಆವೃತ್ತಿಯ ಐಪಿಎಲ್‌ನಲ್ಲಿ ಆರ್​ಸಿಬಿ ಪರ ಮೊದಲ ಪಂದ್ಯವನ್ನು ಆಡಲು ಸಾಧ್ಯವಾಗುವುದಿಲ್ಲ.

ಅಷ್ಟಕ್ಕೂ ಟಿಮ್ ಡೇವಿಡ್​ ವಿರುದ್ಧ ಬಿಸಿಸಿಐ ಈ ರೀತಿಯ ಕಠಿಣ ಕ್ರಮ ಕೈಗೊಳ್ಳಲು ಕಾರಣವೆನೆಂದರೆ, ಗುಜರಾತ್ ವಿರುದ್ಧದ ಫೈನಲ್ ಪಂದ್ಯದ ವೇಳೆ ಟಿಮ್ ಡೇವಿಡ್ ಕೋಪದಿಂದ ಆನ್-ಫೀಲ್ಡ್ ಅಂಪೈರ್ ನಿತಿನ್ ಮೆನನ್ ಮೇಲೆ ಐಸ್ ಪ್ಯಾಕ್ ಎಸೆದಿದ್ದರು. ಟಿಮ್ ಡೇವಿಡ್ ಅವರ ಈ ಕೃತ್ಯ ಐಪಿಎಲ್​ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿರುವ ಕಾರಣ ಆಸ್ಟ್ರೇಲಿಯಾದ ಈ ಸ್ಟಾರ್ ಬ್ಯಾಟ್ಸ್​ಮನ್ ವಿರುದ್ಧ ಬಿಸಿಸಿಐ ಕ್ರಮ ಜರುಗಿಸಿದೆ.

ದಂಡದ ಜೊತೆಗೆ ಡಿಮೆರಿಟ್ ಅಂಕ

ವಾಸ್ತವವಾಗಿ ಟಿಮ್ ಡೇವಿಡ್, ಗುಜರಾತ್ ತಂಡ ಬ್ಯಾಟಿಂಗ್ ಮಾಡುತ್ತಿದ್ದಾಗ, ಇನ್ನಿಂಗ್ಸ್​ನ 10 ನೇ ಓವರ್‌ನಲ್ಲಿ ಆನ್-ಫೀಲ್ಡ್ ಅಂಪೈರ್ ನಿತಿನ್ ಮೆನನ್ ಮೇಲೆ ಐಸ್ ಪ್ಯಾಕ್ ಎಸೆದರು. ಇದು ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.9 ರ ಉಲ್ಲಂಘನೆಯಾಗಿದೆ. ಪಂದ್ಯದ ಸಮಯದಲ್ಲಿ ಆಟಗಾರ, ತಂಡದ ಅಧಿಕಾರಿ, ಅಂಪೈರ್, ಪಂದ್ಯದ ರೆಫರಿ ಅಥವಾ ಯಾವುದೇ ಇತರ ವ್ಯಕ್ತಿಯ ಕಡೆಗೆ ಆಕ್ರಮಣಕಾರಿ ಅಥವಾ ಅಪಾಯಕಾರಿ ರೀತಿಯಲ್ಲಿ ಚೆಂಡು ಅಥವಾ ಕ್ರಿಕೆಟ್ ಸಾಮಗ್ರಿಯನ್ನು (ನೀರಿನ ಬಾಟಲ್, ಇತ್ಯಾದಿ) ಎಸೆಯುವುದು ಈ ನಿಯಮದ ಉಲ್ಲಂಘನೆಯಾಗಲಿದೆ. ಹೀಗಾಗಿ ಬಿಸಿಸಿಐ, ಟಿಮ್ ಡೇವಿಡ್ ಅವರ ಪಂದ್ಯ ಶುಲ್ಕದ 50 ಪ್ರತಿಶತ ಮೊತ್ತವನ್ನು ದಂಡವಾಗಿ ವಿಧಿಸಿದ್ದು, ಎರಡು ಡಿಮೆರಿಟ್ ಅಂಕಗಳನ್ನು ನೀಡಿದೆ.

ಒಂದು ಪಂದ್ಯದಿಂದ ನಿಷೇಧ

ಈ ಆವೃತ್ತಿಯಲ್ಲಿ ಟಿಮ್ ಡೇವಿಡ್ ಬಿಸಿಸಿಐನಿಂದ ದಂಡನೆಗೆ ಗುರಿಯಾಗುತ್ತಿರುವುದು ಇದು ಮೂರನೇ ಬಾರಿಗೆ. ಇದಕ್ಕೂ ಮೊದಲು, ಲೀಗ್ ಹಂತದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ನಿಯಮ ಉಲ್ಲಂಘಸಿದ್ದ ಡೇವಿಡ್​ಗೆ ಒಂದು ಡಿಮೆರಿಟ್ ಪಾಯಿಂಟ್ ಅಂಕ ನೀಡಿತ್ತು. ಇದಾದ ಬಳಿಕ ಅದೇ ಮುಂಬೈ ವಿರುದ್ಧ ನಡೆದಿದ್ದ 54 ನೇ ಪಂದ್ಯದಲ್ಲಿ ಇದೇ ರೀತಿ ಮಾಡಿದ್ದ ಟಿಮ್​ಗೆ ಎರಡು ಡಿಮೆರಿಟ್ ಪಾಯಿಂಟ್‌ಗಳನ್ನು ನೀಡಿತ್ತು. ಒಟ್ಟಾರೆಯಾಗಿ ಮೂರು ಪಂದ್ಯಗಳಿಂದ ಟಿಮ್ ಐದು ಡಿಮೆರಿಟ್ ಅಂಕಗಳನ್ನು ಪಡೆದಿದ್ದಾರೆ. ಹೀಗಾಗಿ ನಿಯಮಗಳ ಪ್ರಕಾರ ಟಿಮ್ ಅವರನ್ನು ಒಂದು ಪಂದ್ಯದಿಂದ ನಿಷೇಧ ಹೇರಲಾಗಿದೆ.

IPL 2026 Final: ಕರ್ನೂಲ್​ನಲ್ಲಿ ಆರ್​ಸಿಬಿ ಫ್ಯಾನ್ಸ್ ಅತಿರೇಕ; ಬಸ್ ಮೇಲೆ ಕಲ್ಲು ತೂರಾಟ

ಈ ಆವೃತ್ತಿಯಲ್ಲಿ ಟಿಮ್ ಪ್ರದರ್ಶನ

ಟಿಮ್ ಡೇವಿಡ್ ಸತತ ಎರಡನೇ ಬಾರಿಗೆ ಆರ್‌ಸಿಬಿ ಚಾಂಪಿಯನ್ ತಂಡದ ಭಾಗವಾಗಿದ್ದ್ದಾರೆ. ಫೈನಲ್ ಪಂದ್ಯದಲ್ಲಿ ನಿರ್ಣಾಯಕ 24 ರನ್ ಬಾರಿಸಿದ್ದ ಟಿಮ್ ಡೇವಿಡ್ ಆಡಿದ 16 ಪಂದ್ಯಗಳಲ್ಲಿ 33.88 ಸರಾಸರಿಯಲ್ಲಿ 305 ರನ್ ಬಾರಿಸಿದರು. ಇದರಲ್ಲಿ 23 ಸಿಕ್ಸರ್‌ಗಳು ಸೇರಿದ್ದವು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:34 pm, Mon, 1 June 26

pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Follow Us