ಭರ್ಜರಿ ಸೆಂಚುರಿ ಸಿಡಿಸಿ ವಿಭಿನ್ನವಾಗಿ ಸಂಭ್ರಮಿಸಿದ ಟಿಮ್ ಸೈಫರ್ಟ್

Trinbago Knight Riders vs Saint Lucia Kings: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೇಂಟ್ ಲೂಸಿಯಾ ಕಿಂಗ್ಸ್ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 211 ರನ್ ಕಲೆಹಾಕಿತು. ಈ ಬೃಹತ್ ಗುರಿಯನ್ನು ಬೆನ್ನತ್ತಿದ ಟ್ರಿನ್‌ಬಾಗೊ ನೈಟ್ ರೈಡರ್ಸ್ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 175 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಸೇಂಟ್ ಲೂಸಿಯಾ ಕಿಂಗ್ಸ್ 36 ರನ್ ಗಳ ಭರ್ಜರಿ ಜಯ ಸಾಧಿಸಿದೆ.

ಭರ್ಜರಿ ಸೆಂಚುರಿ ಸಿಡಿಸಿ ವಿಭಿನ್ನವಾಗಿ ಸಂಭ್ರಮಿಸಿದ ಟಿಮ್ ಸೈಫರ್ಟ್
Tim Seifert
Image Credit source: CPL

Updated on: Aug 27, 2026 | 10:19 AM

ಕೆರಿಬಿಯನ್ ಪ್ರೀಮಿಯರ್ ಲೀಗ್​ನ (CPL 2026) 17ನೇ ಪಂದ್ಯದಲ್ಲಿ ಸೇಂಟ್ ಲೂಸಿಯಾ ಕಿಂಗ್ಸ್ ತಂಡದ ಸ್ಟಾರ್ ಬ್ಯಾಟರ್ ಟಿಮ್ ಸೈಫರ್ಟ್ ಭರ್ಜರಿ ಸೆಂಚುರಿ ಸಿಡಿಸಿದ್ದಾರೆ. ಟ್ರಿನ್‌ಬಾಗೊ ನೈಟ್ ರೈಡರ್ಸ್ (TKR) ವಿರುದ್ಧ ನಡೆದ ಈ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಸೈಫರ್ಟ್​ ಕೇವಲ 61 ಎಸೆತಗಳಲ್ಲಿ ಅಜೇಯ 105 ರನ್ ಬಾರಿಸಿದರು. ಈ ಮೂಲಕ ಈ ಆವೃತ್ತಿಯ ಮೊದಲ ಶತಕ ದಾಖಲಿಸಿದ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡರು.

ಸೈಫರ್ಟ್​ ಸಿಡಿಲಬ್ಬರ:

ಕ್ವೀನ್ಸ್ ಪಾರ್ಕ್ ಓವಲ್ ಮೈದಾನದಲ್ಲಿ ಟಿಆರ್‌ಕೆ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಟಿಮ್ ಸೈಫರ್ಟ್​, ತಮ್ಮ ಸ್ಫೋಟಕ ಇನ್ನಿಂಗ್ಸ್‌ನಲ್ಲಿ 9 ಆಕರ್ಷಕ ಬೌಂಡರಿ ಹಾಗೂ 5 ಭರ್ಜರಿ ಸಿಕ್ಸರ್‌ಗಳನ್ನು ಬಾರಿಸಿದರು. ಅವರ ಈ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಸೇಂಟ್ ಲೂಸಿಯಾ ಕಿಂಗ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 211 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.

ಮನಗೆದ್ದ ವಿಶಿಷ್ಟ ಸಂಭ್ರಮಾಚರಣೆ:

ಟಿಮ್ ಸೈಫರ್ಟ್​ ಭರ್ಜರಿ ಶತಕ ಪೂರೈಸುತ್ತಿದ್ದಂತೆ ಮೈದಾನದಲ್ಲಿ ನೆರೆದಿದ್ದ ಅಭಿಮಾನಿಗಳು ಎದ್ದು ನಿಂತು ಹರ್ಷೋದ್ಗಾರ ಮಾಡಿದರು. ಈ ವೇಳೆ ಹೆಲ್ಮೆಟ್ ಕಳಚಿ ಬ್ಯಾಟ್ ಎತ್ತಿದ ಸೈಫರ್ಟ್, ಕೆರಿಬಿಯನ್ ಸಂಸ್ಕೃತಿಗೆ ತಕ್ಕಂತೆ ಮೈದಾನದಲ್ಲೇ ವಿಭಿನ್ನವಾಗಿ ಕುಣಿಯುವ ಮೂಲಕ ತಮ್ಮ ವಿಶಿಷ್ಟ ಸಂಭ್ರಮಿಸಿದರು. ನ್ಯೂಝಿಲೆಂಡ್ ಬ್ಯಾಟರ್‌ನ ಈ ಮೋಜಿನ ನೃತ್ಯದ ವೀಡಿಯೊ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸೇಂಟ್ ಲೂಸಿಯಾ ಕಿಂಗ್ಸ್‌ಗೆ ಭರ್ಜರಿ ಜಯ:

