
ಐಪಿಎಲ್ 2026 ರ ಫೈನಲ್ (IPL 2026 Final) ಪಂದ್ಯ ಆರ್ಸಿಬಿ ಹಾಗೂ ಗುಜರಾತ್ ಟೈಟಾನ್ಸ್ (RCB vs GT) ನಡುವೆ ನಡೆಯುತ್ತಿದೆ. ಈ ಫೈನಲ್ ಪಂದ್ಯ ಮುಗಿಯುವುದಕ್ಕೆ ಮುನ್ನವೇ ಈ ಬಾರಿಯ ಆರೆಂಜ್ ಕ್ಯಾಚ್ ಯಾರ ಪಾಲಾಗಿದೆ ಎಂಬುದು ಖಚಿತವಾಗಿದೆ. ವಾಸ್ತವವಾಗಿ ಎಲ್ಲರಿಗೂ ತಿಳಿದಿರುವಂತೆ ಇಡೀ ಆವೃತ್ತಿಯಲ್ಲಿ ಯಾರು ಅತ್ಯಧಿಕ ರನ್ ಕಲೆಹಾಕುತ್ತಾರೋ ಅವರಿಗೆ ಆರೆಂಜ್ ಕ್ಯಾಪ್ ನೀಡಲಾಗುತ್ತದೆ. ಈ ಆರೆಂಜ್ ಕ್ಯಾಪ್ ರೇಸ್ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ವೈಭವ್ ಸೂರ್ಯವಂಶಿ (Vaibhav Sooryavanshi) ಅಗ್ರಸ್ಥಾನದಲ್ಲಿದ್ದರು. ಆದಾಗ್ಯೂ ಅದರ ನಂತರದ ಎರಡು ಸ್ಥಾನಗಳಲ್ಲಿ ಗುಜರಾತ್ ತಂಡದ ಶುಭ್ಮನ್ ಗಿಲ್ ಹಾಗೂ ಸಾಯಿ ಸುದರ್ಶನ್ ಇದ್ದ ಕಾರಣ ಫೈನಲ್ ಪಂದ್ಯ ಮುಗಿದ ಬಳಿಕವಷ್ಟೇ ಆರೆಂಜ್ ಕ್ಯಾಪ್ ಯಾರ ಪಾಲಾಗಲಿದೆ ಎಂಬುದನ್ನು ಅಧಿಕೃತವಾಗಿ ಹೇಳಬಹುದಾಗಿತ್ತು. ಆದರೆ ಫೈನಲ್ ಪಂದ್ಯದಲ್ಲಿ ಗಿಲ್ ಹಾಗೂ ಸುದರ್ಶನ್, ಸೂರ್ಯವಂಶಿ ಅವರನ್ನು ಮೀರಿಸದ ಕಾರಣ ಅವರಿಬ್ಬರು ಈ ರೇಸ್ನಿಂದ ಹೊರಬಿದ್ದಿದ್ದು, ವೈಭವ್ಗೆ ಈ ಕ್ಯಾಪ್ ಸಿಕ್ಕಿದೆ.
ವಾಸ್ತವವಾಗಿ ಕ್ವಾಲಿಫೈಯರ್ 2 ರಲ್ಲಿ ಇದೇ ಗುಜರಾತ್ ಟೈಟಾನ್ಸ್ ವಿರುದ್ಧ 96 ರನ್ಗಳ ಇನ್ನಿಂಗ್ಸ್ ಆಡಿದ್ದ ವೈಭವ್ ಸೂರ್ಯವಂಶಿ, ಸಾಯಿ ಸುದರ್ಶನ್ ಬಳಿ ಇದ್ದ ಆರೆಂಜ್ ಕ್ಯಾಪ್ ಅನ್ನು ತಮ್ಮದಾಗಿಸಿಕೊಂಡಿದ್ದರು. ಆದರೆ ಕ್ವಾಲಿಫೈಯರ್ 2 ರಲ್ಲಿ ರಾಜಸ್ಥಾನ್ ಸೋತಿದ್ದರಿಂದ ವೈಭವ್ಗೆ ಫೈನಲ್ ಆಡಲು ಸಾಧ್ಯವಾಗಲಿಲ್ಲ. ಆದರೆ ಫೈನಲ್ಗೆ ಅರ್ಹತೆ ಪಡೆದಿದ್ದ ಗುಜರಾತ್ ತಂಡದ ಶುಭ್ಮನ್ ಗಿಲ್ ಹಾಗೂ ಸಾಯಿ ಸುದರ್ಶನ್‌ಗೆ ಆರೆಂಜ್ ಕ್ಯಾಪ್ ಗೆಲ್ಲುವ ಅವಕಾಶವಿತ್ತು.
