ಮೈದಾನದಲ್ಲಿ ಜಗಳ ಮಾಡಿಕೊಂಡಿದ್ದ ವೈಭವ್ ಬೆನ್ನಿಗೆ ನಿಂತ ಶ್ರೀಲಂಕಾದ ಮಾಜಿ ಕ್ರಿಕೆಟಿಗರು
Vaibhav Sooryavanshi controversy: ಶ್ರೀಲಂಕಾದಲ್ಲಿ ನಡೆದ ಭಾರತ ಎ vs ಲಂಕಾ ಎ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಜಗಳವಾಡಿದ ಘಟನೆ ಭಾರೀ ವಿವಾದ ಸೃಷ್ಟಿಸಿತ್ತು. ವೈಭವ್‌ಗೆ ನಿಷೇಧದ ಶಿಕ್ಷೆ ಸಿಗಲಿದೆ ಎಂದು ವರದಿಯಾಗಿತ್ತು. ಆದರೆ ಇದೀಗ, ಲಂಕಾ ಆಟಗಾರರ ಪ್ರಚೋದನೆಯಿಂದ ಘಟನೆ ನಡೆದಿತ್ತು ಎಂದು ತಿಲಕ್ ವರ್ಮಾ ರೆಫರಿಗೆ ಮನವರಿಕೆ ಮಾಡಿಕೊಟ್ಟಿದ್ದರಿಂದ ವೈಭವ್‌ಗೆ ಯಾವುದೇ ಶಿಕ್ಷೆ ಇಲ್ಲ ಎಂದು ವರದಿಯಾಗಿದೆ. ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ಅವಕಾಶ ವೈಭವ್‌ಗಿದೆ.

ಶ್ರೀಲಂಕಾದಲ್ಲಿ ನಡೆಯುತ್ತಿರುವ ತ್ರಿಕೋನ ಸರಣಿಯ ನಾಲ್ಕನೇ ಪಂದ್ಯದಲ್ಲಿ ಭಾರತ ಎ ಹಾಗೂ ಶ್ರೀಲಂಕಾ ಎ (India A vs Sri Lanka A) ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಭಾರತದ ವೈಭವ್ ಸೂರ್ಯವಂಶಿ (Vaibhav Sooryavanshi), ಶ್ರೀಲಂಕಾ ಎ ತಂಡದ ಆಟಗಾರರೊಂದಿಗೆ ಜಗಳ ಮಾಡಿಕೊಂಡಿದ್ದು, ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಈ ಜಗಳ ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದ ಕಾರಣ, ನಿಯಮ ಉಲ್ಲಂಘಿಸಿದ ವೈಭವ್ ಸೂರ್ಯವಂಶಿ ವಿರುದ್ಧ ಶಿಸ್ತುಕ್ರಮ ಜರುಗಿಸುವ ಸಾಧ್ಯತೆಗಳಿವೆ ಎಂದು ವರದಿಯಾಗಿತ್ತು. ಅಂದರೆ ವೈಭವ್‌ಗೆ ಡಿಮೆರಿಟ್ ಅಂಕಗಳೊಂದಿಗೆ ಪಂದ್ಯದಿಂದ ನಿಷೇಧಿಸುವ ಶಿಕ್ಷೆ ಸಿಗಬಹುದೆಂದು ಹೇಳಲಾಗುತಿತ್ತು. ಆದರೀಗ ಸಿಕ್ಕಿರುವ ಮಾಹಿತಿ ಪ್ರಕಾರ, ವೈಭವ್‌ಗೆ ಆ ರೀತಿಯ ಯಾವುದೇ ಶಿಕ್ಷೆಯನ್ನು ವಿಧಿಸಲಾಗುತ್ತಿಲ್ಲ ಎಂದು ವರದಿಯಾಗಿದೆ.
ಇಡೀ ಘಟನೆಯ ಹಿಂದಿರುವ ಕಾರಣವೇನು?
ದಂಬುಲ್ಲಾದ ರೆವ್ ಸ್ಪೋರ್ಟ್ಸ್‌ನ ಕ್ರೀಡಾ ಪತ್ರಕರ್ತ ರೋಹಿತ್ ಜುಗ್ಲಾನ್ ಇಡೀ ಘಟನೆಯ ಬಗ್ಗೆ ಮಾತನಾಡಿದ್ದು, ಅದರಲ್ಲಿ ಅವರು, ವೈಭವ್ ಸೂರ್ಯವಂಶಿ ಅವರನ್ನು ಪಂದ್ಯದಿಂದ ನಿಷೇಧಿಸಲಾಗಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಪಂದ್ಯದ ರೆಫರಿ, ಭಾರತ ಎ ತಂಡದ ನಾಯಕ ತಿಲಕ್ ವರ್ಮಾ ಮತ್ತು ತಂಡದ ವ್ಯವಸ್ಥಾಪಕರೊಂದಿಗೆ ದೀರ್ಘ ಸಂಭಾಷಣೆ ನಡೆಸಿದ್ದಾರೆ. ಈ ಸಂಭಾಷಣೆಯ ಸಮಯದಲ್ಲಿ ಇಡೀ ಘಟನೆಗೆ ಕಾರಣ ಏನು ಎಂಬುದನ್ನು ತಿಲಕ್ ವರ್ಮಾ ರೆಫರಿಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಅಸಲಿಗೆ ಈ ಜಗಳಕ್ಕೆ ಪ್ರಮುಖ ಕಾರಣ, ಲಂಕಾ ಆಟಗಾರರ ಅತಿರೇಕತನ. ಪಂದ್ಯ ಪ್ರಾರಂಭವಾದಾಗಿನಿಂದಲೂ ಶ್ರೀಲಂಕಾ ಎ ಆಟಗಾರರು ವೈಭವ್ ಸೂರ್ಯವಂಶಿ ಬಗ್ಗೆ ನಿರಂತರವಾಗಿ ಕಾಮೆಂಟ್ ಮಾಡುತ್ತಿದ್ದರು ಮತ್ತು ಅವರ ಬಗ್ಗೆ ವೈಯಕ್ತಿಕ ಟೀಕೆಗಳನ್ನು ಮಾಡುತ್ತಿದ್ದರು.