ಬೃಹತ್ ಗುರಿ ಬೆನ್ನತ್ತಿದ ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡ, ಸೇಂಟ್ ಲೂಸಿಯಾ ಕಿಂಗ್ಸ್ ತಂಡದ ಶಿಸ್ತುಬದ್ಧ ಬೌಲಿಂಗ್ ದಾಳಿಗೆ ತತ್ತರಿಸಿ ಕೇವಲ 175 ರನ್​ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಸೇಂಟ್ ಲೂಸಿಯಾ ಕಿಂಗ್ಸ್​ 36 ರನ್​ಗಳ ಜಯ ಸಾಧಿಸಿದೆ.

ಅತ್ಯುತ್ತಮ ಫಾರ್ಮ್‌ನಲ್ಲಿ ಸೈಫರ್ಟ್​:

ಇತ್ತೀಚೆಗಷ್ಟೇ ಯುಕೆ ನಲ್ಲಿ ನಡೆದ ‘ದಿ ಹಂಡ್ರೆಡ್ 2026’ ಟೂರ್ನಿಯಲ್ಲಿ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿ ‘ಪ್ಲೇಯರ್ ಆಫ್ ದಿ ಟೂರ್ನಮೆಂಟ್’ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ಟಿಮ್ ಸೈಫರ್ಟ್, ಇದೀಗ ಅದೇ ಅದ್ಭುತ ಫಾರ್ಮ್ ಅನ್ನು ಸಿಪಿಎಲ್‌ನಲ್ಲೂ ಮುಂದುವರಿಸಿದ್ದಾರೆ. ಈ ಮೂಲಕ ಕೆರಿಬಿಯನ್ ಪ್ರೀಮಿಯರ್ ಲೀಗ್​ನಲ್ಲಿ 2 ಶತಕ ಬಾರಿಸಿದ ಬ್ಯಾಟರ್​ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಇದನ್ನೂ ಓದಿ: ದಿನೇಶ್ ಕಾರ್ತಿಕ್​ CSK ತಂಡಕ್ಕೆ ಬರಲಿ: ಮಾಜಿ ಆಟಗಾರನ ಸೂಪರ್ ಪ್ಲ್ಯಾನ್!

ಇದಕ್ಕೂ ಮುನ್ನ ಟಿಮ್ ಸೈಫರ್ಟ್ 2025ರ ಸಿಪಿಎಲ್​ನಲ್ಲಿ ತಮ್ಮ ಮೊದಲ ಶತಕವನ್ನು ಸಿಡಿಸಿದ್ದರು. ಕಳೆದ ಸೀಸನ್​ನಲ್ಲೂ ಸೇಂಟ್ ಲೂಸಿಯಾ ಕಿಂಗ್ಸ್ ತಂಡದ ಪರವಾಗಿಯೇ ಆಡಿದ್ದ ಅವರು, ಆಂಟಿಗುವಾ ಮತ್ತು ಬಾರ್ಬುಡಾ ಫಾಲ್ಕನ್ಸ್ ವಿರುದ್ಧ ಕೇವಲ 53 ಎಸೆತಗಳಲ್ಲಿ ಅಜೇಯ 125 ರನ್* ಚಚ್ಚಿದ್ದರು. ಇದೀಗ ಟ್ರಿನ್‌ಬಾಗೊ ನೈಟ್ ರೈಡರ್ಸ್ ವಿರುದ್ಧ ಟಿಮ್  ಸೈಫರ್ಟ್​ ಕೇವಲ 61 ಎಸೆತಗಳಲ್ಲಿ ಅಜೇಯ 105 ರನ್ ಬಾರಿಸಿ ಅಬ್ಬರಿಸಿದ್ದಾರೆ.

 

Loading...
Unable to load recommendations.
Follow Us