ಈ ಬಾರಿಯ ಐಪಿಎಲ್‌ನಲ್ಲಿ ಆಡಿದ 16 ಇನ್ನಿಂಗ್ಸ್‌ಗಳಲ್ಲಿ ವೈಭವ್ ಸೂರ್ಯವಂಶಿ 776 ರನ್ ಬಾರಿಸಿ ಆರೆಂಜ್ ಕ್ಯಾಪ್ ರೇಸ್ನಲ್ಲಿ ಅಗ್ರಸ್ಥಾನದಲ್ಲಿದ್ದರು. ಆದರೆ ಈ ರೇಸ್ನಲ್ಲಿ ಅವರ ಹಿಂದೆಯೇ ಇದ್ದ ಶುಭ್ಮನ್ ಗಿಲ್ ಹಾಗೂ ಸಾಯಿ ಸುದರ್ಶನ್ ಕ್ರಮವಾಗಿ 722 ರನ್ ಮತ್ತು 710 ರನ್ ಬಾರಿಸಿದ್ದರು. ಹೀಗಾಗಿ ವೈಭವ್ ಅವರನ್ನು ಹಿಂದಿಕ್ಕಲು ಗಿಲ್ಗೆ 55 ರನ್ ಮತ್ತು ಸುದರ್ಶನ್‌ಗೆ 67 ರನ್‌ಗಳು ಬೇಕಾಗಿದ್ದವು. ಆದರೆ ಫೈನಲ್ ಪಂದ್ಯದಲ್ಲಿ ಅವರಿಬ್ಬರು ಇಷ್ಟು ರನ್ ಬಾರಿಸುವಲ್ಲಿ ವಿಫಲರಾದರು.
ವೈಭವ್ ಸೂರ್ಯವಂಶಿ ಮತ್ತೆ ಮೈದಾನದಲ್ಲಿ ಕಾಣಿಸಿಕೊಳ್ಳುವುದು ಯಾವಾಗ?
ನಾಯಕ ಶುಭ್ಮನ್ ಗಿಲ್ ಕೇವಲ 10 ರನ್ ಗಳಿಸಿ ಔಟಾದರೆ, ಸುದರ್ಶನ್ 12 ರನ್‌ಗಳಿಗೆ ತಮ್ಮ ಇನ್ನಿಂಗ್ಸ್ ಮುಗಿಸಿದರು. ಹೀಗಾಗಿ, ಗಿಲ್ ಅವರ ಸೀಸನ್ 732 ರನ್‌ಗಳೊಂದಿಗೆ ಮತ್ತು ಸುದರ್ಶನ್ ಅವರ 722 ರನ್‌ಗಳೊಂದಿಗೆ ಕೊನೆಗೊಂಡಿತು. ಆದ್ದರಿಂದ 16 ಪಂದ್ಯಗಳಲ್ಲಿ 776 ರನ್ ಬಾರಿಸಿದ್ದ ವೈಭವ್ಗೆ ಆರೆಂಜ್ ಕ್ಯಾಪ್ ಸಿಕ್ಕಿದೆ. ಈ ಮೂಲಕ ವೈಭವ್ ಈ ಪ್ರಶಸ್ತಿ ಗೆದ್ದ ಅತ್ಯಂತ ಕಿರಿಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:42 pm, Sun, 31 May 26