ಇದರ ಜೊತೆಗೆ ಪಂದ್ಯ ಮುಗಿದ ಬಳಿಕ ನಡೆದ ಘಟನೆಯ ಸಮಯದಲ್ಲಿ ವೈಭವ್‌ಗೆ ಆಟಗಾರನನ್ನು ತಳ್ಳುವ ಉದ್ದೇಶವಿರಲಿಲ್ಲ. ಆದರೆ ಶ್ರೀಲಂಕಾ ತಂಡದ ಆಟಗಾರ, ತನ್ನ ಬಳಿ ಬರುತ್ತಿರುವುದನ್ನು ನೋಡಿದ ವೈಭವ್, ಅವನನ್ನು ದೂರದಲ್ಲೇ ನಿಂತು ಮಾತನಾಡುವಂತೆ ಹೇಳುತ್ತ ಹಿಂದಕ್ಕೆ ತಳ್ಳಿದನು ಎಂಬುದನ್ನು ತಿಲಕ್, ರೆಫರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ವರದಿಯಾಗಿದೆ. ಘಟನೆಯ ಬಳಿಕ ಶ್ರೀಲಂಕಾದ ಕೆಲವು ಹಿರಿಯ ಆಟಗಾರರು ವೈಭವ್ ಸೂರ್ಯವಂಶಿ ಅವರೊಂದಿಗೆ ಮಾತನಾಡಿದ್ದಾರೆಂದು ವರದಿಯಾಗಿದೆ. ಐಪಿಎಲ್‌ನಲ್ಲಿ ಸೂರ್ಯವಂಶಿ ಅವರೊಂದಿಗೆ ಆಡಿದ ಆಟಗಾರರು ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಘಟನೆಗೆ ವಿಷಾದ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.
80ನೇ ವಯಸ್ಸಿನಲ್ಲಿ 161 ಕಿ.ಮೀ ಪ್ರಯಾಣ ಮಾಡಿ ವೈಭವ್ನನ್ನು ಭೇಟಿಯಾದ ದಿಗ್ಗಜ ಕ್ರಿಕೆಟಿಗ
ಟೀಕಾಕಾರರಿಗೆ ವೈಭವ್ ಉತ್ತರ ಏನಿರಲಿದೆ?
ಇದೀಗ ತನ್ನನ್ನು ಟೀಕಿಸಿದವರಿಗೆ ಸರಿಯಾಗಿ ಉತ್ತರ ನೀಡುವ ಅವಕಾಶ ವೈಭವ್‌ಗಿದೆ. ವಾಸ್ತವವಾಗಿ ಈ ಸರಣಿಯಲ್ಲಿ ವೈಭವ್ ಒಂದೇ ಒಂದು ಅರ್ಧಶತಕ ಗಳಿಸಿಲ್ಲ. ಇದು ಟೀಕಾಕಾರರ ಬಾಯಿಗೆ ಆಹಾರವಾಗುವಂತೆ ಮಾಡಿದೆ. ಇದೀಗ ವೈಭವ್ ಬುಧವಾರ ನಡೆಯಲಿರುವ ಅಫ್ಘಾನಿಸ್ತಾನ ಎ ವಿರುದ್ಧದ ಪಂದ್ಯದಲ್ಲಿ ಅವರು ದೊಡ್ಡ ಇನ್ನಿಂಗ್ಸ್ ಆಡಿ ಭಾರತ ಎ ತಂಡವನ್ನು ಗೆಲುವಿನತ್ತ ಕೊಂಡೊಯ್ದರೆ, ಅದು ಅವರಿಗೆ ಮತ್ತು ತಂಡಕ್ಕೆ ಪ್ರಯೋಜನವನ್ನು ನೀಡುತ್ತದೆ. ಅಫ್ಘಾನಿಸ್ತಾನ ಎ ವಿರುದ್ಧ ಭಾರತ ಎ ತಂಡ ಗೆಲ್ಲುವುದು ನಿರ್ಣಾಯಕ, ಏಕೆಂದರೆ ಈ ಪಂದ್ಯದಲ್ಲಿ ಸೋತರೆ ತ್ರಿಕೋನ ಸರಣಿಯಿಂದ ಹೊರಗುಳಿಯುತ್ತದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:26 pm, Tue, 16 June 26




